ಬಾವಿಗೆ ಬಿದ್ದು ವ್ಯಕ್ತಿ ಮೃತಪಟ್ಟ ಪ್ರಕರಣ

0

ಮೃತದೇಹ ತೆಗೆದು ಸುಳ್ಯದಲ್ಲಿ ಮರಣೋತ್ತರ ಪರೀಕ್ಷೆ

ಪೊಲೀಸ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರ ಉಪಸ್ಥಿತಿ

ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಇರಂತಕಜೆ ನಾರಾಯಣ ಎಂಬವರು ನಿನ್ನೆ ರಾತ್ರಿ ಬಾವಿಗೆ ಬಿದ್ದು ಮೃತಪಟ್ಟಿದ್ದು, ಸುಳ್ಯ ಪೊಲೀಸರ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಸುಳ್ಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೋಯ್ಯಲಾಗಿದೆ.

ಚನಿಯ ಎಂಬವರ ಪುತ್ರ 42 ವರ್ಷ ಪ್ರಾಯದ ನಾರಾಯಣ ರವರು ನಿನ್ನೆ ರಾತ್ರಿ ಕಾಣೆಯಾಗಿದ್ದರು. ಅವರನ್ನು ರಾತ್ರಿ ಹುಡುಕಾಡಿದಾಗ ಪಕ್ಕದ ಮನೆಯ ಪ್ರಸಾದ ಎರ್ಮೆಟ್ಟಿ ಎಂಬವರಿಗೆ ಸೇರಿದ ಬಾವಿಯ ಬಳಿ ಚಪ್ಪಲಿ, ಮೊಬೈಲ್ ಫೋನ್ ಪತ್ತೆಯಾಗಿತ್ತು. ಹೀಗಾಗಿ ಬಾವಿಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಯಿತು. ಮಾಹಿತಿ ತಿಳಿದ ಊರುವರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ರವರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಇಂದು ಬೆಳಿಗ್ಗೆ ಬಂದು ಮಹಜರು ನಡೆಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ಪೋಸ್ಟ್ ಮಾರ್ಟಂ ಗೆ ಕೊಂಡೊಯ್ದರು.

ಮನೆಯಲ್ಲಿ ನಾರಾಯಣ ಮತ್ತು ಅವರ ತಾಯಿ ಮಾತ್ರ ಇದ್ದರೆಂದು ತಿಳಿದು ಬಂದಿದೆ. ನಾರಾಯಣರವರು ಆಕಸ್ಮಿಕವಾಗಿ ಬಿದ್ದರೇ ಅಥವಾ ಆತ್ಮಹತ್ಯೆ ಮಾಡಿಕೊಂಡರೇ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಷ್ಟೆ. ಮೃತರು ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.