ಫೋನ್ ಹ್ಯಾಕ್ ಆದ ‘ಆ ಒಂದು ಗಂಟೆ 15 ನಿಮಿಷ’…!
ರಾತ್ರಿ ಬೆಳಗಾಗುವುದರೊಳಗೆ ಏನಾಯಿತು?
ಹ್ಯಾಕರ್ ನಿಂದ ಪಿ ಡಿ ಒ ಹೇಗೆ ಬಚಾವಾದರು?
ಅವರೇ ಬರೆದಿದ್ದಾರೆ… ಓದಿ..
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗುಂಡಿ ಯವರ ಮೊಬೈಲ್ ಫೋನ್ ಹ್ಯಾಕ್ ಆಗಿ ಅವರ ಫೋನ್ ನಂಬರ್ ಇರುವ ಗ್ರೂಪ್ ಗಳಿಗೆಲ್ಲಾ ಅವರ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೆಸೇಜ್ ಹರಿದಾಡಿದ ಮತ್ತು ಫೋನ್ ಹ್ಯಾಕ್ ಆಗಿದೆ ಎಂದು ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ನಡೆಡಿದೆ.















ಈ ಬಗ್ಗೆ ಪಿ ಡಿ ಒ ಜಯಪ್ರಕಾಶ್ ಗುಂಡಿ ಯವರ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೆಸರಿನಲ್ಲಿ ಎಪಿಕೆ ಫೈಲ್ ಹರಿದಾಡತೊಡಗಿತು. ಅಲ್ಲದೇ ಗ್ರೂಪ್ ನ ಪ್ರೊಫೈಲ್ ಪಿಕ್ಚರ್ ಕೂಡ ಎಸ್ ಬಿ ಐ ಲೋಗೋ ಆಗಿತ್ತು. ಇದರಿಂದ ಗ್ರೂಪ್ ಹ್ಯಾಕ್ ಆಗಿದೆ ಎಂದು ಅರಿತ ಕೆಲವರು ಎಪಿಕೆ ಫೈಲ್ ತೆರೆಯದಂತೆ ಗ್ರೂಪಲ್ಲಿ ಸಂದೇಶ ರವಣಿಸಿದರು. ಅದರೊಂದಿಗೆ ಕೆಲವರ ಹಣ ಹೋಗಿದೆ ಎಂಬೆಲ್ಲ ಸಂದೇಶ ಹರಿದಾಡತೊಡಗಿತು.
ಆರಂಭದಲ್ಲಿ ಫೋನ್ ಹ್ಯಾಕ್ ಆದ ಬಗ್ಗೆ ಪಿಡಿಒ ಜಯಪ್ರಕಾಶ್ ಗುಂಡಿಯವರು ವಾಟ್ಸಾಪ್ ನಲ್ಲಿ ಹೀಗೆ ಬರೆದಿದ್ದಾರೆ… ಓದಿ…
ಹಿಂದಿನ ದಿನ ರಾತ್ರಿ 10.30. ಮೇಜಿನ ಮೇಲೆ ಇದ್ದ ಒಂದು ಪತ್ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನನ್ನ ಖಾತೆಯ E KYC ಮಾಡುವಂತೆ ಸೂಚಿಸುತ್ತಿತ್ತು. ಪತ್ರವನ್ನು ನೋಡಿ ಯಾಕೋ ಮೊಬೈಲ್ ನೋಡಿದೆ. ವ್ಯಾಟ್ಸಾಪ್ ತೆಗೆದಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಂದು ಮೆಸೇಜು ಈ ಕೆವೈಸಿ ಮಾಡುವಂತೆ ಸೂಚಿಸುತ್ತಿತ್ತು. ಪತ್ರ ಮತ್ತು ಮೊಬೈಲ್ ಮೆಸೇಜ್ ಒಂದೇ ಸಲ ಕಂಡ ಕಾರಣ ಏನೋ ಹುಡುಕಾಡಿದೆ. ಕೂಡಲೇ ಅದರ ಬಳಿ ಇದ್ದ ಎಪಿಕೆ ಫೈಲ್ ತೆರೆದುಕೊಂಡಿತು. ಆಧಾರ್ ಕಾರ್ಡ್ ಹಾಕುವಂತೆ ಸೂಚಿಸಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ವಾಟ್ಸಾಪ್ನಲ್ಲಿ ಆಧಾರ್ ಕೇಳುವ ಸಾಧ್ಯತೆ ಇಲ್ಲ ಎಂದು ಮೊಬೈಲ್ ಕ್ಲೋಸ್ ಮಾಡಿದೆ. ನಿದ್ರೆಗೆ ಜಾರಿದೆ.ಮರುದಿನ ಬೆಳಿಗ್ಗೆ 8:00 ಗಂಟೆ. ಮೊಬೈಲಿಗೆ ವಿಯೆನ್ನಾ ದೇಶದಿಂದ ಒಂದು ಕರೆ ಬಂದಿತು (+43142406591647). ಎಲ್ಲಾ ಕರೆಗಳನ್ನು ಸ್ವೀಕರಿಸುವಂತೆ ಅದನ್ನು ಸ್ವೀಕರಿಸಿದೆ. ಕರೆ ಕಟ್ ಆಯ್ತು. ಅಲ್ಲಿಂದ ನನ್ನ ಮೊಬೈಲ್ ಹ್ಯಾಕ್ ಆಗಿರುವುದು ತಿಳಿದು ಬಂತು. ಕ್ಷಣ ಮಾತ್ರದಲ್ಲಿ ನನ್ನ ಸನ್ಮಿತ್ರರ ಹತ್ತಾರು ಕರೆಗಳು ಬರಲು ಪ್ರಾರಂಭ. ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಲ್ಲಾ ಗ್ರೂಪ್ಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೆಸೇಜನ್ನು ನೀವು ಕಳುಹಿಸುತ್ತಿರುವ ಹಾಗೆ ಬರುತ್ತಿದೆ ಎಂಬ ಮಾಹಿತಿ. ಏನು ಮಾಡಬೇಕೆಂದು ದಿಕ್ಕು ತೋಚದಾಯಿತು. ನಾನು ಇದ್ದಂತಹ ಎಲ್ಲಾ ಗ್ರೂಪುಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆ ಮೆಸೇಜ್ ಮತ್ತು ಎಪಿಕೆ ಫೈಲ್ ತಾನಾಗಿ ಹತ್ತಾರು ಬಾರಿ ಸಂಚರಿಸಲು ಪ್ರಾರಂಭ. ನನ್ನ ವ್ಯಾಟ್ಸಪ್ ತೆರೆಯದೆ ಕಣ್ಣು ಮುಚ್ಚಿ ಕುಳಿತಿತ್ತು. ಎಲ್ಲೋ ಕುಳಿತ ಹ್ಯಾಕರ್ ತನ್ನ ಚಾಲಾಕಿತನ ತೋರಿಸುತ್ತಿದ್ದ. ಎಲ್ಲರಿಗೂ ಉತ್ತರ ಕೊಡುವುದಕ್ಕಾಗಿ ಹೆಣಗಾಟ. ಅಷ್ಟರಲ್ಲಿ ಅಲ್ಲೇ ಇದ್ದ ಮಗ ಬಂದು ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಸೈಬರ್ ಕ್ರೈಂ ಗೆ ಕರೆ ಮಾಡಿ ಏನೇನೋ ಪ್ರಯತ್ನಿಸಿದ. ಜೊತೆಗೆ ಬೆಂಗಳೂರಿನಲ್ಲಿದ್ದ ತನ್ನ ಅಣ್ಣನ ಸಹಕಾರ. ಸೈಬರ್ ಕ್ರೈಂ ನವರು ಕೊಟ್ಟ ಸಲಹೆ ಪ್ರಕಾರ ವ್ಯಾಟ್ಸಪ್ ಕಂಪನಿಯೊಂದಿಗೆ ಈ ಮೇಲ್ ಪ್ರಾರಂಭ. ಬಹಳಷ್ಟು ಹೊತ್ತು ಗೊಂದಲ ಮತ್ತು ಹೆಣಗಾಟದ ನಂತರ ವಾಟ್ಸಪ್ ಕಂಪನಿ ಯವರ ಪ್ರತಿಕ್ರಿಯೆ. ಅಂತೂ ಇಂತೂ 9:00 15 ನಿಮಿಷಕ್ಕೆ ವ್ಯಾಟ್ಸಪ್ ಕಂಪನಿಯವರು ವ್ಯಾಟ್ಸಪ್ ಅನ್ನು ಬ್ಲಾಕ್ ಮಾಡಿದರು. ಅಲ್ಲಿಗೆ ನನ್ನ ಮೊಬೈಲನ್ನು ಹ್ಯಾಕ್ ಮಾಡಿ ಎಲ್ಲೋ ಕುಳಿತು ಆಟ ಆಡುತ್ತಿದ್ದ ಹ್ಯಾಕರ್ ನ ಆಟ ನಿಂತಿತು. ಈ ಸಂದರ್ಭದಲ್ಲಿ ಎಲ್ಲಾ ಗುಂಪುಗಳಲ್ಲಿದ್ದಂತಹ ಮಾಹಿತಿ ತಿಳಿದಂತಹ ಸನ್ಮಿತ್ರರೆಲ್ಲರೂ ಸಮಯಕ್ಕೆ ಸರಿಯಾಗಿ ಗುಂಪಿನ ಸದಸ್ಯರಿಗೆ ಮಾಹಿತಿ ನೀಡಿ ಯಾರಿಗೂ ತೊಂದರೆಯಾಗದಂತೆ ಕ್ರಮವಹಿಸಿದ್ದಾರೆ. ಒಟ್ಟಿನಲ್ಲಿ ವ್ಯಾಟ್ಸಪ್ ಗ್ರೂಪಿನಲ್ಲಿ ಬರುವ ಯಾವುದೇ ಎಪಿಕೆ ಫೈಲ್ಗಳನ್ನು ತೆರೆಯುವುದು ಅಥವಾ ಯಾವುದೇ ಅನಗತ್ಯ ಚಟುವಟಿಕೆಗಳ ಬಗ್ಗೆ ತೀರ ತೀರ ಎಚ್ಚರ ಇರಬೇಕಾದದ್ದು ಇಂದಿನ ಅನಿವಾರ್ಯತೆ. ಸುಳ್ಯಕ್ಕೆ ಹೋಗಿ ಬ್ಯಾಂಕುಗಳಲ್ಲಿ ವಿಚಾರಿಸಿದೆ. ಇದ್ದಂತಹ ಅಲ್ಪ ಹಣ ಭದ್ರವಾಗಿತ್ತು. ಕೆಲವು ದಿನಗಳಿಗಾಗಿ ಖಾತೆಯನ್ನು ಬ್ಲಾಕ್ ಮಾಡಿದ್ದೇನೆ. ಒಟ್ಟಿನಲ್ಲಿ ಪ್ರತಿಯೊಬ್ಬರು ಸಾಮಾಜಿಕ ಮಾಧ್ಯಮದ ವ್ಯವಹಾರದಲ್ಲಿ ಬಹಳ ಬಹಳ ಜಾಣ್ಮೆಯಿಂದ ಎಚ್ಚರದಲ್ಲಿರುವಂತೆ ನನ್ನ ಕೋರಿಕೆ.










