“ಜಾನಪದ ಕಲೆ, ಕಲಾವಿದರ ಸಮಗ್ರ ವಿಷಯ ಎಲ್ಲರಿಗೂ ಸಿಗುವಂತಹ ‘ಕೇಂದ್ರೀಕೃತ ಆರ್ಕೈವ್’ ವ್ಯವಸ್ಥೆಯೊಂದು ರಚನೆಯಾಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.

ನಗರದ ಮಾನಸ ಗಂಗೋತ್ರಿಯ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ಜಾನಪದ ಸಂಶೋಧಕ, ಲೇಖಕ ಡಾ.ಸುಂದರ ಕೇನಾಜೆಯವರ ಸಹಯೋಗದಿಂದ ಪ್ರಕಟವಾದ ‘ನಾವು ಕೂಗುವಾ ಕೂಗು’ ಹಾಗೂ ಇತರ ಕೃತಿಗಳ ಲೋಕಾರ್ಪಣೆ ಮತ್ತು ಮೈಸೂರು ಗುರುರಾಜು ತಂಡದವರು 20 ಗಂಟೆಗಳ ಕಾಲ ಹಾಡಿರುವ ಮಂಟೇಸ್ವಾಮಿಯ ದೃಶ್ಯ-ಶ್ರವ್ಯ ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘‘ಇಂದು ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಮೊಬೈಲ್ ಇದೆ. ಹಾಗಾಗಿ ಜಾನಪದ ಕಲೆಗಳ ಸಮಗ್ರ ವಿವರ
ಆನ್ಲೈನ್ನಲ್ಲಿ ಸಿಗುವಂತಾಗಬೇಕು. ಇದಕ್ಕಾಗಿ ಆರ್ಕೈವ್ ರಚನೆಯಾಗಬೇಕು. ಯಾವುದೇ ಕಲಾವಿದನ ಹೆಸರು ಗೂಗಲ್ನಲ್ಲಿ ಸರ್ಚ್ ಮಾಡಿದರೆ ಆತನ ಬದುಕು, ಸಾಧನೆ, ಕಲೆ ಎಲ್ಲಾ ವಿವರಗಳು ಸಿಗಬೇಕು. ಜಾನಪದ ವಿಶ್ವವಿದ್ಯಾಲಯ, ಪ್ರಸಾರಾಂಗದಿಂದ ಈ ಕೆಲಸವಾಗಬೇಕು. ಈ ಸಂಬಂಧ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು,’’ ಎಂದು ತಿಳಿಸಿದರು.















‘‘ಮಂಟೇಸ್ವಾಮಿ ಕಾವ್ಯಕ್ಕೆ ಪುರಾತನ ಹಾಗೂ ಸಾಂಪ್ರದಾಯಿಕ ಪರಂಪರೆ ಇದೆ. ಇಂದು ಜಾಗತಿಕವಾಗಿ ಮಂಟೇಸ್ವಾಮಿ ಜಾಗತಿಕ ಮನ್ನಣೆ ಗಳಿಸುತ್ತಿದೆ. ಈ ನಿಟ್ಟಿನಲ್ಲಿ ಇವುಗಳ ಸಂರಕ್ಷಣೆಗೆ ಮಂಟೇಸ್ವಾಮಿ ಪ್ರಾಧಿಕಾರ ರಚನೆಯಾಗಬೇಕು. ಇದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಡಿಜಿಟಲೀಕರಣ ಕೂಡ ಮಾಡಬೇಕಿದೆ,’’ ಎಂದು ಅಭಿಪ್ರಾಯಪಟ್ಟರು.
ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ಮಾತನಾಡಿ, ‘‘ನಮ್ಮ ಪರಂಪರೆಯನ್ನು ನೀಲಗಾರರು ಉಳಿಸಿಕೊಂಡು ಬಂದಿದ್ದಾರೆ. ಐದು, ಆರು ಶತಮಾನದ ಪರಂಪರೆ ಬಗ್ಗೆ ಆಳವಾದ ಸಂಶೋಧನೆ ನಡೆಯಬೇಕು. ಸಂಶೋಧಕರು, ವಿದ್ವಾಂಸರಿಗೆ ವೇದಿಕೆ ಸಿಗಬೇಕು. ಪರಂಪರೆ ಸಾರ ಎಲ್ಲರಿಗೂ ತಲುಪಬೇಕು,’’ ಎಂದು ಹೇಳಿದರು.
ಮೈವಿವಿ ಕುಲಪತಿ ಪ್ರೊಘಿ.ಎನ್.ಕೆ.ಲೋಕನಾಥ್ ಮಾತನಾಡಿ, ‘‘ಮಂಟೇಸ್ವಾಮಿ ಕಾವ್ಯವನ್ನು ಮೊದಲ ಬಾರಿಗೆ ಮೈಸೂರು ವಿವಿ ಜಾನಪದ ಪ್ರಾಧ್ಯಾಪಕರಾಗಿದ್ದ ಪ್ರೊ.ಜೀ.ಶಂ.ಪರಮಶಿವಯ್ಯ ಅವರು ಸಂಗ್ರಹಿಸಿ ಪ್ರಕಟಿಸಿದ್ದರು,’’ ಎಂದರು.
ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಕೃತಿಗಳ ಸಂಪಾದಕ ಪ್ರೊ.ಕೃಷ್ಣಮೂರ್ತಿ ಹನೂರು, ಕೃತಿಗಳ ಲೇಖಕರು, ಅರಿವು ಟ್ರಸ್ಟ್ ನ ಮೇನೆಜಿಂಗ್ ಟ್ರಸ್ಟಿ ಡಾ.ಎಂ.ಸಿ ಮನೋಹರ, ಗಾಯಕ ಮೈಸೂರು ಗುರುರಾಜ್, ಕನ್ನಡಿ ಕ್ರಿಯೇಷನ್ ನ ರಂಜಿತ್ ಸೇತು ಉಪಸ್ಥಿತರಿದ್ದರು.










