ಸಂಸ್ಥೆಯ ಮುಖ್ಯಸ್ಥರಿಂದ ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ
ಸುಳ್ಯ ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವದ ಅಂಗವಾಗಿ ಡಿ.೨೬ ರಂದು ಆರೋಗ್ಯಕ್ಕಾಗಿ ಓಟ ಎಂಬ ಧ್ಯೇಯದಡಿಯಲ್ಲಿ ಸುಳ್ಯ ನಗರದಲ್ಲಿ ಸಂಸ್ಥೆ ವತಿಯಿಂದ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ.
ಸುಳ್ಯದ ಅಮರಶಿಲ್ಪಿ ದಿವಂಗತ ಡಾ.ಕುರುಂಜಿ ವೆಂಕಟರಮಣಗೌಡ ರವರ ಜನ್ಮ ದಿನಾಚರಣೆ ಯಂದು ಮ್ಯಾರಥಾನ್ ಮೂಲಕ ಸಂಸ್ಥೆಯ ದಶಮಾನೋತ್ಸವದ ಸಂಭ್ರಮಾಚರಣೆಗೆ ಯಶಸ್ವಿ ಚಾಲನೆ ನೀಡಲಾಗುವುದು ಎಂದು ಡಿ ೪ರಂದು ಸುಳ್ಯ ಪ್ಲಸ್ ಕ್ಲಬ್ಬಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋಧ ರಾಮಚಂದ್ರರವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಳೆದ ೯ ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶದೊಂದಿಗೆ ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಬೆಳೆದಿರುವ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು, ಇದೀಗ ದಶಮಾನೋತ್ಸವದ ಸಂಭ್ರಮದಲ್ಲಿದೆ. ೨೦೨೬-೨೭ನೇ ಸಾಲಿನಲ್ಲಿ ಜರಗಲಿರುವ ದಶಮಾನೋತ್ಸವದ ಪೂರ್ವಭಾವಿಯಾಗಿ ಹಾಗೂ ಮುನ್ನುಡಿಯಾಗಿ, ಸಂಸ್ಥಾಪಕರಾದ ಡಾ. ಕುರುಂಜಿ ವೆಂಕಟರಮಣ ಗೌಡರ ೨೧ ಜನ್ಮದಿನಾಚರಣೆಯ ಪ್ರಯುಕ್ತ ‘ಆರೋಗ್ಯಕ್ಕಾಗಿ ಓಟ’ ಎಂಬ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಇದರ ಆಡಳಿತ ಅಧಿಕಾರಿ ಭವಾನಿ ಶಂಕರ್ ಅಡ್ತಲೆ ಅವರು ಮಾತನಾಡಿ ‘ಒಂದು ದಶಕದ ಶೈಕ್ಷಣಿಕ ಪಯಣವನ್ನು ಪೂರೈಸುತ್ತಿರುವ ನಮ್ಮ ಕಾಲೇಜು, ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಕ್ರೀಡೆ ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದೆ ಎಂಬುದಕ್ಕೆ ಈ ಮ್ಯಾರಥಾನ್ ಸಾಕ್ಷಿಯಾಗಿದೆ ಎಂದರು.
ದಶಮಾನೋತ್ಸವದ ಪ್ರಯುಕ್ತ ನಡೆಯುವ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ, ಟಿ-ಶರ್ಟ್ ಹಾಗೂ ಪದಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಮ್ಯಾನೇಜಿಂಗ್ ಟ್ರಸ್ಟಿಗಳಾದ.ಡಾ. ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ. ಜ್ಯೋತಿ ಆರ್. ಪ್ರಸಾದ್ ಮತ್ತು ಶ್ರೀ ಮೌರ್ಯ ಆರ್. ಪ್ರಸಾದ್ ರವರು ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ’ ಬಿ ‘ ಯಲ್ಲಿ ಬರುವ ಎಲ್ಲಾ ಸಹ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಪ್ರಸಿದ್ದ ಕ್ರೀಡಾಪಟುಗಳು ಹಾಗೂ ಗಣ್ಯರು ಪ್ರಶಸ್ತಿ ವಿತರಣಾ ಸಮಯದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.















ಮ್ಯಾರಥಾನ್ ವಿಭಾಗಗಳು
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ದೈಹಿಕ ಶಿಕ್ಷಕರಾದ ಡಾ. ರಾಜೇಶ್ವರ್ ರವರು ಮಾತನಾಡಿ ‘ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಲಿದ್ದು
ಪುರುಷರು (೧೮ ವರ್ಷ ಮೇಲ್ಪಟ್ಟವರಿಗೆ): ೧೦ ಕಿ.ಮೀ ಹಾಗೂ ಮಹಿಳೆಯರು (ಎಲ್ಲಾ ವಯೋಮಾನದವರು): ೫ ಕಿ.ಮೀ.
ಬಾಲಕರು (೧೮ ವರ್ಷಕ್ಕಿಂತ ಕಡಿಮೆ): ೫ ಕಿ.ಮೀ ನಗರದ ಮುಖ್ಯ ಬೀದಿಗಳಲ್ಲಿ ನಿಗದಿಪಡಿಸಲಾಗಿದ್ದು
ವಿಜೇತರಿಗೆ ನಗದು ಬಹುಮಾನಗಳು ಪ್ರಥಮ ೫ ಸಾವಿರ ರೂಗಳು ದ್ವಿತೀಯ ೩ ಸಾವಿರ ರೂ ತೃತೀಯ ೨ ಸಾವಿರ ರೂ. ಚತುರ್ಥ ೧ ಸಾವಿರ ರೂಗಳನ್ನು ನೀಡಲಾಗುವುದು.
ಪ್ರವೇಶ ಶುಲ್ಕ ರೂ ೨೦೦ ನಿಗದಿಪಡಿಸಲಾಗಿದ್ದು ಡಿಸೆಂಬರ್ ೧೫ನೇ ತಾರೀಖಿನೊಳಗೆ ಓಟದಲ್ಲಿ ಭಾಗವಹಿಸುವವರು ನೊಂದಣಿ ಮಾಡಿಕೋಳ್ಳಬಹುದು ಎಂದು ತಿಳಿಸಿರುತ್ತಾರೆ.
ಈ ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ತಾಲೂಕಿನ ಮತ್ತು ಜಿಲ್ಲೆಯ ಹಾಗೂ ಕೇರಳ ರಾಜ್ಯದ ವಿವಿಧ ಕಡೆಗಳಿಂದ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದು ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿ ಕಂಡು ಬಂದಿದೆ ಎಂದು ಅವರು ತಿಳಿಸಿದರು.
ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್ ಮತ್ತು ಸರ್ಟಿಫಿಕೇಟ್ ನೀಡಲಾಗುವುದು ಮತ್ತು ಓಟವನ್ನು ಪೂರ್ಣಗೊಳಿಸುವವರಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಓಟದ ಮಾರ್ಗ
ಪುರುಷರು (೧೮ ವರ್ಷ ಮೇಲ್ಪಟ್ಟವರು): ೧೦ ಕಿ.ಮೀ
ಮ್ಯಾರಥಾನ್ ಕೆ.ವಿ.ಜಿ. ಅಮರಜ್ಯೋತಿ ಪಿಯು ಕಾಲೇಜುನಲ್ಲಿ ಪ್ರಾರಂಭಗೊಂಡು –
ವಿವೇಕಾನಂದ ಸರ್ಕಲ್ ಜ್ಯೋತಿ ಸರ್ಕಲ್ ಪೈಚಾರ್ ಸುಳ್ಯ ಬಸ್ ಸ್ಟ್ಯಾಂಡ್ ಚೆನ್ನಕೇಶವ ದೇವಸ್ತಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ.
ಮಹಿಳೆಯರು (ಎಲ್ಲಾ ವಯೋಮಾನದವರು): ೫ ಕಿ.ಮೀ ಹಾಗೂ ಬಾಲಕರು (೧೮ ವರ್ಷಕ್ಕಿಂತ ಕಡಿಮೆ): ೫ ಕಿ.ಮೀ
ವಿವೇಕಾನಂದ ಸರ್ಕಲ್ ಶ್ರೀರಾಂಪೇಟೆ ? ಸುಳ್ಯ ಬಸ್ ಸ್ಟ್ಯಾಂಡ್ ಗಾಂಧಿನಗರ ಉಡುಪಿ ಗಾರ್ಡನ್ ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದ್ದು
ಮಾರ್ಗದುದ್ದಕ್ಕೂ ನೀರಿನ ಸ್ಟೇಷನ್ಗಳು, ವೈದ್ಯಕೀಯ ಸೇವೆ, ತುರ್ತು ವಾಹನ ವ್ಯವಸ್ಥೆ ಹಾಗೂ ಭಾಗವಹಿಸುವರಿಗಾಗಿ ಬೆಳಗಿನ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ವಿವರವನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈಆರ್,ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ, ಅಕಾಡೆಮಿಯ ಕಚೇರಿ ಮುಖ್ಯಸ್ಥರಾದ ಪ್ರಸನ್ನ ಕಲ್ಲಾಜೆ, ಉಪಸ್ಥಿತರಿದ್ದರು.










