ವನ್ಯಧಾಮ ಸೂಕ್ಷ್ಮ ವಲಯಕ್ಕೆ ಕಲ್ಮಕಾರು ಮತ್ತು ಬಾಳುಗೋಡು ಗ್ರಾಮಗಳ ಕೆಲ ಭಾಗಗಳನ್ನು ಸೇರಿಸಿರುವ ವಿಚಾರಕ್ಕೆ ಸಂಬಧಿಸಿ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ಸ್ಥಳೀಯರ ಹೋರಾಟದ ಸಭೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಹರಿಹರೇಶ್ವರ ದೇವಾಲಯದ ಸಭಾಭವನದಲ್ಲಿ ಆರಂಭಗೊಂಡಿದೆ.
ವೈಲ್ಡ್ಲೈಫ್ ಅಧಿಕಾರಿಗಳನ್ನು ಸಚಿವರು ಕರೆಸಿಕೊಂಡು ಸಂಪೂರ್ಣ ಯೋಜನೆಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಿದ್ದು, ಸಾಧಕ ಬಾಧಕಗಳ ಕುರಿತು ಚರ್ಚೆ ಆರಂಭಗೊಂಡಿದೆ. ಸಚಿವರ ಎದುರೇ ವೈಲ್ಡ್ ಲೈಫ್ ಅಧಿಕಾರಿಗಳಿಂದ ಬಾಧಿತ ಗ್ರಾಮಗಳನ್ನು ಯೋಜನೆಯ ವ್ಯಾಪ್ತಿಗೆ ತರದಂತೆ ಮಾಡುವುದು ಗ್ರಾಮಸ್ಥರ ಉದ್ದೇಶವಾಗಿದ್ದು ಸಚಿವರ ನೇತೃತ್ವದ ಸಭೆ ಕುತೂಹಲ ಕೆರಳಿಸಿದೆ.
ಹರಿಹರಕ್ಕೆ ತೆರಳುವ ಮುನ್ನ ಸಚಿವರು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಮುಖಂಡರೊಂದಿಗೆ ಚರ್ಚಿಸಿದರು. ಸುಳ್ಯ ಶಾಸಕ ಎಸ್.ಅಂಗಾರ, ಜಿ.ಪಂ. ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರಾದ ಎ.ವಿ.ತೀರ್ಥರಾಮ, ನವೀನ್ ರೈ ಮೇನಾಲ, ತಾಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಮತ್ತಿತರರಿದ್ದರು.