ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

0

ಮಂಗಳೂರು: ಕರಾವಳಿಯ ಜನರಿಗೆ ಅತೀ ಉಪಯುಕ್ತವಾಗುವ ಮಂಗಳೂರು -ರಾಮೇಶ್ವರ ಮತ್ತು ಮಂಗಳೂರು – ಭಾವ್‌ನಗರ (ಅಹ್ಮದಾಬಾದ್‌) ಹೊಸ ರೈಲು ಸಂಚಾರ ಆರಂಭದ ಪ್ರಸ್ತಾವನೆ ಇತ್ತೀಚೆಗೆ ನಡೆದ ಅಂತರ್‌ ರೈಲ್ವೇ ವಲಯ ವೇಳಾಪಟ್ಟಿ ಸಮ್ಮೇಳನ (ಐಆರ್‌ಟಿಟಿಸಿ)ದಲ್ಲಿ ಅನುಮೋದನೆಗೊಂಡಿದೆ.

ದಕ್ಷಿಣ ರೈಲ್ವೇಯ ರೈಲ್ವೇ ಸಾರಿಗೆ ವಿಭಾಗದ ಚೆನ್ನೈ ಕೇಂದ್ರ ಕಚೇರಿ ನೀಡಿರುವ ಮಾಹಿತಿಯಂತೆ ಮಂಗಳೂರಿನಿಂದ ಭಾವ್‌ನಗರ ಟರ್ಮಿನಸ್‌ ಮತ್ತು ಮಂಗಳೂರಿನಿಂದ ರಾಮೇಶ್ವರಕ್ಕೆ ಸಾಪ್ತಾಹಿಕ ರೈಲು ಸಂಚಾರ ನಡೆಸಲಿದೆ.

ಪ್ರಸ್ತುತ ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್‌ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿರುವ ರೈಲು ನಂ.16511/16512 ಕಣ್ಣೂರು- ಬೆಂಗಳೂರು ಎಕ್ಸ್‌ ಪ್ರಸ್‌ ರೈಲನ್ನು ಕಲ್ಲಿಕೋಟೆಯವರೆಗೆ ವಿಸ್ತರಿಸುವ ಪ್ರಸ್ತಾವವನ್ನು ಕೂಡ ಐಆರ್‌ಟಿಟಿಸಿ ಸಭೆ ಪರಿಶೀಲಿಸಿದ್ದು, ರೈಲ್ವೇ ಮಂಡಳಿಗೆ ಶಿಫಾರಸು ಮಾಡಿದೆ. ಐಆರ್‌ಟಿಟಿಸಿ ಮಾಡುವ ಶಿಫಾರಸುಗಳು ಅನುಷ್ಠಾನಗೊಳ್ಳದೆ ಇರುವುದು ಕಡಿಮೆ. ಹೀಗಾಗಿ ಈ ಎರಡು ನೂತನ ರೈಲುಗಳು ಮೂರು ತಿಂಗಳುಗಳ ಒಳಗೆ ಆರಂಭಗೊಳ್ಳುವ ಸಾಧ್ಯತೆಗಳು ಅಧಿಕ ಎಂದು ಮೂಲಗಳು ತಿಳಿಸಿವೆ.