ಕಸ ತೆರವಿನ ಸಹಕಾರಕ್ಕೆ ಕೆ ಎಸ್ ಉಮ್ಮರ್ ರಿಗೆ ವಿನಯ್ ಕುಮಾರ್ ಕಂದಡ್ಕರಿಂದ ಶಾಲು ಹೊದಿಸಿ ಸನ್ಮಾನ

ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂದು ಸುಳ್ಯದ ಕಸದ ಬಗೆಗಿನ ಚರ್ಚೆ ಹಾಲಿ ಹಾಗೂ ಮಾಜಿ ಅಧ್ಯಕ್ಷರ ನಡುವೆ ಮಾತಿನ ಸಂಘರ್ಷದ ವೇದಿಕೆ ಯಾಯಿತು.
ನೀವು ಅಷ್ಟು ಖರ್ಚು ಮಾಡಿದ್ದೀರಿ ಎಂದು ವಿನಯ್ ಕುಮಾರ್ ಕಂದಡ್ಕ ರವರು ದೂರಿದರೆ ನಿಮ್ಮ ಅಧಿಕಾರ ಅವಧಿಯಲ್ಲಿಯೂ ಕೂಡ ಇನ್ನಷ್ಟು ಖರ್ಚು ಮಾಡಿದ್ದೀರಿ ಎಂದು ಶಶಿಕಲಾರವರು ಕೂಡ ಹೇಳಿ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆಯಿತು.
ಸಭೆಯಲ್ಲಿ ಕಸದ ಬಗ್ಗೆ ಚರ್ಚೆ ಆರಂಭಗೊಂಡಾಗ ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಸಂಸ್ಥೆಯೊಂದಕ್ಕೆ ಸರಿಯಾದ ರೀತಿಯಲ್ಲಿ ಕಸ ಸಾಗಟ ನಡೆಯುತ್ತಿದ್ದು ಇದರಿಂದ ಕಸದ ಸಮಸ್ಯೆಗೆ ಅಲ್ಪಮಟ್ಟಿನ ಮುಕ್ತಿ ಸಿಕ್ಕಿದಂ ತೆ ಹಾಗಿದೆ ಎಂದು ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾಹಿತಿಯನ್ನು ನೀಡಿದರು.















ಈ ಸಂದರ್ಭದಲ್ಲಿ ಎದ್ದು ನಿಂತ ವಿನಯ ಕುಮಾರ್ ಕಂದಡ್ಕರವರು ಸಭೆಗೆ ತಪ್ಪು ಮಾಹಿತಿಯನ್ನು ನೀಡಬೇಡಿ ಅಧ್ಯಕ್ಷರೆ ಎಂದು ಹೇಳಿ ಕಳೆದ ಮೂರು ವರ್ಷಗಳ ಕಸದ ರಾಶಿಯನ್ನು ತೆರವುಗೊಳಿಸಲಾಗಿದೆ ಎಂದು ತಪ್ಪು ಸಂದೇಶವನ್ನು ನೀಡಿದ್ದೀರಿ.ಅಲ್ಲದೆ ಕಸ ಸಾಗಾಟದ ಬಗ್ಗೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಮತ್ತು ಒಂದೂವರೆ ಲಕ್ಷ ರೂಪಾಯಿ ಖರ್ಚಾಗುತ್ತಿದ್ದ ಸ್ಥಳದಲ್ಲಿ ಇದೀಗ ಸುಮಾರು 4 ಲಕ್ಷ ರೂ ಖರ್ಚು ಮಾಡಿಕೊಂಡು ಕಸ ತೆರವು ಮಾಡುತ್ತಿದ್ದೀರಿ ಇದು ಎಲ್ಲಿಯ ಸರಿ ಎಂದು ಕೇಳಿದರು.
ಈ ಸಂದರ್ಭದಲ್ಲಿ ನಾಮ ನಿರ್ದೇಶಕ ಸದಸ್ಯರಾದ ಸಿದ್ದಿಕ್ ಕೊಕ್ಕೋರವರು ಎದ್ದುನಿಂತು ಸ್ವ ಪಕ್ಷದ ಸದಸ್ಯರೇ ಅಧ್ಯಕ್ಷರು ಕಸ ವಿಲೇವಾರಿಯಲ್ಲಿ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದ್ದರಿಂದ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿನಯರವರು ನಾನು ಅಧ್ಯಕ್ಷರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳುತ್ತಿಲ್ಲ.ಆದರೆ ವಿಲೇವಾರಿ ಸಂದರ್ಭದಲ್ಲಿ ನಿಯಮವನ್ನು ಸರಿಯಾಗಿ ಪಾಲಿಸಲಿಲ್ಲ.ಸಭೆಯಲ್ಲಿ ತೀರ್ಮಾನ ಮಾಡದೆ ಹೆಚ್ಚಿನ ದರವನ್ನು ನೀಡಲು ಅವರಿಗೆ ಅನುಮತಿ ನೀಡಿದವರು ಯಾರು ಎಂದು ಹೇಳಿದರು. ಅಲ್ಲದೇ ನಗರ ಪಂಚಾಯತಿ ಸಭೆಯ ನಿರ್ಣಯವನ್ನು ತೆಗೆದುಕೊಳ್ಳದೆ ಸ್ವಂತ ತೀರ್ಮಾನ ಪ್ರಕಾರ ಕಸವಿಲಿವಾರಿ ಮಾಡಿರುವುದು ಸರಿಯಲ್ಲ ಇದನ್ನು ಯಾರ ಹತ್ತಿರ ಕೇಳಿ ಮಾಡಿದ್ದೀರಿ ಎಂದು ಪ್ರಶ್ನೆಯನ್ನು ಹಾಕಿದ್ದರು. ಇದಕ್ಕೆ ಅಧ್ಯಕ್ಷೆ ಶಶಿಕಲಾರವರು ಮರು ಪ್ರಶ್ನೆಯನ್ನು ಮಾಡಿ ನಿಮ್ಮ ಸಮಯದಲ್ಲಿಯೂ ನೀವು ಕಸವಿಲೆವಾರಿ ವೇಳೆ ಯಾರನ್ನು ಕೇಳಿ ಮಾಡಿದ್ದೀರಿ. ಅಂದು ನೀವು ಕೂಡ ನಿಮ್ಮ ಸ್ವಂತ ಅಭಿಪ್ರಾಯದ ಪ್ರಕಾರವೇ ನೀವು ಮಾಡಲಿಲ್ಲವೇ ಎಂದು ಮರು ಪ್ರಶ್ನೆಯನ್ನು ಮಾಡಿ ಈ ವಿಷಯದ ಕುರಿತು ಕೆಲಕಾಲ ಪರಸ್ಪರ ಆರೋಪ ಪ್ರತ್ಯಾರೋಪಗಳು ಮಾಡಿಕೊಂಡರು.
ಇವರ ಗಲಾಟೆ ಹೆಚ್ಚಾಗುತ್ತಿದ್ದನ್ನು ಗಮನಿಸಿದ ಸದಸ್ಯ ಕೆ ಎಸ್ ಉಮ್ಮರ್ ರವರು ಎದ್ದುನಿಂತು 2020 ರಿಂದ ಇದು ವರೆಗೆ ಕಸ ವಿಲೇವಾರಿಗೆ ಆಗಿರುವಂತಹ ಪಂಚಾಯತಿ ಸಭೆಯ ನಿರ್ಣಯಗಳು ಮತ್ತು ಅನುಮತಿ,ದಾಖಲೆ ಸಮೇತ ವಿವರಿಸಿ ಮಾಹಿತಿಯನ್ನು ನೀಡಿದರು. ಅಲ್ಲದೆ ವಿನಯಕುಮಾರ್ ಕಂದೇಡ್ಕರ್ ಅವರು ಅಧ್ಯಕ್ಷರಾಗಿ ಇರುವ ಸಂದರ್ಭದಲ್ಲಿಯೇ ಖಾಸಗಿ ಸಂಸ್ಥೆಯೊಂದರಿಂದ ಅಗ್ರಿಮೆಂಟ್ ಮಾಡಿಕೊಂಡ ಪ್ರಕಾರ ಇಂದಿಗೂ ಕೂಡ ಕಸವಿಲೆವಾರಿ ನಡೆಯುತ್ತಿದೆ. ಅಂದು ಅದು ಸರಿಯಾಗಿದೆ ಎಂದು ನಿಮ್ಮ ಮನಸ್ಸಿನಲ್ಲಿದ್ದರೆ ಇಂದು ಕೂಡ ಅದು ಸರಿ ಇದೆ. ಇದರಲ್ಲಿ ಯಾವುದೇ ರೀತಿಯ ತಪ್ಪುಗಳು ಉಂಟಾಗಿಲ್ಲ ಎಂದು ಹೇಳಿದರು.
ಈ ವೇಳೆ ಎಂ ವೆಂಕಪ್ಪ ಗೌಡರು ಇಬ್ಬರನ್ನು ಕೂಡ ಸಮಾಧಾನಪಡಿಸಿ ಇದೀಗ ಆರೋಪ ಬಂದಿರುವುದು ನಗರ ಪಂಚಾಯತ್ ಅಧ್ಯಕ್ಷರ ಮೇಲೆ ಆಗಿರುವ ಕಾರಣ ಇದು ಅಧಿಕಾರಿಗಳ ಮಟ್ಟದಲ್ಲಿ ತನಿಖೆಗೆ ಒಳಪಡಿಸಿ ಇದಕ್ಕೆ ಅಂತ್ಯವನ್ನು ಕಾಣಬೇಕಾಗಿದೆ.
ಇಲ್ಲದಿದ್ದರೆ ಈ ಆರೋಪಗಳು ನಿರಂತರವಾಗಿ ಮುಂದುವರಿಯುತ್ತದೆ. ಆದ್ದರಿಂದ ಇದಕ್ಕೆ ಇತಿಶ್ರೀ ಆಗಬೇಕಾಗಿದೆ ಹೇಳಿದರು. ಇದಕ್ಕೆ ಉಳಿದ ವಿಪಕ್ಷ ಸದಸ್ಯರುಗಳು ಕೂಡ ತಮ್ಮ ಸಹಮತವನ್ನು ವ್ಯಕ್ತಪಡಿಸಿ ಲೋಕಾಯುಕ್ತಕ್ಕೆ ತನಿಖೆಗೆ ನೀಡುವಂತೆ ಆಗ್ರಹ ವ್ಯಕ್ತಪಡಿಸಿದರು.ಈ ಬಗ್ಗೆ ಚರ್ಚೆಗಳು ನಡೆದು ಬಳಿಕ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಯ ಆಗ್ರಹಕ್ಕೆ ನಿರ್ಣಯವನ್ನು ತೆಗೆದುಕೊಳ್ಳೋಣ ಎಂದು ವಿಷಯವನ್ನು ಇಲ್ಲಿಗೆ ಕೊನೆಗೊಳಿಸಲಾಯಿತು.
ವಿನಯಕುಮಾರ್ ಕಂದಡ್ಕ ಅವರಿಂದ ಉಮ್ಮರ್ ರವರಿಗೆ ಸನ್ಮಾನ

ಈ ಎಲ್ಲಾ ಚರ್ಚೆಗಳು ನಡೆಯುತ್ತಿದ್ದಂತೆ ಕಸ ವಿಲೇವಾರಿಯಲ್ಲಿ ಸದಸ್ಯರಾದ ಕೆ ಎಸ್ ಉಮ್ಮರ್ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ನಾನು ಶಾಲು ಹೊದಿಸಿ ಗೌರವಿಸುತ್ತೇನೆ ಎಂದು ಹೇಳಿ ವಿನಯ್ ಕುಮಾರ್ ಕಂದಡ್ಕ ರವರು ಸಭೆಯಲ್ಲಿ ಉಮರ್ ರವರಿಗೆ ಶಾಲು ಹೊದಿಸಿ ಗೌರವಿಸಿದರು. ಓರ್ವ ವಿಪಕ್ಷ ಸದಸ್ಯರಿಗೆ ಆಡಳಿತ ಸದಸ್ಯರು ಶಾಲು ಹೊದಿಸಿ ಗೌರವಿಸಿದ್ದು ಸಭೆಯಲ್ಲಿ ಎಲ್ಲರ ಗಮನ ಸೆಳೆಯಿತು.










