Breaking News

ಸಂತೃಪ್ತಿಗೆ ಮಿಗಿಲಾದ ಸಾರ್ಥಕತೆಯಿಲ್ಲ : ಧರ್ಮಪಾಲ ಎಣ್ಣೆಮಜಲು

Advt_Headding_Middle
Advt_Headding_Middle
ಸುಳ್ಯ ತಾಲೂಕಿನ ಎಣ್ಣೆಮಜಲು ಮರಿಯಪ್ಪಗೌಡ, ಕಿನ್ನಿಕುಮೇರಿ ಶೇಷಮ್ಮ ದಂಪತಿಯ 6ಗಂಡು, 1 ಹೆಣ್ಣುಮಕ್ಕಳ ಪೈಕಿ ಹಿರಿಯವರೇ ಎಣ್ಣೆಮಜಲು ಧರ್ಮಪಾಲರು. ಎಣ್ಣೆಮಜಲು ಪ್ರಾಥಮಿಕ ಶಾಲೆ ಬಳ್ಪ, ಪಂಜ ಪ್ರೌಢಶಾಲೆ, ಕುಕ್ಕೆಸುಬ್ರಹ್ಮಣ್ಯದ ಕಿರಿಯ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಬಳಿಕ ಸುಳ್ಯ ಕಿರಿಯ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದರು. ಮುಂದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ, ಹಾಗೂ ಆಂಗ್ಲಭಾಷೆಯಲ್ಲಿ ಮೈಸೂರು ವಿ.ವಿ.ಯ. ಎಂ.ಎ ಪದವಿ ಪಡೆದು, ಬೆಂಗಳೂರಿಗೆ ಬಂದು ಎಲ್.ಎಲ್.ಬಿ ಮಾಡಿದರು. ಬೆಂಗಳೂರಿನಲ್ಲಿ ನೆಲಸಿ, ಉಚ್ಚನ್ಯಾಯಾಲದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಇವರು, ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳ ಮೂಲಕ ಒಬ್ಬ ಆದರ್ಶ ನಾಗರಿಕರಾಗಿ ಜನಪ್ರಿಯರಾಗಿದ್ದಾರೆ. ಶಿಕ್ಷಕಿಯಾಗಿದ್ದ ಪತ್ನಿ ಶ್ರೀಮತಿ ಬಿಂದು, ಆಸ್ಟ್ರೇಲಿಯಾದಲ್ಲಿ ಎಂ.ಎಸ್ ಓದುತ್ತಿರುವ ಮಗ ಧನುಷ್ ಹಾಗೂ ಕಾನೂನು ಪದವಿ ಓದುತ್ತಿರುವ ಇನ್ನೊಬ್ಬ ಮಗ ಅಂಕುಶ್‌ರೊಂದಿಗೆ ಸಂತೃಪ್ತಿಯ ಬದುಕು ನಡೆಸುತ್ತಿರುವ ನ್ಯಾಯವ್ಯಾದಿ ಧರ್ಮಪಾಲರು ಮನಬಿಚ್ಚಿ ಮಾತನಾಡಿದಾಗ..

dharmapala ennemajalu

 •  ನಿಮಗೆ ಇತ್ತೀಚೆಗೆ ವಿಶ್ವ ವೀರ ಶೈವ ಸಾಂಸ್ಕೃತಿಕ ಪ್ರತಿಷ್ಠಾನದವರು ಹಾಗೂ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯವರು “ಜಗಜ್ಯೋತಿ ಶ್ರೀ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ” ನೀಡಿ ಗೌರವಿಸಲು ಕಾರಣವೇನು?
  ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಾ ಬಂದಿರುವ ವಿವಿಧ ಕಾರ್ಯಕ್ಷೇತ್ರಗಳ ವ್ಯಕ್ತಿಗಳನ್ನು ಗುರುತಿಸಿ ಅವರು ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ನಾನು ನನ್ನ ಮನಸ್ಸಿನ ತುಡಿತದಿಂದಾಗಿ ಒಂದಷ್ಟು ಸೇವಾ ಕಾರ್ಯಗಳನ್ನು ಮಾಡಿದ್ದೇನೆ. ಈ ವರ್ಷ ಅವರು ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ನನ್ನ ಭಾಗ್ಯವೆಂದು ತಿಳಿದಿದ್ದೇನೆ. ಶ್ರೀ ಬಸವಣ್ಣನವರ ಹೆಸರಲ್ಲಿರುವ ಪ್ರಶಸ್ತಿಯ ಮೂಲಕ ನನ್ನೊಳಗಿನ “ಕಾಯಕ”ದ ಸಾಮರ್ಥ್ಯ ಇನ್ನಷ್ಟು ಹೆಚ್ಚಿದೆ ಎಂಬುದಂತೂ ಸತ್ಯ.(ವಕೀಲ ಎಣ್ಣೆಮಜಲು ಧರ್ಮಪಾಲರಿಗೆ ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿ )
 •  ನಿಮ್ಮ ಸಾಮಾಜಿಕ ಕಳಕಳಿಯ ಕೆಲವು ಕಾರ್ಯಗಳ ಬಗ್ಗೆ ತಿಳಿಸುವಿರಾ?
  ಉಚ್ಚ ನ್ಯಾಯಾಲಯದಲ್ಲಿ ಅನೇಕ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸಿದ್ದೇನೆ. ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪನವರು ಕಾನೂನು ಬಾಹಿರವಾಗಿ ಕರ್ನಾಟಕ ಬಂದ್ ಮಾಡಿಸಿದ್ದರ ವಿರುದ್ಧ ಕ್ರಿಮಿನಲ್ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದ್ದೇನೆ. ಜನರ ತೆರಿಗೆಯ ಕೋಟ್ಯಂತರ ರೂಪಾಯಿಗಳು ಪೋಲಾಗುವುದರ ವಿರುದ್ಧ ಸೆಟೆದು ನಿಲ್ಲುವುದು ನನ್ನ ಉದ್ದೇಶವಾಗಿತ್ತು. ಉಪಮುಖ್ಯಂತ್ರಿಯನ್ನೇ ಕಟಕಟೆಗೆ ಕರೆಸುವುದು ಅನಿವಾರ್ಯವಾಯಿತು.
  ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ಜೈಲಿಗೆ ಅಟ್ಟಿದ್ದ ನ್ಯಾಯಮೂರ್ತಿ ಡಿ.ಕುನ್ಹರವರ ಬಗ್ಗೆ ಅವಹೇಳನಕಾರಿಯಾಗಿ ಠರಾವು ಮಂಡಿಸಿದ್ದ ವೆಲ್ಲೂರಿನ ಮೇಯರ್ ವಿರುದ್ಧ “ನ್ಯಾಯಾಲಯ ನಿಂದನಾ ಮೊಕದ್ದಮೆ” ಹೂಡಿ ಅವರ ಕ್ಷಮಾಯಾಚನೆಯವರೆಗೂ ಹೋರಾಡಿದ್ದೇನೆ. ಕನ್ನಡ ಚಿತ್ರನಟಿ ಶ್ರುತಿಯವರು ಮಹೇಂದರ್‌ರಿಂದ ವಿಚ್ಛೇದನ ಪಡೆದುಕೊಂಡು, ಚಂದ್ರಚೂಡರನ್ನು ಮದುವೆಯಾದಾಗ ಚಂದ್ರಚೂಡರವರ ಪತ್ನಿ ಮಂಜುಳಾರವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಧಾನವಹಿಸಿದ್ದೇನೆ.
  ಇವೆಲ್ಲ ನನಗೆ ಆರ್ಥಿಕವಾಗಿ ಏನೇನೂ ಲಾಭದಾಯಕವಲ್ಲದಿದ್ದರೂ ಒಂದು ಉದ್ದೇಶಕ್ಕಾಗಿ ಕಾನೂನು ಹೋರಾಟ ನಡೆಸಲೇಬೇಕು ಎಂಬುದು ನನ್ನ ಆಶಯವಾಗಿತ್ತು. ಕಡುಬಡವರ ಅನೇಕ ಮೊಕದ್ದಮೆಗಳನ್ನು ಉಚಿತವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿ ಗೆಲುವು ಪಡೆದ ತೃಪ್ತಿ ನನಗಿದೆ.
 •  ವೆಲ್ಲೂರಿನ ಮೇಯರ್ ಕಾತ್ಸಯನಿಯವರಿಗೆ ನಾಗರಿಕರಾಗಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಹಕ್ಕು ಇತ್ತಲ್ಲವೆ?
  ನ್ಯಾಯಾಲದ ತೀರ್ಪನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗೆ ಇದೆ. ಆದರೆ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿಯಾಗಿ, ಕ್ಷುಲ್ಲಕವಾಗಿ ಮಾತನಾಡುವುದು ಬರೆಯುವುದು ಸಂವಿಧಾನ ವಿರೋಧಿಯಾಗುತ್ತದೆ.
 • ಬಡತನದ ಕುಟುಂಬದಿಂದ ಬಂದ ನಿಮಗೆ ಈಗ ದೊರಕಿರುವ ಜನಪ್ರಿಯತೆ ಯಾವ ಅನುಭವವನ್ನು ಕೊಟ್ಟಿದೆ?
  ನಾನು ಕಡುಬಡತನದಲ್ಲೇ ಬೆಳೆದವನಾದ್ದರಿಂದ ಈಗಲೂ ಬಡವರ ಬಗ್ಗೆ ಅತ್ಯಂತ ಆದರ, ಸಹಾನುಭೂತಿ ಹೊಂದಿದ್ದೇನೆ. ಅವರಿಗಾಗಿ ಒಂದಷ್ಟು ಸಹಾಯ ಮಾಡುವಾಗ ಸಿಗುವ ಸಂತೃಪ್ತಿಯು ಜೀವನದ ಸಾರ್ಥಕತೆಯ ಭಾವನೆಯನ್ನು ಉಂಟು ಮಾಡುತ್ತದೆ. ಅಂತಿಮವಾಗಿ ಜೀವನದಲ್ಲಿ ಉಳಿಯುವುದು ಅದೇ ಅಲ್ಲವೇ.?
 • ನಿಮ್ಮ ವೃತ್ತಿ ಜೀವನದಲ್ಲಿ ಪ್ರಭಾವ ಬೀರಿದವರು ಯಾರು?
  ನನ್ನ ಬಾಲ್ಯ, ವಿದ್ಯಾಭ್ಯಾಸ ಹಾಗೂ ವೃತ್ತಿ ಜೀವನದಲ್ಲಿ ಅನೇಕ ವ್ಯಕ್ತಿಗಳ ಪ್ರಭಾವವಿದೆ. ವಿಶೇಷವಾಗಿ ನನ್ನ ಬದುಕಿಗೆ ಒಂದು ಗುರಿಯನ್ನು ರೂಪಿಸಿದವರೆಂದರೆ ಹಿರಿಯರಾದ ನ್ಯಾಯವಾದಿ ಎಂ.ಆರ್. ಜನಾರ್ಧನ್, ನ್ಯಾಯವಾದಿ ಎಂ.ಟಿ.ನಾಣಯ್ಯ, ನ್ಯಾಯವಾದಿ ಜಿ. ಬಾಲಕೃಷ್ಣ ಶಾಸ್ತ್ರೀ ಇವರೆಲ್ಲರನ್ನೂ ಎಂದಿಗೂ ಮರೆಯಲಾರೆ. 
 • ನಿಮ್ಮ ಇತರ ಚಟುವಟಿಕೆಗಳು ಏನೇನು?
  ನನ್ನ ಕಾನೂನು ರಂಗವನ್ನು ಬಿಟ್ಟು ಬೇರೆ ಕಡೆ ಗಮನ ಹರಿಸುವಷ್ಟು ಸಮಯ ಸಿಗುತ್ತಿಲ್ಲ. ಮೊದಲಿನಿಂದಲೂ ಈಜುವಿಕೆ ನನ್ನ ಆಸಕ್ತಿಯ ವಿಷಯ. ಕೆಲವು ವರ್ಷದ ಹಿಂದೆ ರಾಜ್ಯಮಟ್ಟದ ಮುಕ್ತ ಈಜು ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದೆ. ಸ್ನೇಹಕೂಟಗಳಲ್ಲಿ ನಗೆಬುಗ್ಗೆ ಚಿಮ್ಮಿಸುವ ಪ್ರಹಸನಗಳನ್ನು ನಡೆಸುತ್ತೇನೆ. ಎಲ್ಲರೊಡನೆ ಸಾಮರಸ್ಯದ ಬದುಕು ನನಗೆ ಅತ್ಯಂತ ಪ್ರಿಯವಾದದ್ದು

– ಲಕ್ಷ್ಮೀಶ ಕಾಟುಕುಕ್ಕೆ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.