ಒಂದೇ ಬೆಳೆಗೆ ಜೋತುಬಿದ್ದರೆ ಪರಿತಪಿಸುವ ಕಾಲ ಬಂದೀತು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ದಿನ ಕಳೆದಂತೆ ಬಯಲು ಸೀಮೆಯ ಕಬ್ಬು ಕೃಷಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಅತ್ಯಂತ ಬೇಸರದ ವಿಚಾರ. ಕಾರಣಗಳು ಒಬ್ಬೊಬ್ಬರದ್ದು ಒಂದೊಂದು. ಟನ್ನಿಗೆ ರೂ ೨೫೦೦ ಸಿಗುತ್ತದೆಂಬ ಆಶಾಭಾವನೆ ಇಟ್ಟುಕೊಂಡು ಸಾಲ ಮಾಡಿ ಬೆಳೆದ ರೈತರಿಗೆ ರೂ.೭೦೦ಕ್ಕೆ ಅಲೆಮನೆಗೆ ಕೊಡಬೇಕಾದ ಸ್ಥಿತಿ ಬಂದಿರುವಾಗ ಕಬ್ಬು ಬೆಳೆಯ ಭವಿಷ್ಯವೇ ಚಿಂತಾಕ್ರಾಂತವಾಗಿದೆ. ಇದೆಲ್ಲ ನಮಗೆ ಸಂಬಂಧಿಸಿದ್ದಲ್ಲ, ನಮ್ಮ ಅಡಿಕೆ ತೆಂಗು, ಕೊಕ್ಕೊ, ಕಾಳು ಮೆಣಸಿಗೆ ಉತ್ತಮ ಧಾರಣೆ ಇದೆ ಎಂದು ನಾವು ಇನ್ನಷ್ಟು ಕೃಷಿಯನ್ನು ಸಾಲ ಮಾಡಿ, ವಿಸ್ತರಿಸಿದರೆ ಮುಂದೊಂದು ದಿನ ಇವುಗಳಿಗೂ ಬೆಲೆ ಕುಸಿದರೆ ನಾವು ಕಂಗೆಡಬಹುದು. ಕೃಷಿ ಉತ್ಪನ್ನಗಳ ಧಾರಣೆ ಏರಿಳಿತಕ್ಕೆ ಜಾಗತಿಕ ಮಾರುಕಟ್ಟೆಯ ಧಾರಣೆಗಳು ಮುಖ್ಯವಾಗಿದೆ. ಒಂದು ಕೃಷಿ ಉತ್ಪನ್ನಕ್ಕೆ ಈಗ ಉತ್ತಮ ಧಾರಣೆ ಇದೆ ಎಂದಾದರೆ, ಜಗತ್ತಿನ ಅನೇಕ ದೇಶಗಳ ಕೃಷಿಕರು ಹಿಂದೆ ಮುಂದೆ ನೋಡದೆ ಅದನ್ನು ಬೆಳೆಯತೊಡಗುತ್ತಾರೆ. ಅದರ ಪರಿಣಾಮ ಬೆಲೆ ಕುಸಿತ. ಈಗ ಕಬ್ಬಿಗೆ, ರಬ್ಬರಿಗೆ ಬಂದ ಸಂಕಷ್ಟ ನಾಳೆ ನಮ್ಮ ಇತರ ಕೃಷಿ ಉತ್ಪನ್ನಗಳಿಗೂ ಬರಬಹುದು. ಸರಕಾರ ಎಷ್ಟೇ ಪರಿಹಾರ ನೀಡಿದರೂ ಅದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ. ಕೃಷಿ ಕಾರ್ಮಿಕರ ಕೊರತೆಯಿಂದ ಈಗಲೇ ಕಷ್ಟಪಡುತ್ತಿರುವ ನಮಗೆ, ಇನ್ನು ಕೆಲವೇ ವರ್ಷದ ಒಳಗೆ ಯಾವ ಕೆಲಸಕ್ಕೂ ಎಷ್ಟು ಸಂಬಳ ನೀಡಿದರೂ, ನಿಯತ್ತಿನಿಂದ ಪ್ರಾಮಾಣಿಕವಾಗಿ ದುಡಿಯುವವರು ಸಿಕ್ಕುವುದು ಕಷ್ಟ. ಹಾಗಾಗಿ ಕಾರ್ಮಿಕರ ಅವಲಂಬನೆಯಿಂದ ಕೃಷಿ ಮಾಡುವ ಯೋಜನೆಯನ್ನು ಆದಷ್ಟು ಕಡಿಮೆ ಮಾಡುವುದು ಅಗತ್ಯ.
ಈಗ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲಿ ಕಳೆಕತ್ತರಿಸುವ ಯಂತ್ರ ನಮ್ಮ ಅಡಿಕೆ ತೋಟಕ್ಕೆ ಒಂದು ವರದಾನ. ಆದರೆ ಜೆ.ಸಿ.ಬಿ ಯಿಂದ 2-1/2 -3 ಅಡಿ ಅಳದ ಗುಂಡಿ ತೋಡಿ ಅಳದಲ್ಲಿ ಅಡಿಕೆಗಿಡ ನೆಟ್ಟರೆ, ಈ ಗುಂಡಿಯಲ್ಲಿ ಮಳೆಗಾಲ ನೀರು ನಿಂತು, ಗಿಡಗಳು ಮೇಲೇಳಲು ಬಹಳ ನಿಧಾನ. ಟ್ರೆಂಚ್ ಪದ್ದತಿ ಸ್ಪಲ್ಪ ಉತ್ತಮ. ಇನ್ನು ತೋಟದಿಂದ ಅಡಿಕೆ ಮನೆಗೆ ಸಾಗಿಸಲು ಅನೇಕರು ತೋಟದೊಳಗೆಲ್ಲಾ ಮಾರ್ಗ ಮಾಡಿ, ಜೀಪು, ರಿಕ್ಷಾಗಳನ್ನಿಟ್ಟುಕೊಂಡು ತರಲು ಪ್ರಾರಂಭವಾಗಿದೆ. ಇದು ಆರ್ಥಿಕವಾಗಿ ತುಂಬ ನಷ್ಟದ್ದು. ನಾವು ಯಾವುದನ್ನೂ ಲೆಕ್ಕಾಚಾರ ಹಾಕಿ ನೋಡದೆ, ನೆರೆಯವರು ಮಾಡಿದರೆಂದು ನಾವೂ ಮಾಡಲು ಮುಂದಾಗುತ್ತೇವೆ. ಅನಿವಾರ್ಯವಾದರೆ ಕೈ ಗಾಡಿ ಬಳಸಬಹುದು. ದೊಡ್ಡ ತೋಟ ಇರುವವರು ಮತ್ತು ಮನೆಯಿಂದ ತೋಟ ದೂರ ಇರುವವರಿಗೆ ಈಗಿನ ಕಾಲದಲ್ಲಿ ವಾಹನಗಳ ಬಳಕೆ ಸೂಕ್ತ. ಮಧ್ಯಮ ವರ್ಗದ ಐದೆಕ್ರೆಗಿಂತ ಕಮ್ಮಿ ಅಡಿಕೆ ತೋಟ ಇರುವವರು ಅಡಿಕೆಕೊಯ್ಲಿನ ಸಮಯದಲ್ಲಿ ಸ್ವಲ್ಪ ಹೆಚ್ಚು ಸಂಬಳ ನೀಡಿಯಾದರೂ ಜನರಿಂದಲೇ ಮಾಡಿಸುವುದು ಉತ್ತಮ. ಹೇಗೂ ಅಡಿಕೆ ಹೆಕ್ಕಿ ವಾಹನಕ್ಕೆ ತುಂಬಿಸಲು ಮತ್ತು ಅಂಗಳದಲ್ಲಿ ಅವರೇ ಸೀದಾ ತಂದು ಅಂಗಳದಲ್ಲಿ ವಾಹನದಿಂದ ತೆಗೆದು ಹರಡಲು ಜನ ಬೇಕಲ್ಲವೇ? ಆ ಸಮಯದಲ್ಲಿ ಅವರೇ ಸೀದಾ ತಂದು ಅಂಗಳದಲ್ಲಿ ಹರಡಿಹಾಕುವುದೇ ಆರ್ಥಿಕವಾಗಿ ಅನುಕೂಲ.
ಕಬ್ಬು ಬೆಳೆಗಾರರು ಅದೊಂದನ್ನೇ ಬೆಳೆದು ಕೈ ಸುಟ್ಟುಕೊಂಡಂತೆ ನಾವು ಒಂದೇ ಬೆಳೆಗೆ ಈಗ ಉತ್ತಮ ಧಾರಣೆ ಇದೆಯೆಂದು ಜೋತು ಬಿದ್ದರೆ ಮುಂದೆ ಪರಿತಪಿಸಬೇಕಾದೀತು. ಆದ ಕಾರಣ ನಮ್ಮ ಜಮೀನಿನಲ್ಲಿ ಸಮ್ಮಿಶ್ರ ಬೆಳೆಯನ್ನು ಬೆಳೆಯಲು ಮುಂದಾಗಬೇಕು. ಆಗ ಒಂದಕ್ಕೆ ಬೆಲೆ ಕುಸಿದರೆ, ಮತ್ತೊಂದರಲ್ಲಿ ಆದಾಯ ಪಡೆಯಬಹುದಾಗಿದೆ. ಆದರೂ ಆನೆ ಮಂಗಗಳ ಹಾವಳಿಗಳಿಂದ ಮತ್ತು ವಿದ್ಯುತ್ ವೈಫಲ್ಯದಿಂದ ಕಂಗೆಟ್ಟಿರುವ ನಮ್ಮ ಕೃಷಿಕರಿಗೆ ಕೃಷಿಯೊಂದಿಗೆ ಉದ್ಯೋಗ ಮಾಡಲೂ ಮುಂದಾಗ ಬೇಕಿದೆ. ಈಗಾಗಲೇ ಅನೇಕ ಕೃಷಿಕರು ಮಾಡುವಂತೆ ಮನೆಯಲ್ಲಿ ಒಬ್ಬರಾದರೂ ಸರಕಾರಿ ಯಾ ಖಾಸಗಿ ಉದ್ಯೋಗ ಮಾಡಿದರೆ ಆರ್ಥಿಕ ಭದ್ರತೆಯಾಗುತ್ತದೆ. ಮನೆಯಲ್ಲಿ ಜನ ಇದ್ದು ಸ್ವತಃ ದುಡಿಯುವ ಶಕ್ತಿ ಆರೋಗ್ಯ ಇದ್ದರೆ ಹೈನುಗಾರಿಕೆಯೂ ಉತ್ತಮ. ಜೇನು ಸಾಕಣೆಯನ್ನೂ ಮಾಡಬಹುದು.
ಈಗ ಹೊರಗಿನಿಂದ ಬರುವ ಹೆಚ್ಚಿನ ಎಲ್ಲಾ ಆಹಾರ ಪದಾರ್ಥಗಳು, ಹಣ್ಣು ಹಂಪಲು, ತರಕಾರಿಗಳು ವಿಷಮಯವಾಗಿರುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈ ವಿಷಪೂರಿತವಾದುವುಗಳನ್ನು ತಿಂದು ನಾವು ನಾನಾ ರೋಗಗಳಿಗೆ ತುತ್ತಾಗಿ ಔಷಧಿಗಾಗಿಯೇ ತುಂಬ ಖರ್ಚು ಮಾಡಬೇಕಾಗಿದೆ. ನನ್ನ ಆತ್ಮೀಯರೊಬ್ಬರು ಇತ್ತೀಚೆಗೆ ಬೆಳಿಗ್ಗೆ ಡೈರಿಗೆ ಹಾಲು ಕೊಟ್ಟು ಅವರ ನೆರೆಮನೆಯವರೊಂದಿಗೆ ನಡೆದುಕೊಂಡು ಮಾತನಾಡುತ್ತಾ ಬರುವಾಗ ದಾರಿಯಲ್ಲೇ ಹಠಾತ್ ಕುಸಿದು ವಿಧಿವಶರಾದ ವಿಚಾರ ತಿಳಿದು ತುಂಬ ಬೇಸರವಾಯಿತು. ನನಗಿಂತ ಆರೇಳು ವರ್ಷಸಣ್ಣವರು. ಜೀವ ಎಂಬುದು ನೀರ ಮೇಲಿನ ಗುಳ್ಳೆಯಂತೆ. ಒಳಗಿರುವ ಶಿವಹೋದರೆ ಶವ ಎಂದು ಜ್ಞಾನಿಗಳು ಹೇಳಿದ್ದಾರೆ. ಹಾಗಾಗಿ ಒಳ್ಳೆಯ ಕೆಲಸವನ್ನು ನಾಳೆಗೆ ಎಂದು ಮುಂದೂಡದೆ ಇಂದೇ ಮಾಡುವ ಅಭ್ಯಾಸ ಉತ್ತಮ. ಹೀಗೆಲ್ಲಾ ಅಕಾಲಿಕ ನಿಧನಕ್ಕೆ ನಾವು ಸೇವಿಸುವ ಆಹಾರವೇ ಮುಖ್ಯಕಾರಣ ಎಂದು ನನಗನಿಸುತ್ತಿದೆ. ಆದರೆ ಏನು ಮಾಡುವುದು? ಭತ್ತವನ್ನು ಬೆಳೆಯುವುದನ್ನು ನಮ್ಮೂರ ಹೆಚ್ಚಿನ ಕೃಷಿಕರು ಬಿಟ್ಟು ಅನೇಕ ದಶಕಗಳೇ ಸಂದುವು. ಗದ್ದೆ ಬೇಸಾಯ ಮಾಡಿವುದರಲ್ಲಿ ಇರುವ ಆನಂದ, ಶ್ರಮ ಇಂದಿನ ಮಕ್ಕಳಿಗೆ ಗೊತ್ತೇ ಇಲ್ಲ ಎಂದರೂ ತಪ್ಪಾಗದು. ಆದುದರಿಂದ ಅನಿವಾರ್ಯವಾದುದನ್ನು ಮಾತ್ರ ಪೇಟೆಯಿಂದ ತಂದು ಆದಷ್ಟು ಸೊಪ್ಪು ತರಕಾರಿ ಹಣ್ಣು ಹಂಪಲುಗಳನ್ನು ಬೆಳೆಸಿ ಉಪಯೋಗಿಸಿದರೆ ಸ್ವಲ್ಪ ಹೆಚ್ಚು ಆರೋಗ್ಯವಾಗಿರಬಹುದು. ಏನಿಲ್ಲದಿದ್ದರೂ ಶುಂಠಿ ಒಂದೆಲಗ, ಕೆಸು, ಚಕ್ರಮುನಿ, ರಕ್ತ ಮಿತ್ರ, ಕುಂಬಳ, ಸೌತೆ ಮೊದಲಾದುವುಗಳು ಎಲ್ಲೆಂದರಲ್ಲಿ ಸುಲಭವಾಗಿ ಬೆಳೆದು ದೊರೆಯುತ್ತದೆ. ಅವುಗಳೊಂದಿಗೆ ಅನನಾಸು. ಸೀತಾಫಲ, ಮಾವು, ಹಲಸು. ಚಿಕ್ಕು ಪೇರಳೆ, ಪಪ್ಪಾಯಿಗಳನ್ನು ಬೆಳೆಸಿ ಸದ್ಭಳಕೆ ಮಾಡೋಣ. ಹವಾಮಾನ ವೈಪರೀತ್ಯಗಳು ಊಹೆಗೆ ಮೀರಿ ಬದಲಾಗುತ್ತಿದೆ. ಯಾರ ಮುನ್ಸೂಚನೆಗಳೂ ಸರಿಯಾಗುತ್ತಿಲ್ಲ. ಆದ ಕಾರಣ ನಾವು ಸಕಾಲದಲ್ಲಿ ಔಷಧಿ ಸಿಂಪಡಣೆ, ಕಳೆ ತೆಗೆಸುವುದು, ಗೊಬ್ಬರ ಹಾಕುವುದು ಮೊದಲಾದ ಕೆಲಸಗಳನ್ನು ನಾನು ಹಿಂದೆ ತಿಳಿಸಿದಂತೆ ಹೇಗಾದರೂ ಮಾಡಿ ಮುಗಿಸಿ ಕೃಷಿ ಮೇಲಿನ ಪ್ರೀತಿಯನ್ನು ಉಳಿಸಿಕೊಂಡು ಬೆಳೆಸಿ.
– ಶ್ರೀನಿವಾಸ ರಾವ್ ಪೈಲೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.