ಕುರುಂಜಿಭಾಗ್ ನೂತನ ನೀರಿನ ಟ್ಯಾಂಕ್ ಸೋರಿಕೆ, ರಸ್ತೆ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸದಸ್ಯರ ಚರ್ಚೆ
ಸಮಸ್ಯೆ ಉಂಟಾಗಿರುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ, ಶೀಘ್ರದಲ್ಲಿ ಸ್ಪಂದಿಸುವ ಭರವಸೆ
ಸುಳ್ಯ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಅಮೃತ 2.0 ಯೋಜನೆ ಕಾಮಗಾರಿಯ ವೇಳೆ ಉಂಟಾಗಿರುವ ಸಮಸ್ಯೆಗಳ ಕುರಿತು ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಂಜಿನಿಯರ್ ಗಳ ಸಭೆ ಅ 8 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಶೋಭಾ ಲಕ್ಷ್ಮಿ ಸಭೆಯ ನೇತೃತ್ವವನ್ನು ವಹಿಸಿದ್ದರು.
ವೇದಿಕೆಯಲ್ಲಿ ನಗರ ಪಂಚಾಯತಿ ಉಪಾಧ್ಯಕ್ಷ ಬುದ್ಧ ನಾಯ್ಕ,
ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರಿ ಶೇಟ್, ಮುಖ್ಯ ಅಧಿಕಾರಿ ಬಸವರಾಜ್ ಉಪಸ್ಥಿತರಿದ್ದರು.

ಸಭೆಯಲ್ಲಿ ಕೆ ಯು ಡಬ್ಲ್ಯುಎಸ್ ನ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಶುಭ ಸೇಲ್ಸ್ ಗುತ್ತಿಗೆದಾರ ಕಂಪನಿಯ ಸೂಪರ್ವೈಸರ್ ಅಬ್ದುಲ್ ನಿಜ್ಜಾರ್ ಮಲರ್, ಹಾಗೂ ಚೇತನ್ ರಾಜ್ ಉಪಸ್ಥಿತರಿದ್ದರು.
ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪಗೌಡರವರು ಸಭೆಯಲ್ಲಿ ಮಾತನಾಡಿ ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದ ಉಂಟಾಗಿರುವ ರಸ್ತೆಗಳ ದುರವಸ್ಥೆ ಹಾಗೂ ನೂತನವಾಗಿ ನಿರ್ಮಿಸಿದ ನೀರಿನ ಟ್ಯಾಂಕಿನಲ್ಲಿ ಸೋರಿಕೆ ಆಗುತ್ತಿರುವ ಕುರಿತ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೆ ನಗರದಲ್ಲಿ ಈ ಹಿಂದೆ ನಿರ್ಮಿಸಲಾದ ಒಳಚರಂಡಿ ಕಾಮಗಾರಿ ಅರ್ಧದಲ್ಲಿ ನಿಂತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಕಾಮಗಾರಿಯು ಯೋಜನೆಗಳು ಅರ್ಧದಲ್ಲಿ ನಿಂತರೆ ಅದರಿಂದ ಜನತೆಗೆ ಉಂಟಾಗುವ ತೊಂದರೆಗಳ ಬಗ್ಗೆ ವಿವರಣೆಗಳನ್ನು ನೀಡಿದರು. ಈ ಎಲ್ಲಾ ಸಮಸ್ಯೆಗಳನ್ನು ನಾವು ನಮಗಾಗಿ ಇಲ್ಲಿ ಹೇಳುತ್ತಿಲ್ಲ. ಊರಿನ ಜನರು ನಮ್ಮನ್ನು ಕೇಳುತ್ತಿದ್ದಾರೆ. ಅವರಿಗೆ ನಾವು ಏನೆಂದು ಉತ್ತರ ಕೊಡಬೇಕು ಆದ್ದರಿಂದ ಅಧಿಕಾರಿಗಳು 10 ದಿನದ ಒಳಗಾಗಿ ನೀರಿನ ಯೋಜನೆಯ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸಿಕೊಡಬೇಕೆಂದು ಆಗ್ರಹಿಸಿದರು.

ನಗರ ಪಂಚಾಯತಿ ಸದಸ್ಯರಾದ ವಿನಯ್ ಕುಮಾರ್ ಕಂದಡ್ಕ ರವರು ಮಾತನಾಡಿ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ಸಮಸ್ಯೆಗಳು ಕಂಡಾಗ ಅದನ್ನು ನಿಲ್ಲಿಸಲು ಹೊರಟೆವು. ಆದರೆ ರಾತ್ರೋರಾತ್ರಿ ಕೆಲಸ ಮಾಡಿ ಪೈಪುಗಳನ್ನು ಕೇವಲ ಎರಡು ಅಡಿ ಮೂರಡಿ ಅಂತರದಲ್ಲಿ ಮುಚ್ಚಿ ಅಲ್ಲಿಂದ ಹೋಗುತ್ತಾರೆ. ನಿರ್ಮಾಣಗೊಂಡಿರುವ ಟ್ಯಾಂಕಿನ ಪರೀಕ್ಷೆಗಾಗಿ ಟ್ಯಾಂಕ್ ಓಪನ್ ಸ್ವಚ್ಛಪಡಿಸಿದ ನೀರನ್ನು ಹೊರಬಿಡುವ ಸಂದರ್ಭ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಸಂಭವ ಉಂಟಾಗಿತ್ತು.
ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅದಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಸದಸ್ಯರಾದ ಶಿಲ್ಪಾ ಸುದೇವ್ ರವರು ಮಾತನಾಡಿ ಜಯನಗರ ರಸ್ತೆಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲಿಯ ಜನರು ಪ್ರತಿಭಟನೆಯ ಮೂಲಕ ನಮ್ಮನ್ನು ಕೇಳುತ್ತಿದ್ದಾರೆ.ವಾರ್ಡಿನಲ್ಲಿರುವ ಹಿಂದು ರುದ್ರಭೂಮಿಯ ಸಂಪರ್ಕ ರಸ್ತೆಯ ಡಾಮರನ್ನು ಸಂಪೂರ್ಣವಾಗಿ ಕಿತ್ತೊಗೆದ್ದಿದ್ದು ಕೂಡಲೇ ನಮಗೆ ಮರುಡಾಮರಿಕರಣ ಮಾಡಿಕೊಡಬೇಕೆಂದು ಒತ್ತಾಯಿಸಿದರು.
















ಶರೀಫ್ ಕಂಠಿ ರವರು ಮಾತನಾಡಿ ನಗರದ ಮುಖ್ಯ ಪ್ರದೇಶಗಳಾದ ಆಲೆಟ್ಟಿ ಕ್ರಾಸ್ ರೋಡ್, ಗಾಂಧಿನಗರ ಗಾಂಧಿ ಪಾರ್ಕ್ ಬಳಿ, ಪೊಲೀಸ್ ಠಾಣೆಯ ಮುಂಭಾಗ, ವಿವೇಕಾನಂದ ಸರ್ಕಲ್ ಮುಂತಾದ ಕಡೆಗಳಲ್ಲಿ ರಸ್ತೆ ದುರಸ್ತಿ ಪಡಿಸಲು ಬರೇ ಜಲ್ಲಿ ಕಲ್ಲುಗಳನ್ನು ಸುರಿದು ಬಿಟ್ಟಿರುತ್ತಾರೆ.ಇದೀಗ ಆ ಕಲ್ಲುಗಳು ರಟ್ಟಿ ಸ್ಥಳೀಯ ಅಂಗಡಿಯವರಿಗೆ, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ.
ಕುಡಿಯುವ ನೀರಿನ ಯೋಜನೆ ಕೇಂದ್ರ ಸರ್ಕಾರದ ಯೋಜನೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದೀರಿ ಇದು ಕೇವಲ ಕೇಂದ್ರ ಸರ್ಕಾರದ ಯೋಜನೆ ಮಾತ್ರವಲ್ಲ ರಾಜ್ಯ ಸರ್ಕಾರದ ಪಾತ್ರ ಶೇಕಡ 50 ರಷ್ಟು ಇದೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ರವರು ಮಾತನಾಡಿ ರಥಬೀದಿ ರಸ್ತೆಯಲ್ಲಿ ಮರು ಕಾಮಗಾರಿ ನಡೆಸಿ ಅಳವಡಿಸಿರುವ ಇಂಟರ್ಲಾಕ್ ಗಳು ಅಲ್ಲಲ್ಲಿ ಗುಂಡಿ ಬಿದ್ದಿದ್ದು,ರಸ್ತೆಯ ಪಕ್ಕದಲ್ಲಿರುವ ಹಾಕಿರುವ ವೆಟ್ ಮಿಕ್ಸ್ ಸಿಮೆಂಟ್ ಎದ್ದು ಹೋಗಿ ಕಲ್ಲುಗಳು ಹೊರ ಬಂದು ವಾಹನಗಳು ಚಲಿಸುವಾಗ ಪಕ್ಕದ ಅಂಗಡಿಯ ಗಾಜುಗಳಿಗೆ ಕಲ್ಲುಗಳು ರಟ್ಟಿ ನಷ್ಟ ಉಂಟಾಗುತ್ತಿದೆ.
ಇದನ್ನು ಎಷ್ಟು ಬಾರಿ ಹೇಳಿದರೂ ಕೂಡ ಸಂಬಂಧ ಪಟ್ಟವರು ಗಮನ ನೀಡುತ್ತಿಲ್ಲ ಎಂದು ಹೇಳಿದರು.
ಉಪಾಧ್ಯಕ್ಷ ಬುದ್ಧನಾಯ್ಕ್ ರವರು ಮಾತನಾಡಿ ಹಳೆಗೇಟು ಪರಿಸರದಲ್ಲಿ ಅನೇಕ ಕಡೆ ನೀರಿನ ಕನೆಕ್ಷನ್ ಕೊಡಲು ಬಾಕಿ ಇದ್ದು ಅದರ ಬಗ್ಗೆ ಗಮನ ಕೊಡಬೇಕೆಂದು ಸಭೆಯಲ್ಲಿ ಅಧಿಕಾರಿಗಳನ್ನು ಆಗ್ರಹಿಸಿದರು.
ಸದಸ್ಯ ಧೀರಕ್ರಾಸ್ತರವರು ಮಾತನಾಡಿ ಇಂಜಿನಿಯರ್ಗಳು ನಾವು ಹೇಳುವುದನ್ನು ಸರಿಯಾಗಿ ಕೇಳುತ್ತಿಲ್ಲ. ನಾವು ಹೇಳುವ ಯಾವುದೇ ಕೆಲಸ ಕಾರ್ಯಗಳಿಗೆ ಅವರ ಸ್ಪಂದನೆನೂ ಸಿಗುತ್ತಿಲ್ಲ. ಇಂದು ರಸ್ತೆಯಲ್ಲಿ ಓಡಾಡುವ ಪಾಪದ ಆಟೋರಿಕ್ಷಾದವರು ಸಂಕಷ್ಟದಲ್ಲಿದ್ದಾರೆ. ದ್ವಿಚಕ್ರವಾಹನ ಸವಾರರು ಅಲ್ಲಲ್ಲಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಗಳಲ್ಲಿ ಹೊಂಡ ಗುಂಡಿಗಳು ತುಂಬಿರುವ ಕಾರಣ ಅವರು ದುಡಿಯುವ ಹಣವನ್ನು ಆಟೋರಿಕ್ಷಕೆ ಖರ್ಚು ಮಾಡುವ ಸ್ಥಿತಿಗೆ ಬಂದು ನಿಂತಿದ್ದಾರೆ. ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ. ನಗರದಲ್ಲಿ ರೋಗಿಗಳು, ಗರ್ಭಿಣಿ ಸ್ತ್ರೀಯರಿಗೆ ವಾಹನಗಳಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಮಾಡಿಕೊಡುತ್ತೇವೆ ಮಾಡಿಕೊಡುತ್ತೇವೆ ಎಂದು ಹೇಳುವುದಲ್ಲದೆ ಯಾವಾಗ ಮಾಡಿಕೊಡುತ್ತೀರಿ ಎಂಬ ಸರಿಯಾದ ಸಮಯವನ್ನು ಇವತ್ತೇ ಹೇಳಿ ಎಂದುಅವರು ಆಗ್ರಹಿಸಿದರು.
ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರವರು ಮಾತನಾಡಿ ದುರಸ್ತಿ ಕೆಲಸಗಳನ್ನು ಮಾಡುವ ಸಂದರ್ಭ ಅದನ್ನು ಸರಿಯಾಗಿ ಮಾಡಿಕೊಡಿ. ಯಾವುದೇ ವಾರ್ಡಿನಲ್ಲಿ ಕೆಲಸ ಕಾರ್ಯಗಳು ಮಾಡುವಾಗ ಸ್ಥಳೀಯ ಸದಸ್ಯರ ಗಮನಕ್ಕೆ ತನ್ನಿ. ಅವರನ್ನು ಕೆಲಸ ಮಾಡುವಲ್ಲಿಗೆ ಕರೆಸಿ ಪರಿಸರದ ಮತ್ತು ಸ್ಥಳೀಯ ಮಾಹಿತಿಯನ್ನು ಅವರಿಂದ ಪಡೆದುಕೊಳ್ಳಿ. ಅದು ಬಿಟ್ಟು ಅವರ ಗಮನಕ್ಕೆ ತರದೆ ಯಾವುದೇ ಕೆಲಸ ಅಲ್ಲಿ ಮಾಡಿದರೆ ಸಮಸ್ಯೆ ಉಂಟಾಗುವುದು ಸಹಜ. ಕಾರಣ ಅಲ್ಲಿ ಕೇಬಲ್ ಹಾದು ಹೋಗಿರುವ ಬಗ್ಗೆ ಹಳೆಯ ನೀರಿನ ಪೈಪ್ಗಳು ಹಾದು ಹೋಗಿರುವ ಬಗ್ಗೆ ಅವರಿಗೆ ಮಾಹಿತಿ ಇರುತ್ತದೆ.
ನಗರ ಪಂಚಾಯಿತಿಗೆ ಅನುದಾನ ತುಂಬಾ ಕಡಿಮೆ ಇದ್ದು ಇರುವ ಅನುದಾನದಲ್ಲಿ ಮಾಡಿರುವ ಕಾಂಕ್ರೀಟ್ ರಸ್ತೆಗಳನ್ನು ಇದೀಗ ಕೆಡವಿ ಹಾಳು ಮಾಡಿ ಹಾಕಲಾಗಿದೆ. ಮೇ ತಿಂಗಳಿನಲ್ಲಿ ಕೆಲಸ ಕಾರ್ಯವನ್ನು ಮುಗಿಸಿಕೊಡುತ್ತೀರಿ ಎಂದು ಹೇಳಿದ್ದೀರಿ. ಆದರೆ ಈ ವರೇಗೆ ಯಾವುದೇ ಕೆಲಸಗಳು ಆಗಲಿಲ್ಲ. ಇದನ್ನು ಸದಸ್ಯರು ನಮ್ಮಲ್ಲಿ ಕೇಳುವಾಗ ನಾವು ಏನೆಂದು ಉತ್ತರ ಕೊಡಬೇಕು. ಅಭಿವೃದ್ಧಿ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಇದ್ದೇವೆ ಆದ್ದರಿಂದ ಈ ರೀತಿಯ ಸಮಸ್ಯೆಗಳು ಬಾರದಂತೆ ನೀವು ನೋಡಿಕೊಳ್ಳಬೇಕೆಂದು ಹೇಳಿದರು.
ಸದಸ್ಯರುಗಳು ಹೇಳಿದ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಇಂಜಿನಿಯರ್ ಶೋಭಾ ಲಕ್ಷ್ಮಿ ರವರು ‘ತಾವುಗಳು ಹೇಳುವ ಎಲ್ಲಾ ವಿಷಯಗಳು ಸತ್ಯವೇ ಆಗಿದೆ. ಆದರೆ ಮಳೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಕೆಲಸ ವಿಳಂಬವಾಗಿದೆ. ಇನ್ನು ಮುಂದೆ ಆ ರೀತಿ ಸಮಸ್ಯೆ ಉಂಟಾಗದಂತೆ ನಾವು ನೋಡಿಕೊಳ್ಳುತ್ತೇವೆ. ಆದಷ್ಟು ಶೀಘ್ರದಲ್ಲಿ ರಸ್ತೆಗಳನ್ನು ಸರಿಪಡಿಸಿ ಕೊಡುವ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿ ಸ್ಪಂದಿಸುತ್ತೇವೆ ಎಂದು ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಭೆಗೆ ಬಹುಗ್ರಾಮ ಕುಡಿ ನೀರು ಯೋಜನೆಯ ಇಂಜಿನಿಯರ್ಗಳಾದ ಮಣಿಕಂಠ, ಅಸಿಸ್ಟೆಂಟ್ ಇಂಜಿನಿಯರ್ ಶ್ರೀಮತಿ ಚೈತ್ರ, ಅಡ್ಮಿನ್ ಅಶ್ವಿನ್, ಸೈಟ್ ಇಂಜಿನಿಯರ್ ವೀರೇಶ್ ಮೊದಲಾದವರ ಆಗಮಿಸಿದರು. ಬಳಿಕ ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆಗೆ ಸುಳ್ಯ ಹೆದ್ದಾರಿಯಲ್ಲಿ ಪೈಪ್ ಅಳವಡಿಸುವ ಕುರಿತು ಪರಸ್ಪರ ಚರ್ಚೆಗಳನ್ನು ನಡೆಸಿದರು.
ಸಭೆಯಲ್ಲಿ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಂಕೇರಿ, ನಾರಾಯಣ ಶಾಂತಿನಗರ, ಶ್ರೀಮತಿ ಸುಶೀಲಾ ಜಿನ್ನಪ್ಪ, ಶ್ರೀಮತಿ ಪ್ರವೀಣ ಪ್ರಶಾಂತ್, ಶ್ರೀಮತಿ ಶೀಲಾ ಅರುಣ್ ಕುರುಂಜಿ, ಬಾಲಕೃಷ್ಣ ನಾಯಕ್ ನಾಮನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೋ ಉಪಸ್ಥಿತರಿದ್ದರು.
ಕುರುಂಜಿಭಾಗ್ ನೀರಿನ ಟ್ಯಾಂಕ್ ಹಾಗೂ ರಸ್ತೆ ಸಮಸ್ಯೆ ಉಂಟಾದ ಕಡೆ ಇಂಜಿನಿಯರ್ ಹಾಗೂ ಸ್ಥಳೀಯ ಸದಸ್ಯರು ಭೇಟಿ
ಸಭೆಯ ಬಳಿಕ ಇಂಜಿನಿಯರ್ ಶೋಭಾ ಲಕ್ಷ್ಮಿ ಹಾಗೂ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯರಾದ ವಿನಯ್ ಕುಮಾರ್ ಕಂದಡ್ಕ, ನಗರ ಪಂಚಾಯತಿ ಮುಖ್ಯ ಅಧಿಕಾರಿ ಬಸವರಾಜ್, ಶರೀಫ್ ಕಂಠಿ,ಧೀರಾ ಕ್ರಾಸ್ತ,ಇಂಜಿನಿಯರ್ ಶಿವಕುಮಾರ್ ಸೇರಿದ ತಂಡವು ಕುರುಂಜಿಭಾಗ್ ನೀರಿನ ಟ್ಯಾಂಕ್ ಬಳಿ ಭೇಟಿ ನೀಡಿ ಕಾಮಗಾರಿ ಮತ್ತು ಅಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಆಲಿಸಿದರು.
ಬಳಿಕ ಇಂಜಿನಿಯರಿಗಳಿಗೆ ಸೂಚನೆ ನೀಡಿದ ಶೋಭಾ ಲಕ್ಷ್ಮೀ ರವರು ಟ್ಯಾಂಕ್ ಶುಚಿಗೊಳಿಸಿದ ನೀರನ್ನು ಹೊರಬಿಡುವ ಸಂದರ್ಭದಲ್ಲಿ ಅದರ ವೇಗ ಮತ್ತು ಮಿತಿಯನ್ನು ನೋಡಿಕೊಂಡು ಸಮಸ್ಯೆ ಉಂಟಾಗದ ರೀತಿಯಲ್ಲಿ ಕೆಲಸ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಬ್ಯಾಂಕ್ ಸೋರಿಕೆ ಆಗುತ್ತಿರುವ ಬಗ್ಗೆ ವೀಕ್ಷಣೆ ಮಾಡಿದ ಇಂಜಿನಿಯರ್ ರವರು ಇದು ಸೋರಿಕೆಯಾಗುತ್ತಿಲ್ಲ ಆದರೆ ನೂತನ ಟ್ಯಾಂಕಿ ಯಾದ ಹಿನ್ನೆಲೆಯಲ್ಲಿ ಸಾಮಾನ್ಯ ರೀತಿಯಲ್ಲಿ ನೀರಿನ ಕಲೆಗಳು ಭಾಗದಲ್ಲಿ ಕಾಣುತ್ತಿದೆ. ಅದನ್ನು ತಮ್ಮ ಅಧೀನಕ್ಕೆ ನೀಡುವ ಮೊದಲು ಸರಿಪಡಿಸಿ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಈ ಯೋಜನೆಯ ಕೇವಲ ಒಂದು ಎರಡು ದಿನಗಳ ಯೋಜನೆ ಮಾತ್ರವಲ್ಲ 30 ವರ್ಷಗಳ ಸುದೀರ್ಘ ವ್ಯವಸ್ಥಿತವಾದ ಯೋಜನೆಯಾಗಿದ್ದು ಇದರ ಸಂಪೂರ್ಣ ಜವಾಬ್ದಾರಿ ಇಲಾಖೆಯ ಮೇಲೆ ಇದ್ದು ಪರಿಪೂರ್ಣವಾದ ಉತ್ತಮ ಕಾಮಗಾರಿ ನಡೆಯಲಿದೆ ಎಂಬ ಭರವಸೆಯನ್ನು ನೀಡಿದರು.
ವಿವೇಕಾನಂದ ಸರ್ಕಲ್, ಸುಳ್ಯ ಪೊಲೀಸ್ ಠಾಣೆ ಮುಂಭಾಗ ಆಲಟ್ಟಿ ಕ್ರಾಸ್ ರೋಡ್ ಮುಂತಾದ ಕಡೆಗಳಿಗೆ ತೆರಳಿ ರಸ್ತೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಆದಷ್ಟು ಶೀಘ್ರದಲ್ಲಿ ದುರಸ್ಥಿ ಕಾರ್ಯ ನಡೆಸಿಕೊಡುವ ಭರವಸೆಯನ್ನು ನೀಡಿದರು.
ಆಲಟ್ಟಿ ಕ್ರಾಸ್ ಬಳಿ ಸ್ಥಳೀಯ ಅನೇಕ ಮಂದಿ ಸಾರ್ವಜನಿಕರು ಸೇರಿ ರಸ್ತೆಯ ಬಗ್ಗೆ ಇಂಜಿನಿಯರ್ ಅವರ ಬಳಿ ಸಮಸ್ಯೆಗಳನ್ನು ಹೇಳಿಕೊಂಡರು.
ಬಳಿಕ ಜಯನಗರ ರಸ್ತೆ ಪರಿಶೀಲನೆಗೆ ಅಧಿಕಾರಿಗಳ ತಂಡ ತೆರಳಿದರು.
ಪಂಚಾಯತ್ ಸಭೆಯಲ್ಲಿ ನಗರ ವ್ಯಾಪ್ತಿಯ ಕುಡಿಯುವ ನೀರಿನ ಗುತ್ತಿಗೆದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










