ಮೀಸಲಾತಿ ಬದಲಾವಣೆ ವಿಚಾರ : ಕಾಂಗ್ರೆಸ್ ಪಕ್ಷದ್ದು ತಟಸ್ಥ ಧೋರಣೆ – ಜಯಪ್ರಕಾಶ್ ರೈ

Advt_Headding_Middle
Advt_Headding_Middle

ಸುಳ್ಯ ಕ್ಷೇತ್ರದ ಮೀಸಲಾತಿ ಬದಲಾವಣೆ ಕುರಿತು ನಡೆಯುತ್ತಿರುವ ಪರ ವಿರೋಧ ಹೋರಾಟಗಳಲ್ಲಿ ಕಾಂಗ್ರೆಸ್ ಪಕ್ಷದ್ದು ತಟಸ್ಥ ನಿಲುವಾಗಿದ್ದು, ಪಕ್ಷದ ದೃಷ್ಟಿಯಿಂದ ಯಾವುದೇ ನಿಲುವು ಹೊಂದಿಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಈಗ ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ಕೆಲವು ಸದಸ್ಯರು ಕೂಡಾ ಎರಡೂ ಕಡೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇವರ‍್ಯಾರು ಅಧಿಕೃತವಾಗಿ ನಮ್ಮ ಪಕ್ಷದಿಂದ ಭಾಗಿಗಳಲ್ಲ. ಎರಡೂ ಕಡೆಯವರ ವಿಚಾರಗಳು ಕೂಡಾ ತಪ್ಪಲ್ಲ. ಆದರೆ ಪಕ್ಷ ಈಗಿರುವ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತದೆ. ಹಾಗಾಗಿ ಪಕ್ಷದ ಕಡೆಯಿಂದ ಯಾವುದೇ ನಿಲುವು ವ್ಯಕ್ತಪಡಿಸುವುದಿಲ್ಲ. ಪರ ವಿರೋಧ ಹೋರಾಟದಲ್ಲಿ ನಮ್ಮ ಪಕ್ಷದವರು ವೈಯಕ್ತಿಕವಾಗಿ ಭಾಗವಹಿಸಲು ಸ್ವತಂತ್ರರು ಎಂದರಲ್ಲದೆ, ಮೀಸಲಾತಿ ನಿರ್ಧಾರ, ಬದಲಾವಣೆ ಇಲ್ಲಿಯ ಮಟ್ಟದಲ್ಲಿ ಆಗುವುದಿಲ್ಲ. ಹೀಗಾಗಿ ಇಲ್ಲಿ ಪಕ್ಷದ ನೆಲೆಯಲ್ಲಿ ನಿಲುವು ವ್ಯಕ್ತಪಡಿಸಲು ಆಗುವುದಿಲ್ಲ ಎಂದು ಹೇಳಿದರು.
ನಮ್ಮ ಪಕ್ಷ ಮತ್ತು ಸರಕಾರದ ಕಡೆಯಿಂದ ಸುಳ್ಯದ ಹಿರಿಯ ಕಾಂಗ್ರೆಸ್ ನಾಯಕರಿಗೆ ಅವಕಾಶ ಮತ್ತು ಹುದ್ದೆಗಳ ಮಹಾಪೂರವೇ ಹರಿದುಬಂದಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರನ್ನು ಅಭಿನಂದಿಸುತ್ತೇನೆ. ನೇಮಕಗೊಂಡ ನಾಯಕರು ಕೂಡಾ ತಮ್ಮ ಹುದ್ದೆಗಳನ್ನು ಮತಗಳಾಗಿ ಪರಿವರ್ತಿಸಲು ಕಾರ್ಯನಿರ್ವಹಿಸಲಿದ್ದು, ನಾವೆಲ್ಲಾ ಜತೆಯಾಗಿ ಪಕ್ಷಕ್ಕಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದುಃಖದ ಸಂಗತಿ. ಕೊಲೆಗಾರನಿಗೆ ಯಾವುದೇ ಪಕ್ಷ, ಜಾತಿ, ಧರ್ಮ ಇರುವುದಿಲ್ಲ. ಈ ಬೆಳವಣಿಗೆಗಳ ಕುರಿತು ಯುವಜನತೆ ಚಿಂತನೆ ಮಾಡಬೇಕು. ಕೊಲೆ ಮಾಡುವವರೂ, ಕೊಲೆ ಆಗುವವರೂ ಬಡ ಕುಟುಂಬದ ಹಿನ್ನಲೆಯವರು. ಇಂತಹ ಅಪರಾಧಗಳ ಹಿಂದೆ ದೊಡ್ಡ ಶಕ್ತಿಗಳಿವೆ. ಹಾಗಾಗಿ ಪೊಲೀಸ್ ಇಲಾಖೆ ಇದರ ಬೇರಿನವರೆಗೆ ಹೋಗಬೇಕು. ಹಿಂದಿನ ಶಕ್ತಿಗಳನ್ನು ಗುರುತಿಸಬೇಕು. ಷಡ್ಯಂತ್ರ ಮಾಡುವವರನ್ನು ಸಮಾಜದ ಮುಂದೆ ತರಬೇಕು ಎಂದು ಜಯಪ್ರಕಾಶ್ ರೈ ಹೇಳಿದರು.
ಐವರ್ನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಾಜೀನಾಮೆ ವಿಚಾರದ ಕುರಿತು ಪ್ರಸ್ತಾಪಿಸಿದ ಅವರು, ಐವರ್ನಾಡಿನ ಪಿ.ಡಿ.ಓ. ವರ್ಗಾವಣೆ ವಿಚಾರದ ಕುರಿತಂತೆ ಪಕ್ಷದಲ್ಲಿ ಅಭಿಪ್ರಾಯ ಬೇಧ ಇತ್ತು. ಅಲ್ಲಿ ನೂತನ ಅಧ್ಯಕ್ಷರ ನೇಮಕದ ಸಂದರ್ಭ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ತಿರುಮಲೇಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆ ಸಭೆಯಲ್ಲಿ ರಾಜೇಶ್ ಭಟ್ ಕೂಡಾ ಇದ್ದರು. ಅವರನ್ನು ತಾಲೂಕು ಸಮಿತಿಗೆ ತೆಗೆದುಕೊಳ್ಳಲು ನಿರ್ಧಾರವಾಗಿತ್ತು. ಆ ಸಭೆಗೆ ದಿನೇಶ್ ಮಡ್ತಿಲ ಅವರನ್ನು ಕೂಡಾ ಆಹ್ವಾನಿಸಲಾಗಿತ್ತು. ಅಧ್ಯಕ್ಷರ ನೇಮಕದ ಬಳಿಕ ಕೆಲವರು ರಾಜೀನಾಮೆ ನೀಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸುವುದಿಲ್ಲ. ಪಕ್ಷಕ್ಕೆ ಎಲ್ಲರೂ ಬೇಕು. ಮಾತುಕತೆಯ ಮೂಲಕ ಭಿನ್ನಾಭಿಪ್ರಾಯ ಶಮನ ಮಾಡುತ್ತೇವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರ ಬದಲಾವಣೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಸುಳ್ಯದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ಅಬ್ದುಲ್ ಮಜೀದ್ ಅವರನ್ನೇ ಮುಂದುವರಿಸುವುದೆಂದು ನಿರ್ಧರಿಸಲಾಗಿತ್ತು. ಹೀಗಾಗಿ ಅಧ್ಯಕ್ಷ ಕರೀಂ ಅವರು ಮಜೀದ್‌ರನ್ನು ಪುನರಾಯ್ಕೆಗೊಳಿಸಿದ್ದರು. ಆ ಬಳಿಕ ಕೆಲವರಿಂದ ಬದಲಾವಣೆಯ ಬೇಡಿಕೆ ಬಂದ ಹಿನ್ನಲೆಯಲ್ಲಿ ಕರೀಂರವರು ಸುಳ್ಯಕ್ಕೆ ಆಗಮಿಸಿ ಸಭೆ ನಡೆಸಿದ್ದರು. ಇದಲ್ಲಿ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಿರ್ಧಾರವನ್ನು ಜಿಲ್ಲಾ ಸಮಿತಿಗೆ ಬಿಡಲಾಗಿತ್ತು. ಜಿಲ್ಲಾಧ್ಯಕ್ಷರು ಮತ್ತು ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಘೋಷಣೆ ನಡೆದಿದೆ. ಈ ಕುರಿತು ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಏನಾದರೂ ಹೆಚ್ಚುಕಡಿಮೆಯಾಗಿದ್ದರೆ ಬಗೆಹರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕಡಬ ತಾಲೂಕಿಗೆ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮಗಳ ಸೇರ್ಪಡೆ ಬೇಡಿಕೆ ಅಬ್ದುಲ್ ಗಪೂರ್ ಅವರ ಮೂಲಕ ನಮಗೂ ಬಂದಿದೆ. ಪುತ್ತೂರಿಗೆ ಮುಖ್ಯಮಂತ್ರಿ ಆಗಮಿಸುವ ವೇಳೆ ಸಾಧ್ಯವಾದರೆ ಅವರಿಗೂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್.ಸಂಶುದ್ಧೀನ್, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ.ಮುಸ್ತಫಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಗೋಕುಲ್‌ದಾಸ್, ಶ್ರೀಹರಿ ಕುಕ್ಕುಡೇಲು, ಮುಖಂಡರಾದ ನಂದರಾಜ್ ಸಂಕೇಶ, ಭವಾನಿಶಂಕರ ಕಲ್ಮಡ್ಕ, ಅಬ್ದುಲ್ ರಝಾಕ್ ಪತ್ರಿಕಾಗೋಷ್ಟಿಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.