ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ 100ಕ್ಕೂ ಅಧಿಕ ಪ್ರಶಸ್ತಿ ಪಡೆದು ದಾಖಲೆ

0
?????????????????????????????????????????????????????????????????????????????????????????????????????????????????????????????????????????????????????????????????????????????????????????????

ಗ್ರಾಮೀಣ ಪ್ರತಿಭೆಯ ತುಳುನಾಡ ಕ್ರೀಡಾ ಪ್ರೇಮ | ಕಂಬಳ ಓಟಗಾರನಾಗಿಯೂ ತರಬೇತಿ

ಕಡಬ: ಪ್ರತಿಭೆ ಎಂಬುದು ಯಾವುದೇ ವ್ಯಕ್ತಿಯಲ್ಲೂ ಕಾಣ ಸಿಗುವ ವಿಶೇಷ ಗುಣ. ಇಲ್ಲೊಬ್ಬ ಯುವಕ ತುಳುನಾಡಿನ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಸಾಧನೆಯ ನೂರಕ್ಕೂ ಅಧಿಕ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ತಿರುಮಲೇಶ್ವರ ಸಾಕೋಟೆ ಎಂಬ ಯುವಕ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಸಾಧನೆ ಮೆರೆದ ಗ್ರಾಮೀಣ ಪ್ರತಿಭೆ. ಇದೀಗ ಇವರು ಡಿ.೫ರಂದು ನೆಲ್ಯಾಡಿ ಹಾರ್ಪಳದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ತನ್ನ ೭೫ನೇ ಪಂದ್ಯದಲ್ಲಿ ಎರಡು ಪ್ರಶಸ್ತಿ ಪಡೆದು ತನ್ನ ಪ್ರಶಸ್ತಿ ಸಂಖ್ಯೆಯನ್ನು ೧೦೪ಕ್ಕೆ ಏರಿಸಿದ್ದಾರೆ.
ಸೋಲಿನೊಂದಿಗೆ ಪಾದಾರ್ಪಣೆ:
ತಿರುಮಲೇಶ್ವರ ಸಾಕೋಟೆ ಅವರು ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮೊದಲಿಗೆ ಭಾಗವಹಿಸಿದ್ದು ಕಾವಿನಮೂಲೆ ಎಂಬಲ್ಲಿ ಅಲ್ಲಿ ಯಾವುದೇ ಪ್ರಶಸ್ತಿ ಪಡೆಯಲು ಸಾಧ್ಯವಾಗದಿದ್ದರೂ ಛಲ ಬಿಡದ ಅವರು, ಮುಂದೆ ರೆಂಜಿಲಾಡಿಯ ನೂಜಿಬೈಲ್ ನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮೊದಲ ಪ್ರಶಸ್ತಿ ಪಡೆದು, ಬಳಿಕ ತುಳುನಾಡಿನ ಹಲವೆಡೆ ನಿರಂತರವಾಗಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಇದೀಗ ೧೦೪ ಪ್ರಶಸ್ತಿ ಪಡೆದು ಸಂಭ್ರಮಿಸಿ, ಸಾಧನೆ ಮೆರೆದಿದ್ದಾರೆ. ಈವರೆಗೆ ಸುಮಾರು ೭೫ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ತಿರುಮಲೇಶ್ವರ ಅವರು ಕೆಲವು ಕಡೆ ಸೋಲನ್ನು ಅನುಭವಿಸಿದ್ದಾರೆ. ಆದರೆ ಅವರು ತನ್ನ ಸಾಧನೆಯ ಛಲದಿಂದ ಯಾವುತ್ತೂ ಹಿಂದೆ ಸರಿದಿರಲಿಲ್ಲ.
ಕೆಸರು ಗದ್ದೆ ಕ್ರೀಡಾ ಕೂಟ:
ತುಳುನಾಡಿ ಅಪ್ಪಟ ಗ್ರಾಮೀಣ ಸೊಗಡಿನ ಇಲ್ಲಿನ ಸಂಸ್ಕೃತಿ ಪ್ರತೀಕ ಕೆಸರು ಗದ್ದೆ ಕ್ರೀಡಾಕೂಟ. ಕೆಸರು ಗದ್ದೆ ಕ್ರೀಡಾಕೂಟವು ಕೆಸರುಮಯ ಗದ್ದೆಯಲ್ಲಿ ನಡೆಯುವ ಕ್ರೀಡೆ. ಗದ್ದೆಯಲ್ಲಿ ಕೊಯ್ಲು ಮುಗಿದ ಬಳಿಕ ಬಿಡುವಿನಲ್ಲಿ ಈ ಕ್ರೀಡಾಕೂಟ ಸಂಘಟನೆಗಳ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತದೆ. ಕೆಸರು ಗದ್ದೆ ಓಟ, ಹಿಮ್ಮುಖ ಓಟ, ರಿಲೇ, ಗೋಣಿಚೀಲ ಓಟ, ಹಗ್ಗಜಗ್ಗಾಟ, ಕಬಡ್ಡಿ, ಮಡಿಕೆ ಒಡಿಯುವುದು, ನಿಧಿ ಶೋಧ, ಉಪ್ಪು ಮೂಟೆ ಸೇರಿದಂತೆ ಸುಮಾರು ೩೦ರಿಂದ ೫೦ ಬಗೆಯ ಸ್ಪರ್ಧೆಗಳು ಇಲ್ಲಿ ಆಯೋಜನೆಗೊಳ್ಳುತ್ತವೆ.
೨೬ ವರ್ಷದ ಯುವಕ ತಿರುಮಲೇಶ್ವರ ಸಾಕೋಟೆ ಅವರು ಅಂಗಡಿ ಉದ್ಯಮಿ ನಡೆಸುವ ಜತೆಗೆ ಕೃಷಿಕರಾಗಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲಿಯಾದರೂ ಈ ಕ್ರೀಡೆ ಆಯೋಜನೆ ಇದ್ದರೂ ಅಲ್ಲಿಗೆ ತೆರಳಿ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಅನಾವರಣಗೊಳಿಸುತ್ತಾರೆ. ಪ್ರಸ್ತುತ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷರಾಗಿ, ತೆಗ್‌ರ್ ತುಳುಕೂಟ ಇದರ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಂಬಳ ಕ್ರೀಡೆ ಯಲ್ಲೂ ಆಸಕ್ತಿ ಹೊಂದಿರುವ ಇರುವ ಕಂಬಳದ ಕೋಣಗಳ ಓಡಿಸುವ ತರಬೇತಿಯನ್ನು ಮೂಡಬಿದಿರೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆ ಮೂಲಕ ಕಂಬಳ ಕ್ಷೇತ್ರದಲ್ಲೂ ಮಿಂಚಲು ಇವರು ಅಣಿಯಾಗಿದ್ದಾರೆ.
ತನ್ನ ಗದ್ದೆಯಲ್ಲಿ ಬೆಳಗ್ಗೆ ಬೇಗ ಎದ್ದು ಓಟದ ತರಬೇತಿ ನಡೆಸುವ ಇವರು. ಕೆಸರು ಗದ್ದೆ ಕ್ರೀಡಾಕೂಟದ ಆಸಕ್ತ ಯುವಕರನ್ನು ಈ ಕ್ರೀಡೆಗೆ ಆಹ್ವಾನಿಸಿ ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಜತೆಗೆ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸುವಲ್ಲಿಯೂ ಸಹಕಾರ ನೀಡುತ್ತಿದ್ದಾರೆ.

ಕೆಸರು ಗದ್ದೆ ಕ್ರೀಡಾ ಕೂಟ ನನ್ನ ಆಸಕ್ತಿಯ ಕ್ಷೇತ್ರ. ಇಲ್ಲಿ ಆಡುವುದು ಮನಸ್ಸಿಗೆ ಉಲ್ಲಾಸ ನೀಡುವ ಜತೆಗೆ ನಮ್ಮ ಪ್ರತಿಭೆ ಅನಾವರಣ ಮಾಡಲು ಸಾಧ್ಯ. ಕೆಸರು ಗದ್ದೆ ಆಯೋಜನೆ ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ. – ತಿರುಮಲೇಶ್ವರ ಸಾಕೋಟೆ ರೆಂಜಿಲಾಡಿ, ಕೆಸರು ಗದ್ದೆ ಕ್ರೀಡಾಳು

LEAVE A REPLY

Please enter your comment!
Please enter your name here