ಕನಕಮಜಲು: ಒಂದೇ ದಿನ ಸುಮಾರು ಎರಡು ಸಾವಿರ ಜನರಿಗೆ ನಾಡಿ ಪರೀಕ್ಷೆ ,ವೈದ್ಯರಿಂದ ಚಿಕಿತ್ಸೆ ವಾಹನಗಳ ಸಾಲು ಮತ್ತು ಜನಜಾತ್ರೆ ಕಂಡು ಸ್ಥಂಭೀಭೂತರಾದ ಕನಕಮಜಲು ಜನತೆ

Advt_Headding_Middle

ತಿಂಗಳಿಗೊಮ್ಮೆ ಕನಕಮಜಲಿಗೆ ಬರುವ ನಾಡಿಪರೀಕ್ಷೆಯ ವೈದ್ಯರ ಬಳಿಗೆ ನ. ೨೮ರಂದು ಸುಮಾರು ಎರಡು ಸಾವಿರದಷ್ಟು ಜನ ಬಂದ ಪರಿಣಾಮವಾಗಿ ಕನಕಮಜಲಿನ ರಸ್ತೆಗಳು ವಾಹನಗಳಿಂದ ತುಂಬಿ ಹೋದ ಹಾಗೂ ನಾಡಿಪರೀಕ್ಷೆಯ ವೈದ್ಯರು ಚಿಕಿತ್ಸೆ ನೀಡುವ ಹರಿಗೌರಿ ಪ್ರೌಢಶಾಲೆಯ ವಠಾರ ಹಾಗೂ ಪದ್ಮನಾಭ ಭಟ್‌ರ ಮನೆಯ ವಠಾರದಲ್ಲಿ ನೂರಾರು ವಾಹನಗಳು, ಸಾವಿರಾರು ಜನ ಸೇರಿದ್ದರಿಂದ ಜಾತ್ರೆಯ ವಾತಾವರಣ ನಿರ್ಮಾಣವಾದ ಘಟನೆ ವರದಿಯಾಗಿದೆ. ಕನಕಮಜಲು ಹರಿಗೌರಿ ಪ್ರೌಢಶಾಲೆಯ ಸಂಚಾಲಕರಾಗಿದ್ದ ಪದ್ಮನಾಭ ಭಟ್‌ರವರ ನಿಕಟ ಸಂಬಂಧಿಯಾಗಿರುವ ಪೆರ್ಲದ ರಾಧಾಕೃಷ್ಣ ಭಟ್‌ರವರು ಚೆನ್ನೈಯಲ್ಲಿ ಆಕ್ಯುಪಂಕ್ಚರ್ (ನಾಡಿಪರೀಕ್ಷೆ) ಚಿಕಿತ್ಸಾ ವಿಧಾನದ ಅಧ್ಯಯನ ನಡೆಸಿದವರು. ಪೆರ್ಲದಲ್ಲಿ ನಾಡಿ ಪರೀಕ್ಷಾ ಚಿಕಿತ್ಸೆ ನೀಡುತ್ತಿದ್ದ ಅವರನ್ನು ಕನಕಮಜಲಿಗೆ ತಿಂಗಳಿಗೊಂದು ದಿನ ಬರುವಂತೆ ಆಹ್ವಾನಿಸಿದವರು ಪದ್ಮನಾಭ ಭಟ್‌ರು. ಕನಕಮಜಲಿನಿಂದ ದೇರ್ಕಜೆ ಮಾರ್ಗದಲ್ಲಿ ಅರ್ಧ ಕಿ.ಮೀ. ಹೋದರೆ ಶ್ರೀ ಹರಿಗೌರಿ ಪ್ರೌಢಶಾಲೆ (ಈಗ ಪ್ರೌಢಶಾಲೆ ಸ್ಥಗಿತಗೊಂಡಿದೆ.) ಮತ್ತು ಪದ್ಮನಾಭ ಭಟ್‌ರ ಮನೆ ಸಿಗುತ್ತದೆ. ಒಂದು ವರ್ಷದಿಂದ ತಿಂಗಳಿಗೊಂದು ದಿನ ರಾಧಾಕೃಷ್ಣ ಭಟ್‌ರು ಇಲ್ಲಿಗೆ ಬರುತ್ತಿದ್ದಾರೆ. ಬೆನ್ನುನೋವು, ಕೈಕಾಲುನೋವು, ಬಿ.ಪಿ., ಶುಗರ್ ಮೊದಲಾದ ಖಾಯಿಲೆಗಳು ಸರ್ವೇ ಸಾಮಾನ್ಯವಾಗಿದ್ದು, ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆದರೂ ಪೂರ್ಣ ಗುಣವಾಗದಿದ್ದಾಗ ನಾಡಿಪರೀಕ್ಷೆಯ ವೈದ್ಯರಾದ ರಾಧಾಕೃಷ್ಣ ಭಟ್‌ರಲ್ಲಿಗೆ ಜನ ಬರತೊಡಗಿದರು. ಬೆರಳಿನ ತುದಿ ಮತ್ತು ಕೈಯ ನಾಡಿ ಹಿಡಿದು ಚಿಕಿತ್ಸೆ ನೀಡುವ ಕ್ರಮದಿಂದ ಗುಣಮುಖರಾಗುವ ಲಕ್ಷಣ ಕಂಡುಬರತೊಡಗಿದಾಗ ಜನರಿಗೆ ಭರವಸೆ ಬರತೊಡಗಿತು. ಈ ವೈದ್ಯರ ವಿಚಾರ ಪ್ರಚಾರವಾಗಿ ನೂರಾರು ಜನ ನಿಗದಿತ ದಿನ ಬರತೊಡಗಿದರು. ಆರಂಭದಲ್ಲಿ ಹತ್ತಾರು ಜನ, ಬಳಿಕ ನೂರಾರು ಜನ, ಈಗ ಸಾವಿರಾರು ಜನ ಬರತೊಡಗಿದ್ದಾರೆ. ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜನ ಎಷ್ಟು ಕಾತರರಾಗಿದ್ದಾರೆಂದು ಇದರಿಂದ ಗೊತ್ತಾಗುತ್ತದೆ. ತಮ್ಮ ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಂಡುಬಂದರೂ ಅವರಿಗೆ ಸಮಾಧಾನ.
ನ. ೨೮ರಂದು ಬೆಳಿಗ್ಗೆ ಎದ್ದು ನೋಡುವಾಗ ಕನಕಮಜಲಿನ ಜನತೆ ಸ್ಥಂಭೀಭೂತರಾಗಿದ್ದರು. ಕನಕಮಜಲು ಮುಖ್ಯರಸ್ತೆಯ ಬದಿಯಲ್ಲಿ, ದೇರ್ಕಜೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪದ್ಮನಾಭ ಭಟ್‌ರ ಮನೆಯ ಪರಿಸರ, ಹರಿಗೌರಿ ಪ್ರೌಢಶಾಲಾ ಕಟ್ಟಡದ ಪರಿಸರ, ಅಲ್ಲಿಯ ಮೈದಾನ ತುಂಬೆಲ್ಲ ವಾಹನಗಳು ಮತ್ತು ಗಿಜಿಗುಟ್ಟುವ ಜನಸಮೂಹ.
ಬೆಳಿಗ್ಗೆ ೪-೩೦ಕ್ಕೆ ರಾಧಾಕೃಷ್ಣ ಭಟ್‌ರು ಚಿಕಿತ್ಸೆ ಆರಂಭಿಸುತ್ತಾರೆ. ಅದಕ್ಕಾಗಿ ಮುಂಜಾನೆ ೩ ಗಂಟೆಗೆ ಜನ ಬರತೊಡಗಿದ್ದರು. ವ್ಯಾನು, ಕಾರು, ಜೀಪು ಮಾಡಿಕೊಂಡು ಗುಂಪುಗುಂಪಾಗಿ, ಕಡಬ, ಸುಬ್ರಹ್ಮಣ್ಯ, ಗುತ್ತಿಗಾರು, ಸುಳ್ಯ, ಪಂಜ, ಮರ್ಕಂಜ ಮತ್ತಿತರ ಪ್ರದೇಶಗಳಿಂದ ಜನ ಬಂದಿದ್ದರು. ಏನಿಲ್ಲವೆಂದರೂ ಒಂದೂವರೆ-ಎರಡು ಸಾವಿರ ಜನ ಅಲ್ಲಿ ಸೇರಿದ್ದರು. ದೇರ್ಕಜೆ ರಸ್ತೆ ಬ್ಲಾಕ್ ಆಗಿ ಆ ಕಡೆಯಿಂದ ಕನಕಮಜಲು ಮುಖ್ಯರಸ್ತೆಗೆ ಬರಬೇಕಾದ ವಾಹನದವರು ಹರಸಾಹಸ ಪಡಬೇಕಾಯಿತು. ನಾಡಿ ಪರೀಕ್ಷೆಯ ಮೂಲಕ ಚಿಕಿತ್ಸೆ ಪಡೆಯಲು ಬಂದವರಲ್ಲಿ ಶಾಸಕ ಅಂಗಾರ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕರವರು ಕೂಡಾ ಇದ್ದರು.

 

ಪದ್ಮನಾಭ ಭಟ್ ಪ್ರತಿಕ್ರಿಯೆ
ಈ ಬಗ್ಗೆ ಹರಿಗೌರಿ ಪ್ರೌಢಶಾಲೆಯ ಸಂಚಾಲಕರಾಗಿದ್ದ ಪದ್ಮನಾಭ ಭಟ್‌ರನ್ನು ಸಂಪರ್ಕಿಸಿ ಸುದ್ದಿ ವರದಿಗಾರರು ವಿಚಾರಿಸಿದಾಗ, ಅವರು ಆರಂಭದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬಳಿಕ ಪ್ರಧಾನ ವರದಿಗಾರರು ಸಂಪರ್ಕಿಸಿ ವಿಚಾರಿಸಿದಾಗ, ರಾಧಾಕೃಷ್ಣ ಭಟ್ ತುಂಬಾ ಕಷ್ಟಗಳನ್ನು, ನೋವುಗಳನ್ನು ಅನುಭವಿಸಿ, ಬೆಳೆದುಬಂದಿರುವ ವ್ಯಕ್ತಿ. ನನ್ನ ನಿಕಟಬಂಧು. ಚೆನ್ನೈಯಲ್ಲಿ ಈ ನಾಡಿ ಪರೀಕ್ಷಾ ಚಿಕಿತ್ಸಾ ವಿಧಾನವನ್ನು ಅಧ್ಯಯನ ಮಾಡಿ ಬಂದವರು ಎಂದರು.
ಕೆಲವರು ಚಿಕಿತ್ಸೆಗಾಗಿ ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡಿದರೂ ಜೀವ ಉಳಿಸಿಕೊಳ್ಳಲು ಆಗದೆ ಪ್ರಾಣ ಹೋದದ್ದು ಇದೆ. ಇಲ್ಲಿ ಕೇವಲ ೧೦೦ ರೂ.ವೆಚ್ಚದಲ್ಲಿ ಚಿಕಿತ್ಸೆ ಸಿಗುತ್ತದೆ. ಕೆಲವರಿಗೆ ಔಷಧಿ ತ್ಯಜಿಸಿ ತೊಂದರೆಯಾಗಿರುವುದರಿಂದ ನಾನು ಕೂಡಾ ರಾಧಾಕೃಷ್ಣ ಭಟ್‌ರೊಡನೆ ಔಷಧಿ ತಕ್ಷಣ ನಿಲ್ಲಿಸುವುದಕ್ಕಿಂತ ನಿಧಾನವಾಗಿ ನಿಲ್ಲಿಸಲು ಹೇಳುವುದು ಒಳ್ಳೆಯದಲ್ಲವೇ ಎಂದು ಹೇಳಿzನೆ. ಆದರೆ ಈ ಚಿಕಿತ್ಸಾ ವಿಧಾನದ ಕ್ರಮವೇ ಅದು. ಹೊರಗಿನ ಔಷಧಿ ಸೇವಿಸಬಾರದು. ಸೇವಿಸಿದರೆ ಅಡ್ಡಪರಿಣಾಮವಾಗುತ್ತದೆ ಎಂದು ಅವರು ಹೇಳಿದರು. ಜನರಿಗೆ ಪ್ರಯೋಜನವಾಗುವುದಾದರೆ ಮಾತ್ರ ಈ ಚಿಕಿತ್ಸಾ ವ್ಯವಸ್ಥೆಯನ್ನು ಮುಂದುವರೆಸುತ್ತೇವೆ ಎಂದು ಪದ್ಮನಾಭ ಭಟ್ ಹೇಳಿದರು. ರಾಧಾಕೃಷ್ಣ ಭಟ್‌ರ ಫೋನ್ ನಂಬರ್ ಕೊಡಲು ಅವರು ನಿರಾಕರಿಸಿದರು.

ಹಸಿವಾದರೆ ಊಟಮಾಡಿ – ಬಾಯಾರಿದರೆ ನೀರು ಕುಡಿಯಿರಿ ಯಾವುದೇ ಮದ್ದು ತೆಗೆದುಕೊಳ್ಳಬೇಡಿ – ಪರೀಕ್ಷೆ ಮಾಡಿಸಿಕೊಳ್ಳಬೇಡಿ”

ಆಕ್ಯುಪಂಕ್ಚರ್ ಚಿಕಿತ್ಸೆ ನೀಡುವ ರಾಧಾಕೃಷ್ಣ ಭಟ್‌ರು ತನ್ನಿಂದ ನಾಡಿ ಪರೀಕ್ಷೆ ಚಿಕಿತ್ಸೆ ಪಡೆಯುವವರಿಗೆ ಹೇಳುವ ನಾಲ್ಕು ಮಾತುಗಳು: ಹಸಿವಾದರೆ ಊಟ ಮಾಡಿ, ಬಾಯಾರಿದರೆ ನೀರು ಕುಡಿಯಿರಿ. ಯಾವುದೇ ಮದ್ದು, ಮಾತ್ರೆಗಳನ್ನು ಸೇವಿಸಬೇಡಿ- ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಡಿ. ತನ್ನಿಂದ ಚಿಕಿತ್ಸೆ ಪಡೆಯುವವರು ತನ್ನ ಮಾತಲ್ಲಿ ವಿಶ್ವಾಸವಿರಿಸಿ ಹಾಗೇ ನಡೆದುಕೊಳ್ಳಬೇಕು. ಇದರಿಂದ ಮೊದಲು ಕೆಲವು ದಿನ ಅನಾರೋಗ್ಯ ಉಲ್ಬಣಗೊಳ್ಳಬಹುದು. ಆದರೆ ಅದು ಶಾಶ್ವತವಾಗಿ ಶಮನಗೊಳ್ಳುತ್ತದೆ.
ರಾಧಾಕೃಷ್ಣ ಭಟ್‌ರ ಈ ಮಾತನ್ನು ನಂಬಿ ಮದ್ದು ಮಾತ್ರೆಗಳನ್ನು ತ್ಯಜಿಸಿದ ಹಲವರು ಗುಣಮುಖರಾಗಿ ಸಂತೋಷದಿಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಕೆಲವರಿಗೆ ವ್ಯತಿರಿಕ್ತ ಪರಿಣಾಮ ಕೂಡಾ ಆಗಿದೆ. ಅಜ್ಜಾವರದ ಅಪ್ಪಯ್ಯ ಭಂಡಾರಿ ಎಂಬವರು ಶುಗರ್ ಮಾತ್ರೆ ತ್ಯಜಿಸಿದ ೨ ದಿನ ಖುಷಿಯಿಂದಿದ್ದು, ಮೂರನೇ ದಿನ ಮಂಕಾಗತೊಡಗಿ, ಶುಗರ್ ಏರಿ ಪ್ರಜ್ಞೆ ತಪ್ಪಿ, ಮಂಗಳೂರಿನ ಆಸ್ಪತ್ರೆಯಲ್ಲಿ ಒಂದು ವಾರ ಕಾಲ ದಾಖಲಾಗಿ ಚಿಕಿತ್ಸೆ ಪಡೆದು ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಅತ್ಯಾಡಿಯ ಮಹಿಳೆಯೊಬ್ಬರು ಮಾತ್ರೆ ಮದ್ದು ಸ್ಥಗಿತಗೊಳಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.ಕಾಡುಕೋಣ ಗುದ್ದಿದ ಪರಿಣಾಮವಾಗಿ ನಿಶ್ಚೇಷ್ಚಿತನಾಗಿ ಕೋಮಾ ಸ್ಥಿತಿಯಲ್ಲಿದ್ದ ಐವರ್ನಾಡಿನ ಜಯದೀಪನಿಗೆ ಈ ನಾಡಿ ಪರೀಕ್ಷಾ ತಜ್ಞರಿಂದ ಚಿಕಿತ್ಸೆ ಕೊಡಿಸಿದರೆ ಏನಾದರೂ ಸುಧಾರಣೆ ಕಾಣಬಹುದೆಂಬ ಆಸೆಯಿಂದ ಜಯದೀಪನ ಮನೆಯವರು ರಾಧಾಕೃಷ್ಣ ಭಟ್‌ರಲ್ಲಿಗೆ ಕರೆದೊಯ್ದರು. ಆ ಬಳಿಕ ಅವರು ಸಾವನ್ನಪ್ಪಿದ್ದಾರೆ. ಆದರೆ ಅವನು ಬದುಕುವ ಯಾವ ಭರವಸೆಯೂ ನಮಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಅಲ್ಲಿಗೂ ಒಮ್ಮೆ ಹೋಗೋಣ ಎಂಬ ಸಲಹೆ ಬಂದುದರಿಂದ ಹೋಗಿದ್ದೆವಷ್ಟೆ ಎಂದು ಜಯದೀಪನ ಅಮ್ಮ ಪ್ರತಿಕ್ರಿಯಿಸಿದ್ದಾರೆ.
ಅನಾರೋಗ್ಯ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಮಾತ್ರೆ -ಮದ್ದಿನ ಪ್ರಭಾವದಿಂದಲೇ ಜೀವ ಉಳಿಸಿಕೊಂಡಿರುವವರು ದಿಢೀರನೇ ಔಷಧಿ ತ್ಯಜಿಸಿದರೆ ವ್ಯತಿರಿಕ್ತ ಪರಿಣಾಮವಾಗುವುದು ಖಂಡಿತ. ಪ್ರ್ರಾಣಾಪಾಯದ ಪರಿಸ್ಥಿತಿಯಲ್ಲಿಲ್ಲದ ಹಾಗೂ ತಡೆದುಕೊಳ್ಳುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಇರುವವರು ಮಾತ್ರ ಔಷಧಿಗಳನ್ನು ತ್ಯಜಿಸಬಹುದೆಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಕೇವಲ ನಾಡಿ ಪರೀಕ್ಷೆಯ ಚಿಕಿತ್ಸೆಯಲ್ಲೆ ಎಲ್ಲಾ ರೋಗಗಳು ಗುಣವಗುತ್ತದೆಂದಾದರೆ ಇಷ್ಟೆಲ್ಲ ಆಸ್ಪತ್ರೆಗಳು, ವೈದ್ಯರುಗಳು ಯಾಕೆ ಇರಬೇಕಿತ್ತು? ಎಂದು ಪ್ರಶ್ನಿಸುವವರೂ ಇದ್ದಾರೆ.

ವಿಚಾರಿಸಲೆಂದು ಹೋಗಿ ಸೇರಿದ್ದ
ಜನಸಂಖ್ಯೆ ನೋಡಿ ಹಿಂತಿರುಗಿದ ವೈದ್ಯರು

ಕನಕಮಜಲಿನಲ್ಲಿ ಆಕ್ಯುಪಂಕ್ಚರ್ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಲು ಸಾವಿರಾರು ಜನ ಸೇರಿದ್ದಾರೆಂಬ ಮಾಹಿತಿ ಪಡೆದುಕೊಳ್ಳಲು ಸಾವಿರಾರು ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಸುಳ್ಯದ ಐ.ಎಂ.ಎ. ಅಧ್ಯಕ್ಷೆ ಡಾ| ಸಾಯಿಗೀತ, ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ, ನಿವೃತ್ತ ಡಿ.ಎಚ್.ಒ. ಡಾ. ಎಸ್. ರಂಗಯ್ಯರವರು ೞಇದು ಏನು ಚಿಕಿತ್ಸೆ… ಅವರು ನಿಜವಾಗಿ ವೈದ್ಯರೇ… ಅಥವಾ ಹೇಗೆ ಎಂದು ನೋಡಿ ವಿಚಾರಿಸಿಕೊಂಡು ಬರೋಣೞ ಎಂದು ನ.೨೮ರಂದು ಕನಕಮಜಲಿಗೆ ಹೋದರು.
ಅಂಗಳದವರೆಗೆ ವಾಹನದಲ್ಲಿ ಹೋಗಲು ಸಾಧ್ಯವಾಗದೆ ಒಂದು ಫರ್ಲಂಗ್ ದೂರದಲ್ಲೇ ತಾವು ಹೋದ ವಾಹನ ನಿಲ್ಲಿಸಿದ ಇವರು ಅಲ್ಲಿ ಸೇರಿದ್ದ ಜನಸಂಖ್ಯೆ ನೋಡಿ ಆಶ್ಚರ್ಯಗೊಂಡರು. ಅಲ್ಲಿದ್ದ ಕೆಲವರೊಡನೆ ವಿಚಾರಿಸಿದಾಗ ತಮಗೆ ಇವರ ಚಿಕಿತ್ಸೆಯಿಂದ ಗುಣಮುಖವಾಗಿದೆ. ಅದಕ್ಕಾಗಿ ಬೇರೆಯವರನ್ನು ಕರೆದುಕೊಂಡು ಬಂದಿzವೆ ಎಂಬ ಉತ್ತರ ಸಿಕ್ಕಿತೆನ್ನಲಾಗಿದೆ. ಜನ ಇಷ್ಟು ನಂಬಿಕೆಯಿಂದಿರುವಾಗ ನಾವು ಹೋಗಿ ಪ್ರಶ್ನಸಿ ಏನಾದರೂ ಹೆಚ್ಚು ಕಡಿಮೆಯಾಗುವುದು ಬೇಡ ಎಂದು ಭಾವಿಸಿ, ವೈದ್ಯರುಗಳು ಅಂಗಳದವರೆಗೆ ಹೋಗದೆಯೇ ಹಿಂತಿರುಗಿ ಬಂದರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.