ಮಂಗಳೂರಿನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನ

0

* ಸಾಮಾಜಿಕ ಹೊಣೆಗಾರಿಕೆ ಪತ್ರಿಕೋದ್ಯಮದಲ್ಲಿ ಅತೀ ಮುಖ್ಯ-ಡಾ. ರಾಜೇಂದ್ರ ಕೆ.ವಿ.

ಮಂಗಳೂರು: ಪತ್ರಕರ್ತರು ತನಿಖಾ ವರದಿಗಾರಿಕೆಯೊಂದಿಗೆ ಸಾಮಾಜಿಕ ಹೊಣೆಗಾರಿಕೆ ಯನ್ನು ಅರಿತು ಕಾರ್ಯ ನಿರ್ವಹಿಸಿದಾಗ ಸಮಾಜಕ್ಕೆ ದೊರೆಯುವ ಫಲಿತಾಂಶ ಉತ್ತಮವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ. ೨೮ರಂದು ನಡೆದ ಜಿಲ್ಲಾ ಪತ್ರಕರ್ತರ ಸಮ್ಮೇಳನ ‘ಸಾಧನೆ ಸಂಭ್ರಮ-2021’ರ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು. ಎಲ್ಲಾ ರಂಗದಲ್ಲೂ ಭ್ರಷ್ಟಾಚಾರ ಸಾಮಾನ್ಯ ಎಂಬಂತಾಗಿದೆ. ಜನತೆ ಇರಿಸಿಕೊಂಡಿರುವ ನಂಬಿಕೆಯನ್ನು ಉಳಿಸುವ ಜವಾಬ್ದಾರಿ ಮಾಧ್ಯಮ ಮೇಲಿದೆ ಎಂದರು. ರಾಜ್ಯದ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ದ.ಕ ಜಿಲ್ಲೆಯಂತಹ ಕ್ರಿಯಾಶೀಲ ಪತ್ರಕರ್ತರ ಬಳಗವನ್ನು ಈವರೆಗೂ ಎಲ್ಲೂ ಕಂಡಿಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸುದ್ದಿ ಬಿಡುಗಡೆಯ ನಾಲ್ವರಿಗೆ ಸನ್ಮಾನ : ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಬಾಲಕೃಷ್ಣ ಪುತ್ತಿಗೆ, ಸಾಂತೂರು ಶ್ರೀನಿವಾಸ ತಂತ್ರಿ, ಕೆ.ಜಾನ್, ಕೆ.ಪಿ. ಮಂಜುನಾಥ್, ಬಿ.ಶಿವಪ್ರಸಾದ್, ವಿದ್ಯಾಧರ್ ಶೆಟ್ಟಿ, ರಘುನಾಥ ಎಂ ವರ್ಕಾಡಿ, ಶಶಿಧರ ರೈ, ಕೃಷ್ಣ ಬೆಟ್ಟ, ಸತೀಶ್ ಕಲ್ಮಾಡಿ, ರಾಜೇಶ್ ನಾಯ್ಕ್, ಸುದ್ದಿ ಬಿಡುಗಡೆಯ ಜಿಲ್ಲಾ ವರದಿಗಾರ ಭಾಸ್ಕರ್ ರೈ ಕಟ್ಟ, ಸುಳ್ಯ ಸುದ್ದಿ ಬಿಡುಗಡೆಯ ಕೃಷ್ಣಬೆಟ್ಟ, ಬೆಳ್ತಂಗಡಿ ಸುದ್ದಿ ಬಿಡುಗಡೆಯ ಜಾರಪ್ಪ ಪೂಜಾರಿ ಮತ್ತು ಪುತ್ತೂರು ಸುದ್ದಿ ಬಿಡುಗಡೆಯ ಸಿದ್ದೀಕ್ ನೀರಾಜೆರವರನ್ನು ಸನ್ಮಾನಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಹಾಗೂ ಇತರ ಗಣ್ಯರು ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಹೃಷಿಕೇಶ್ ಭಗವಾನ್ ಮಾತನಾಡಿ, ದ.ಕ.ಜಿಲ್ಲಾ ಪತ್ರಕರ್ತರು ಸಕ್ರಿಯವಾಗಿರುವುದಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ಪೊಲೀಸ್ ಉಪಆಯುಕ್ತ ಹರಿರಾಂ ಶಂಕರ್ ಮಾತನಾಡಿ, ಮಾಧ್ಯಮ ಮತ್ತು ಪೊಲೀಸರಿಂದ ಸಮಾಜ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಪೊಲೀಸ್ ಇಲಾಖೆ ಸೇರಿದಂತೆ ವ್ಯವಸ್ಥೆ ಯಲ್ಲಿ ತಪ್ಪಾದ ಸಂದರ್ಭ ಎಚ್ಚರಿಸಿ ಚುರುಕು ಮುಟ್ಟಿಸುವ ಕೆಲಸವನ್ನು ಮಂಗಳೂರು ಪತ್ರಕರ್ತರು ಮಾಡುತ್ತಿದ್ದಾರೆ ಎಂದರು. ಕೆನರಾ ಬ್ಯಾಂಕ್‌ನ ಡಿಜಿಎಂ ಯೋಗೀಶ್ ಆಚಾರ್ಯ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಸರ್ವಾಧ್ಯಕ್ಷತೆ ವಹಿಸಿದ್ದ ಮನೋಹರ್ ಪ್ರಸಾದ್ ಈ ವೇಳೆ ಮಾತನಾಡಿ, ನನ್ನ ವೃತ್ತಿ ಜೀವನದ ದೊಡ್ಡ ಗೌರವ ಇದು ಎಂದು ಹೇಳಿದರು. ಸದ್ಯದಲ್ಲಿ ನನ್ನ ಪುಸ್ತಕಗಳು ಬಿಡುಗಡೆಯಾಗಲಿದೆ ಎಂದರು. ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನದ ಅಧ್ಯಕ್ಷ ರಾಮಕೃಷ್ಣ ಮತ್ತು ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಭಿನಂದನಾ ಭಾಷಣ ಮಾಡಿದರು. ಆರ್.ಸಿ. ಭಟ್ ಸನ್ಮಾನ ಪತ್ರ ವಾಚಿಸಿದರು. ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರೆ ವಂದಿಸಿದರು.

ಪತ್ರಕರ್ತರ ಜಿಲ್ಲಾ ಸಮ್ಮೇಳನಕ್ಕೆ ಅದ್ದೂರಿ ಚಾಲನೆ : ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಮತ್ತು ಪತ್ರಕರ್ತರ ಸಂಘದ ಪಾತ್ರ ಅನನ್ಯವಾದುದು ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಮ್ಮೇಳನ ‘ಸಾಧನೆ ಸಂಭ್ರಮ-೨೦೨೧’ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿಯಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಲವು ಮಂದಿ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ಪ್ರೇರಣೆಯಾಗಿದೆ. ಬ್ರಾಂಡ್ ಮಂಗಳೂರು ಎಂಬ ಆಶಯದೊಂದಿಗೆ ಅಪೂರ್ವ ಮಾದರಿಯನ್ನು ನೀಡಿದೆ ಎಂದು ಕಾಮತ್ ಹೇಳಿದರು. ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪತ್ರಕರ್ತರು ಅಭೂತಪೂರ್ವವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.ಕಾರ್ಮಿಕ ಇಲಾಖೆ ನೀಡುವ ಕಿಟ್ ವಿತರಣೆಯನ್ನು ಅವರು ನೆರವೇರಿಸಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ ಕನ್ನಡ ನಾಡು, ನುಡಿ, ಜಲ, ನೆಲ ಭಾಷೆಯ ಬಗ್ಗೆ ಅಭಿಮಾನ ಯಾವತ್ತೂ ಕಡಿಮೆ ಆಗಬಾರದು. ನೆಲ, ಜಲ, ನಾಡು ನುಡಿಯ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ‘ಸಿರಿಗನ್ನಡಂ ಗೆಲ್ಗೆ’ ಹಾಡನ್ನು ಹಾಡುವ ಮೂಲಕ ಅವರು ಸಮಾರಂಭಕ್ಕೆ ಶುಭ ಹಾರೈಸಿದರು.

 ಜಿಲ್ಲಾ ಸಂಘದ ಮೂರು ವರ್ಷಗಳ ಪ್ರಗತಿಯ ವಿವರಗಳನ್ನು ಒಳಗೊಂಡ ವಿಶೇಷ ಸಂಚಿಕೆ ‘ಸಾಧನೆ’ ಯನ್ನು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಿಡುಗಡೆ ಮಾಡಿದರು. ಮನೋಹರ ಪ್ರಸಾದರ `ಭಾವಚಿತ್ರ ಯಾನ’ ಪುಸ್ತಕವನ್ನು ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಬಿಡುಗಡೆಗೊಳಿಸಿ ಮಾತನಾಡಿದರು.

ಪುಸ್ತಕ, ಸಮವಸ್ತ್ರ ವಿತರಣೆ : ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು ಮಡಪ್ಪಾಡಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿರವರು ಕುತ್ಲೂರು ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆಯನ್ನು ಮಾಡಿದರು. ಪತ್ರಿಕಾಭವನ ಟ್ರಸ್ಟ್ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ಪಡುಬಿದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಾಳ ಜಗನ್ಬಾಥ ಶೆಟ್ಟಿ ಸ್ವಾಗತಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೈಮ್ ರಾಮದಾಸ್ ಬಳಗದಿಂದ ಸಾಂಸ್ಕೃತಿಕ ವೈಭವ ಮತ್ತು ರಾಜೇಶ್ ಮಳಿ ಹಾಗೂ ಶುಭಾ ರಾಜೇಶ್ ಮಳಿ ಬಳಗದಿಂದ ಜಾದೂ ಪ್ರದರ್ಶನ ನಡೆಯಿತು.

  • ಉದ್ಘಾಟನಾ ಸಮಾರಂಭದ ಮೊದಲು ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಗಳು ಸೇರಿದಂತೆ ಪ್ರಮುಖ ಪತ್ರಿಕೆಗಳ ಪ್ರತಿಗಳು, ಪುಸ್ತಕಗಳಿಂದ ತುಂಬಿದ ಪಲ್ಲಕಿಯೊಂದಿಗೆ ಅತಿಥಿ ಗಣ್ಯರನ್ನು ಸಭಾಂಗಣದೊಳಕ್ಕೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮಾಧ್ಯಮಗಳ ಬೆಂಬಲ ಅಗತ್ಯ-ಡಾ.ಯು.ಪಿ. ಶಿವಾನಂದ
ಸುದ್ದಿ ಬಿಡುಗಡೆ ಬಳಗದ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಜನ ಸಾಮಾನ್ಯರ ಮತ್ತು ಮಾಧ್ಯಮಗಳ ಬೆಂಬಲ ಅಗತ್ಯ ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನದ ಪ್ರಯುಕ್ತ ‘ಮಾಧ್ಯಮ-ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಚಾರದ ಕುರಿತು ಏರ್ಪಡಿಸಲಾಗಿದ್ದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ೩೭ ವರ್ಷಗಳಿಂದ ಪತ್ರಿಕೆ ನಡೆಸುತ್ತಿರುವ ನಾವು ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಬಲಾತ್ಕಾರದ ಬಂದ್ ವಿರುದ್ಧ ನಡೆಸಿದ ಆಂದೋಲನ ಸಂಪೂರ್ಣ ಯಶಸ್ವಿಯಾಗಿದೆ, ಸುದ್ದಿ ಬಳಗದ ಆಂದೋಲನಕ್ಕೆ ವ್ಯಾಪಕ ಜನ ಬೆಂಬಲ ದೊರಕಿದೆ ಎಂದು ಹೇಳಿದ ಡಾ.ಯು.ಪಿ.ಶಿವಾನಂದರವರು ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಇನ್ನು ಮುಂದೆ ಬಲಾತ್ಕಾರದ ಬಂದ್ ನಡೆಯಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲಂಚ, ಭ್ರಷ್ಟಾಚಾರದಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸುದ್ದಿ ಬಳಗ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಸರಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಡೆಸಲಾಗುತ್ತಿರುವ ಹೋರಾಟಕ್ಕೆ ಜನಸಾಮಾನ್ಯರ ಬೆಂಬಲ ದೊರಕುತ್ತಿದೆ. ಮುಂದೆಯೂ ನಮ್ಮ ಹೋರಾಟಕ್ಕೆ ಜನಸಾಮಾನ್ಯರ ಮತ್ತು ಮಾಧ್ಯಮದವರ ಬೆಂಬಲ ಬೇಕಾಗಿದೆ ಎಂದ ಡಾ.ಶಿವಾನಂದರವರು ದುಡ್ಡಿಗಾಗಿ ಪತ್ರಿಕಾ ಮೌಲ್ಯವನ್ನು ಎಂದಿಗೂ ಮಾರುವುದಿಲ್ಲ ಎಂದರು. ಜಾಹೀರಾತನ್ನು ವರದಿಯ ರೂಪದಲ್ಲಿ ಪ್ರಕಟಿಸಲು ಆಫರ್ ಬರುತ್ತದೆ, ಆದರೆ ಯಾವುದೇ ಕಾರಣಕ್ಕೂ ಕಾಸಿಗಾಗಿ ನಮ್ಮನ್ನು ನಾವು ಮಾರಿಕೊಳ್ಳುವುದಿಲ್ಲ, ಜಾಹೀರಾತುದಾರರನ್ನು ಪ್ರೋತ್ಸಾಹಿಸಬೇಕು, ಅವರ ವರದಿಗಳಿಗೆ ಆದ್ಯತೆ ನೀಡಬೇಕು. ಹಾಗೆಂದು ಅವರ ತಪ್ಪುಗಳನ್ನು ಮುಚ್ಚಿಡಲು, ಅವರ ಮೈಕ್ ನಾವಾಗಲು ಸಾಧ್ಯವಿಲ್ಲ ಎಂದು ಡಾ.ಯು.ಪಿ. ಶಿವಾನಂದರವರು ಹೇಳಿದರು.

ಮೈಸೂರಿನ ಪ್ರಜಾನುಡಿಯ ಸಂಪಾದಕ ಲೋಕೇಶ್ ಕಾಯರ್ಗ, ಹಿರಿಯ ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಮತ್ತು ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ್ ವಿಚಾರ ಮಂಡಿಸಿದರು. ವಿಜಯ ಕರ್ನಾಟಕದ ಯು.ಕೆ.ಕುಮಾರನಾಥ್, ಹೊಸದಿಗಂತದ ಪ್ರಕಾಶ್ ಇಳಂತಿಲ, ವಾರ್ತಾಭಾರತಿಯ ಪುಷ್ಪರಾಜ ಬಿ.ಎನ್.,ಸಂಯುಕ್ತ ಕರ್ನಾಟಕದ ರಾಮಕೃಷ್ಣ, ಡೆಕ್ಕಾನ್ ಹೆರಾಲ್ಡ್ ನ ಹರ್ಷ, ಉದಯವಾಣಿಯ ಸುರೇಶ್ ಪುದುವೆಟ್ಟು,ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ ಮತ್ತಿತರರು ಭಾಗವಹಿಸಿದ್ದರು. ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ‘ಕರಾವಳಿ ಅಭಿವೃದ್ಧಿ’ ಎಂಬ ವಿಷಯದಡಿ ನಡೆದ ಪ್ರಥಮ ಗೋಷ್ಠಿಯಲ್ಲಿ ಡಾ.ದಯಾನಂದ ಪೈ ಮತ್ತು ಸತೀಶ್ ಪೈ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್, ಹಿರಿಯ ಪತ್ರಕರ್ತ ವೇಣುಶರ್ಮ ಮತ್ತು ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ಮಾಜಿ ಸಿಇಓ ಯತೀಶ್ ಬೈಕಂಪಾಡಿರವರು ವಿಚಾರ ಮಂಡಿಸಿದರು. ಡಾ. ಪ್ರಿಯ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here