ನೇತ್ರಾವತಿ ನದಿ ತಿರುವು ಕುರಿತು

Advt_Headding_Middle
Advt_Headding_Middle

ಕೊನೆಯಲ್ಲಿ ಇದ್ದ ಒಂದು ಮರವನ್ನೂ ಕಡಿದುರುಳಿಸಿದ ಮೇಲೆ, ಕೊನೆಯ ನದಿಗೆ ವಿಷವುಣಿಸಿದ ಮೇಲೆ, ಕೊನೆಗೆ ಉಳಿದಿರುವ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆ, ಆಗ ನಮಗೆ ತಿಳಿಯುತ್ತದೆ ಹಣವನ್ನು ತಿನ್ನಲು ಬರುವುದಿಲ್ಲ ಎಂದೂ….
ಪಶ್ಚಿಮ ಘಟ್ಟದ ಅಂದವನ್ನು ಬಣ್ಣಿಸಲು ಸಾಧ್ಯವೆ? ತುಳುವರ ಭದ್ರಗೋಡೆ ಎನ್ನಬಹುದು. ನದಿಯನ್ನು ತಾಯಿಗೆ ಹೋಲಿಸಿದರೆ, ಬೆಟ್ಟವನ್ನು ತಂದೆಗೆ ಹೋಲಿಸಬಹುದು. ತಂದೆ ಮತ್ತು ತಾಯಿಯ ಸ್ಥಾನವನ್ನು ತುಂಬಿರುವ ಮಹತ್ತರವಾದ ಪಟ್ಟ ಏರಿದ ಒಂದು ಅಂಶ.
ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಸಾಲುಗಳ ಮಧ್ಯದಲ್ಲಿ ಗಂಗಡಿಕಲ್ಲು ಎಂಬ ಜಾಗದಲ್ಲಿ ನೇತ್ರಾವತಿ ಹುಟ್ಟಿ ಸುಮಾರು 26 ಉಪನದಿಗಳ ಒಡಗೂಡಿ ಉಪ್ಪಿನಂಗಡಿಯಲ್ಲಿ ಕುಮಾರಧಾರ ದೊಂದಿಗೆ ಸೇರಿ ಗಜಗಮನೆಯಾಗಿ ಉಳ್ಳಾಲದ ಬಳಿ ಸಮುದ್ರ ಸೇರುತ್ತಾಳೆ. ಸುಮಾರು 96 ಕಿ.ಮೀಗಳ ಇವಳ ಪಯಣದ ಮಧ್ಯೆ ಸುಮಾರು 3000 ಹೆಕ್ಟೇರ್ ಭೂಮಿ ಫಲಭರಿತವಾಗುವುದಷ್ಟೆ ಅಲ್ಲ, ಧರ್ಮಸ್ಥಳ, ಸುಬ್ರಹ್ಮಣ್ಯದಂತಹ ದೇಶ ಪ್ರಸಿದ್ದ ಯಾತ್ರಾಸ್ಥಳದ ಭಕ್ತರ ಪಾಪ ನಾಶಿನಿಯಾಗಿದ್ದಾಳೆ.
ಮಂಗಳೂರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದವಳು ನೇತ್ರಾವತಿಯೇ. ಕುದುರೆಮುಖ ಕಬ್ಬಿಣ ಅದಿರು ಕಂಪೆನಿ, ಎಂ. ಆರ್.ಪಿ.ಎಲ್ , ಎಂ.ಸಿ.ಎಫ್ರೊಂದಿಗಿರುವ ಎಲ್ಲಾ ಉದ್ದಿಮೆಗಳಿಗೆ ನೀರುಣಿಸುವವಳು ನೇತ್ರಾವತಿ. ವಿಶೇಷ  ಎಂಬ ಹೆಸರಿನಲ್ಲಿ ಯಾವಾಗ ಉದ್ದಿಮೆಗಳು ತುಳುನಾಡಿಗೆ ಬಂದವೋ ಅಂದಿನಿಂದ ನಮ್ಮ ತುಳುನಾಡಿನ ಅಂದ ಚಂದ ಕೆಟ್ಟು ಹೋಗಿದೆ. ಮುಂದೆ ಒಂದು ದಿನ ಮನೆಗೆ ಬಂದ ಅಥಿತಿಗೆ ನೀರು ಕೂಡ ಇಲ್ಲ ! ಎಂಬ ಮಾತು ಹೇಳುವ ದಿನ ಹತ್ತಿರ ಬರುತ್ತಿದೆ.
23.03.2001=2+3+3+2+0+0+1= 11 ಎಂಥ ನಂಬರ್ ಅಲ್ವಾ? ದಕ್ಷಿಣ  ಕನ್ನಡಿಗರ ಬದುಕಿಗೆ 11ನೇ ದಿನ, ಅಂದರೆ ಎಲ್ಲಾ ಬಂಧುಗಳಿಗೆ ಗೊತ್ತಿರುವ ದಿನ, ಅದೇ ಸತ್ತವರ ಮನೆಯ 11ನೇ ದಿನ. ಪರಮಶಿವಯ್ಯ ಎಂಬ ಮಹಾ ಮೇಧಾವಿ ತಂತ್ರಜ್ಞ ಕರ್ನಾಟಕ  ಘನ ಸರ್ಕಾರಕ್ಕೆ  ನೇತ್ರಾವತಿ ನದಿ ತಿರುವು ಯೋಜನೆಯನ್ನು ಸಲ್ಲಿಸಿದ ದಿನ.
ವಿಶ್ವ ಸಂಸ್ಥೆಯು ಗುರುತಿಸಿದ ಅತ್ಯಂತ 20 ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟವೂ ಒಂದು ಇಲ್ಲಿ ಕನಿಷ್ಠ 25000 ಜೀವಿಗಳು ವಾಸಿಸುತ್ತಿವೆ. ಇವುಗಳಲ್ಲಿ ಶೇಕಡಾ 40 ಜೀವನಾಶದ ಭಯವನ್ನು ಹೊಂದಿದವುಗಳಾಗಿವೆ. 938ಕ್ಕಿಂತಲೂ ಹೆಚ್ಚು ಪಕ್ಷಿ ಸಂತತಿ ಇದೆ. 330 ಜಾತಿ ಪತಂಗಗಳು, 4000ಕ್ಕಿಂತಲೂ ಅಧಿಕ ಜಾತಿ ಹೂವು, ಅನೇಕ ವಿಜ್ಞಾನವನ್ನು ಆಧುನಿಕ ಔಷಧಿಯನ್ನು ಮೀರಿದ ಸಸಿಗಳು ಇವೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಕಾರ್ಯರೂಪ ತರುವುದರಿಂದ ಇಷ್ಟು ಸಮೃದ್ಧ ಆಸ್ತಿ ನಾಶವಾಗುತ್ತದೆ.
ದಕ್ಷಿಣ ಕನ್ನಡದ ಭೂಮಿ ಮುರಕಲ್ಲಿನಿಂದ ಕೂಡಿದ್ದು ಅಂದಾಜು 40-50 ಅಡಿಗಳಷ್ಟು ಆಳಕ್ಕಿಳಿದಿದೆ. ಇವೆಲ್ಲ ಅಂತರ್ಜಲವನ್ನು ಕೂಡಿಡಲು ದೀರ್ಘಕಾಲವನ್ನು ತೆಗೆದುಕೊಳ್ಳುತ್ತವೆ. ನೇತ್ರಾವತಿ ಬರಿದಾದರೆ ಅಂತರ್ಜಲ ಬರಿದಾಗಿ ಮರುಭೂಮಿ ಸೃಷ್ಠಿಯಾಗಲಿದೆ. ದಕ್ಷಿಣ ಕನ್ನಡದ ರೈತ ಜೀವನದಿ ನೇತ್ರಾವತಿ. ಭತ್ತ, ತೆಂಗು. ಕಂಗು, ರಬ್ಬರ್ನ ಕೃಷಿ ಭೂಮಿ ಪಾಪಸ್ ಕಳ್ಳಿ ಬೆಳೆಯದ ಊರಾಗಲಿದೆ. ಮುಂದೆ ಒಂದು ದಿನ ನಾವು ಯಾತಕೆ ಶಿವನೇ ಮಳೆಯ ಕಿತ್ತುಕೊಂಡೆ ಎಂದು ಹೇಳುತ್ತಾ ಆಕಾಶ ನೋಡುವ ದಿನ ಹಾಗೂ ಕಪ್ಪೆ ಮದುವೆ ಮಾಡುವ ದಿನ ಬರುತ್ತದೆ. ಪರಶುರಾಮ ಸೃಷ್ಟಿಯ ಪವಿತ್ರ ಕ್ಷೇತ್ರ ಎನಿಸಿದ ಧರ್ಮ ಸ್ಥಳ, ಸುಬ್ರಹ್ಮಣ್ಯ, ಉಪ್ಪಿನಂಗಡಿ ದೇವಾಲಯಗಳು ತೀರ್ಥ ಕ್ಷೇತ್ರ ಎಂದು ಪ್ರಸಿದ್ಧಿ. ಯಾಕೆಂದರೆ ಇಲ್ಲಿ ಸಾನ್ನಿಧ್ಯಕ್ಕೆ ಬೆಂಬಲವಾಗಿ ಇರುವ ಪವಿತ್ರ ನದಿಗಳು. ಇಲ್ಲೇ ನೀರು ಹರಿಯದಿದ್ದರೆ ದೇವಾಲಯಗಳೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಹುದು.
ಜಗತ್ತಿನಲ್ಲಿ ನದಿ ತಿರುವು ಯೋಜನೆ ಕೆಲವು ಮಾತ್ರ ಸಫಲವಾಗಿದೆ. ಆದರೆ ಅಲ್ಲಿನ ಜೀವ ವೈವಿಧ್ಯ ಭೂಮಿಯ ಲಕ್ಷಣ ಇತ್ಯಾದಿ ಕಾರಣ. ಅಮೇರಿಕಾದ ಕೊಲರಪೆಲ್, ಆಸ್ಟ್ರೆಲಿಯಾದ ಸ್ನೋವಿ, ರಷ್ಯಾದ ಒಂದು ನದಿಗಳನ್ನು ಅಂದು ತಿರುಗಿಸಿ ಇಂದು ಮತ್ತೆ ಸಹಜ ಹರಿವಿನ ಅವಕಾಶ ಮಾಡಿಕೊಡಲಾಗಿದೆ.
ಕೋಲಾರಕ್ಕೆ ನೀರು ತಲುಪಿಸಲು ಮುಂದಾದ ಆ ಯೋಜನೆ ಅಲ್ಲಿಗೆ ತಲುಪಲು ಸಾಧ್ಯವೇ ಇಲ್ಲ. ಪಶ್ಚಿಮ ಘಟ್ಟ ಹೇಗಿದೆ ಎಂಬುದನ್ನು ನೋಡಿಲ್ಲ ಈ ಯೋಜನೆಗೆ 12.500ಕೋಟಿ ರೂಪಾಯಿ ಖರ್ಚನ್ನು ಕರ್ನಾಟಕ ಸರಕಾರ  ಭರಿಸುತ್ತಿದೆ. ಅಂದರೆ ನೇತ್ರಾವತಿ ನೀರಿನಲ್ಲಿ ಹೋಮ ಮಾಡುತ್ತಿದೆ ಅನ್ನಬಹುದು. ಇವತ್ತು ಯೋಜನೆಯನ್ನು ಅಂಗೀಕಾರಕ್ಕೆ ತರುಲು ಮುಖ್ಯಕಾರಣರಾದ ರಾಜಕೀಯ ವ್ಯಕ್ತಿಗಳು ತಿಳಿಯಬೇಕು. ತಮ್ಮ ಕುಟುಂಬವು ಒಂದು ದಿನ ಉಪ್ಪು ನೀರು ಕುಡಿಯಬಹುದು. ಅವರು ಹುಟ್ಟಿದ್ದು ತುಳು ಮಣ್ಣಿನಲ್ಲಿ ಆದರೆ ಬೆಳೆಯುತ್ತಿರುವುದು ಇಂದು ಬೆಂಗಳೂರಿನಲ್ಲಿ ಅಲ್ವಾ? ಇಂದು ಅವರಿಗೆ ನಮ್ಮ ಮತ ಬೇಡ ಅಲ್ವಾ ಅಂದು ಬೇಕಿತ್ತು. ಈಗ ಬೇಕಿರುವುದು ಘಟ್ಟ ಸೀಮೆ ಜನರ ಮತ. ನಿಮಗೆ ನೀರೆ ವೈರಿಯಾಗುವ ದಿನ ಬರುತ್ತದೆ. ನಿಮಗೆ ಕಷ್ಟ ಬಂದರೆ ಸಹಸ್ರಲಿಂಗೇಶ್ವರ, ಅಣ್ಣಪ್ಪ, ನಾಗದೇವ ಬೇಕು. ಆದರೆ ಅವರು ನೆಲೆಯಾದ ಭೂಮಿ ನಿಮಗೆ ಬೇಡ ಅಲ್ಲವೆ? ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ನಮ್ಮ ಕೂಗು ಕೇಳಿಲ್ಲ.  ಪತ್ರ ಕಳುಸಿದೆವು. ಪತ್ರ ಕಸದ ತೊಟ್ಟಿ ಸೇರಿದವು. ಇನ್ನು ಉಳಿದಿರುವುದು ನೈತಿಕ ಪೊಲೀಸ್ ಗಿರಿ  ಎನ್ನಬಹುದು. ಉಗ್ರಹೋರಾಟ ಎನ್ನಬಹುದು. ಎನ್ನುವುದನ್ನು ತಿಳಿಸಿಕೊಡುವ ಕಾಲಕೂಡಿ ಬಂದಿರುತ್ತವೆ. ಎಲ್ಲಾ ತುಳುವ ಕೂಸುಗಳೇ ಎದ್ದೇಳಿ ಹೋರಾಡೋಣ ನೇತ್ರಾವತಿ ತಾಯಿಯ ಉಳಿಸೋಣ.
– ಅಜಿತ್ ಗೌಡ ಐರ್ವನಾಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.