ಅರಂತೋಡು ಗ್ರಾ.ಪಂ ಮಾಸಿಕ ಬೃಹತ್ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 75 ನೇ ಸಂಭ್ರಮೋತ್ಸವ ಸಭಾ ಕಾರ್ಯಕ್ರಮ

0

ಭಾರತದ ಭದ್ರತಾ ಪಡೆಗೆ ಆಯ್ಕೆಗೊಂಡ ಸುಶ್ಮಿತಾ ಎಂ.ಎ. ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ

ಸ್ವಚ್ಛತಾ ಕಾರ್ಯಕ್ರಮ ದೇಶಕ್ಕೆ ಮಾದರಿ : ಇ.ಓ.ರಾಜಣ್

ಸ್ವಚ್ಛತೆಯಲ್ಲಿ ಸ್ಥಳೀಯ ಜನತೆ ಜಾಗೃತರಾಗಬೇಕು : ಕೆ.ಆರ್.ಜಿ

ಪ್ರತಿ ಅಭಿವೃದ್ಧಿ ಕಾರ್ಯಗಳಲ್ಲಿ ಸುದ್ದಿ ನಮಗೆ ಬೆಂಬಲ ನೀಡುತ್ತಿದೆ : ಕೇಶವ ಅಡ್ತಲೆ

ಸುದ್ದಿ ಸುಳ್ಯ ಹಬ್ಬದ ಸಂದರ್ಭ ಗ್ರಾಮದ ಪ್ರತಿಯೊಂದು ಮಾಹಿತಿ ದಾಖಲೀಕರಣವಾಗಬೇಕು : ಯಶ್ವಿತ್ ಕಾಳಮ್ಮನೆ

ಅರಂತೋಡು ಗ್ರಾಮ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ, ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು, ಸುಳ್ಯ ಸುದ್ದಿ ಹಬ್ಬ ಅರಂತೋಡು ಗ್ರಾಮ ಸಮಿತಿ ಸಹಯೋಗದಲ್ಲಿ ಅರಂತೋಡು ಗ್ರಾಮ ಪಂಚಾಯತ್ ನ ಮಾಸಿಕ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ 75 ನೇ ಸಂಭ್ರಮೋತ್ಸವ ವಿಶೇಷ ಸಭಾ ಕಾರ್ಯಕ್ರಮವು ಪಂಚಾಯತಿನ ಅಮೃತಾ ಸಭಾಂಗಣದಲ್ಲಿ ಆ.30 ರಂದು ನಡೆಯಿತು.

ಬಳಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಸ್ವಚ್ಛತಾ ಜಾಥಾದ ಮೂಲಕ ಅರಂತೋಡು ಪೇಟೆಯಲ್ಲಿ ಸೇರಿ ಗ್ರಾಮ ಪಂಚಾಯತ್ ಸಭಾಂಗಣಕ್ಕೆ ತೆರಳಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು.

ಗ್ರಾ.ಪಂ. ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಭೆಯಲ್ಲಿ ಸ್ವಚ್ಛತಾ ಸೇವೆಯಲ್ಲಿ ಪಾಲ್ಗೊಂಡ ವಿವಿಧ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ , ಸ್ವಚ್ಛತಾ ಸಿಬ್ಬಂದಿಗಳಿಗೆ ಟೀ ಶರ್ಟ್ ಬಿಡುಗಡೆ ಮಾಡಲಾಯಿತು.

ಎನ್.ಎಸ್.ಎಸ್ ಶಿಬಿರ ಘಟಕ ಅಧಿಕಾರಿ ಲಿಂಗಪ್ಪ ಮಾಸ್ತರ್ , ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ , ಈಗ ಸದಸ್ಯರಾಗಿರುವ ಶಿವಾನಂದ ಕುಕ್ಕುಂಬಳ , ಭಾರತ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವ ಅರಂತೋಡಿನ ಸುಶ್ಮಿತಾ ಎಂ. ಎ ಯನ್ನು ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, “ಸುಳ್ಯ ತಾಲೂಕಿನಲ್ಲಿ ಸ್ವಚ್ಛತೆಗೆ ಹಾಗೂ ದೇಶಕ್ಕೆ ಹೆಸರು ಪಡೆದ ಸ್ವಚ್ಛತಾ ಘಟಕ ಅರಂತೋಡು. ಇಂದು ದೇಶಕ್ಕೆ ಮಾದರಿಯಾಗುವಂತೆ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯ ಆರoತೋಡು ಪಂಚಾಯತ್ ಮಾಡಿದೆ. ಇನ್ನೂ ವಿವಿಧ ಗ್ರಾಮ ಪಂಚಾಯತ್ ನಲ್ಲಿ ಯೋಜನೆಯು ಮುಂದುವರಿಸಿ ಮುಂದಿನ ತಲೆಮಾರಿನವರು ಕೂಡಾ ನಮ್ಮ ಊರು, ಜಿಲ್ಲೆ, ರಾಜ್ಯ , ರಾಷ್ಟ್ರ ದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಮಾಡೋಣ” ಎಂದು ಶುಭಹಾರೈಸಿದರು.

ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ ಮಾಸ್ತರ್ ಮಾತನಾಡಿ,
” ನಮ್ಮ ಊರಿಗೆ ಮಾದರಿಯಾಗುವಂತೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಸಿ ನಿರಂತರ ಸ್ವಚ್ಛತಾ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ್ ಅಭಿಯಾನ ಮೂಲಕ ರಾಷ್ಟ್ರಕ್ಕೆ ಹೆಸರನ್ನು ಪಡೆದಿದೆ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸ್ಥಳೀಯ ಜನತೆ ಜಾಗೃತರಾಗಬೇಕು. ಅದರಲ್ಲೂ ಪ್ರಮುಖವಾಗಿ ನಮ್ಮ ಊರಿನಿಂದ ಪ್ರಥಮ ಬಾರಿಗೆ ಭಾರತೀಯ ಗಡಿ ಭದ್ರತಾ ಪಡೆದ ಆಯ್ಕೆಯಾಗಿರುವ ವಿದ್ಯಾರ್ಥಿಯನ್ನು ಸನ್ಮಾನ ಮಾಡಿದ್ದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸೇರಿ ದೇಶ ಸೇವೆಯನ್ನು ಮಾಡುವಂತಾಗಲಿ” ಎಂದು ಶುಭಹಾರೈಸಿದರು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಮಾತನಾಡಿ, ” ಸುದ್ದಿ ಸುಳ್ಯ ಹಬ್ಬಕ್ಕೆ ಪೂರ್ವಭಾವಿಯಾಗಿ ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳು ಈಗಾಗಲೇ ಆಯೋಜನೆಗೊಳ್ಳುತ್ತಿದ್ದು, ಸಾಮಾಜಿಕ ಕಾರ್ಯಗಳಿಗೆ ಸುದ್ದಿ ಸದಾ ಪ್ರೋತ್ಸಾಹ ನೀಡುತ್ತಿದೆ. ಗ್ರಾಮದ ಪ್ರತಿಯೊಂದು ಮಾಹಿತಿಯು ದಾಖಲೀಕರಣವಾಗಬೇಕು. ಸುದ್ದಿ ಸ್ಟೋರ್ ಆಪ್ ನ ಮೂಲಕ ಮುಂದಿನ ದಿನಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಿದ್ದೇವೆ” ಎಂದರು

ಅಧ್ಯಕ್ಷತೆ ವಹಿಸಿದ್ದ ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ ಮಾತನಾಡಿ,
” ನಮ್ಮ ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಪ್ರತೀ ತಿಂಗಳು ಸಂಘ ಸಂಸ್ಥೆಗಳನ್ನು ಸೇರಿಸಿ , ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿ, ಸ್ವಚ್ಛತೆಯ ಅರಿವನ್ನು ಜನರಿಗೆ ತಿಳಿಸುತ್ತಿದ್ದೇವೆ. ಗ್ರಾಮಸ್ಥರ ಸಹಕಾರ ಹಾಗೂ ಸುದ್ದಿ ಮಾಧ್ಯಮ ನಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಂಡು ನಮ್ಮ ಗ್ರಾಮದ ವರದಿಗಳನ್ನು ಪತ್ರಿಕೆ, ಸೋಷಿಯಲ್ ಮೀಡಿಯಾದಲ್ಲಿ ಹಾಕಿ ದೇಶ ವಿದೇಶಗಳಿಗೆ ಪಸರಿಸುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ನಮ್ಮ ಗ್ರಾಮ, ಜಿಲ್ಲೆ, ದೇಶ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ, ಸ್ವಚ್ಛತಾ ಕಾರ್ಯವನ್ನು ಮುಂದುವರೆಸಲಿ” ಎಂದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ , ಉಪಾಧ್ಯಕ್ಷೆ ಭವಾನಿ ಸಿ. ಎ.ವಂದಿಸಿದರು.

ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಗಮಿಸಿದ ಎಲ್ಲಾರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ :

ಗ್ರಾಮದ ಸ್ವಚ್ಛತೆಯಲ್ಲಿ ನಿರಂತರ ಸಹಕರಿಸುತ್ತಿರುವ ದುರ್ಗಾ ಮಾತಾ ಭಜನಾ ಮಂಡಳಿ ಅರಂತೋಡು , ದುರ್ಗಾ ಮಾತಾ ಮಹಿಳಾ ಮಂಡಳಿ ಅರಂತೋಡು , ವಾಹನ ಚಾಲಕರ ಸಂಘ , ವಾಹನ ಮಾಲಕ – ಚಾಲಕ ಸಂಘ ಅರಂತೋಡು , ಯುವ ಬ್ರಿಗೇಡ್ ಸುಳ್ಯ , ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅರಂತೋಡು, ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅಡ್ಯಡ್ಕ , ಸ್ಪಂದನ ಗೆಳೆಯರ ಬಳಗ ಅಡ್ತಲೆ , ವಿಖಾಯ ತುರ್ತು ನಿರ್ವಹಣಾ ಸಂಘ ಅರಂತೋಡು , ಶ್ರೀ ದುರ್ಗಾ ಫ್ರೆಂಡ್ಸ್ ಅರಂತೋಡು , ಸೇವಾ ಭಾರತಿ ಅರಂತೋಡು , ಶೌರ್ಯ ವಿಪತ್ತು ನಿರ್ವಹಣಾ ಸಂಘ , ದುರ್ಗಾ ಮಾತಾ ಸಂಜೀವಿನಿ ಒಕ್ಕೂಟ ಅರಂತೋಡು , ಒಡಿಯೂರು ಗ್ರಾಮ ವಿಕಾಸ ಯೋಜನೆ ಅರಂತೋಡು ತೊಡಿಕಾನ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಳಿಕಾಂಬ ಸಂಘ ತೊಡಿಕಾನ , ಮಾತೃ ಶಕ್ತಿ ದುರ್ಗಾ ವಾಹಿನಿ ಹನುಮಾನ್ ಶಾಖೆ ಅರಂತೋಡು , ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಂತೋಡು , ವರ ಮಹಾಲಕ್ಷ್ಮೀ ಆಚರಣಾ ಸಮಿತಿ ಅರಂತೋಡು , ಶ್ರುತಿ ಸ್ತ್ರೀ ಶಕ್ತಿ ಸಂಘ ಬಿಳಿಯರು ಅರಂತೋಡು , ಅಡ್ತಲೆ ಸ್ತ್ರೀ ಶಕ್ತಿ ಸಂಘ ಅರಂತೋಡು , ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ವಚ್ಛತಾ ಸಿಬ್ಬಂದಿ ವರ್ಗದವರನ್ನು ಗ್ರಾಮ ಪಂಚಾಯತ್ ವತಿಯಿಂದ ಸಭೆಯಲ್ಲಿ ಗೌರವಿಸಲಾಯಿತು.

ಸ್ವಚ್ಛತಾ ಘಟಕಕ್ಕೆ ಧನ ಸಹಾಯ

ಇತ್ತೀಚಿಗೆ ಅಗ್ನಿ ಅವಘಡದಲ್ಲಿ ಹಾನಿಗೊಂಡಿರುವ ಸ್ವಚ್ಛತಾ ಶೇಖರಣಾ ಘಟಕಕ್ಕೆ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ ಅವರು ಹತ್ತು ಸಾವಿರ ರೂ ಧನಸಹಾಯ ನೀಡಿದರು.