ಸುಳ್ಯದಲ್ಲಿ ಅರ್ಥಪೂರ್ಣ “ತಮಿಳು ಬಾಂಧವರ ವಿದ್ಯಾರ್ಥಿ ಸಮಾವೇಶ 2025”
ತಾಯ್ನಾಡಿಗೆ ಮರಳಿದ ತಮಿಳು ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದರೆ ಮಾತ್ರ ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಟ್ಟು, ಸಮುದಾಯವನ್ನು ಮುನ್ನೆಲೆಗೆ ತರಲು ಪಣತೊಟ್ಟು ಸೇವೆ ನೀಡುವ ಭರವಸೆ ನಮ್ಮದು. ಯಾವ ವಿದ್ಯಾರ್ಥಿಯೂ ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗಬಾರದು. ನಿಮ್ಮ ಶಿಕ್ಷಣದ ಕನಸಿಗೆ ನಾವು ಸದಾ ಜತೆಗಿದ್ದೇವೆ. ನಮ್ಮ ಸಮುದಾಯದ ಅಭಿವೃದ್ಧಿಗೆ ಯಾವ ಸಹಾಯ ಬೇಕಾದರೂ ಒದಗಿಸಿಕೊಡಲು ಸದಾ ಬದ್ಧ ಎಂದು ರೆಪ್ಕೋ ಬ್ಯಾಂಕ್ ಚೆನ್ನೈ ಅಧ್ಯಕ್ಷ ಸಂದಾನಂ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.















ಸುಳ್ಯದಲ್ಲಿ ಅಕ್ಟೋಬರ್ 12, 2025 ರಂದು ರೆಪ್ಕೋ ಬ್ಯಾಂಕ್ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಹಾಗೂ ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ (ರಿ). ಇವರು ಜಂಟಿಯಾಗಿ ಆಯೋಜಿಸಿದ ‘ತಮಿಳು ಭಾಂಧವರ ವಿದ್ಯಾರ್ಥಿ ಸಮಾವೇಶ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ರೆಪ್ಕೋ ಹೋಂ ಫೈನಾನ್ಸ್ ಲಿಮಿಟೆಡ್‌ನ ಅಧ್ಯಕ್ಷ ಸಿ. ತಂಗರಾಜು ಅವರು ಮಾತನಾಡಿ, “ಶಿಕ್ಷಣದಿಂದ ಮಾತ್ರ ನಮ್ಮ ಜೀವನ ಅಭಿವೃದ್ದಿಯಾಗಲು ಸಾಧ್ಯ. ಉನ್ನತ ಶಿಕ್ಷಣ ಪಡೆದು ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಸೇವೆ ಸಲ್ಲಿಸಬೇಕು. ಉನ್ನತ ಶಿಕ್ಷಣದ ಕನಸು ಕಾಣಿರಿ, ಕನಸನ್ನು ನನಸು ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ” ಎಂದು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದರು.

ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕಾಸರಗೋಡು ಜಿಲ್ಲಾಧಿಕಾರಿ ಇನ್ಬಶೇಖರ್, ಐಎಎಸ್ ಅವರು ಮಾತನಾಡಿ, ನಮ್ಮ ಸಮುದಾಯದ ಹಿನ್ನೆಲೆಯ ನಾನು ಚಿಕ್ಕಂದಿನಿAದಲೇ ಐಎಎಸ್ ಆಗಬೇಕೆಂಬ ಕನಸು ಕಂಡು, ಅದಕ್ಕಾಗಿ ಅವಿರತ ಶ್ರಮಪಟ್ಟು ಇಂದು ಆ ಗುರಿಯನ್ನು ತಲುಪಿದ್ದೇನೆ. ನೀವು ಕೂಡಾ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು, ನಿಮ್ಮ ಗುರಿಯನ್ನು ಆಕಾಶದ ತಾರೆಗಳ ಕಡೆಗೆ ಇಡಬೇಕು. ಗುರಿ ಮಾತ್ರವಲ್ಲ ಅದಕ್ಕಾಗಿ ಶ್ರಮಪಡಬೇಕು, ಹಗಲಿರುಳು ಪ್ರಯತ್ನಪಡಬೇಕು ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ರೆಪ್ಕೋ ಬ್ಯಾಂಕ್ – ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ನಿಮ್ಮ ಜತೆಗಿದೆ. ಈ ಅವಕಾಶವನ್ನು ಉಪಯೋಗಿಸಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬನ್ನಿ – ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸುಳ್ಯದ ಜಾನಕಿ ವೆಂಕಟ್ರಮಣ ಸಭಾಭವನ, ಸುಳ್ಯ ಇಲ್ಲಿ ನಡೆದ ಬೃಹತ್ ಸಮಾವೇಶವನ್ನು ಸುಳ್ಯದ ಶಾಸಕಿ ಕು.ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ, ಸಮುದಾಯದ ಏಳಿಗೆಗೆ ಸದಾ ತಮ್ಮ ಸಹಕಾರವಿದೆ ಎಂಬ ಭರವಸೆ ನೀಡಿ, ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.
ಸುಳ್ಯ ಸರಕಾರಿ ಆಸ್ಪತ್ರೆಗೆ ಸುಮಾರು ಏಳು ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆ ನೀಡಲಾಯಿತು. ಈ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯ ಡಾ. ಕರುಣಾಕರ್ ಮತ್ತು ತಂಡ ವೇದಿಕೆಯಲ್ಲಿ ರೆಪ್ಕೋ ಬ್ಯಾಂಕ್ ಚೆನ್ನೈ ಅಧ್ಯಕ್ಷ ಇ.ಸಂದಾನಂ ಹಾಗೂ ರೆಪ್ಕೋ ಹೋಂ ಫೈನಾನ್ಸ್ ಅಧ್ಯಕ್ಷ ಸಿ. ತಂಗರಾಜು ಅವರನ್ನು ಸನ್ಮಾನಿಸಿ ಕೃತಜ್ಞತೆಯ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಹಿರಿಯ ಕಾರ್ಮಿಕ ಮುಖಂಡ ಸುಬ್ಬಯ್ಯ ಬೇಂಗಮಲೆ, ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸಂಧ್ಯಾಗು ಕೌಡಿಚ್ಚಾರ್, ಕಾರ್ಯದರ್ಶಿ ಥಾಮಸ್, ರೆಪ್ಕೋ ಬ್ಯಾಂಕ್‌ನ ಸುಳ್ಯ ಶಾಖೆಯ ಮೇನೇಜರ್ ಶ್ರೀ ಕಲೈಯರಸನ್, ಮಂಗಳೂರು ಶಾಖೆಯ ಮೇನೇಜರ್ ನರಸಿಂಹ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರೆಪ್ಕೋ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಮೂಲಕ ವಿದ್ಯಾರ್ಥಿವೇತನ, ಆಯ್ದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಂಪೂರ್ಣ ಜವಾಬ್ದಾರಿ, ಸಮುದಾಯದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ಕೊಡುಗೆ ಹೀಗೆ ಹಲವಾರು ಸವಲತ್ತುಗಳನ್ನು ವಿತರಿಸಲಾಯಿತು. ಸಮಾಜ ಎಲ್ಲ ಸಂಘಟನೆಗಳು ಹಾಗೂ ಯೂನಿಯನ್‌ಗಳ ಅಧ್ಯಕ್ಷರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ವಿಶೇಷವಾಗಿ ಈ ಬೃಹತ್ ಸಮಾವೇಶದಲ್ಲಿ ಹಾಜರಿದ್ದ ಸಮಾಜದ ಸುಮಾರು 1000 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಪದವಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.
ಸಮುದಾಯ ನಾಯಕರ ಕೋರಿಕೆ ಮೇರೆಗೆ ಕೆಎಫ್‌ಡಿಸಿ ಕಾರ್ಮಿಕರಿಗೆ ಎಲ್‌ಇಡಿ ಹೆಡ್‌ಲ್ಯಾಂಪ್ ವಿತರಣೆಗೆ ಚಾಲನೆ ನೀಡಲಾಯಿತು.
ಬಹಳ ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರದಲ್ಲಿ ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ನ ಟ್ರಸ್ಟಿ ತಂಗವೇಲು ಸ್ವಾಗತಿಸಿದರು, ಹಾಸನ ಸರಕಾರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಗಣಪತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಳ್ಯ ರೀಕೋ ಸೊಸೈಟಿ ಅಧ್ಯಕ್ಷ ಹಾಗೂ ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ನ ಟ್ರಸ್ಟಿ ಶಿವಕುಮಾರ್ ವಂದಿಸಿದರು. ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ನ ಆಂಟನಿರಾಜ್ ಜತೆಗೆ ರಮೇಶ್ ಬಾರ್ಪಣೆ, ಜ್ಯೋತಿಲಕ್ಷ್ಮಿ ಕೂಟೇಲು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ರೆಪ್ಕೋ – ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ನ ನೇತೃತ್ವದಲ್ಲಿ – ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ನಡೆಸಿದ ಸಮುದಾಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಡಾಕ್ಯುಮೆಂಟರಿ ಪ್ರದರ್ಶನ ಮಾಡಲಾಯಿತು. ಸುಜಿ ನಾಗಪಟ್ಟಣ ನಿರ್ದೇಶನದಲ್ಲಿ ಹಾಗೂ ದೇವದಾಸ್ ಪೊನ್ವೆಲಿ ಅವರ ಸಹಕಾರದಲ್ಲಿ ಡಾಕ್ಯುಮೆಂಟರಿ ಮೂಡಿಬಂತು.
ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ಮನರಂಜಿಸಿತು.
ಸಮುದಾಯದ ಎಲ್ಲ ವಿದ್ಯಾರ್ಥಿಗಳ ಡಾಟಾ ಸಂಗ್ರಹಣೆ ಮಾಡುವಲ್ಲಿ ಸುಳ್ಯ ರಿಪಾಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಖಜಾಂಚಿ ಶ್ರೀಮತಿ ಶಕುಂತಳಾ ಮತ್ತು ತಂಡ ಸಹಕರಿಸಿದರು. ಎಲ್ಲ ಟ್ರಸ್ಟಿಗಳು ಸಮುದಾಯದ ಅಭಿವೃದ್ಧಿಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.










