ಸಮರ್ಪಣಾ ಟ್ರಸ್ಟ್ ವತಿಯಿಂದ ಸಮರ್ಪಣಾ ದಿನಾಚರಣೆ

0

ಸಣ್ಣ ಪ್ರತಿಷ್ಠಾನದ ದೊಡ್ಡ ಸಮಾಜ ಸೇವಾ ಕಾರ್ಯ: ಗಣ್ಯರ ಶ್ಲಾಘನೆ

ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಚೊಕ್ಕಾಡಿ ಇದರ ವತಿಯಿಂದ ಸಮರ್ಪಣಾ ದಿನಾಚರಣೆಯು ಆ. 31 ರಂದು ಅಜ್ಜನಗದ್ದೆ ಉ.ಹಿ.ಪ್ರಾ.ಶಾಲೆಯಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಯವರು ಉದ್ಘಾಟಿಸಿದರು. ಸುಳ್ಯದ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾ ರಾಮಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಸುಬ್ರಹ್ಮಣ್ಯ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಊರಿನ ಸಣ್ಣ ಪ್ರತಿಷ್ಠಾನವೊಂದು ದೊಡ್ಡ ಸಮಾಜ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಊರಿಗಾಗಿ ಮಿಡಿಯುವ ಇಂಥ ಮನಸ್ಸುಗಳು ಮಾದರಿಯಾದುದು ಎಂದು ಅತಿಥಿಗಳು ಅಭಿಪ್ರಾಯಪಟ್ಟರು.

ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಮತಿ ಕೆ. ಪಾರ್ವತಿ ನೇಣಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಮತಿ ಸಂಧ್ಯಾ ಭಟ್ ಬಾಳಿಲ ಪ್ರಾರ್ಥಿಸಿದರು. ಶ್ರೀಮತಿ ಉಷಾಲತಾ ಪಡ್ಪು ವಂದಿಸಿದರು. ಶ್ರೀಮತಿ ಭವ್ಯಾ ನಾಯರ್‌ಕಲ್ಲು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ ಅಧ್ಯಕ್ಷ ಕೆ.ಕೇಶವಮೂರ್ತಿ, ಟ್ರಸ್ಟಿನ ಸದಸ್ಯರು ಭಾಗವಹಿಸಿದ್ದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕು. ಶರಧಿ ಮತ್ತು ಕು. ಶಮಾತ್ಮಿ ಅವರಿಂದ ಭರತನಾಟ್ಯ ಹಾಗೂ ಕು. ಸಾಧನಾ ಜೋಷಿ ಶಿವಮೊಗ್ಗ ಅವರಿಂದ ಕೊಳಲುವಾದನ ನೆರವೇರಿತು.