Breaking News

ಕಡಬ ತಾಲೂಕು ಅಧಿಕೃತ ಆದೇಶ ಪ್ರಕಟ ಪುತ್ತೂರಿನ 35 -ಸುಳ್ಯದ 7 ಗ್ರಾಮಗಳ ಸೇರ್ಪಡೆ

Advt_Headding_Middle
Advt_Headding_Middle

ಕಡಬ ಭಾಗದ ಜನರ ನಾಲ್ಕು ದಶಕಗಳ ಬೇಡಿಕೆ ಕೊನೆಗೂ ಈಡೇರಿದ್ದು ಕಡಬ ತಾಲೂಕಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆ ಪ್ರಕಟಗೊಂಡಿದೆ. ಪುತ್ತೂರು ತಾಲೂಕಿನಲ್ಲಿದ್ದ ಕಡಬ ಇನ್ನು ನೂತನ ತಾಲೂಕು ಆಗಿ ಕಾರ‍್ಯಾರಂಭ ಮಾಡಲಿದೆ. ಪುತ್ತೂರು ತಾಲೂಕಿನ ೩೫ ಹಾಗೂ ಸುಳ್ಯ ತಾಲೂಕಿನ ೭ ಗ್ರಾಮಗಳು ನೂತನ ಕಡಬ ತಾಲೂಕು ವ್ಯಾಪ್ತಿಗೆ ಬರಲಿದೆ. ಈ ಹಿಂದೆ ಕಡಬ ತಾಲೂಕಿನ ಅನುಷ್ಠಾನಕ್ಕಾಗಿ ಕರಡು ಅಧಿಸೂಚನೆಯನ್ನು ಹೊರಡಿಸಿದ್ದ ರಾಜ್ಯ ಸರಕಾರ ಇದೀಗ ಅಂತಿಮ ಅಧಿಸೂಚನೆ ಹೊರಡಿಸಿದ್ದು ಇನ್ನು ಮುಂದೆ ಕಡಬವು ಪೂರ್ಣಪ್ರಮಾಣದ ತಾಲೂಕಾಗಿ ಕಾರ್ಯಾರಂಭ ಮಾಡಲಿದೆ.
ಈ ಹಿಂದೆ ಪ್ರಸ್ತಾವನೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಕೈಬಿಟ್ಟು ಪುತ್ತೂರು ತಾಲೂಕಿನ ೩೫ ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ ೭ ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು ೪೨ ಗ್ರಾಮಗಳ ವ್ಯಾಪ್ತಿಯ ನೂತನ ಕಡಬ ತಾಲೂಕು ರೂಪುಗೊಂಡಿದೆ. ಹೊಸ ತಾಲೂಕಿನ ಒಟ್ಟು ಜನಸಂಖ್ಯೆ (೨೦೧೧ರ ಜನಗಣತಿಯಂತೆ) ೧,೨೦,೦೮೬ ಆಗಿದ್ದು, ಒಟ್ಟು ೧೪೯೧೫೯.೮ ಎಕರೆ ಭೌಗೋಳಿಕ ವಿಸ್ತೀರ್ಣವಿದೆ. ಪ್ರಸ್ತುತ ಪುತ್ತೂರು ತಾಲೂಕಿನಲ್ಲಿರುವ ಕಡಬ, ಕೋಡಿಂಬಾಳ, ಬಂಟ್ರ, ೧೦೨ ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ಕುಟ್ರುಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ಕೊಲ, ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಬೆಳಂದೂರು, ಕಾಮಣ, ಕುದ್ಮಾರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿ ಬಾಗಿಲು, ಗೋಳಿತ್ತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಹಾಗೂ ಸುಳ್ಯ ತಾಲೂಕಿನ ಏನೆಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಗಳು ನೂತನ ಕಡಬ ತಾಲೂಕಿನ ವ್ಯಾಪ್ತಿಗೆ ಬರಲಿದೆ. ಈ ಕುರಿತು ಜ.೧೨ರ ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಅಪಸ್ವರಗಳು : ಕಡಬ ತಾಲೂಕಿಗೆ ಸೇರ್ಪಡೆಗೆ ವಿರೋಧಿಸುತ್ತಿದ್ದ ಸವಣೂರು, ಕಾಣಿಯೂರು, ಪುಣ್ಚಪ್ಪಾಡಿ ಗ್ರಾಮಗಳು ಅಂತಿಮ ಅಧಿಸೂಚನೆಯಲ್ಲೂ ಕಡಬ ತಾಲೂಕಿಗೆ ಸೇರ್ಪಡೆಗೊಂಡಿವೆ. ಆದ್ದರಿಂದ ಈ ಗ್ರಾಮಗಳ ಜನತೆ ಮತ್ತೆ ಹೋರಾಟ ನಡೆಸುತ್ತಾರೆ. ಕಡಬಕ್ಕೆ ಸೇರ್ಪಡೆ ವಿರೋಧಿಸಿ ಸವಣೂರು, ಕಾಣಿಯೂರು ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನಿರ್ಣಯ ಸಹ ಕೈಗೊಳ್ಳಲಾಗಿದೆ. ಅಲ್ಲದೇ ಹೋರಾಟ ಸಮಿತಿಯೂ ಅಸ್ತಿತ್ವಕ್ಕೆ ಬಂದಿದೆ. ಬೆಳ್ತಂಗಡಿ ಶಾಸಕರು ಸರಕಾರದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಸ್ತಾವನೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಕೈಬಿಡಲಾಗಿದೆ. ಕಡಬದಿಂದ ಹತ್ತು ಕಿಲೋಮೀಟರ್ ಅಂತರದ ಪಂಜವನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ನಮ್ಮನ್ನು ಕಡಬಕ್ಕೆ ಸೇರಿಸಿ ಎಂದು ಪಂಜದವರು ಹೋರಾಟ ಮಾಡಿದರೂ ಕಡಬಕ್ಕೆ ಸೇರ್ಪಡೆಗೊಂಡಿಲ್ಲ. ಈ ವಿಚಾರವಾಗಿ ರಚನೆಗೊಂಡಿರುವ ಹೋರಾಟ ಸಮಿತಿ ಲೋಕೇಶ ಬರಮೇಲು ಹೆಸರಲ್ಲಿ ಮತ್ತು ಲಕ್ಷ್ಮಣ ಗೌಡ ಬೊಳ್ಳಾಜೆಯವರ ಹೆಸರಲ್ಲಿ ಹೈಕೋರ್ಟ್ ಮೆಟ್ಟಲೇರಿದೆ. ಈ ಎಲ್ಲಾ ಗೊಂದಲಗಳು ತಾಲೂಕು ಅನುಷ್ಠಾನಕ್ಕೆ ಹಿನ್ನಡೆಯಾಗದಿರಲಿ ಎಂಬ ಮಾತು ಕೇಳಿಬರುತ್ತಿದೆ. ಬಜತ್ತೂರು ಗ್ರಾಮ ಪುತ್ತೂರು ತಾಲೂಕಿನಲ್ಲಿಯೇ ಉಳಿದುಕೊಂಡಿದೆ.
ಕಚೇರಿಗಳಿಗೆ ಜಾಗ ಮೀಸಲು : ಈಗಾಗಲೇ ತಾಲೂಕುಮಟ್ಟದ ಕಚೇರಿಗಳನ್ನು ತೆರೆಯಲು ಕಡಬದಲ್ಲಿ ಜಮೀನು ಕಾದಿರಿಸಲಾಗಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ ೧.೬೦ ಎಕ್ರೆ, ನಾಡ ಕಚೇರಿಗೆ ೧.೦೦ ಎಕ್ರೆ, ಶಿಕ್ಷಣ ಇಲಾಖೆಗೆ ೧೪.೫೬ ಎಕ್ರೆ, ಪೊಲೀಸ್ ಇಲಾಖೆಗೆ ೨.೫ ಎಕ್ರೆ, ಲೋಕೋಪಯೋಗಿ ಇಲಾಖೆಗೆ ೦.೨೦ ಎಕ್ರೆ, ಪಂಚಾಯತ್ ರಾಜ್ ಇಲಾಖೆಗೆ ೫.೬೨ ಎಕ್ರೆ, ನ್ಯಾಯಾಂಗ ಇಲಾಖೆಗೆ ೨.೫೦ ಎಕ್ರೆ, ಕೃಷಿ ಇಲಾಖೆಗೆ ೦.೧೦ ಎಕ್ರೆ, ಮೆಸ್ಕಾಂಗೆ ೨.೯೦ ಎಕ್ರೆ, ಆರೋಗ್ಯ ಇಲಾಖೆಗೆ ೨.೧೧ ಎಕ್ರೆ ಭೂಮಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಜಮೀನು ಕಾದಿರಿಸಲಾಗಿದೆ. ತೋಟಗಾರಿಕಾ ಇಲಾಖಾ ಕಚೇರಿಯನ್ನು ಪಂಜ ರಸ್ತೆಯ ಹಳೆಯ ಜೇನು ಕೃಷಿ ಕಚೇರಿಯ ಕಟ್ಟಡದಲ್ಲಿ ತೆರೆಯಲು ಸಿದ್ಧತೆ ನಡೆದಿದೆ. ತಾಲೂಕು ಪಂಚಾಯತ್ ಕಚೇರಿಗಳಿಗೆ ಹಳೆಸ್ಟೇಶನ್‌ನಲ್ಲಿರುವ ತಾಲೂಕು ಪಂಚಾಯತ್ ಅಧೀನದ ವಸತಿ ಗೃಹಗಳನ್ನು ಬಳಸಲು ಉzಶಿಸಲಾಗಿದೆ.
ಆಗಬೇಕಿರುವ ಸರಕಾರಿ ಕಚೇರಿಗಳು : ಸುಸಜ್ಜಿತ ಮಿನಿ ವಿಧಾನ ಸೌಧ, ನ್ಯಾಯಾಲಯ, ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆ, ಸಬ್ ರಿಜಿಸ್ಟ್ರಾರ್ ಕಚೇರಿ, ಟ್ರೆಜರಿ (ಖಜಾನೆ), ಅಗ್ನಿಶಾಮಕ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತೋಟಗಾರಿಕೆ ಇಲಾಖಾ ತಾಲೂಕು ಮಟ್ಟದ ಕಚೇರಿ, ಕೃಷಿ ಇಲಾಖಾ ತಾಲೂಕು ಮಟ್ಟದ ಕಚೇರಿ, ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಕಚೇರಿ, ಲೋಕೋಪಯೋಗಿ ಇಲಾಖಾ ಕಚೇರಿ, ಆಹಾರ ನಿರೀಕ್ಷಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಚೇರಿ, ಸರಕಾರಿ ಪದವಿ ಕಾಲೇಜು, ಪ್ರತ್ಯೇಕ ಎಪಿಎಂಸಿ, ಪ್ರತ್ಯೇಕ ತಾಲೂಕು ಪಂಚಾಯತ್ ವ್ಯವಸ್ಥೆ ಮತ್ತು ಕಚೇರಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ.
ಸರಕಾರದ ಆದೇಶ ಬರುವವರೆಗೆ
ಸುಳ್ಯದಿಂದಲೇ ಕಾರ್ಯನಿರ್ವಹಣೆ
ಕಡಬ ತಾಲೂಕು ರಚನೆ ಅಂತಿಮ ಅಧಿಸೂಚನೆ ಸರಕಾರದಿಂದ ಹೊರದ್ದ್ದಿದ್ದರೂ ಸರಕಾರದಿಂದ ಆದೇಶ ಬರುವವರೆಗೆಸುಳ್ಯ ತಾಲೂಕಿನಿಂದ ಕಡಬ ತಾಲೂಕು ಸೇರುವ ೭ ಗ್ರಾಮಗಳ ಇಲಾಖಾ ವ್ಯವಹಾರ ಸುಳ್ಯ ಕೇಂದ್ರದಿಂದಲೇ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಳ್ಯ ತಹಶೀಲ್ದಾರ್ ಕುಂಞಮ್ಮರವರು ‘ಸರಕಾರದಿಂದ ಜಿಲ್ಲಾಧಿಕಾರಿಗಳ ಮೂಲಕ ನಮಗೆ ಆದೇಶ ಬರುತ್ತದೆ. ಅದು ಬಂದ ಕೂಡಲೇ ಆ ೭ ಗ್ರಾಮಗಳಿಗೆ ಸಂಬಮಧಿಸಿದ ಕಡತಗಳನ್ನು ನಾವು ಕಡಬಕ್ಕೆ ನೀಡುತ್ತೇವೆ. ಅದುವರೆಗೆ ಈ ೭ ಗ್ರಾಮಗಳ ಜನರು ಸುಳ್ಯ ತಾಲೂಕಿನಲ್ಲಿಯೇ ವ್ಯವಹರಿಸಬೇಕಾಗುತ್ತದೆ“ ಎಂದು ಹೇಳಿದರು.
ಒಟ್ಟು ಜನಸಂಖ್ಯೆ ೧,೨೦,೦೮೬
ಭೌಗೋಳಿಕ ವಿಸ್ತೀರ್ಣ ೧೪೯೧೫೯.೮ ಎಕರೆ
ಈಗಾಗಲೇ ನೂತನ ತಾಲೂಕು ಅನುಷ್ಠಾನಕ್ಕೆ ಬೇಕಾಗುವ ಸಿದ್ಧತೆಗಳಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ. ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಕಡಬದಲ್ಲಿ ತೆರೆಯಬೇಕಾಗಿರುವುದರಿಂದ ಆ ದಿಕ್ಕಿನಲ್ಲಿಯೂ ತಯಾರಿ ನಡೆಸಲಾಗುತ್ತಿದೆ. ಕರಡು ಅಧಿಸೂಚನೆ ಹೊರಡಿಸಿ ನೂತನ ತಾಲೂಕಿನ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆಗಳು ಹಾಗೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ಕಾಲಾವಕಾಶ ನೀಡಿದ್ದ ರಾಜ್ಯ ಸರಕಾರ ಇದೀಗ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಕಚೇರಿಗಳು ಕಡಬದಲ್ಲಿಯೇ ಕಾರ್ಯನಿರ್ವಹಿಸಲಿವೆ.
-ಜಾನ್‌ಪ್ರಕಾಶ್ ರೋಡ್ರಿಗಸ್, ಕಡಬ ತಹಶೀಲ್ದಾರರು.
ಕಡಬ ತಾಲೂಕಲ್ಲಿ ಸುಬ್ರಹ್ಮಣ್ಯ ದೇವಸ್ಥಾನ
ಪ್ರತಿಷ್ಠಿತ ಹಾಗೂ ರಾಜ್ಯದ ಆದಾಯ ಸಂಪನ್ನ ದೇವಸ್ಥಾನವಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇನ್ನು ಕಡಬ ತಾಲೂಕಿಗೆ ಸೇರ್ಪಡೆಯಾ ಗಲಿದೆ. ಈ ಹಿಂದೆ ಈ ದೇವಸ್ಥಾನ ಸುಳ್ಯ ತಾಲೂಕಿಗೆ ಒಳಪಟ್ಟಿದ್ದು, ಸುಬ್ರಹ್ಮಣ್ಯದಿಂದಾಗಿ ಸುಳ್ಯ ತಾಲೂಕು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿತ್ತು. ಇನ್ನು ಆ ಕ್ರೆಡಿಟ್ ಕಡಬ ತಾಲೂಕಿಗೆ ಹೋಗಲಿದೆ. ಈ ದೇವಸ್ಥಾನಕ್ಕೆ ದೇಶವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದು, ಕಡಬದ ಭೂಪಟದಲ್ಲಿ ಶ್ರೀಮಂತ ಸುಬ್ರಹ್ಮಣ್ಯ ದೇವಸ್ಥಾನದ ಹೆಸರು ರಾರಾಜಿಸಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.