ನಾರಾಯಣ ಗುರುಗಳು ಕೆಳವರ್ಗದವರ ಸಾಮಾಜಿಕ ಸಮಾನತೆಗೆ ಕಾರಣರಾದವರು: ಶಾಸಕಿ ಭಾಗೀರಥಿ ಮುರುಳ್ಯ
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸುಳ್ಯ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ತಾಲೂಕು ಕಚೇರಿಯಲ್ಲಿ ಇಂದು ಆಚರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ,ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ನಾರಾಯಣ ಗುರುಗಳು ಕೆಳವರ್ಗದವರಿಗೆ ಸಾಮಾಜಿಕ ಸಮಾನತೆ ತಂದವರು.ಶಿಕ್ಷಣ ಸಂಸ್ಥೆಗಳನ್ನು,ಆಸ್ಪತ್ರೆಗಳನ್ನು ತೆರೆದು ಸಾಮಾಜಿಕ ಬದಲಾವಣೆಗೆ ಕಾರಣರಾದವರು. ಅವರನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲಾಗಿಸದೆ ಇಂತಹ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸಬೇಕು ಎಂದ ಅವರು ಇವರ ಸಾಮಾಜಿಕ ಕ್ರಾಂತಿಯೇ ಮಹಾತ್ಮ ಗಾಂಧೀಜಿಯವರಿಗೆ ಪ್ರೇರಣೆಯಾಗಿತ್ತು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ಎಲ್ಲರೂ ಒಂದಾಗಬೇಕೆಂದು ಸಮಾಜಕ್ಕೆ ಸಂದೇಶ ಸಾರಿದ ನಾರಾಯಣ ಗುರುಗಳು ನಮಗೆಲ್ಲರಿಗೂ ಆದರ್ಶಪ್ರಾಯರು ಎಂದು ಹೇಳಿದರು.















ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ ಮಾತನಾಡಿ ದೇಶದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟು ಹಾಕಿದವರು ನಾರಾಯಣ ಗುರುಗಳು.ದೈವಾಂಶ ಸಂಭೂತರಾಗಿ ಜನಿಸಿ ಸಮಾಜದಲ್ಲಿ ಸುಧಾರಣೆಯೊಂದಿಗೆ ಆಧ್ಯಾತ್ಮಿಕ ಚಿಂತನೆಯನ್ನು ನೀಡಿದವರು ಎಂದು ಹೇಳಿದರು.

ಸುಳ್ಯ ತಹಶಿಲ್ದಾರ್ ಮಂಜುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಶುಭ ಹಾರೈಸಿದರು. ಸುಳ್ಯ ಸಿ.ಎ.ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಸುದರ್ಶನ್ ಮಾತನಾಡಿದರು. ನಗರ ಪಂಚಾಯತ್ ಸದಸ್ಯರು, ತಾಲೂಕು ಕಚೇರಿ ಸಿಬ್ಬಂದಿಗಳು, ಬಿಲ್ಲವ ಸಂಘದವರು,ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು. ಬಿಲ್ಲವ ಸಂಘದ ಪ್ರ.ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ ವಂದಿಸಿದರು.










