ತಂತ್ರಜ್ಞಾನದ ಸೆಲೆಯಲ್ಲಿ ಮಾನವ…

Advt_Headding_Middle
Advt_Headding_Middle

ಭೂಮಿತಾಯಿಯ ಮಡಿಲಲ್ಲಿರುವ ಮಾನವ ಅವನೋರ್ವ ಬುದ್ದಿಜೀವಿ. ಆತನ ಆಗಾಧ ಪ್ರಮಾಣದ ಬುದ್ಧಿಶಕ್ತಿಗೆ ಎಣೆಯೆಂಬುದಿಲ್ಲ. ಆತನಿಂದ ಅಸಾಧ್ಯವಾದುದು ಯಾವುದೂ ಇಲ್ಲ. ತನ್ನ ಉದ್ದೇಶ ಸಾಧನೆಗಾಗಿ, ಛಲಕ್ಕಾಗಿ ಅವನು ಅನಂತ ಆಕಾಶದಲ್ಲಿ ಹಕ್ಕಿಯಂತೆ ಹಾರಾಡಬಲ್ಲ. ನೀರಿನಲ್ಲಿ ಮೀನಿನಂತೆ ಸಾರಾಸಗಟಾಗಿ ಈಜಬಲ್ಲ. ಸುಡುವ ಅಗ್ನಿಯ ಕೆನ್ನಾಲಿಗೆಯಲ್ಲಿ ಮೋಜಿನಾಟವನ್ನೂ ಆಡಬಲ್ಲ. ನಿರ್ವಾತ ಪ್ರದೇಶವಾದ ಅಂತರಿಕ್ಷಕ್ಕೂ ಒಂದೇ ಓಟಕ್ಕೆ ನೆಗೆಯಬಲ್ಲ ಅಸಾಧಾರಣ ಶಕ್ತಿಯೇ ಜಗತ್ತಿನ ಕೋಟಿ ಜೀವರಾಶಿಗಳಲ್ಲಿ ಒಬ್ಬನಾದ ಮಾನವ.
ಇಂತಹ ಸಂಘಜೀವಿ, ಸಮಾಜಜೀವಿ, ಬುದ್ಧಿಜೀವಿ ಮಾನವ, ಇಂದು ತಂತ್ರಜ್ಞಾನದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾನೆ. ಮಾನವೀಯ ಸಂಬಂಧಗಳಿಂದ ಅನಂತ ದೂರದಲ್ಲಿದ್ದಾನೆ. ಪ್ರಸ್ತುತ ಜಗತ್ತಿನಲ್ಲಿ ಮಾನವನೋರ್ವ ಯಾಂತ್ರಿಕ ಶಕ್ತಿಯ ಪ್ರತೀಕ. ತಂದೆ ತಾಯಿಯರ ಸಂಬಂಧ, ಅಣ್ಣ ತಮ್ಮ , ಅಕ್ಕ ತಂಗಿಯರ ಸಂಬಂಧ, ಹಿರಿಯ ಕಿರಿಯರ ಸಂಬಂಧ, ಕೌಟುಂಬಿಕವಾಗಿ ಇತರ ಬಂಧುಗಳ ಸಂಬಂಧಗಳೆಲ್ಲವೂ ಆತನಿಂದ ಬಹುದೂರವಾಗಿಬಿಟ್ಟಿದೆ. ಗಿಡ ಮರ ಪಶುಪಕ್ಷಿಗಳೆಲ್ಲವೂ ಪರಿಸರದ ಅವಿಭಾಜ್ಯ ಅಂಗಗಳೇ ಎಂಬುದು ಆತನ ತಂತ್ರಜ್ಞಾನವೆಂಬ ಜಗತ್ತಿನಿಂದ ಬಹಳಷ್ಟು ದೂರದಲ್ಲಿದೆ.
ಬಂಧುಗಳೇ ಕೆಲಹೊತ್ತು ಯೋಚಿಸಿ. ಬಲಿಷ್ಠ ಸಮಾಜದ ನಿರ್ಮಾತೃಗಳಾದ ವಿದ್ಯಾರ್ಥಿಗಳೇ ಇಂದಿನ ಸಮಾಜದ ಸಂಬಂಧಗಳನ್ನು ಮರೆತು ವ್ಯಾಟ್ಸಾಪ್, ಫೇಸ್‌ಬುಕ್, ಇ- ಮೇಲ್, ಸಂದೇಶಗಳ ನಿರೀಕ್ಷೆಗಳಲ್ಲೇ ತಮ್ಮ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಗೃಹಿಣೀ ಗೃಹಮುಚ್ಯತೇ ಎಂಬ ಸಂಸ್ಕೃತವಾಣಿಗೆ ಪುಷ್ಠಿ ನೀಡುವ ಮಹಿಳೆಯರು ಗಂಟೆಗಟ್ಟಲೆ ದೂರದರ್ಶನವೆಂಬ ಮೂರ್ಖರ ಪೆಟ್ಟಿಗೆಯತ್ತ ಮುಖ ಮಾಡಿ ಸೀರಿಯಲ್‌ಗಳ ದಾಸರಾಗಿದ್ದಾರೆ. ಗಂಡ ಮಕ್ಕಳ ಅತ್ತೆ ಮಾವ ತನ್ನ ಕುಟುಂಬ ಇದಾವುದೂ ಆಕೆಯತ್ತ ಸುಳಿಯುವುದೇ ಇಲ್ಲ.
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಲ್ಲಿ ನಾರಿಯರನ್ನು ಗೌರವಿಸಲಾಗುತ್ತದೋ ಅಲ್ಲಿ ದೇವರ ಅಸ್ತಿತ್ವವನ್ನು ಕಾಣಬಹುದು ಎಂಬ ಮಾತೀಗ ಬದಲಾಗಿದೆ. ದುಡಿಯುವ ಕೈಗಳೆಲ್ಲವೂ ಲ್ಯಾಪ್‌ಟ್ಯಾಪ್ ಕಂಪ್ಯೂಟರ್‌ಗಳೆಂಬ ಪರದೆಯ ಮೇಲೆ ಪೈಪೋಟಿ ನಡೆಸುತ್ತಿದೆ. ಎತ್ತು-ಕೋಣಗಳ ಸಹಾಯ ಪಡೆದು ಹೊಲದಲ್ಲಿ ಬೆವರು ಸುರಿಸಿ ದುಡಿಯುವ ರೈತನ ಕಾಲವು ಬದಲಾಗಿ ಟಿಲ್ಲರ್ ಟ್ರ್ಯಾಕ್ಟರ್‌ಗಳೇ ಹೊಲಗದ್ದೆಗಳಲ್ಲಿ ತಾಂಡವವಾಡುತ್ತಿರುವುದು ಗಮನಾರ್ಹವಾದ ಸಂಗತಿ. ಬಟ್ಟೆ ಒಗೆಯುವ ಕೈಗಳಿಂದು ವಾಷಿಂಗ್ ಮಿಷನ್‌ನ ದಾರಿಹಿಡಿದಿದೆ. ಅರೆಯುವ ಕೈಗಳು ಮಿಕ್ಸಿ ಗ್ರೈಂಡರ್‌ನ ಮೊರೆಹೋಗಿವೆ.
ಹೀಗೆ ತಂತ್ರಜ್ಞಾನಗಳ ಸುಳಿಯಲ್ಲಿ ಮಾನವೀಯ ಸಂಬಂಧಗಳು ಅವನತಿಯತ್ತ ಸಾಗುವುದಲ್ಲದೇ ಮಾನವನ ಆರೋಗ್ಯದ ಏರುಪೇರುಗಳಿಗೂ ಬಲವಾದ ಏಟುನೀಡಿದೆ. ಮೈಮುರಿಯುವ ಕೆಲಸಗಳಿಂದ ವಿಮುಕ್ತನಾದ ಮಾನವ ತಾನು ಐಷಾರಾಮದ ಜೀವನ ನಡೆಸುತ್ತೇನೆಂದು ಕೊಂಡರೂ, ಗುಣಪಡಿಸಲಾಗದಂತಹ ಕಾಯಿಲೆಗಳಿಂದ ತತ್ತರಿಸುತ್ತಿದ್ದಾನೆ.
ಸ್ಪರ್ಧಾತ್ಮಕವಾದ ತಾಂತ್ರಿಕ ಜಗತ್ತಿನಲ್ಲಿ ಬಹಳಷ್ಟು ತರಾತುರಿಯಲ್ಲಿರುವ (ಬ್ಯುಸಿ) ಮಾನವನಿಂದ ನಗುವೆಂಬುದೇ ಅಪರೂಪ. ಮನೆಯವರೊಂದಿಗೆ ಅಪರೂಪದ ಹಬ್ಬಗಳಲ್ಲಿ ಪಾಲ್ಗೊಳ್ಳುವುದೂ ವಿರಳ. ತಾಯಿಗೆ ತನ್ನ ಮಗುವಿನೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವುದೇ ಅಲ್ಲದೇ ಎಳೆಯ ಕಂದಮ್ಮನಿಗೆ ಹಾಲುಣಿಸುವುದು ವೇಳಾಪಟ್ಟಿಯಿಂದ ದೂರವಾದ ಸಬ್ಜೆಕ್ಟ್‌ಗಳು. ಇಂಟರ್‌ನೆಟ್ ಟಿ.ವಿ. ಗಳ ಗದ್ದಲದಿಂದ ಅಜ್ಜಿಹೇಳುವ ಕಥೆಗಳು ಮಂಗಮಾಯ. ಲಾಲಿ ಹಾಡುತ್ತಾ ತೊಟ್ಟಿಲು ತೂಗುವ ಕೈಗಳ ಬದಲು ಮಗುವಿನ ಜೊಂಪೆಗೆ ಮೊಬೈಲ್ ಹಾಡುಗಳೇ ಸೌಭಾಗ್ಯವಾಗಿಬಿಟ್ಟಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಗಳೆಂಬ ಬೀಜವನ್ನು ಬಿತ್ತಿ ತಪ್ಪನ್ನು ತಿದ್ದಿ ಮನ್ನಿಸುವ ಗುರುಗಳಿಂದ ದೂರಾದ ಮಕ್ಕಳು ಸ್ಮಾರ್ಟ್ ಕ್ಲಾಸ್‌ಗೆ ಬಲಿಯಾಗಿದ್ದಾರೆ.
ಮಕ್ಕಳಿಗೆ ತನ್ನ ಕುಟುಂಬದ ಸದಸ್ಯರ ಪರಿಚಯಗಳಿಲ್ಲ. ಪಕ್ಕದ ಮನೆಯವರ ಒಡನಾಟದ ಗಂಧಗಾಳಿ ಇಲ್ಲ. ಸಂಬಂಧಗಳೆಲ್ಲವೂ ಬರಿಯ ಯಾಂತ್ರಿಕತೆ. ಪ್ರೀತಿ, ವಾತ್ಸಲ್ಯ, ಮದುವೆ, ದಯೆ, ಅನುಕಂಪ ಸಹಾನುಭೂತಿಗಳೆಲ್ಲವೂ ಪ್ರಸ್ತುತ ತಂತ್ರಜ್ಞಾನ ಯುಗದಿಂದ ಕಾಲ್ಕಿತ್ತಿವೆ. ಬಾರದ ಲೋಕಕ್ಕೆ ತನ್ನ ಪಯಣವನ್ನು ಬೆಳೆಸಿದೆ.
ತಾಂತ್ರಿಕ ಜಗತ್ತಿನೊಂದಿಗೆ ಮಾನವೀಯ ಸಂಬಂಧಗಳೂ, ತೀರಾ ಅಗತ್ಯ. ಮಾನವನ ತಿಳಿಯಾದ ಬದುಕಿನಲ್ಲಿ ಸಂಬಂಧಗಳ ಸೆಲೆಯೂ ತೀರಾ ಅವಶ್ಯಕ. ಮತ್ತೆ ನಾವು ತಂತ್ರಜ್ಞಾನವೆಂಬ ಸುಳಿಯಲ್ಲಿ ಸಿಕ್ಕಿ ನಲುಗಿದ ಸಂಬಂಧಗಳನ್ನು ಬೆಳೆಸುವ ಕಾರ್‍ಯತತ್ಪರತೆಯನ್ನು ಬೆಳೆಸಿಕೊಳ್ಳೊಣ.
ಭವ್ಯ ಕೆ. ಸಹಶಿಕ್ಷಕಿ, ಎಸ್.ಎಸ್.ವಿ.ಕೆ. ಚೊಕ್ಕಾಡಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.