ನನ್ನ ಮಗನನ್ನು ಹೊಡೆದು ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿ ನಮಗೆ ನ್ಯಾಯ ಒದಗಿಸಿ :ಮೃತ ಜಬ್ಬಾರ್ ತಾಯಿಯಿಂದ ಎಸ್‌ಪಿ ಯವರಿಗೆ ದೂರು

0

ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ

ಘಟನೆಯ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿದ ಮೃತರ ಕುಟುಂಬ ಸದಸ್ಯರು

ಅ 17 ರಂದು ಸುಳ್ಯದ ಬೆಟ್ಟಂಪಾಡಿಯಲ್ಲಿ ಮೃತಪಟ್ಟ ಆಟೋ ಚಾಲಕ ಜಬ್ಬಾರ್ ರನ್ನು ಯುವಕರ ತಂಡ ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ನನ್ನ ಮಗ ಜಬ್ಬಾರ್ ನ ಮೂವರು ಪುಟ್ಟ ಮಕ್ಕಳಿಗೆ ಮತ್ತು ಆತನ ಪತ್ನಿ ಮತ್ತು ನನಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮೃತ ಜಬ್ಬಾರ್ ರವರ ತಾಯಿ ಮತ್ತು ಸಹೋದರಿ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅ. 21 ರಂದು ದೂರನ್ನು ನೀಡಿದ್ದಾರೆ.

ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಮೃತ ಜಬ್ಬಾರ್ ರವರ ತಾಯಿ ಖೈರುನ್ನೀಸಾರವರು ” ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆಟೋ ಚಲಾಯಿಸಿ ಆತನ ಪತ್ನಿ ಹಾಗೂ ಮೂವರು ಪುಟ್ಟ ಮಕ್ಕಳನ್ನು ಮತ್ತು ನನ್ನನ್ನು ಸಾಕುತ್ತಿದ್ದ. ನನಗೆ ಓರ್ವ ಹೆಣ್ಣು ಹಾಗೂ ಒಬ್ಬ ಗಂಡು ಮಗು ಇದ್ದು ಅವನು ನಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಅಂತಹ ಒಬ್ಬ ಮಗನನ್ನು ಇಂದು ನಾವು ಯಾರೋ ಮಾಡಿದ ಕೃತ್ಯದಿಂದಾಗಿ ಕಳೆದುಕೊಂಡಿದ್ದೇವೆ. ಅಲ್ಲದೆ ತಂದೆಯನ್ನು ಕಳೆದುಕೊಂಡು ಮೂವರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಶಿಕ್ಷೆ ನೀಡಲು ಕಾನೂನು ವ್ಯವಸ್ಥೆ ಇರುವಾಗ ಆತ ತಪ್ಪು ಮಾಡಿದ್ದಾನೆ ಎಂದು ಅವನಿಗೆ ಹೊಡೆದು, ಬಡಿದು ಸಾಯಿಸಲು ಇವರಿಗೆ ಯಾರು ಕಾನೂನನ್ನು ನೀಡಿದವರು?” ಎಂದು ಅವರು ಪ್ರಶ್ನಿಸಿದರು.

ಜಬ್ಬಾರ್ ಅವರ ಸಹೋದರಿ ಆಯಿಷರವರು ಮಾತನಾಡಿ ” ಬಾಡಿಗೆಯ ನೆಪದಲ್ಲಿ ನನ್ನ ಅಣ್ಣನನ್ನು ಕರೆಸಿ ಅಮಾನುಷವಾಗಿ ಹೊಡೆದು ಹಾಕಿದ್ದಾರೆ. ಮನೆಯಿಂದ ಹೋದ ಮಾರನೆಯ ದಿನ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಕನಕಮಜಲು ಸೇತುವೆಯ ಬಳಿ ಬಿದ್ದಿದ್ದಾಗ ಯಾರೋ ನೋಡಿ ನಮಗೆ ಮಾಹಿತಿ ನೀಡಿದ್ದು ನಾನು ಮತ್ತು ನನ್ನ ತಾಯಿಯವರು ಮಾವಂದಿರ ಜೊತೆ ಹೋಗಿ ಅವರನ್ನು ಕರೆದುಕೊಂಡು ಬಂದಿದ್ದೇವೆ.
ಈ ವೇಳೆ ಅವನಿಗೆ ಮದ್ಯಪಾನ ಕುಡಿಸಿ ಮತ್ತು ಗಾಂಜಾವನ್ನು ಮೂಗು ಮತ್ತು ಬಾಯಿಗೆ ತುರುಕಿ ಚಿತ್ರಹಿಂಸೆ ನೀಡಿದ್ದ ವಿಷಯವನ್ನು ಒಂದು ದಿನ ಮೊದಲು ಅಣ್ಣ ನಮ್ಮಲ್ಲಿ ಹೇಳಿಕೊಂಡ ಕಾರಣ ಇದರ ಅಮಲಿನಿಂದ ಬಿದ್ದಿರಬಹುದು ಎಂದು ನಾವು ಶಂಕಿಸಿ ಅವರನ್ನು ಮನೆಗೆ ಕರೆದುಕೊಂಡು ಹೋದೆವು.
ಆದರೆ ಸಂಜೆಯಾಗುತ್ತಾ ಬಂದಾಗ ಆತನ ಆರೋಗ್ಯದಲ್ಲಿ ಏರುಪೇರು ಕಂಡಾಗ ಅವನನ್ನು ನಾವು ಆಸ್ಪತ್ರೆಗೆ ಕೊಂಡುಹೋಗಿದ್ದೇವೆ.
ರಫೀಕ್ ಪಡು ಮತ್ತು ಆತನ ಸಹಚರರು ಅಣ್ಣನನ್ನು ಅಮಾನುಷವಾಗಿ ಹೊಡೆದಿದ್ದು ಅವನ ದೇಹದಲ್ಲಿ ಮತ್ತು ತಲೆಯ ಭಾಗದಲ್ಲಿ ತುಂಬಾ ನೋವು ಎಂದು ಒದ್ದಾಡುತ್ತಿದ್ದ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವನು ಮೃತಪಟ್ಟಿದ್ದಾನೆ. ಇದಕ್ಕೆಲ್ಲ ಕಾರಣ ಪಡು ರಫೀಕ್ ಎಂಬವನಾಗಿದ್ದು ಅವನು ನಮ್ಮ ಮನೆಗೂ ಕೂಡ ಬಂದು ನನಗೆ ನಿಮ್ಮ ಅಣ್ಣ ಈ ರೀತಿಯ ತಪ್ಪುಗಳನ್ನು ಮಾಡಿದ್ದಾನೆ. ಅದಕ್ಕಾಗಿ ನಾವು ಗದರಿಸಿದ್ದೇವೆ, ಬೆದರಿಸಿದ್ದೇವೆ ಎಂದು ವಿಡಿಯೋವನ್ನು ತೋರಿಸಿದ್ದಾರೆ. ಆದ್ದರಿಂದ ನನ್ನ ಅಣ್ಣನನ್ನು ಕೊಂದವರಿಗೆ ಮತ್ತು ನಮ್ಮ ಕುಟುಂಬದ ಆಧಾರ ಸ್ತಂಭವಾಗಿದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ನಮ್ಮ ತಾಯಿ ಮತ್ತು ಆತನ ಪತ್ನಿ ಮಕ್ಕಳಿಗೆ ಅಲ್ಲದೆ ಸಹೋದರನನ್ನು ಕಳೆದುಕೊಂಡ ನನಗೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯವರು ಎಲ್ಲರೂ ಸೇರಿ ನ್ಯಾಯ ಒದಗಿಸಿ ಕೊಡಬೇಕು” ಎಂದು ಕೇಳಿಕೊಂಡಿದ್ದಾರೆ.