ಬಲಾತ್ಕಾರದ ಬಂದ್‌ಗಳನ್ನು, ಕೋಮು ಗಲಭೆಗಳನ್ನು ನಿಲ್ಲಿಸಲು ಗ್ರಾಮ ಗ್ರಾಮಗಳಲ್ಲಿ ಜನಾಂದೋಲನಕ್ಕೆ ಕರೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪತ್ರಿಕೆ ಪ್ರಾರಂಭಿಸುವುದಕ್ಕಿಂತಲೂ ಮುಂಚೆ ಬಳಕೆದಾರರ ವೇದಿಕೆಯಲ್ಲಿದ್ದಾಗಿನಿಂದಲೂ ನಾವು ಬಲಾತ್ಕಾರದ ಬಂದ್‌ಗಳನ್ನು, ಭ್ರಷ್ಟಾಚಾರವನ್ನು, ಕೋಮು ಗಲಭೆಗಳನ್ನು ವಿರೋಧಿಸಿದ್ದೇವೆ. ಶುದ್ಧ ಕುಡಿಯವ ನೀರು ಮತ್ತು ಸ್ವಚ್ಚತೆಗೆ ಹಾಗೂ ಸಮಾನತೆ ಮತ್ತು ಸಾಮರಸ್ಯಕ್ಕಾಗಿ ಹೋರಾಟ ನಡೆಸಿದ್ದೇವೆ. ಇದೀಗ ಸುಳ್ಯದಲ್ಲಿ ಪತ್ರಿಕೆ ಪ್ರಾರಂಭವಾಗಿ 31 ವರ್ಷಗಳಾಗಿವೆ. ನಮ್ಮ ಹೋರಾಟ ಪೂರ್ಣ ಯಶಸ್ವಿಯಾಗದಿದ್ದರೂ ಸ್ವಲ್ಪ ಮಟ್ಟಿಗೆ ಅವುಗಳನ್ನು ನಿಯಂತ್ರಿಸಲು ಕಾರಣವಾಗಿದೆ ಎಂದು ನಂಬಿದ್ದೇವೆ. ಈಗ ಪತ್ರಿಕೆಗಳ, ಮಾಧ್ಯಮಗಳ ವ್ಯವಸ್ಥೆ ಸೋಶಿಯಲ್ ಮೀಡಿಯಾದಿಂದಾಗಿ ಬದಲಾಗಿದೆ. ಆದರೂ ಸುದ್ದಿ ಮಾಧ್ಯಮ ತನ್ನ ಪ್ರಯತ್ನ ಬಿಟ್ಟಿಲ್ಲ. ಈ ಸಲ ಶುದ್ಧ ಕುಡಿಯುವ ನೀರು, ಸ್ವಚ್ಚತೆಯ ಆಂದೋಲನವನ್ನು ತೆಗೆದುಕೊಂಡು ಸುಳ್ಯವನ್ನು ಸ್ವಚ್ಚ ತಾಲೂಕಾಗಿ ಪರಿವರ್ತಿಸುವ ಹೋರಾಟಕ್ಕೆ ಈಗಾಗಲೇ ಕೈ ಹಾಕಿದ್ದೇವೆ. ಮೊನ್ನೆಯ ಬಂದ್‌ನ ಘಟನೆ ಮತ್ತು ಕೋಮು ಗಲಭೆಯ ಹಿನ್ನೆಲೆಯಲ್ಲಿ ಸುದ್ದಿಗೆ ಮತ್ತು ನಮಗೆ ನಮ್ಮ ಪ್ರಾರಂಭದ ಹೋರಾಟಗಳಾದ ಬಲಾತ್ಕಾರದ ಬಂದ್‌ಗಳ ಮತ್ತು ಕೋಮು ಗಲಭೆಗಳ ವಿರುದ್ಧದ ಹೋರಾಟಕ್ಕೆ ಹಾಗೂ ಜನತೆಯನ್ನು ನಿರಂತರ ಶೋಷಣೆ ಮಾಡುವ ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಅಗತ್ಯವನ್ನು ತೋರಿಸಿದೆ. ಇಲ್ಲದಿದ್ದರೆ ಆದಾಯ ತರುವ ಒಳ್ಳೆಯ ವೈದ್ಯಕೀಯ ವೃತ್ತಿಯನ್ನು ಬಿಟ್ಟು ಪತ್ರಿಕೋದ್ಯಮಕ್ಕೆ ಕೈ ಹಾಕಿರುವುದು ಮತ್ತು ಜನಜಾಗೃತಿಗಾಗಿ, ಪ್ರತಿಭಟನೆಯಾಗಿ ಚುನಾವಣೆಗಳಲ್ಲಿ ಸಾಂಕೇತಿಕವಾಗಿ ಸ್ಪರ್ಧಿಸಿರುವುದು ಹಾಗೂ ನನಗೆ ಆಗಿನಿಂದ ಈಗಿನವರೆಗೆ ಬೆಂಬಲ ನೀಡಿದ ಎಲ್ಲಾ ಜನತೆಯ ಉದ್ದೇಶ ವಿಫಲವಾದಂತೆ ಅಲ್ಲವೇ?
ಅದಕ್ಕಾಗಿ ಸುಳ್ಯವನ್ನು ಬಲಾತ್ಕಾರದ ಬಂದ್‌ಗಳಿಂದ, ಕೋಮು ಗಲಭೆಗ ಳಿಂದ ಮತ್ತು ಭ್ರಷ್ಟಾಚಾರದಿಂದ ಮುಕ್ತ ಮಾಡುವ ಹಾಗೂ ಸ್ವಚ್ಚ ಸುಳ್ಯವಾಗಿ ಪರಿವರ್ತಿಸುವ ಆಂದೋಲನಕ್ಕೆ ಪೂರ್ಣ ಪ್ರಮಾಣದಲ್ಲಿ ಕೈ ಹಾಕಬೇಕೆಂದಿದ್ದೇವೆ. ಸಾರ್ವಜನಿಕ ಪಾಲುದಾರಿಕೆಗೆ ಪತ್ರಿಕೆಯನ್ನು ಒಳಪಡಿಸಿ ತಾಲೂಕಿನವರ ಪತ್ರಿಕೆ ಯಾಗಿಸಿ ಅದರ ದಾರಿಯಲ್ಲಿ ಅದು ನಡೆಯಲು ಬಿಟ್ಟು, ಅದರಿಂದ ಹೊರಗೆ ಬಂದು ಪತ್ರಿಕೋದ್ಯಮಕ್ಕೆ ಹೊರತಾಗಿಯೂ ಈ ಆಂದೋಲನವನ್ನು ಕೈಗೆತ್ತಿಕೊ ಳ್ಳುವ ಯೋಚನೆಯೂ ಇದೆ. ಸುಳ್ಯದ ಜನತೆಯ ಸಹಭಾಗಿತ್ವದಲ್ಲಿ ಮಾಡುವ ಈ ಯೋಜನೆಗಳು ಪೂರ್ಣ ಯಶಸ್ವಿಯಾಗದಿದ್ದರೂ ಆ ನಿಟ್ಟಿನಲ್ಲಿ ನಾವು ಮಾಡುವ ಪ್ರಯತ್ನ ಸ್ವಲ್ಪವಾದರೂ ಉತ್ತಮ ಬದಲಾವಣೆಗೆ ಕಾರಣವಾಗಿ ನಮ್ಮೆಲ್ಲರ ಕೆಲಸಕ್ಕೆ ಸಾರ್ಥಕತೆಯನ್ನು ನೀಡಬಹುದೆಂಬ ಆಶಯ ನಮ್ಮಲ್ಲಿದೆ. ಅದಕ್ಕಾಗಿ ಈ ಸಲದ ಬಂದ್‌ನ ಕೋಮುಗಲಭೆ ಘಟನೆಯ ಬಗ್ಗೆ ನಮ್ಮನ್ನು ಬದುಕಲು ಬಿಡಿ, ಹರೀಶ್, ಸಮೀವುಲ್ಲಾ ಸ್ನೇಹ ಎಲ್ಲರಿಗೂ ಮಾದರಿಯಾಗಲಿ ಎಂಬ ಲೇಖನವನ್ನು ಬರೆದಿದ್ದೇನೆ.
ಪ್ರಥಮವಾಗಿ ಬಲಾತ್ಕಾರದ ಬಂದ್‌ಗಳನ್ನು ನಿಲ್ಲಿಸುವ ಮತ್ತು ಕೋಮು ಸಾಮರಸ್ಯವನ್ನು ಉಂಟುಮಾಡುವ ಜನಾಂದೋಲನ ರೂಪಿಸುವುದಕ್ಕಾಗಿ ಸಹ ಮನಸ್ಸಿನ ಜನರ ಸಭೆಯನ್ನು ಕರೆಯಲಿದ್ದೇವೆ. ಜನತೆಯ ಬೆಂಬಲದ ಆಧಾರದಲ್ಲಿ ಮುಂದಿನ ಯೋಜನೆಗಳನ್ನು ರೂಪಿಸಲಿದ್ದೇವೆ. ಈ ಯೋಜನೆಗೆ ಬೆಂಬಲ ಕೊಡುವವರು ಬಡವರೇ, ದೊಡ್ಡವರೇ ಯಾರೇ ಆಗಿದ್ದರೂ ಜಾತಿ ಧರ್ಮದ, ಭಾಷೆಯ ಭೇದ ಭಾವ ಇಲ್ಲದೆ ಸಹಕಾರ ಮತ್ತು ಪ್ರೋತ್ಸಾಹ ನೀಡಿ ಸುಳ್ಯದ ಗ್ರಾಮ ಗ್ರಾಮಗಳಲ್ಲಿ ಮುಂದೆ ಬರಬೇಕೆಂದು ಆಶಿಸುತ್ತೇವೆ.          -ಡಾ| ಯು.ಪಿ.ಶಿವಾನಂದ

 

ಗಾಂಧಿ ಜನಿಸಿದ ನಾಡಿನಲ್ಲಿ ಸಬ್ ಕೇ ಸಾಥ್ ಘೋಷಣೆ ಮೊಳಗಲಿ, ನಿಮ್ಮ ದ್ವೇಷಕ್ಕೆ ನಮ್ಮನ್ನು ಬಲಿ ಮಾಡಬೇಡಿ, ನಮ್ಮನ್ನು ಬದುಕಲು ಬಿಡಿ

ಹರೀಶ್, ಸಮೀವುಲ್ಲಾ ಸ್ನೇಹ ಎಲ್ಲರಿಗೂ ಮಾದರಿಯಾಗಲಿ

ಏನಿದು ಹುಚ್ಚು? ನಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ? ಯಾಕೆ ಹೀಗಾಗುತ್ತಿದ್ದೇವೆ? ಎಂದು ಚಿಂತಿಸಬೇಡವೇ? ಕಾಂಗ್ರೆಸ್, ಬಿಜೆಪಿ, ವಿಎಚ್‌ಪಿ, ಎಸ್‌ಡಿಪಿಐ ಭಿನ್ನಾಭಿಪ್ರಾಯ ಪ್ರತಿಭಟನೆ, ಜಗಳ, ಗಲಭೆಗೆ ಕಾರಣವಾಗಿ ನಮ್ಮ ಜೀವನವನ್ನು ಏನು ಮಾಡುತ್ತಿದೆ ಎಂದು ಯೋಚಿಸಬೇಡವೇ? ಟಿಪ್ಪು ಎಂದರೆ ಯಾರೆಂದು ತಿಳಿಯದ ಜನರಿಗೆ ಅದರ ಜಯಂತಿ ಆದರೆಷ್ಟು ಬಿಟ್ಟರೆಷ್ಟು? ಒಂದು ವೇಳೆ ತಿಳಿದರೂ ಜನರಿಗೆ ಈ ಗಲಭೆಯಿಂದ ಆಗುವ ಲಾಭವೇನು? ಟಿಪ್ಪು ಜಯಂತಿಯ ವಿಷಯವನ್ನೇ ಇಟ್ಟುಕೊಂಡು ರಾಜಕೀಯದ ಓಟಿನ ವಿಷಯವಾಗಿ ಅದನ್ನು ಪರಿವರ್ತಿಸುವ ಯೋಚನೆ ಇಟ್ಟುಕೊಳ್ಳುವ ರಾಜಕೀಯದವರಿಗೆ, ಜನರನ್ನು ಒಡೆದು ಆಳುವ ನೀತಿಯನ್ನು, ದ್ವೇಷವನ್ನು ಸಾಧಿಸುವ ವ್ಯಕ್ತಿಗಳಿಗೆ ಮತ್ತು ಸಂಘಟನೆಗಳಿಗೆ ನಮ್ಮನ್ನು ಮತ್ತು ನಮ್ಮ ಸ್ವಾತಂತ್ರ್ಯವನ್ನು ಅಡವಿಟ್ಟಿದ್ದೇವೆಯೇ? ಮಾರಿಕೊಂಡಿ ದ್ದೇವೆಯೇ? ಎಂದು ನಾವು ಯೋಚಿಸಬೇಕು. ಈ ಸಲ ದೀಪಾವಳಿ ಜೀವನಕ್ಕೆ ಬೆಳಕು, ಸಮೃದ್ಧಿ ತರುವ ಬದಲು ಸೆಕ್ಷನ್ ೧೪೪ ತಂದಿದೆ. ಊರನ್ನು ಬಂದ್ ಮಾಡುವ ಮೂಲಕ ನಮ್ಮ ಜೀವನವನ್ನು ಬಂದ್ ಮಾಡಿದೆ. ಎಷ್ಟೋ ಜನರ ಜೀವನ ಹಾಳು ಮಾಡಿದೆ. ಇದಕ್ಕೆ ಕಾರಣರು ಯಾರು? ನಮ್ಮ ಬದುಕನ್ನು ನಿಯಂತ್ರಿಸುವ ಅಧಿಕಾರ, ಮತ್ತು ಕಾನೂನಿಗೆ ಮೀರಿದ ಶಕ್ತಿಯನ್ನು ಅವರಿಗೆ ಕೊಟ್ಟವರು ಯಾರು? ತಮ್ಮ ತಮ್ಮ ವೈಯುಕ್ತಿಕ ಲಾಭಕ್ಕಾಗಿ ಗಲಭೆ ಎಬ್ಬಿಸುವವರಿಗೆ ಇತರರ ಜೀವನ ಮತ್ತು ನೆಮ್ಮದಿಯನ್ನು ಹಾಳು ಮಾಡಬಾರದು. ತಮಗೆ ಇಷ್ಟವಾಗದಿದ್ದರೆ ಅಥವಾ ಇಷ್ಟವಾದರೆ ಪ್ರತಿಭಟನೆ ಅಥವಾ ಆಚರಣೆಯನ್ನು ಕಾನೂನಿನ ಮತ್ತು ಪ್ರಜಾಪ್ರಭುತ್ವದ ಅಡಿಯಲ್ಲಿ ಇತರರಿಗೆ ತೊಂದರೆಯಾಗದಂತೆ ನಡೆಸಬೇಕೆಂಬ ಪರಿಜ್ಞಾನವಿಲ್ಲವೇ? ಮೊನ್ನೆಯ ಮಡಿಕೇರಿಯ ಘಟನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದವರೂ ಸಾವನ್ನಪ್ಪಿದ್ದಾರೆ. ಆ ಪ್ರಕರಣದಲ್ಲಿ ಹಿಂದೂ ಸತ್ತಾಗ ಅದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ ಆದರೆ ಅದೇ ಪ್ರಕರಣದಲ್ಲಿ ಮುಸ್ಲಿಂ ಸತ್ತಾಗ ಯಾವ ಪ್ರತಿಕ್ರಿಯೆಯೂ ಇಲ್ಲ. ಅದೇ ರೀತಿ ಮುಸ್ಲಿಂ ಸತ್ತಾಗ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ. ಹಿಂದೂ ಸತ್ತದ್ದಕ್ಕೆ ಯಾವ ಪಶ್ಚಾತ್ತಾಪವೂ ಇಲ್ಲ. ಯಾಕೆ?
ಬಿಸಿರೋಡ್‌ನಲ್ಲಿ ಹರೀಶ್ ಮತ್ತು ಸಮೀವುಲ್ಲಾ ಸ್ನೇಹಿತರು. ಒಟ್ಟಿಗೆ ಕ್ರಿಕೆಟ್ ಆಡಿ ಬಂದಿದ್ದಾರೆ. ಜ್ಯೂಸ್ ಕುಡಿದಿದ್ದಾರೆ. ಯಾರನ್ನಾದರೂ ಕೊಲೆ ಮಾಡುವ ಮೂಲಕ ಗಲಭೆಯನ್ನು ಹರಡುವ ಉದ್ಧೇಶದಿಂದಲೇ ಅಲ್ಲಿಗೆ ಬಂದ ದುಷ್ಕರ್ಮಿಗಳು ಇಬ್ಬರಿಗೂ ಇರಿದಿದ್ದಾರೆ. ಹರೀಶ್ ಮೃತಪಟ್ಟಿದ್ದಾನೆ. ಸಮೀವುಲ್ಲಾ ಗಂಭೀರ ಗಾಯಗೊಂಡಿದ್ದಾನೆ. ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಅವರ ಸ್ನೇಹಾಚಾರಕ್ಕೆ ಬೆಲೆ ಕೊಡಬೇಕಾಗಿತ್ತು. ಆ ಎರಡೂ ಸಂಘಟನೆಗಳವರು ಸೇರಿ ಆ ದುಷ್ಕರ್ಮಿಗಳನ್ನು ಸದೆಬಡಿಯಬೇಕಿತ್ತಲ್ಲವೇ? ಅದರ ಬದಲು ಹಿಂದೂ ಸಂಘಟನೆಗಳು ಹರೀಶ್ ಸತ್ತುದಕ್ಕೆ ಮುಸ್ಲಿಂರ ವಿರುದ್ಧ, ಮುಸ್ಲಿಂ ಸಂಘಟನೆ ಸಮೀವುಲ್ಲಾ ಇರಿತಕ್ಕೊಳಗಾದುದಕ್ಕೆ ಹಿಂದೂಗಳ ವಿರುದ್ಧ ದ್ವೇಷ ಸಾಧಿಸುವುದೇ? ಗಲಭೆಯನ್ನು ಹರಡಿ ದುಷ್ಕರ್ಮಿಗಳ ಉದ್ಧೇಶವನ್ನು ಈಡೇರಿಸುವುದೇ?! ಇವರ ಈ ಕ್ರಿಯೆಯಿಂದ ಮೃತಪಟ್ಟ ಹರೀಶ್ ಮತ್ತು ಸಮೀವುಲ್ಲಾ ಸ್ನೇಹಿತರಿಗೆ ಏನನ್ನಿಸಬೇಕು? ಅದಕ್ಕಿಂತ ವಿಶೇಷವೆಂದರೆ ಈ ಊರಿನಲ್ಲಿ ಯಾವುದೇ ಹಿಂದು ಯಾರಾದರೂ ಹಿಂದೂ ಸಮುದಾಯದವರಿಂದ ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ, ಹತ್ಯೆಯಾದರೂ ಏನೂ ಗಲಭೆ ಆಗುವುದಿಲ್ಲ. ಒಂದು ವೇಳೆ ಹಲ್ಲೆ ಅಥವಾ ಹತ್ಯೆ ಮಾಡಿದವ ಶ್ರೀಮಂತ ಅಥವಾ ಅಧಿಕಾರಸ್ಥ ಆಗಿದ್ದರೆ ಅವನ ಕಡೆಗೇ ಬೆಂಬಲ ದೊರಕುತ್ತದೆಯಲ್ಲವೇ?, ಅದೇ ರೀತಿ ಮುಸ್ಲಿಮರ ಮೇಲೆ ಮುಸ್ಲಿಂ ಸಮುದಾಯದ ಯಾರೇ ಹಲ್ಲೆ ಮಾಡಿ ಹತ್ಯೆ ಮಾಡಿದರೂ ಅಲ್ಲಿಯೂ ಏನೂ ಆಗುವುದಿಲ್ಲ. ಹತ್ಯೆ ಮಾಡಿದವರು ಶ್ರೀಮಂತ ಅಧಿಕಾರಸ್ಥರಾದರೆ ಅವರ ಕಡೆ ನಿಲ್ಲುವವರೇ ಜಾಸ್ತಿ. ಆದರೆ ಹಿಂದೂಗಳ ಮೇಲೆ ಮುಸ್ಲಿಂ ಅಥವಾ ಮುಸ್ಲಿಮರ ಮೇಲೆ ಹಿಂದೂ ಸಮುದಾಯದವರು ಹತ್ಯೆ ಮಾಡುವುದಲ್ಲ, ಕೇವಲ ಮೈಮುಟ್ಟಿದರೂ ಊರಿಗೇ ಬೆಂಕಿ ಬೀಳುತ್ತದೆ. ಪ್ರತಿಭಟನೆ ನಡೆಯುತ್ತದೆ. ಪ್ರತೀಕಾರವಾಗಿ ಹಲ್ಲೆ ಕೂಡ ನಡೆಯುತ್ತದೆ. ಯಾಕೆ? ಅಂದರೆ ಹಿಂದೂಗಳನ್ನು ಹಿಂದೂಗಳು ಕೊಂದರೆ (ಅದು ಪುಣ್ಯದ ಕೆಲಸ) ಸತ್ತವರು, ಕೊಂದವರು ಸ್ವರ್ಗಕ್ಕೆ ಹೋಗುತ್ತಾರೆ. ಇತರರು ಕೊಂದರೆ ಆ ಸತ್ತ ಹಿಂದೂ ನರಕಕ್ಕೆ ಹೋಗು ತ್ತಾನೆ ಎಂದು ಅರ್ಥವೇ? ಅದೇ ರೀತಿಯಲ್ಲಿ ಮುಸ್ಲಿಂರನ್ನು ಮುಸ್ಲಿಮರು ಕೊಂದರೆ (ಅದು ಪುಣ್ಯದ ಕೆಲಸ) ಇಬ್ಬರೂ ಸ್ವರ್ಗಕ್ಕೆ ಹೋಗುತ್ತಾರೆ. ಇತರರು ಕೊಂದರೆ ಸತ್ತ ಮುಸ್ಲಿಂ ನರಕಕ್ಕೆ ಹೋಗುತ್ತಾನೆ ಎಂದು ಅರ್ಥವೇ? ಅದಕ್ಕಾಗಿ ತಮ್ಮಿಂದ ಸತ್ತರೆ ಪರವಾಗಿಲ್ಲ. ಇತರ ಸಮುದಾಯದಿಂದ ಆಗಬಾರದು ಎಂದು ಈ ಗಲಭೆಯೇ? ಈ ರೀತಿ ಹಿಂದೂ ಮುಸ್ಲಿಂ ವಿರೋಧವನ್ನು ಬಂಡವಾಳ ಮಾಡಿಕೊಂಡಿರುವ ಸಂಘಟನೆಗಳು ಪರಸ್ಪರ ದ್ವೇಷಕ್ಕೆ ಕಾರಣವಾಗುವ ತಮ್ಮ ಶಕ್ತಿಯ ಪ್ರದರ್ಶನದಿಂದ ಮತ್ತು ಬಂದ್ ಗಲಭೆಗಳಿಂದ ಜನರ ಜೀವನವನ್ನು ಹಾಳು ಮಾಡಬೇಡಿ. ಇದರಿಂದ ಎಲ್ಲಾ ಸಮಾಜದವರಿಗೂ, ತಮ್ಮ ಸಮುದಾಯದವರಿಗೂ, ತಮ್ಮವರಿಗೂ ತೊಂದರೆ ಎಂಬುದನ್ನು ತಿಳಿದುಕೊಳ್ಳಿ. ಈ ರೀತಿ ದ್ವೇಷ ಸಾಧಿಸುವ ಬದಲು ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ತಮ್ಮ ಸಮುದಾಯದಲ್ಲಿ ಎಷ್ಟೋ ಜನರು ಊಟ-ಚಿಕಿತ್ಸೆ ಇಲ್ಲದೆ ಸಾಯು ತ್ತಿದ್ದಾರೆ ಬಡತನದಲ್ಲಿ ವಿದ್ಯೆಯಿಲ್ಲದೆ ಸೊರಗುತ್ತಿದ್ದಾರೆ ಎಂದು ಅರಿತುಕೊಂಡು ತೊಂದರೆಗೊಳಗಾಗುವ, ಬಡತನದಲ್ಲಿರುವ, ಅನ್ಯಾಯಕ್ಕೊಳಗಾದ, ವಿದ್ಯಾಭ್ಯಾಸ ವಿಲ್ಲದ ಜನರನ್ನು ರಕ್ಷಿಸಿ, ಪ್ರೀತಿಸುವ ಕೆಲಸ ಮಾಡಬಹುದಲ್ಲವೇ? ತಮ್ಮ ಸ್ವಾರ್ಥ ಸಾಧನೆಗೆ ಜನತೆಯ ಶಾಂತಿ ಕದಡಬೇಡಿ. ಜೀವನಕ್ಕೆ ಅಪಾಯ ತರಬೇಡಿ. ನಿಮ್ಮ ಗಲಭೆಗಳಿಂದ ಸಾಯುವ ಅಮಾಯಕ ಜನರೆಷ್ಟೋ? ಆಗುವ ತೊಂದ ರೆಗಳೆಷ್ಟೋ? ಪ್ರತಿಭಟನೆ ಮಾಡಬೇಕಿದ್ದರೆ ಮಾಡಿ. ಅದಕ್ಕೆ ಗಲಭೆಯೇ, ಹಾನಿಯೇ ದಾರಿಯಲ್ಲ. ಹಾನಿ ಮತ್ತು ಗಲಭೆ ಮಾಡುವವರನ್ನು ಯಾರೇ ಆದರೂ ಖಂಡಿಸಿ. ಯಾವುದೇ ಸಮುದಾಯದಿಂದ ಯಾರಿಗೇ ಅನ್ಯಾಯವಾದರೂ ಕೂಡ ತಪ್ಪಿತ ಸ್ಥರನ್ನು ರಕ್ಷಿಸುವ ಬದಲು ಅವರನ್ನು ಶಿಕ್ಷಿಸಿ. ಆ ಮೂಲಕ ಶಾಂತಿ ಸಾಮರಸ್ಯಕ್ಕೆ ಕಾರಣವಾಗಿ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಒಳಿತನ್ನು ಮಾಡಬಹುದಲ್ಲವೇ?
ನಮ್ಮ ಜೀವನವನ್ನು ನಿಮ್ಮ ಇಚ್ಛೆಗೆ ಸರಿಯಾಗಿ ನಡೆಸುವಂತೆ ಮಾಡುವ ಪ್ರಯತ್ನವನ್ನು ಬಿಡಿ. ನಿಮ್ಮ ನಿಮ್ಮಲ್ಲಿ ವಿರೋಧಗಳಿದ್ದರೆ ಪ್ರಜಾಪ್ರಭುತ್ವದ ಅಡಿಯಲ್ಲಿ ನೇರವಾಗಿ ಹೋರಾಡಿ. ಅದನ್ನು ಸರಿಪಡಿಸಿಕೊಳ್ಳಿ. ಇಡೀ ಸಮಾಜವನ್ನು ಬಲಿಪಶು ಮಾಡಬೇಡಿ. ನಾವು ಎಲ್ಲಾ ಸಮುದಾಯದವರು ಪರಸ್ಪರ ಶಾಂತಿಯಿಂದ, ಪ್ರೀತಿಯಿಂದ ಸಬ್ ಕೇ ಸಾಥ್ ಎಂದು ಬದುಕಲು ಇಚ್ಛಿಸುತ್ತೇವೆ. ಪ್ರಧಾನಿ ಮೋದಿ ಇಂಗ್ಲಂಡ್‌ನಲ್ಲಿ ಹೇಳಿದಂತೆ ಇದು ಗಾಂಧಿ ಮತ್ತು ಬುದ್ಧ ಹುಟ್ಟಿದ ಊರು ಎಂದು ನೆನಪಿರಲಿ. ಪುತ್ತೂರಿನಲ್ಲಿ ಶಾಂತಿ ಬಯಸುವ ಜನತೆ, ಪಕ್ಷ ಭೇದ ಮರೆತು ಜಾತಿ ಧರ್ಮ ಭೇದ ಭಾವವಿಲ್ಲದೆ ಸತ್ಯ ಮತ್ತು ಸಾಮರಸ್ಯದ ಬದುಕನ್ನು ಇಚ್ಛಿಸುವ ಜನತೆ ಮುಂದೆ ಬರಬೇಕು. ಬಂದ್ ಗಲಭೆ ನಡೆಸಿ ನಮ್ಮ ಜೀವನ ಹಾಳು ಮಾಡುವವರ ವಿರುದ್ಧ ಎದ್ದು ನಿಂತು ಸಂಘಟಿತರಾಗಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಬೇಕೆಂಬ ಕರೆ ನೀಡುತ್ತಿದ್ದೇನೆ. ಗಲಭೆಕೋರರು ತಿದ್ದಿಕೊಳ್ಳದಿದ್ದರೆ ಅವರನ್ನು ಊರಿನಿಂದಲೇ ಗಡಿಪಾರು ಮಾಡಬೇಕೆಂಬ ನಿರ್ಣಯ ಕೈಗೊಳ್ಳಬೇಕೆಂದು ಆಶಿಸುತ್ತಿದ್ದೇನೆ.

-ಡಾ| ಯು.ಪಿ.ಶಿವಾನಂದ

*******************************************************************************************************************

ನ.13 ರಂದು ದ.ಕ.ಜಿಲ್ಲಾ ಬಂದ್‌ನ ವಿಷಯದ ಕುರಿತಾಗಿ ಸುದ್ದಿ ಬಿಡುಗಡೆ ವತಿಯಿಂದ ಆಹ್ವಾನಿಸಿದ

ಜನಾಭಿಪ್ರಾಯಗಳ ವೀಡಿಯೋ ಕ್ಲಿಪ್ಪಿಂಗ್…

 

ಎಂ.ವೆಂಕಪ್ಪ ಗೌಡ, ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸುಳ್ಯ

ದಿವಾಕರ ಸುಳ್ಯ

ಪಿ.ಎಸ್.ಗಂಗಾಧರ, ಪ್ರ.ಕಾರ್ಯದರ್ಶಿ ಸುಳ್ಯ ಬ್ಲಾಕ್ ಕಾಂಗ್ರೆಸ್

ಜಯಪ್ರಕಾಶ್ ಕುಂಚಡ್ಕ, ಅಧ್ಯಕ್ಷರು, ತಾಲೂಕು ಪಂಚಾಯತ್ ಸುಳ್ಯ

ಆರ್.ಕೆ.ಮಹಮ್ಮದ್, ಅಧ್ಯಕ್ಷರು, ಅಲ್ಪಸಂಖ್ಯಾತ ವಿವಿದೋದ್ಧೇಶ ಸಹಕಾರಿ ಸಂಘ ಸುಳ್ಯ

ನವೀನ್ ಕುಮಾರ್ ರೈ ಮೇನಾಲ, ಜಿಲ್ಲಾ ಪಂಚಾಯತ್ ಸದಸ್ಯ, ಜಾಲ್ಸೂರು ಕ್ಷೇತ್ರ

ಪ್ರಕಾಶ್ ಹೆಗ್ಡೆ, ಅಧ್ಯಕ್ಷರು, ನಗರ ಪಂಚಾಯತ್ ಸುಳ್ಯ

 ರಾಕೇಶ್ ರೈ ಕೆಡೆಂಜಿ, ಪ್ರ.ಕಾರ್ಯದರ್ಶಿ, ಬಿಜೆಪಿ ಮಂಡಲ ಸಮಿತಿ ಸುಳ್ಯ

ಪಿ.ಬಿ.ಸುಧಾಕರ ರೈ ನೆಟ್ ಕಾಂ, ಅಧ್ಯಕ್ಷರು, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಸುಳ್ಯ

ಗಣೇಶ್, ಜೀಪು ಚಾಲಕರು, ಸುಳ್ಯ

ಇಬ್ರಾಹಿಂ ಶಿಲ್ಪ ಗಾಂಧಿನಗರ

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.