ಕಥನ ಕುತೂಹಲಕ್ಕೆ ಇಂಬು ನೀಡಿದ ಕುಸುಮ ಸಾರಂಗದ ಯುಯುತ್ಸು ನಾಟಕ

Advt_Headding_Middle
Advt_Headding_Middle

ಕಳೆದ 22 ವರ್ಷಗಳಿಂದ ಸದಾ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು  ತೊಡಗಿಸಿಕೊಂಡು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಚಿರಪರಿಚಿತವಾಗಿರುವ,ಉತ್ಸಾಹಿ ಚಿಲುಮೆಗಳಿಂದ ನವೋತ್ಸಾಹದ ಪ್ರತಿಭೆಗಳಿಂದ ವೇದಿಕೆಗಳನ್ನೊದಗಿಸುತ್ತಿರುವ ಸಾಂಸ್ಕೃತಿಕ ಸಂಘಟನೆಯೇ ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜಿನ ಕುಸುಮಸಾರಂಗ.(ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಾಂಸ್ಕೃತಿಕರಂಗ)
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಂಗತಂಡವಾದ ಕುಸುಮಸಾರಂಗ ತಂಡವು ಕಾಲೇಜು ರಂಗಭೂಮಿಗೆ ಕಳೆದ 22 ವರ್ಷಗಳಿಂದ ಮಹೋನ್ನತ ಕೊಡುಗೆಯಾಗಿ ಪ್ರತಿವರ್ಷ ಉತ್ತಮ ನಾಟಕ ಪ್ರದರ್ಶನ ನೀಡುತ್ತಾ ಸಾಗಿಬಂದಿದೆ. ಪ್ರತಿವರ್ಷ ಹೊಸಮುಖಗಳ ಶೋಧ ನಡೆಸಿ, ಅವರಿಗೆ ರಂಗತಾಲೀಮು ನೀಡಿ ನಟರನ್ನಾಗಿಸುವ ರಂಗಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ವಿಶಂತಿ ವರ್ಷಾಚರಣೆಯನ್ನು ಸಂಭ್ರಮದಿಂದ  ಆಚರಿಸಿ, ರಂಗಾಸಕ್ತರ ಗಮನಸೆಳೆದ ಕುಸುಮಸಾರಂಗದ ಓಟ ಮುಂದುವರಿಯುತ್ತಿರುವುದು ರಂಗಭೂಮಿಗೆ ಹೊಸ ಕೊಡುಗೆಯೇ ಸರಿ. ಪ್ರಸಕ್ತ ವರ್ಷ ಹರಿಕೃಷ್ಣವಿರಚಿತ ಯುಯುತ್ಸು ನಾಟಕವನ್ನು ಸಿದ್ಧಪಡಿಸಿ ರಂಗದಲ್ಲಿ ಪ್ರದರ್ಶಿಸಲಾಯಿತು.  ಮಹಾಭಾರತದ ಕಥಾಹಂದರವನ್ನು ಒಳಗೊಂಡ ಯುಯುಸ್ಸು ನಾಟಕವು 18 ನವೋತ್ಸಾಹಿ ಕಲಾಕುಸುಮಗಳ ಅಭಿನಯ ಚಾತುರ್ಯದಿಂದ ವಿದು ಉಚ್ಚಿಲರ ನಿರ್ದೇಶನದಲ್ಲಿ  ಪ್ರೇಕ್ಷಕರ ಮನಸೂರೆಗೊಂಡಿತು. ಈ ಹಿಂದೆಯೂ ಮಂಗಳೂರಿನ ವಿದು ಉಚ್ಚಿಲ ನಿರ್ದೇಶನದಲ್ಲಿ  ಜಾನಪದ  ಕಥಾಹಂದರ ಹೊಂದಿದ ಇದಿತಾಯಿ ನಾಟಕವು ಅಭಿನಯಿ ಸಲ್ಪಟ್ಟಿತ್ತು.
ರಂಗತರಬೇತಿ ಮೂಲಕ ತರಬೇತಿ ಪಡೆದ ವಿದ್ಯಾರ್ಥಿ ನಟರೆಲ್ಲರೂ  ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ರಂಗಾಸಕ್ತರ ಗಮನ ಸೆಳೆದಿದ್ದಾರೆ. ಯುಯುತ್ಸು ನಾಟಕವು ಪೌರಾಣಿಕವಾಗಿದ್ದು,ಪ್ರಸಕ್ತ ಸಮಾಜದಲ್ಲಿ ಆಗುತ್ತಿರುವ ಅನ್ಯಾಯ,ಅಸಮಾನತೆ,ನೋವುಗಳ ಪ್ರತಿರೂಪವಾಗಿದೆ. ಯುಯುತ್ಸು ಮಹಾಭಾರತದ ಕುರುಡ ರಾಜ ಧೃತರಾಷ್ಟ್ರನಿಗೆ ದಾಸಿಯಲ್ಲಿ ಹುಟ್ಟಿದವ.ಆರಂಭದಲ್ಲಿ ಭಯಂಕರ ಯುದ್ಧ. ಖಡ್ಗ ,ಗುರಾಣಿ ಮಿಲಾಯಿಸುತ್ತಲೇ ಎಲ್ಲರೂ ಹತರಾಗುತ್ತಾರೆ. ಆ ಭೀಕರ ರಣರಂಗ ಪ್ರೇಕ್ಷಕರನ್ನು ಕಾತುರ ಕೌತುಕಲೋಕಕ್ಕೆ ಕರೆದೊಯ್ಯುವುದು.ಆ ಭೀಕರ ಯುದ್ಧದಲ್ಲಿ ಯುಯುಸ್ಸು ಬದುಕುಳಿಯುತ್ತಾನೆ. ಆ ನಂತರದ ಘಟನೆಗಳೇ ನಾಟಕವನ್ನು ಮುಂದುವರಿಸುತ್ತದೆ. ಯುಯುಸ್ಸು ದಾಸೀ ಪುತ್ರನಾದ ಕಾರಣ ಯಾವುದೇ ಸುಖ, ಸಂತೋಷ,ಐಷಾರಾಮಿ ಜೀವನವಿಲ್ಲದೆ ಎಲ್ಲರಿಂದಲೂ ನೋವುಂಡ ಅಪ್ರತಿಮವೀರ. ಅಷ್ಟರವರೆಗೂ ರಾಜಕುಲದವರ ತುಚ್ಛೆಗೆ ಒಳಗಾಗದಿದ್ದವ ಯುದ್ಧದ ಸಂದರ್ಭದಲ್ಲಿ ಕಪಟ ಪ್ರೀತಿಗೆ ಒಳಗಾಗುತ್ತಾನೆ. ಯುದ್ಧದಿಂದ ರೋಸಿಹೋಗಿ ರಾಜವೈಭೋಗ ತೊರೆದು ಜಂಗಮನಾಗಬಯಸುತ್ತಾನೆ.ಇಲ್ಲಿ ಆತನಿಗೆ ಸಮಾನವಾದ, ಸಮಾನ ನೋವನ್ನು ಅನುಭವಿಸುವ ಇನ್ನೊಂದು ಪಾತ್ರ ಸೋಮದತ್ತ.ಇವನು ಪಾಂಡುರಾಜನ ದಾಸೀ ಮಗ.ಆದರೆ ದುರಾದೃಷ್ಟವೆಂದರೆ ಯುಧಿಷ್ಠಿರನ ಕುತಂತ್ರಕ್ಕೆ ಸೋಮದತ್ತ ಬಲಿಯಾಗುತ್ತಾನೆ. ಯುಯುತ್ಸು ಬೇಡನ ಸಹಾಯದಿಂದ ಬದುಕುಳಿಯುತ್ತಾನೆ.
ಈ ನಾಟಕದಲ್ಲಿ ಯುದ್ಧದ ಭೀಕರತೆಯನ್ನು ವಿವರಿಸಲಾಗಿದೆ. ಹುಚ್ಚರಾದ ಎರಡು ಸೈನಿಕರ ಭವಣೆ ಸಾಮಾನ್ಯ ಜನರ ಬದುಕನ್ನು ತಿಳಿಸುತ್ತದೆ. ತಮ್ಮ ಕಣ್ಮುಂದೆಯೇ ರಕ್ತದಕೋಡಿ ಹರಿದುದು,ಕಣ್ಣು,ಕೈ,ಕಾಲು ಕಳೆದುಕೊಂಡವರನ್ನು ನೋಡಲಾಗದೆ ಮಾನಸಿಕ ಅಸ್ವಸ್ಥತೆಯನ್ನು ಹೊಂದುವರು.ಇವರ ನೋವು ಯುದ್ಧದ ಭೀಕರತೆಯನ್ನು ಪರೋಕ್ಷವಾಗಿ ಬಿಂಬಿಸುತ್ತದೆ. ಯುವಪ್ರತಿಭೆಗಳ, ಉತ್ತಮನಟನೆಯ ಮೂಲಕ ನಾಟಕವು ಕಲಾಸಕ್ತರ ಆಸಕ್ತಿಯನ್ನು ಕೊನೆವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.ವಿದು ಉಚ್ಚಿಲ ಅವರ ನಿರ್ದೇಶನದಡಿಯಲ್ಲಿ  ಪಳಗಿದ ಯುವಮನಸ್ಸುಗಳ ಸತತ ಪರಿಶ್ರಮ ನಾಟಕದಲ್ಲಿ ಯಥೋಚಿತವಾಗಿ ಕಂಡುಬಂದಿದೆ. ಶಿವರಾಮಕಲ್ಮಡ್ಕರ ಪ್ರಸಾದನ ಹಾಗೂ ವಸ್ತ್ರವಿನ್ಯಾಸ ಪಾತ್ರಕ್ಕೆ ಪೂಕವಾಗಿದ್ದರೆ, ಮಂಜುಳಾ ಸುಬ್ರಹ್ಮಣ್ಯ ಅವರ ನೃತ್ಯ ಸಂಯೋಜನೆ ನಾಟಕವನ್ನು ಮನೋಹರವಾಗಿರಿಸಿದೆ. ದಿವಾಕರ ಕಟೀಲು ಅವರ ಹಿತಮಿತವಾದ ಸಂಗೀತ ನಾಟಕದ ಗತಿಗೆ ಸಹಕಾರಿಯಾಗಿತ್ತು. ನಾಟಕ ರಂಗಮಂಟಪವೇರಲು ರಾಮಚಂದ್ರ ಸುಬ್ರಹ್ಮಣ್ಯ ವಿಶೇಷವಾಗಿ ಸಹಕರಿಸಿದ್ದರು. ಆರಂಭದಲ್ಲಿ ನಾಟಕ ತರಬೇತಿಯು ಮೇ ತಿಂಗಳ 26ರಿಂದ ಜೂನ್ 10ರವರೆಗೆ ನಡೆಯಿತು.
ಇದರಲ್ಲಿ 18 ವಿದ್ಯಾರ್ಥಿಗಳು  ಭಾಗವಹಿಸಿದ್ದರು. ಯುಯಸ್ಸುವಾಗಿ ಹರ್ಷಿತ್ ಪಡ್ರೆ ಹಾಗೂ ಅನಂತ ಪ್ರಸಾದ ಪಾತ್ರೋಚಿತ ಅಭಿನಯದಿಂದ ಗಮನಸೆಳೆದರು. ರಣಚಂಡಿಯಾಗಿ ಸುಷ್ಮಾ ಕೆ.ಎಚ್. ಮತ್ತು ಪುನೀತಾ ರಂಗದಲ್ಲಿ ಗೆದ್ದರೆ ರಣಹದ್ದುಗಳಾಗಿ ರಕ್ಷಿತಾ ಪಿ.ಡಿ.,ಮಾನಸಾ,ಮಿಲನ,ಆಶಿತಾ,ನಿಕ್ಷಿತಾ ನಟನೆಯಲ್ಲಿ ಮೇಲುಗೈ ಸಾಸಿದರು.ವಿದುರನಾಗಿ ಪ್ರಣವ ಕೆ.ಆರ್.,ಸೋಮದತ್ತನಾಗಿ ಪ್ರಶಾಂತ್ ಕೆ.ಆರ್., ಕುಂತಿಯಾಗಿ ದೀಪ್ತಿ,ಹುಚ್ಚರಾಗಿ ಮನೋಜ್ಞ ಅಭಿನಯ ನೀಡಿದವರು ಪವನ್ಕೆ.ಎಚ್.ಮತ್ತು ಅನಿಲ್. ಯುಧಿಷ್ಠಿರನಾಗಿ ಅನಂತಕೃಷ್ಣ, ಕೃಷ್ಣ-ಹೆಂಗಸು-ಗಾಂಧಾರಿಯಾಗಿ ನಂದಿನಿ ಬಿ.ಎಂ.,ಧೃತರಾಷ್ಟ್ರ-ಹಿರಣ್ಯಧನುಷ್ ಪಾತ್ರದಲ್ಲಿ ಸೃಜನ್ ಕುಮಾರ್,ಕಾಲಪುರುಷ ಪಾತ್ರದಲ್ಲಿ ಪವನ್ ಕೆ.ಎಚ್., ಹಾಗೂ ಸಂಜಯನ ಪಾತ್ರದಲ್ಲಿ ಪ್ರಸಾದ್ ಪಾತ್ರಪೋಷಣೆ ಮಾಡಿದರು.
ವಿದ್ಯಾರ್ಥಿ ನಟರು  ತಮ್ಮ ಮನೋಜ್ಞ ಅಭಿನಯ, ಸ್ಪಷ್ಟವಾದ ಉಚ್ಚಾರ, ನಟನೆಗಳಿಂದ ರಂಗಾಸಕ್ತರನ್ನು ನಾಟಕದ ಆದಿಯಿಂದ ಅಂತ್ಯದವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುಸುಮಸಾರಂಗ ತಂಡವು ಕಳೆದ 21 ವರ್ಷಗಳಿಂದ ನಿರಂತರವಾಗಿ ರಂಗತರಬೇತಿ ಶಿಬಿರ ಏರ್ಪಡಿಸಿ , ಅದೇ ರಂಗನಟರಿಂದ ಹೊಸಹೊಸ ನಾಟಕಗಳನ್ನು ರಂಗಕ್ಕೆ ಪರಿಚಯಿಸಿದೆ. ಹಲವು ಏಳುಬೀಳುಗಳ ನಡುವೆಯೂ ವರುಷಕೊಮ್ಮೆ ರಂಗಾಸಕ್ತರಿಗೆ ಉತ್ತಮ ನಾಟಕ ಪ್ರದರ್ಶನವನ್ನು ಕುಸುಮಸಾರಂಗದ ಮೂಲಕ ನೀಡುತ್ತಿದೆ. ಕುಸುಮಸಾರಂಗದ ಸಾರಥಿ ತುಕಾರಾಮ ಯೇನೆಕಲ್ಲು ಅವರ ನಿವೃತ್ತಿಯ ನಂತರ ಉಪನ್ಯಾಸಕ ,ನಟ ಗೋವಿಂದ ಎನ್.ಎಸ್. ಅವರ ಹಿರಿತನದಲ್ಲಿ ರಂಗಾಸಕ್ತರ ಮುಕ್ತ ಸಹಕಾರದೊಂದಿಗೆ ಮತ್ತೆ ಮುಂದುವರಿಯುತ್ತಿರುವುದು ಶ್ಲಾಘನೀಯ. ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಆರಂಭಿಕ ಪ್ರದರ್ಶನದ ಜಯಭೇರಿಯೊಂದಿಗೆ ಯುಯುಸ್ಸು ನಾಟಕದ ಪಯಣ ಸಾಗಿ, ಕೆ.ಎಸ್.ಎಸ್.ಕಾಲೇಜು (2 ಪ್ರದರ್ಶನ), ಯೇನೆಕಲ್ಲು ಸರಕಾರಿ ಪ್ರೌಢಶಾಲೆ, ಕುಮಾರಸ್ವಾಮಿ ವಿದ್ಯಾಲಯಗಳಲ್ಲಿ ನಾಟಕ ಪ್ರದರ್ಶನಗೊಂಡಿದೆ.
– ಬಿ.ವಿಠಲ ರಾವ್
ಮಲ್ಲಿಗೆಮಜಲು, ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.