ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

“ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ” – ಡಾ. ಅನುರಾಧಾ ಕುರುಂಜಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನ. 24 ರಂದು ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಸ್.ಡಿಎಂ.ಸಿ. ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ವಹಿಸಿದ್ದರು. ಕಾರ್ಯಕ್ರಮವನ್ನು ಅಜ್ಜಾವರ ವಲಯದ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವ್ಯಕ್ತಿತ್ವ ವಿಕಸನ ಹಾಗೂ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಮಾತನಾಡಿ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ , ದುಶ್ಚಟದಿಂದ ಮುಕ್ತರಾಗಿ ನಿಮ್ಮ ಭವಿಷ್ಯವನ್ನು ನೀವು ನಿರ್ಮಾಣ ಮಾಡಿಕೊಳ್ಳುವುದರೊಂದಿಗೆ ಭವ್ಯ ಭಾರತವನ್ನು ಕಟ್ಟುವಲ್ಲಿ ಪಣತೊಡಿ. ಯುವಜನತೆ ಮನಸ್ಸು ಮತ್ತು ಬುದ್ಧಿಯನ್ನು ಹತೋಟಿಯಲ್ಲಿಟ್ಟುಕೊಂಡು ದುಶ್ಚಟ ಮುಕ್ತ ಸಮಾಜವನ್ನು ಕಟ್ಟಿದಾಗ ಮಾತ್ರ ಅದು ಸಾಧ್ಯ. ದುಶ್ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೆ, ಸಾಮಾಜಿಕ ಜಾಲತಾಣಕ್ಕೆ ಸಿಲುಕದೆ, ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯ. ವಿದ್ಯಾರ್ಥಿಗಳು ಹಿರಿಯರಿಗೆ,ತಂದೆ ತಾಯಿಗೆ, ಗುರುಗಳಿಗೆ,ಗೌರವ ನೀಡುವಂತೆ ತಿಳಿಸಿದರು. ದುಶ್ಚಟಕ್ಕೆ ಬಲಿಯಾಗದೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅನುದಾನಗಳನ್ನು ನೀಡುತ್ತಿದ್ದು,, ಮಾದರಿ ಸಂಸ್ಥೆಯಾಗಿದೆ. ಇದರಿಂದ ಸಮಾಜಕ್ಕೆ ತುಂಬಾ ಪ್ರಯೋಜನವಾಗಿದೆ ಎಂದು ಸಂಸ್ಥೆಯ ಬಗ್ಗೆ ಉತ್ತಮ ಪ್ರಸಂಶೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಅಜ್ಜಾವರ ಮಹಿಷಮರ್ದಿನಿ ದೇವಸ್ಥಾನದ ಟ್ರಸ್ಟಿ ಶಶ್ಮಿ ಭಟ್ ಉಪಸ್ಥಿತರಿದ್ದರು. ಶಿಕ್ಷಕ ಅಶೋಕ್ ಸ್ವಾಗತಿಸಿ, ಸೇವಾ ಪ್ರತಿನಿಧಿ ವೇದಾವತಿ ವಂದಿಸಿದರು. ವಲಯದ ಮೇಲ್ವಿಚಾರಕಿ ಅನಿತಾ ಕಾರ್ಯಕ್ರಮ.ನಿರೂಪಿಸಿದರು.