ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆದು ಇಡೀ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತಂದು ಆಗೌರವ ತೋರಿದ ಒಬ್ಬ ಅಪ್ರಬುದ್ಧ ಹಾಗೂ ಅನಾಗರಿಕ ವಕೀಲನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಲೀಗಲ್ ಸೆಲ್ ಪ್ರಧಾನ ಕಾರ್ಯದರ್ಶಿ ಮೂಸಕುಂಞ ಪೈಂಬೆಚ್ಚಾಲ್ ಆಗ್ರಹಿಸಿದ್ದಾರೆ.















ಇಂತಹ ಹೀನಾಯ ಘಟನೆಯಿಂದ ಇಡೀ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಗಳು ಮುಂದೆಂದೂ ಸಂಭವಿಸದಂತೆ ಅಂತಹ ಪಟ್ಟ ಬದ್ಧ ಹಿತಾಸಕ್ತಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜಾರಿಯಾಗಬೇಕಾಗಿದೆ. ಮೃಗೀಯ ರೀತಿಯ ವರ್ತನೆ ತೋರುವವರು ಯಾವುದೇ ಸಂಘಟನೆಗೆ ಸೇರಿದವರಾದರೂ ಯಾವುದೇ ಸಂಘಟನೆಗಳು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಗಿಂತ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಇಂತಹ ಘಟನೆಗಳಿಂದ ನ್ಯಾಯಾಧೀಶರುಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ನೈತಿಕ ಸ್ಥೆರ್ಯ ಕುಗ್ಗುವ ಸಾಧ್ಯತೆಗಳಿವೆ. ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಇಷ್ಟೊಂದು ಕೀಳಾಗಿ ಕಾಣುವ ಒಬ್ಬ ವಕೀಲ ವೃತ್ತಿ ನಡೆಸುತ್ತಿರುವವರು ಮುಂದೆಂದೂ ವಾದ ಮಂಡಿಸಲು ಕೋರ್ಟ್ ಮೆಟ್ಟಿಲು ಏರದಂತೆ ತಕ್ಕ ಶಿಕ್ಷೆ ಕೊಡಬೇಕಾಗಿದೆ. ಭಾರತದ ಸಂವಿಧಾನದಲ್ಲಿರುವ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಇದರ ಬಗ್ಗೆ ಗೌರವ ಇರುವ ಪ್ರತಿಯೊಬ್ಬ ನ್ಯಾಯವಾದಿಗಳು, ಎಲ್ಲಾ ಪ್ರಜೆಗಳು ಈ ಘಟನೆಯ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾನು ಕೆಪಿಸಿಸಿ ಲೀಗಲ್ ಸೆಲ್ ಇದರ ಪ್ರಧಾನ ಕಾರ್ಯದರ್ಶಿ ಎಂಬ ನೆಲೆಯಲ್ಲಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮೂಸಕುಂಞಿ ಪೈಂಬೆಚ್ಚಾಲುರವರು ಹೇಳಿದರು.










