ಡಿ.03 ರಿಂದ ಡಿ.05 : ಪಂಜ – ಗರಡಿಬೈಲು ಮೂಲಸ್ಥಾನದಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠಾ ಕಲಶ

0

ಕಾರ್ಣಿಕ ದೈವ ಕಾಚುಕುಜುಂಬ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಂಬೆತ್ತಾಡಿ ಗ್ರಾಮದ ಗರಡಿಬೈಲಿನಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠಾ ಕಲಶ ಡಿ. 03, 04 ಮತ್ತು 05 ರಂದು ನಡೆಯಲಿದೆ. ಡಿ.03 ರಂದು ಪೂರ್ವಾಹ್ನ ಗಂಟೆ 8 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ, ಮಧ್ಯಾಹ್ನ ಗಂಟೆ 12 ರಿಂದ ಹೋಮದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ. ಸಂಜೆ ಗಂಟೆ 5:30ರಿಂದ ದುರ್ಗಾಪೂಜೆ, ಸುದರ್ಶನ ಹೋಮ, ಅಘೋರ ಹೋಮ, ವನದುರ್ಗಾ ಹೋಮ, ರಾತ್ರಿ ಗಂಟೆ 8:30ರಿಂದ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಡಿ.04 ರಂದು ಸಂಜೆ ಗಂಟೆ 5:30ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಡಿ. 05ರಂದು ಪೂರ್ವಾಹ್ನ ಗಂಟೆ 7:30ರಿಂದ : ಮಹಾಗಣಪತಿ ಹೋಮ, ಕಲಶ ಪೂಜೆ ದಿವಾ ಗಂಟೆ 10:29ರಿಂದ 11:30ರ ತನಕ ನಡೆಯುವ ಮಕರ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠಾ ಕಲಶಾಭಿಷೇಕ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಶ್ರೀ ದೇವರ ಬಲಗೈ ಬಂಟ ಕಾಚುಕುಜುಂಬ:
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟನಾಗಿ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿ ಪುತ್ತೂರು,ಕುಕ್ಕೆ ಹಾಗೂ ಪಂಜದ ಭಕ್ತರ ಇಷ್ಟಾರ್ಥ ನೆರವೇರಿಸುವ ಕಾರಣಿಕದ ದೈವ ಕಾಚು ಕುಜುಂಬ. ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಪರ್ಧಿಯಲ್ಲಿ ಬರುವ ಕಾರ್ಣಿಕ ದೈವ.ಬಲ್ನಾಡು ಶ್ರೀ ಉಳ್ಳಾಲ್ತಿಯ ಬಲಗೈ ಬಂಟನಾದ ಕಾಚು ಕುಜುಂಬ ದೈವಕ್ಕೆ ಪಂಜ ದೇಗುಲದಲ್ಲಿ ಏಳು ದಿನಗಳ ಜಾತ್ರಾಮಹೋತ್ಸವ ನಡೆಯುವ ವಿಚಾರ ತಿಳಿದು ಪಂಜದ ಜಾತ್ರೆಗೆ ಹೋಗಲೇ ಬೇಕೆಂದು ನಿರ್ಧರಿಸಿದ ಕಾಚು ಕುಜುಂಬನು ಉಳ್ಳಾಲ್ತಿ ಯಲ್ಲಿ ಒಂದು ದಿನ ತೆರಳಲು ಅನುಮತಿ ಪಡೆದು ಜಾತ್ರೋತ್ಸವಕ್ಕೆ ತೆರಳುತ್ತಾನೆ.
ಆದರೆ ಬಂದವನೇ ಚಾತ್ರೆಯ ಆನಂದದಲ್ಲಿ ತೇಲಾಡುತ್ತಾ ಜಾತ್ರೆಯ 7 ದಿನವೂ ಪಂಜದಲ್ಲಿ ಉಳಿದುಕೊಂಡಿದ್ದು ಜಾತ್ರೆ ಕೊನೆ ಗೊಂಡ ನಂತರ ಬಲ್ನಾಡು ಉಳ್ಳಾಲ್ತಿ ಸಾನಿಧ್ಯಕ್ಕೆ ತೆರಳುತ್ತಾನೆ. ಆದರೆ ಈತನು ಒಂದು ದಿನ ತೆರಳಲು ಅನುಮತಿ ಪಡೆದು 7 ದಿನಗಳನ್ನು ಮಾಡಿದ್ದನ್ನು ಕಂಡು ಉಳ್ಳಾಲ್ತಿ ಕಾಚು ಕುಜುಂಬನ ಮೇಲೆ ಕೋಪಗೊಂಡು ಗದರಿಸುತ್ತಾಳೆ .ಇದರಿಂದ ಬೇಸರಗೊಂಡ ಕಾಚು ಕುಜುಂಬನು ಉಳ್ಳಾಲ್ತಿಯಲ್ಲಿ ಪರಿಪರಿಯಾಗಿ ಮನವಿ ಮಾಡುತ್ತಾ ಮುಂದೆ ನಾನು ಪಂಜ ದೇಗುಲದ ಬಳಿಯಲ್ಲಿ ನೆಲೆ ನಿಲ್ಲುತ್ತೇನೆ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಕುಕ್ಕೆಯಲ್ಲಿ ಕೂಡಾ ನೆಲೆನಿಂತು ಭಕ್ತಾದಿಗಳ ಧರ್ಮ ರಕ್ಷಣೆಯಲ್ಲಿ ಕೂಡಾ ತೊಡಗಿಸಿಕೊಳ್ಳುತ್ತೇನೆ.ಎಂದು ಹೇಳಿ ಶ್ರೀ ಉಳ್ಳಾಲ್ತಿಯ ಆಶೀರ್ವಾದ ಪಡಕೊಂಡು ಪಂಜಕ್ಕೆ ಬಂದು ದೇಗುಲದ ದೇವರ ಅನುಮತಿಯೊಂದಿಗೆ ಶ್ರೀ ದೇವರ ಬಲಗೈ ಬಂಟನಾಗಿ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡ ಎಂಬ ಇತಿಹಾಸವಿದೆ.

ಪಂಜದಲ್ಲಿ ಕಾಚು ಕುಜುಂಬ ದೈವವು ತುಂಬಾ ಕಾರಣೀಕ ದೈವ ಎಂದು ಹಿರಿಯರು ಹೇಳುತ್ತಾರೆ.ಪಂಜ ದೇವಸ್ಥಾನ ಕ್ಕೆ ರಾತ್ರಿ ಕಳವು ಮಾಡಲು ಬಂದ ಕಳ್ಳರನ್ನು ಓಡಿಸಿದ ಹಾಗೂ ಕಳವು ಮಾಡಿ ತೆಗೊಂದು ಹೋಗುವಾಗ ಅಡ್ಡ ನಿಂತು ಅಲ್ಲೇ ದೇವರ ಮೂರ್ತಿ ಹಾಗೂ ಹುಂಡಿ ಗಳನ್ನು ಬಿಟ್ಟು ಹೋದ ಘಟನೆ ಸುಮಾರು 35 ವರ್ಷಗಳ ಹಿಂದೆ ನಡೆದಿದೆ. ಇದೀಗ ಕಾಚು ಕುಜುಂಬನಿಗೆ ಪಂಬೆತ್ತಾಡಿ ಗ್ರಾಮದ ಗರಡಿ ಬೈಲು (ಮೂಲಸ್ಥಾನ )ಎಂಬಲ್ಲಿ ಬಂಟ ಮಲೆ ಯಿಂದ ಹರಿದು ಬರುವ ನಾಗತೀರ್ಥ ಹೊಳೆಯ ಬದಿಯಲ್ಲಿ ಮೂರು ಬದಿಯಲ್ಲಿ ಹೊಳೆ ಇರುವ ಪ್ರಕೃತಿ ರಮಣೀಯ ಸ್ಥಳದಲ್ಲಿ ನೂತನ ದೈವಸ್ಥಾನ ನಿರ್ಮಿಸಲಾಗಿದೆ . ಈ ಪುಣ್ಯ ಕಾರ್ಯವು ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಯವರು ನೇತೃತ್ವದಲ್ಲಿ ಸೀಮೆಯ ಭಕ್ತಾದಿಗಳ ತನು, ಮನ,ಧನ ಸಹಕಾರದಿಂದ ಪುನರ್ ನಿರ್ಮಾಣ ಗೊಂಡು ಪುನರ್ ಪ್ರತಿಷ್ಠಾ ಕಲಶ ವಿಜೃಂಭಣೆಯಿಂದ ನಡೆಯಲಿದೆ. ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು, ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಬಿಳಿಮಲೆ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.