ಬೆಳ್ಳಾರೆ: ನೆಟ್ಟಾರು ಗೋಪಾಲಕೃಷ್ಣ ಭಟ್ಟರು ನಿಧನರಾಗಿ ಐವತ್ತು ವರ್ಷಗಳು ಸಂದವು. ಈ ಹಿನ್ನೆಲೆಯಲ್ಲಿ ನೆಟ್ಟಾರು ವೆಂಕಟ್ರಮಣ ಭಟ್ ರವರ ಕಳಂಜದ ಶ್ರೀರಾಮ ನಿಲಯದಲ್ಲಿ ಜರಗಿದ ಐವತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ದಿವಂಗತರ ಸ್ಮರಣೆ ಕಾರ್ಯಕ್ರಮವು ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟುಂಬದ ಹಿರಿಯರಾದ ಕೋಟೆ ದಯಾನಂದರವರು ವಹಿಸಿ, ನೆಟ್ಟಾರು ಗೋಪಾಲಕೃಷ್ಣ ಭಟ್ಟರ ಬದುಕು, ವ್ಯಕ್ತಿತ್ವದ ಬಗ್ಗೆ ಮಾತನಾಡಿ ನೆಟ್ಟಾರು ಮನೆತನದ ವಿಶೇಷತೆಯನ್ನು ನೆನಪಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೂಂತಾರು ರಾಮಕೃಷ್ಣ ಭಟ್ಟರು ಮಾತನಾಡಿ, ನೆಟ್ಟಾರು ಮನೆತನ ಆಲದ ಮರದ ಹಾಗೆ. ಕುಟುಂಬಕ್ಕೆ, ಊರಿಗೆ ನೆರಳಿನಂತೆ ಪೋಷಿಸಿದ ಕುಟುಂಬ ಆಗಿದೆ. ಮನೆ ಬೇರೆ ಬೇರೆ ಆಗಿದ್ದರೂ ಮನ ಬೇರೆಯಾಗದೆ, ಕೂಡು ಸಂಸ್ಕೃತಿಯನ್ನು ಪೋಷಿಸಿಕೊಂಡು ಬರುತ್ತಿರುವ ಮನೆತನ. ಗೋಪಾಲಕೃಷ್ಣ ಭಟ್ಟರ ಐವತ್ತನೇ ವರ್ಷದ ವಾರ್ಷಿಕ ಕಾರ್ಯಕ್ರಮದ ಮೂಲಕ, ಶ್ರಾದ್ಧ ಕ್ರಿಯೆಯನ್ನು ಮಾಡಿ, ಪಿತೃಗಳನ್ನು ಐವತ್ತು ವರ್ಷಗಳಿಂದ ನಿರಂತರ ನೆನಪಿಸಿಕೊಳ್ಳುತ್ತಾ ಕೌಟುಂಬಿಕ ಮತ್ತು ಜೀವನ ಮೌಲ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.















ಈ ಸಂದರ್ಭದಲ್ಲಿ ಮುಂಡುಗಾರು ಸುಬ್ರಹ್ಮಣ್ಯ, ಕೋಟೆ ಭಾಸ್ಕರ, ಕಮಲ ಬೆಂಗಳೂರು ಮೊದಲಾದವರು ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಮೊದಲು ವೆಂಕಟ್ರಮಣ ಭಟ್ ಮತ್ತು ಸುಕೇಶಿನಿ ದಂಪತಿಗಳು ದೀಪ ಪ್ರಜ್ವಲಿಸಿ, ಗೋಪಾಲಕೃಷ್ಣ ಭಟ್ ದಂಪತಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೆಟ್ಟಾರು ಸಹೋದರರಾದ ರಾಮಚಂದ್ರ ಭಟ್, ಉದಯಕುಮಾರ ಭಟ್, ಧ್ರುವಕುಮಾರ್ ರವರು, ಹಾಗೂ ಮಕ್ಕಳು, ಮೊಮ್ಮಕ್ಕಳು ಬಂಧು ಬಳಗದವರು ಹಾಜರಿದ್ದರು. ವೇದಿಕೆಯಲ್ಲಿ ಕೋಟೆ ಪಾರ್ವತಿಯವರು ಉಪಸ್ಥಿತರಿದ್ದರು.
ರಾಜೇಂದ್ರ ಭಟ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿ, ರಾಮಚಂದ್ರ ಭಟ್ ನೆಟ್ಟಾರು ವಂದಿಸಿದರು.










