ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕದ ವತಿಯಿಂದ ಪತ್ರಿಕಾಗೋಷ್ಠಿ
ಗೌಡರ ಯುವ ಸೇವಾ ಸಂಘ ರಿ. ಸುಳ್ಯ ತಾಲೂಕು ಮಹಿಳಾ ಘಟಕ ಇದರ ಆಶ್ರಯದಲ್ಲಿ ಡಿ 21ರಂದು ಗೌಡ ಮಹಿಳಾ ಕಪ್ 2k 25 ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯ ಗೌಡ ಸಮುದಾಯದ ಮಹಿಳೆಯರ ಹಗ್ಗ ಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಮುಂಭಾಗದ ಮೈದಾನದಲ್ಲಿ ನಡೆಯಲಿದೆ ಎಂದು ತಾಲೂಕು ಮಹಿಳಾ ಘಟಕದ ಮುಖ್ಯಸ್ಥರು ನವಂಬರ್ 27ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನೂತ ಪಾತಿಕಲ್ಲು ರವರು ಮಾತನಾಡಿ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಮತ್ತು ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಮಹಿಳಾ ಘಟಕದ ವತಿಯಿಂದ ಪ್ರಥಮ ಬಾರಿಗೆ ಈ ರೀತಿಯ ಪಂದ್ಯಕೂಟವನ್ನು ಆಯೋಜಿಸಿಕೊಂಡಿದ್ದೇವೆ ಎಂದು ಹೇಳಿದರು.ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡ ಮಹಿಳೆಯರಿಗಾಗಿ ಪ್ರಥಮ ಭಾರಿಗೆ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಲಿದ್ದು ಈ ಕ್ರೀಡಾಕೂಟದಿಂದ ಕ್ರೀಡೆಗೆ ಪ್ರೋತ್ಸಾಹವು ನೀಡಿದಂತೆ ಆಗುತ್ತದೆ ಎಂದರು.
ಪಂದ್ಯಾಟದಲ್ಲಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು ತ್ರೋಬಾಲ್ ಪಂದ್ಯಾಟಕ್ಕೆ ಪ್ರಥಮ ಬಹುಮಾನ 7 ಸಾವಿರ ರೂ ಹಾಗೂ ದ್ವಿತೀಯ ಬಹುಮಾನ 5 ಸಾವಿರ ರೂ ಅದೇ ರೀತಿ ತ್ರಿತೀಯ ಬಹುಮಾನ ಮತ್ತು ಚತುರ್ಥ ಬಹುಮಾನವನ್ನು ಕೂಡ ನೀಡಲಾಗುತ್ತದೆ ಎಂದರು.















ಹಗ್ಗ ಜಗ್ಗಾಟದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ ದ್ವಿತೀಯ ಬಹುಮಾನ 3 ಸಾವಿರ ರೂ ನೀಡಲಿದ್ದು ಭಾಗವಹಿಸಿದ ಎಲ್ಲಾ ತಂಡಕ್ಕೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಲಿದ್ದೇವೆ ಎಂದು ಹೇಳಿದರು.
ತ್ರೋಬಾಲ್ ಪಂದ್ಯಾಟದಲ್ಲಿ ನಿಯಮದಂತೆ ಒಂದು ತಂಡದಲ್ಲಿ ಏಳು ಜನ ಆಟಗಾರರಿಗೆ ಮಾತ್ರ ಅವಕಾಶವಿದ್ದು ಹಗ್ಗ ಜಗ್ಗಾಟದಲ್ಲಿ ತೂಕದ ಮಿತಿ ಇರುವುದಿಲ್ಲ. ಒಂದು ತಂಡದಲ್ಲಿ ಏಳು ಜನ ಆಟಗಾರರು ಮಾತ್ರವೇ ಇರತಕ್ಕದ್ದು ಎಂದು ಆಟದ ನಿಯಮಗಳ ಬಗ್ಗೆ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಗೆ ಒಳಪಡುವ ಗೌಡ ಸಮುದಾಯದ ಮಹಿಳೆಯರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದರು. ಅಲ್ಲದೆ 16 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಕ್ರೀಡೆಯಲ್ಲಿ ಭಾಗವಹಿಸಬಹುದು. ವಯೋಮಿತಿ ಖಚಿತಪಡಿಸಲು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕಾಗಿದೆ ಎಂದು ಅವರು ಹೇಳಿದರು.
ನೊಂದಾವಣಿ ಶುಲ್ಕ ಪಾವತಿಸಲು ಹಾಗೂ ಹೆಸರು ನೋಂದಾಯಿಸಲು ಕೊನೆಯ ದಿನಾಂಕವನ್ನು ಡಿಸೆಂಬರ್ 14ನೇ ತಾರೀಕಿಗೆ ನಿಗದಿಪಡಿಸಲಾಗಿದ್ದು ಸ್ಪರ್ಧೆಯ ದಿನ ಪೂರ್ವಾಹನ 9 ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದ್ದು ಅರ್ಧ ಗಂಟೆ ಮೊದಲೇ ತಂಡಗಳು ಹಾಜರಿರತಕ್ಕದ್ದು ಎಂದು ಸ್ಪರ್ಧೆಯ ನಿಯಮಗಳ ಬಗ್ಗೆ ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಪ್ರಧಾನ ಕಾರ್ಯದರ್ಶಿ ಸವಿತಾ ಸಂದೇಶ್, ಮಹಿಳಾ ಕಪ್ ಸಂಚಾಲಕರಾದ ಬೀನಾ ಕರುಣಾಕರ ಅಡ್ಡಂಗಾಯ, ಜಯಲಕ್ಷ್ಮಿನಾರ್ಕೋಡು, ಸಹ ಸಂಚಾಲಕರಾದ ಮೀನಾಕ್ಷಿ ಸುಂದರ ರಾಮಕಜೆ, ಕುಸುಮಾ ಜನಾರ್ಧನ ಕೊಳಂಜಿರೋಡಿ ಉಪಸ್ಥಿತರಿದ್ದರು.










