ಬಾಳಿಲದಲ್ಲಿ ಶಾರದೋತ್ಸವ ಉದ್ಘಾಟನೆ

0

ಇಂದು ಸಂಜೆ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ

ನಾಳೆ ಧಾರ್ಮಿಕ ಸಭೆ, ಶಾರದೋತ್ಸವ ಪ್ರಶಸ್ತಿ ಪ್ರದಾನ, ಶೋಭಾಯಾತ್ರೆ

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 1 ಮತ್ತು 2ರಂದು ಬಾಳಿಲದಲ್ಲಿ ನಡೆಯಲಿದೆ.

ಅ. 1ರಂದು ಬೆಳಿಗ್ಗೆ ಶ್ರೀ ಶಾರದಾ ದೇವಿಯ ವಿಗ್ರಹ ಆಗಮನ, ಪ್ರತಿಷ್ಠೆ, ಆಭರಣಧಾರಣೆ ಬಳಿಕ ಶ್ರೀಮತಿ ಪ್ರೀತಿಲಕ್ಷ್ಮಿ ಮತ್ತು ಲಕ್ಷ್ಮಣ ರೈ ಬಾಳೆಹಿತ್ಲು ರವರು ಸೇವೆಯಾಗಿ ನೀಡಿದ ಕಿವಿಯೋಲೆ ಸಮರ್ಪಣೆ ನಡೆಯಿತು‌. ಬಳಿಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ ಮರೆಂಗಾಲರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಶ್ರಾಂತ ಉಪತಹಶೀಲ್ದಾರರಾದ ಅಚ್ಚುತ ಗೌಡ ಬಾಳಿಲ ಉದ್ಘಾಟಿಸಿದರು. ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನಾ ಜೋಗಿಬೆಟ್ಟು, ಕಳಂಜ ಬಾಳಿಲ ಪ್ರಾ.ಕೃ‌.ಪ.ಸ.ಸಂಘದ ಉಪಾಧ್ಯಕ್ಷ ಹರ್ಷ ಜೋಗಿಬೆಟ್ಟು, ನಿರ್ದೇಶಕ ರಾಮಣ್ಣ ಪರವ, ನಿವೃತ್ತ ಯೋಧ ಹೊನ್ನಪ್ಪ ಗೌಡ ದೇರಂಪಾಲು ಅತಿಥಿಗಳಾಗಿ ಭಾಗವಹಿಸಿ, ಶುಭ ಹಾರೈಸಿದರು. ಸಮಿತಿಯ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ, ಸಮಿತಿಯ ಗೌರವ ಸಲಹೆಗಾರರಾದ ಎ.ಕೆ. ನಾಯ್ಕ್ ಅಮೆಬೈಲು ಚೊಕ್ಕಾಡಿ ಮತ್ತು ಅಶೋಕ್ ಶೆಟ್ಟಿ ಅರ್ಚನಾ ಮತ್ತು ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಶೋಭ ಎ.ಕೆ. ನಾಯ್ಕ್ ಅಮೆಬೈಲು ಪ್ರಾರ್ಥಿಸಿದರು. ಸಮಿತಿಯ ಸದಸ್ಯೆ ಶ್ರೀಮತಿ ಪುಷ್ಪಾಗಣೇಶ್ ಸ್ವಾಗತಿಸಿ, ಶ್ರೀಮತಿ ಜಾಹ್ನವಿ ಕಾಂಚೋಡು ವಂದಿಸಿದರು. ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಕಮಲ ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುಧಾಕರ ರೈ ಎಂ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಸುವರ್ಣ, ಕೋಶಾಧಿಕಾರಿ ರಾಜೇಶ್ ಗೌಡ ಎ, ಕಾರ್ಯದರ್ಶಿ ದಿನೇಶ್ ರೈ, ಉಪಾಧ್ಯಕ್ಷ ದಿವಾಕರ ರೈ ಬಿ, ಜತೆ ಕಾರ್ಯದರ್ಶಿ ಶೀನಪ್ಪ ಎಚ್, ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ಪಾಟಾಳಿ, ಕಾರ್ಯದರ್ಶಿ ಶಶಿಧರ ಮುಪ್ಪೇರ್ಯ, ಕೋಶಾಧಿಕಾರಿ ರಮಾ ಅಲೇಕಿ, ಮಹಿಳಾ ಸಮಿತಿ ಕಾರ್ಯದರ್ಶಿ ಪ್ರೇಮಲತಾ ಮರುವಂಜ, ಕೋಶಾಧಿಕಾರಿ ಹರಿಣಾಕ್ಷಿ ಬಿ, ಉಪಾಧ್ಯಕ್ಷೆ ಸುಮಿತ್ರಾ ಸೇರಿದಂತೆ ಸಮಿತಿಯ ಸದಸ್ಯರು ಸಹಕರಿಸಿದರು. ಊರಿನ ಗಣ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ನೃತ್ಯ ವೈವಿಧ್ಯ, ಸೇವಾ ಪುರಸ್ಕಾರ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ ನಡೆಯಲಿದೆ.

ಅ. 2ರಂದು ಬೆಳಿಗ್ಗೆ ಶ್ರೀಮದ್ ಭಗವದ್ಗೀತೆ ಪಾರಾಯಣ, ಭಜನಾ ಕಾರ್ಯಕ್ರಮ ನಡೆಯಲಿದೆ. ಪೂ. 11.15ರಿಂದ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯು. ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕುರಿಯಾಜೆ ತಿರುಮಲೇಶ್ವರ ಭಟ್ ಇವರಿಗೆ ಕೆದಿಲ ರಾಮಚಂದ್ರ ರಾವ್ ಸ್ಮರಣಾರ್ಥ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಪಡುಕುತ್ಯಾರು ಆನೆಗುಂದಿ ಮಠದ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಮೌನೇಶ್ ಶರ್ಮ ಬಾಳಿಲ ಧಾರ್ಮಿಕ ಉಪನ್ಯಾಸ ನೀಡಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಸದಸ್ಯೆ ಶ್ರೀಮತಿ ಪ್ರವೀಣ ಪ್ರಶಾಂತ್ ರೈ ಮರುವಂಜ ಮತ್ತು ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್ ಕುಡುಂಬಿಲ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಕಡಬ ತಾ.ಪಂ. ನಿವೃತ್ತ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಕಜೆಮೂಲೆ, ಕೆವಿಜಿ ಐಟಿಐ ನಿವೃತ್ತ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಯಶೋಧರ ನಾರಾಲುರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ಮತ್ತು ಎಸ್‌.ಎಸ್.ಎಲ್.ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಿದ್ಯಾರ್ಥಿ ಉತ್ತಮ್ ಕೆಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ಬಳಿಕ ನೃತ್ಯವೈಭವ ನಡೆಯಲಿದೆ. ಅಪರಾಹ್ನ ಕುಣಿತ ಭಜನೆ, ಚೆಂಡೆ ವಾದನದೊಂದಿಗೆ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಶ್ರೀ ಶಾರದಾ ದೇವಿಯ ಜಲಸ್ತಂಭನ ನಡೆಯಲಿದೆ.