ಪುತ್ತೂರು ಪತ್ರಕರ್ತರ ಸಂಘದಲ್ಲಿ ಮತ್ತೊಮ್ಮೆ ಹೈಡ್ರಾಮ! ಶ್ರಾವಣ ಮಾಸ ಅಂತ್ಯವಾಗುತ್ತಿದೆ ಎಂದು ಕಾಯುತ್ತಿದ್ದವರಿಗೆ ಕರಾಳ ಮಾಸ | ಅನೀಶ್ ಕುಮಾರ್‌ ಅವ್ಯವಹಾರದ ಬೆಂಬಲಿಗರಿಗೆ ಮರೀಚಿಕೆಯಾಯಿತೆ ಅಧ್ಯಕ್ಷಗಿರಿ?

0

ಪುತ್ತೂರು: ಪ್ರತಿಷ್ಠಿತ ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಮತ್ತೊಮ್ಮೆ ಹೈಡ್ರಾಮ ನಡೆದಿದೆ. ಸದಸ್ಯರ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುಧಾಕರ ಪಡೀಲ್ ಅವರು ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಮಾತ್ರವಲ್ಲದೆ ಆಗಸ್ಟ್ ೬ರಂದು ಪತ್ರಿಕಾ ಭವನದಲ್ಲಿ ನಡೆಸಲು ನಿಗದಿ ಪಡಿಸಲಾಗಿದ್ದ ಚುನಾವಣೆಗೆ ಸಂಬಂಧಿಸಿದ ನಾಮಪತ್ರ ಸಲ್ಲಿಕೆ ಮುಂತಾದ ಪ್ರಕ್ರಿಯೆಯನ್ನು ರದ್ದು ಪಡಿಸಿದ್ದಾರೆ. ಅದು ಸಂಘದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕೆಲವರಿಗೆ ಶ್ರಾವಣ ಮಾಸ, ಕೆಲವರಿಗೆ ಕರಾಳ ಮಾಸಕ್ಕೆ ಕಾರಣವಾಗಿ ಅಧ್ಯಕ್ಷಗಿರಿಗೆ ಕಾಯುತ್ತಿರುವವರಿಗೆ ಆಘಾತ ಉಂಟು ಮಾಡಿದೆ.

ಆಗಸ್ಟ್ 6ರಂದು ನಡೆಸಲು ಉದ್ದೇಶಿಸಿದ್ದ ಚುನಾವಣೆ ರದ್ದು:
ಆಗಸ್ಟ್ 6ರಂದು ಪತ್ರಿಕಾ ಭವನದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಜು.15ರಂದು ನಾಮಪತ್ರ ಸಲ್ಲಿಕೆ ಆರಂಭ, ನಾಮಪತ್ರ ಸಲ್ಲಿಕೆಗೆ ಜು.19 ಅಂತಿಮ ದಿನ, ಜು.20ರಂದು ನಾಮಪತ್ರ ಪರಿಶೀಲನೆ, ಜು.21 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ ಎಂದು ನಿಗದಿ ಪಡಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಎಲ್ಲವೂ ಇದೀಗ ರದ್ದುಗೊಂಡಿದೆ.


ಚುನಾವಣಾಧಿಕಾರಿ ಸುಧಾಕರ್ ಪಡೀಲ್‌ರಿಂದ ಅಧ್ಯಕ್ಷ ಶ್ರವಣ್ ನಾಳರಿಗೆ ಪತ್ರ: ಪುತ್ತೂರು ತಾಲೂಕು ಪತ್ರಕರ್ತರ ಸಂಘ ಪುತ್ತೂರು ಇದರ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರಿಗೆ ಪತ್ರ ಬರೆದಿರುವ ಚುನಾವಣಾಧಿಕಾರಿ ಸುಧಾಕರ ಪಡೀಲ್ ಅವರು ‘ಮಾನ್ಯರೇ, ಪುತ್ತೂರು ತಾಲೂಕು ಪತ್ರಕರ್ತರ ಸಂಘ(ರಿ.) ಪುತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಯಾಗಿ ನನ್ನನ್ನು ಆಯ್ಕೆ ಮಾಡಿರುತ್ತೀರಿ. ಇದೇ ಆಗಸ್ಟ್ ೬ರಂದು ಪುತ್ತೂರು ಪತ್ರಿಕಾ ಭವನದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದ್ದು ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ. ಈ ಮಧ್ಯೆ ಸಂಘದ ಸದಸ್ಯರಿಂದ ಚುನಾವಣೆಗೆ ಆಕ್ಷೇಪಣೆ ವ್ಯಕ್ತವಾಗಿದೆ. ಸದ್ರಿ ಪತ್ರಕರ್ತರ ಸಂಘದ ಲೆಕ್ಕಪತ್ರ ಮಂಡನೆ ಸರಿಯಾಗಿ ನಡೆಯದೇ ಇರುವುದು, ಲೆಕ್ಕಪತ್ರ ಮಂಡನೆಗೆ ಅನುಮೋದನೆ ಆಗದೇ ಇರುವುದು, ಲೆಕ್ಕಪತ್ರ ಮಂಡನೆಗಾಗಿ ಸಭೆ ನಡೆಸುವುದು ಎಂದು ನಿರ್ಧರಿಸಲಾಗಿದ್ದರೂ ಸಭೆ ನಡೆಯದೇ ಇರುವುದು, ಮಹಾಸಭೆ ಅಪೂರ್ಣವಾಗಿ ನಡೆದಿರುವುದು ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳನ್ನು ಪರಾಮರ್ಶೆ ನಡೆಸಿದಾಗ ಸಂಘಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸೂಕ್ತ ಅಲ್ಲ ಎಂದು ತೀರ್ಮಾನಿಸಿರುತ್ತೇನೆ. ಹಾಗಾಗಿ ಚುನಾವಣಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಿರುತ್ತೇನೆ. ನಾಮಪತ್ರ ಸ್ವೀಕಾರ ಇತ್ಯಾದಿ ಪ್ರಕ್ರಿಯೆಯನ್ನು ರದ್ದು ಪಡಿಸಿರುತ್ತೇನೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರದ ಪ್ರತಿಯನ್ನು ಪತ್ರಕರ್ತರ ಸಂಘದ ಅಧಿಕೃತ ವಾಟ್ಸಪ್ ಗ್ರೂಪಿಗೆ ರವಾನಿಸಿರುವ ಶ್ರವಣ್ ಕುಮಾರ್ ಅವರು ಚುನಾವಣಾಧಿಕಾರಿಯವರ ಸೂಚನೆ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಇದರಿಂದ ಶ್ರವಣ್ ಕುಮಾರ್‌ರವರ (ಶ್ರಾವಣ ಮಾಸ) ಅಧ್ಯಕ್ಷತೆ ಅಂತ್ಯವಾಗುತ್ತದೆ ಎಂದು ಮನಸ್ಸಿನಲ್ಲಿ ಮಂಡಕ್ಕಿ ತಿನ್ನುತ್ತಿದ್ದವರಿಗೆ ಕರಾಳ ಮಾಸ ಉಂಟಾಗಿದೆ. ಪತ್ರಿಕಾಭವನದಲ್ಲಿ ಮಾಡಿದ ಅವ್ಯವಹಾರಗಳಿಗೆ ಅನೀಶ್ ಕುಮಾರ್‌ರನ್ನು ಸಂಘದಿಂದ ಉಚ್ಛಾಟಿಸಿದ್ದ ಸಿಟ್ಟಿಗಾಗಿ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರನ್ನು ಹೇಗಾದರೂ ಮಾಡಿ ಅಧ್ಯಕ್ಷಗಿರಿಯಿಂದ ಕೆಳಗಿಳಿಸಬೇಕೆಂದು ಪಣತೊಟ್ಟಿದ್ದ ಅನೀಶ್ ಕುಮಾರ್‌ಗೆ ಮತ್ತು ಅವರ ಅವ್ಯವಹಾರಕ್ಕೆ ಸದಾ ಬೆಂಬಲ ನೀಡುತ್ತಿರುವ ಅವರ ಮುಖ್ಯ ಸಲಹೆಗಾರರು, ರಕ್ಷಕರೂ ಆಗಿರುವ ಹಾಗೂ ಅಧ್ಯಕ್ಷಗಿರಿಗೆ ಕಾಯುತ್ತಿರುವ ಶಶಿಧರ್ ರೈ ಕುತ್ಯಾಳ ಮತ್ತು ಮೇಘಾ ಪಾಲೆತ್ತಾಡಿರವರಿಗೆ ಈ ಬೆಳವಣಿಗೆಯಿಂದಾಗಿ ಕರೆಂಟ್ ಶಾಕ್ ಹೊಡೆದಂತಾಗಿದೆ.