ನಿಂತಿಕಲ್ಲಿನಲ್ಲಿರುವ ಕೆ.ಎಸ್ ಗೌಡ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ನ. 19ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಗೌರವ ವಂದನೆ ಸ್ವೀಕರಿಸಿದ ದ.ಕ. ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ ರೈ ಮಾತನಾಡಿ, ದೈಹಿಕ ಶಿಕ್ಷಣ ನಮ್ಮ ಶಾರೀರಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಪರಸ್ಪರ ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.















ಧ್ವಜಾರೋಹಣ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್. ಗೌಡ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಶೋಕ್ ಕುಮಾರ್ ಕೆ.ಎಸ್ ಮಾತನಾಡಿ, ಕ್ರೀಡೆಯನ್ನು ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ತೆಗೆದು ಕೊಂಡು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದ ಲಕ್ಷ್ಮೀಶ ರೈಯವರಿಗೆ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ನಡೆಯಿತು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳಾದ ಸುದರ್ಶನ ಪಟ್ಟಾಜೆ, ಜಯಪ್ರಕಾಶ್ ಕೆ, ಮುಖ್ಯ ಗುರುಗಳಾದ ಉಮೇಶ್ ಎಚ್ ಉಪಸ್ಥಿತರಿದ್ದರು. ಕ್ರೀಡಾ ಪಟುಗಳ ಆಕರ್ಷಕ ಪಥಸಂಚಲನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಮುಖ್ಯ ಗುರುಗಳಾದ ಉಮೇಶ್ ಎಚ್.ಎಂ ಸ್ವಾಗತಿಸಿ, ಶಿಕ್ಷಕರಾದ ಮೋಹನ್ ಕುಮಾರ್ ವಂದಿಸಿದರು. ಉಪನ್ಯಾಸಕ ಜೀವನ್ ಎಸ್.ಎಚ್ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ನಂತರ ನಡೆದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಬಾಲಕ — ಬಾಲಕಿಯರು, ಪ್ರೌಢ ಶಾಲಾ ಬಾಲಕ –ಬಾಲಕಿಯರು ಹಾಗೂ ಪದವಿ ಪೂರ್ವ ಕಾಲೇಜಿನ ಬಾಲಕ –ಬಾಲಕಿಯರು, ಹೀಗೆ ಆರು ವಿಭಾಗಗಳಲ್ಲಿ ಏಕಕಾಲದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.










