ಸುಳ್ಯದಲ್ಲಿ ಕೆ.ಎಫ್.ಡಿ.ಸಿ. ಕಚೇರಿ ಎದುರು ಕಾರ್ಮಿಕರ ಪ್ರತಿಭಟನೆ

0

ಕೆ.ಎಫ್‌.ಡಿ.ಸಿ. ರಬ್ಬರ್ ಪ್ಲಾಂಟೇಷನ್ ನಲ್ಲಿರುವ ಮರಗಳಿಗೆ ಮರಕವಚ ಅಳವಡಿಸಿದ ಸಂಬಳ ಹಾಗೂ ಮರಗಳಿಗೆ ಅರ್ಟನ್ ವಾಶ್‌ ಮಾಡಿರುವ ಪಾವತಿ ಮಾಡಿದ ಬಾಬ್ತು ಕಾರ್ಮಿಕರಿಗೆ ಕೆ.ಎಫ್.ಡಿ.ಸಿ. ಪಾವತಿಸಿಲ್ಲ ಎಂದು ಆಕ್ರೋಶಗೊಂಡಿರುವ ರಬ್ಬರ್ ಕಾರ್ಮಿಕರು ಕೆ.ಎಫ್.ಡಿ.ಸಿ. ಸುಳ್ಯ ಕಚೇರಿ ಎದುರು ಧಿಡೀರ್ ಪ್ರತಿಭಟನೆ ನಡೆಸಿದರು.

ಸಂಜೆ ಕಚೇರಿ ಎದುರು ಸೇರಿದ ಕಾರ್ಮಿಕ ಪದಾಧಿಕಾರಿಗಳು ಬೇಡಿಕೆಯನ್ನು ಮುಂದಿಟ್ಟರು. ಆದರೆ ಅವರ ಅಹವಾಲು ಸ್ವೀಕಾರಕ್ಕೆ ಅಧಿಕಾರಿಗಳು ಬಂದಿರಲಿಲ್ಲ. ಕೆಲ ಸಮಯದ ಬಳಿಕ ವಿಷಯ ತಿಳಿದು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ, ಚೇತನ್ ಕಜೆಗದ್ದೆ, ರಕ್ಷಿತ್ ಗೂನಡ್ಕ‌ ಮೊದಲಾದವರು ಬಂದರು.

ಕಾರ್ಮಿಕರೊಂದಿಗೆ ಮಾತನಾಡಿದರು. ಈ ವೇಳೆ ಕೆ.ಎಫ್.ಡಿ.ಸಿ. ಯ ಮೇಲ್ವಿಚಾರಕ ಅರುಣ್ ಕುಮಾರ್ ಆಗಮಿಸಿದರು. ಅವರೊಂದಿಗೆ ಕೆ.ಎಫ್.ಡಿ.ಸಿ. ಲೇಬರ್ಸ್ ಯೂನಿಯನ್ ನ ಶರತ್ ನಾಗಪಟ್ಟಣ, ಕರ್ನಾಟಕ ವರ್ಕರ್ಸ್ ಟ್ರೇಡ್ ಯೂನಿಯನ್ ನ ಅಧ್ಯಕ್ಷ ಶಿವಕುಮಾರ್, ಜನರಲ್ ಎಂಪ್ಲಾಯ್ಸ್ ಯೂನಿಯನ್ ಅಧ್ಯಕ್ಷ ಜೀವರತ್ನ ಮೊದಲಾದವರು ಅಹವಾಲು ವ್ಯಕ್ತ ಪಡಿಸಿ, ರಬ್ಬರ್ ಮರಗಳಿಗೆ‌ ಮರಕವಚ ಅಳವಡಿಸೊದ ಬಾಬ್ತು ಹಣ ನೀಡುವುದಾಗಿ ಹೇಳಿ ದಿನ ಕಳೆದರೂ ಪಾವತಿಸುತ್ತಿಲ್ಲ. ಮೂಲಭೂತವಾಗಿ ಸಿಗಬೇಕಾದ ಅವಶ್ಯಕತೆಗಳನ್ನು ನಾವು ಪಡೆದುಕೊಳ್ಳಲು ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ರವರು “ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಬೇಕು. ಅದು ನೀಡುವ ಸಮಯದಲ್ಲಿ ಕೊಡಲೇ ಬೇಕು. ನಿಗಮ ಕಾರ್ಮಿಕರೊಂದಿಗಿನ ಒಪ್ಪಂದದಂತೆ ನಡೆದುಕೊಳ್ಳಬೇಕು” ಎಂದು ಹೇಳಿದರು. ಬಳಿಕ ಸ್ಥಳದಿಂದಲೇ ನಿಗಮದ ಎಂ.ಡಿ, ಹಾಗೂ ಡಿ.ಎಂ. ರಿಗೆ ಕರೆ ಮಾಡಿ ಸಮಸ್ಯೆಯನ್ನು‌ ವಿವರಿಸಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು ಕೂಡಾ ಕಾರ್ಮಿಕರ ಸಮಸ್ಯೆಗೆ ಸ್ಪಂದನೆ ನೀಡುವಂತೆ ಅಧಿಕಾರಿಗಳಲ್ಲಿ ಮಾತನಾಡಿದರು.

ಸಂಜೆ 4 ಗಂಟೆಗೆ ಆರಂಭವಾದ ಪ್ರತಿಭಟನೆಗೆ 5.45 ಆದರೂ ಡಿ.ಎಂ. ಸ್ಥಳಕ್ಕೆ ಬಂದಿರಲಿಲ್ಲ.

ಡಿ.ಎಂ. ನಂದಗೋಪಾಲ್ ರನ್ನು ಸುದ್ದಿ ವರದಿಗಾರರು ಸಂಪರ್ಕಿಸಿ ಕಾರ್ಮಿಕರ ಪ್ರತಿಭಟನೆ ಕುರಿತು ವಿಚಾರಿಸಿದಾಗ, “ಕಾರ್ಮಿಕರ ಬೇಡಿಕೆ ಸಹಜವಾದುದು. ಶೀಘ್ರದಲ್ಲೇ ಅದನ್ನು ಈಡೇರಿಸುತ್ತೇವೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ಲಾಂಟೇಷನ್ ವರ್ಕರ್ಸ್ ಟ್ರೇಡ್ ಯೂನಿಯನ್ ಕಾರ್ಯದರ್ಶಿ ಪ್ರೇಮನಾಥ್ ಕಾವು
ಜನರಲ್ ಎಂಪ್ಲಾಯ್ಸ್ ಯೂನಿಯನ್ ಕಾರ್ಯದರ್ಶಿ ‌ಕ್ರೂಸ್ ನಾಗಪಟ್ಟಣ, ಚರಣ್ ರಾಜ್‌ಕಲ್ಲುಗುಂಡಿ, ಸತ್ಯರಾಜ್‌ಕಂದಡ್ಕ, ವಿಜಯ ಕಂದಡ್ಕ, ಶಶಿ ನೆಟ್ಟಾರು, ಕರ್ಣ ಕೌಡಿಚ್ಚಾರು, ಶಿವ ಕೌಡಿಚ್ಚಾರು, ಧರ್ಮ ಕೂಟೇಲು,ರಾಮ್ ರಾಜ್ ಎರುಕಡ್ಪು, ಸತೀಶ್ ಕಲ್ಲುಗುಂಡಿ ಮೊದಲಾದವರು ಇದ್ದರು.