ಕಡಬ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಜಿಯವರ 167ನೇ ಜನ್ಮಾದಿನಾಚರಣೆ

0


ಗುರುಪೂಜೆ, ಭಜನೆ, ಧಾರ್ಮಿಕ ಸಭೆ-ಸಾಧಕರಿಗೆ ಸನ್ಮಾನ
ಸಮಾಜಮುಖಿ ಕೆಲಸಗಳಿಂದ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ-ಶ್ರೀಮಹಾಬಲ ಸ್ವಾಮೀಜಿ

ಕಡಬ: ಸಮಾಜಮುಖಿ ಕೆಲಸಗಳಿಂದ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಹೇಳಿದರು.

ಅವರು ಡಿ.೨೬ರಂದು ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ ಯುವವಾಹಿನಿ ಕಡಬ ಘಟಕ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ, ಮರ್ದಾಳ, ಆಲಂಕಾರು ವಲಯಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ೧೬೭ನೇ ಜನ್ಮದಿನಾಚರಣೆ ಪ್ರಯುಕ್ತ ಗುರುಪೂಜೆ, ಭಜನೆ, ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಕಾಲದಲ್ಲಿ ಸಂಘಟನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಆದರೇ ನಾವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಂಘಟನೆ ಬೆಳೆಯುತ್ತದೆ, ಹಿರಿಯರ ಮಾರ್ಗದರ್ಶನದೊಂದಿಗೆ ಬಿಲ್ಲವ ಸಮಾಜದ ಯುವಕರು ಯುವವಾಹಿನಿಯ ಮೂಲಕ ಮುಂದೆ ಬಂದಾಗ ಮುಂದೆ ಸಮಾಜದ ಅಭಿವೃದ್ಧಿಗೆ ಪ್ರೇರಕವಾಗುತ್ತದೆ. ಇಂದು ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದ್ದು ಅವರಿಗೆ ಉತ್ತಮ ಸಂಸ್ಕಾರ ಕೊಡುವ ಕೆಲಸ ಮಾತೆಯಂದಿರಿಂದ ಆಗಬೇಕು, ಮನೆಯಲ್ಲಿ ಸಂಸ್ಕಾರ ಮೂಡಿದರೆ ಸಮಾಜದಲ್ಲಿ ಸಂಸ್ಕಾರ ತನ್ನಿಂತಾನೆ ಆಗುತ್ತದೆ ಎಂದ ಸ್ವಾಮೀಜಿ ಅಂತರಂಗ ಶುದ್ದಿಯಾದರೆ ಬಹಿರಂಗ ಶುದ್ದಿಯಾಗುತ್ತದೆ ಈ ಬಹಿರಂಗ ಶುದ್ದಿಯ ಮೂಲಕ ಸಮಾಜದಲ್ಲಿ ಹಿಂದೆ ಇದ್ದವರು ಮುಂದೆ ಬರಬೇಕು. ದುಷ್ಟಟದಿಂದ ಸಮಾಜದ ಅಭಿವೃದ್ದಿ ಕಾರ್ಯ ಕುಂಠಿತವಾಗುತ್ತದೆ, ಈ ದುಷ್ಟಟವನ್ನು ಮುಕ್ತ ಮಾಡಲು ನಾವು ಶ್ರಮಿಸಬೇಕು ಎಂದು ಹೇಳಿದರು.
ನೂಜಿಬಾಳ್ತಿಲ ಕಟ್ಟೆತ್ತಡ್ಕ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷ ಶಶಿಧರ ಎಂ.ಕೆ.ಅವರು ಗುರು ಸಂದೇಶ ನೀಡಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ತತ್ವ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ, ಅಂದಿನ ಸಂಕಷ್ಟ ಕಾಲದಲ್ಲಿ ಸಮಾಜಕ್ಕೆ ಅಂಟಿಕೊಂಡಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅವರು ಶ್ರಮ ಪಟ್ಟಿದ್ದಾರೆ, ಅವರ ಶ್ರಮ ಸಂದೇಶಗಳಿಂದ ಬಿಲ್ಲವ ಸಮಾಜ ಇಂದು ಗಟ್ಟಿಯಾಗಿ ನಿಂತುಕೊಂಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಡಬ ಯುವವಾಹಿನಿ ಘಟಕದ ಅಧ್ಯಕ್ಷ ಪ್ರವೀಣ್ ಓಂಕಲ್ ಅವರು ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು ಅವರು ಸಾಧಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಜನಾರ್ಧನ ಬಿ.ಎಲ್ ಅವರು ಮಾತನಾಡಿದರು. ವೇದಿಕೆಯಲ್ಲಿ ಬಲ್ಯ ಪಾಳ್ತಿಮಾರು ಕ್ಷೇತ್ರದ ಜ್ಯೋತಿಷ್ಯ ಕೇಶವ ಪಂಡಿತ್, ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ಯುವವಾಹಿನಿ ಕಡಬ ಘಟಕದ ನಿರ್ಧೇಶಕ ರವಿ ಮಾಯಿಲ್ಗ, ಕೋಶಾಧಿಕಾರಿ ಧನಂಜಯ ಮರ್ದಾಳ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಮರ್ದಾಳ ವಲಯದ ಸಂಚಾಲಕ ಸತೀಶ್ ಕೆ. ಐತ್ತೂರು, ಆಲಂಕಾರು ವಲಯದ ಸಂಚಾಲಕ ಉದಯ ಸಾಲ್ಯಾನ್, ಕಡಬ ವಲಯದ ಸಂಚಾಲಕ ಜಯಪ್ರಕಾಶ್ ದೋಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಕಡಬ ಘಟಕದ ಸ್ಥಾಪಕಾಧ್ಯಕ್ಷ ಯೋಗೀಶ್ ಅಗತ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಯುವವಾಹಿನಿ ಕಡಬ ಘಟಕದ ಪೂರ್ವಾಧ್ಯಕ್ಷ ಶಿವಪ್ರಸಾದ್ ನೂಚಿಲ ಸ್ವಾಗತಿಸಿ, ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಅಮೈ ವಂದಿಸಿದರು. ಸರಿತಾ ಜನಾಧನ್, ಹಾಗೂ ಸುಪ್ರಿತಾ ಚರಣ್ ಕಾರ್ಯಕ್ರಮ ನಿರೂಪಿಸಿದರು. ಸುಪ್ರಿತಾ ಪಾಲಪ್ಪೆ ಪ್ರಾರ್ಥನೆ ಹಾಡಿದರು.

ಸನ್ಮಾನ ಕಾರ್ಯಕ್ರಮ:
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಧಾರ್ಮಿಕ ಕ್ಷೇತ್ರದಿಂದ ಜ್ಯೋತಿಷ್ಯ ಕೇಶವ್ ಪಂಡಿತ್, ಸಾಮಾಜಿಕ ಕ್ಷೇತ್ರದಿಂದ ಜಿನ್ನಪ್ಪ ಸಾಲ್ಯಾನ್, ಕೃಷಿ ಕ್ಷೇತ್ರದಿಂದ ಸುರೇಶ್ ಪಾಲಪ್ಪೆ, ಕ್ರೀಡಾ ಕ್ಷೇತ್ರದಿಂದ ಹರೀಶ್ ಕರ್ಕೇರ, ಶೈಕ್ಷಣಿಕ ಕ್ಷೇತ್ರದಿಂದ ಡಾ. ರೋಹಿತ್ ಪಿ.ಎಸ್. ಹಾಗೂ ಮಾಜಿ ಸೈನಿಕರಾದ ಹರೀಶ್ ಕರ್ಕೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜ್ಯೋತಿಷ್ಯ ಕೇಶವ ಪಂಡಿತ್ ಹಾಗೂ ಡಾ. ರೋಹಿತ್ ಪಿ.ಎಸ್. ಅವರು ಅನಿಸಿಕೆ ವ್ಯಕ್ತಪಡಿಸಿದರು. ಸರಿತಾ ಉಂಡಿಲ, ಸಂತೋಷ್ ಮರ್ದಾಳ, ಶಿವಪ್ರಸಾದ್ ಮರ್ದಾಳ, ನಯನ ಅಮೈ, ದೀಕ್ಷಿತ್ ಪಣೆಮಜಲು, ಮಿಥುನ್ ಸುಂದರ್ ಸನ್ಮಾನಿತರ ಪತ್ರ ವಾಚಿಸಿದರು.

ಗೌರವಾರ್ಪಣೆ:
ಯುವವಾಹಿನಿಯ ಸ್ಥಾಪಕಾಧ್ಯಕ್ಷ ಯೋಗೀಶ್ ಅಗತ್ತಾಡಿ, ಸ್ಥಾಪಕ ಕಾರ್ಯದರ್ಶಿ ಮಿಥುನ್ ಸುಂದರ್, ಯುವವಾಹಿನಿಯ ಬಿ.ಎಲ್, ಜನಾರ್ದನ್, ಶಿವಪ್ರಸಾದ್ ನೂಚಿಲ, ದೀಕ್ಷಿತ್ ಪಣೆಮಜಲು ಇವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಗುರುಪೂಜೆ, ಭಜನಾ ಕಾರ್ಯಕ್ರಮ:
ಕಾರ್ಯಕ್ರಮಕ್ಕೆ ಮುನ್ನಾ ಸ್ವಾಮೀಜಿಯವರನ್ನು ಕಡಬ ಪೇಟೆಯಿಂದ ಮೆರವಣಿಗೆಯ ಮೂಲಕ ಕರೆತರಲಾಯಿತು. ಹರೀಶ್ ಶಾಂತಿ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಗುರು ಪೂಜೆ ನಡೆಯಿತು. ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.