Breaking News

ಬಿಜೆಪಿ ನಾಯಕರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಫೆ. ೧೧ರಂದು ಸುಳ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಜಯಪ್ರಕಾಶ್ ರೈ

Advt_Headding_Middle
Advt_Headding_Middle

ಬಿಜೆಪಿ ನಾಯಕರು ಪದೇ ಪದೇ ಸಂವಿಧಾನ ವಿರೋಧಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದನ್ನು ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಫೆ. ೧೧ರಂದು ಸುಳ್ಯದ ಖಾಸಗಿ ಬಸ್‌ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಸಂಸದ ಅನಂತ್‌ಕುಮಾರ್ ಹೆಗಡೆ, ಶಾಸಕ ವಿ.ಸುನಿಲ್‌ಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ತನ್ನ ಸ್ಥಾನದ ಘನತೆ ಮರೆತು ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಅನಂತ್‌ಕುಮಾರ್ ಹೆಗಡೆ ಸಂವಿಧಾನದ ಬಗ್ಗೆ, ದಲಿತರ ಬಗ್ಗೆ, ಸಾಹಿತಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಬಿಜೆಪಿಯವರು ಈ ಮೂಲಕ ಸಮಾಜದಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ. ಆದರೆ ಗಲಭೆಗಳಲ್ಲಿ ಸಾಯುವವರು, ಸಾಯಿಸುವವರು ಮೇಲ್ವರ್ಗದ ನಾಯಕರಲ್ಲ, ಬದಲು ಹಿಂದುಳಿದ ವರ್ಗದ ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು. ಹಿಂದೂ ಸಮಾಜದ ರಕ್ಷಣೆಯ ಅಧಿಕಾರ ಇವರಿಗೆ ಕೊಟ್ಟವರು ಯಾರು? ಹಿಂದೂ ಸಮಾಜಕ್ಕೆ ಸ್ವಯಂಪ್ರೇರಿತ ಶಕ್ತಿ ಇದೆ. ಎಲ್ಲ ಕಾಲದಲ್ಲೂ ಸವಾಲುಗಳನ್ನು ಸ್ವೀಕರಿಸಿ ಸಮಾಜ ಬೆಳೆದಿದೆ. ಆದರೆ ಬಿಜೆಪಿಯವರು ರಕ್ಷಣೆಯ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಈ ಬಾರಿ ಹಿಂದೂ ಸಮಾಜ ತಕ್ಕ ಪಾಠ ಕಲಿಸುತ್ತದೆ. ಧರ್ಮವನ್ನು ರಕ್ಷಿಸಿದರೆ ಅವರನ್ನು ಧರ್ಮ ರಕ್ಷಿಸುತ್ತದೆ. ಆದರೆ ಬಿಜೆಪಿಯವರು ಧರ್ಮವನ್ನು ಭಕ್ಷಿಸುತ್ತಿದ್ದಾರೆ. ಇದರಿಂದಾಗಿಯೇ ಅವರು ನಾಶವಾಗುತ್ತಾರೆ ಎಂದು ಹೇಳಿದರು.
ಜ. ೩೧ರಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮಕ್ಕೆ ನಮ್ಮ ಪಕ್ಷ ಬೆಂಬಲ ಸೂಚಿಸುತ್ತದೆ. ದುರ್ಜನರ ಕೆಟ್ಟ ಕೃತ್ಯಗಳ ವಿರುದ್ಧ ಸಜ್ಜನರು ಮಾತನಾಡಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು ಸುಳ್ಯದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೋರ್ವರು ಪೊಲೀಸರ ಮೇಲೆಯೇ ಆಕ್ರಮಣ ಮಾಡಿದ್ದು, ಇಂತಹವರಿಗೆ ಎಂತಹ ಸಂಸ್ಕಾರ ಇದೆಯೆಂದು ಅವರು ಪ್ರಶ್ನಿಸಿದರು.
ಕೆಪಿಸಿಸಿ ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ, ಈಗ ಬಿಜೆಪಿಯವರು ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ನಡೆ ಹನುಮನೆಡೆ ಎಂದು ಹೊರಟಿದ್ದಾರೆ. ಕೇಂದ್ರದಲ್ಲೂ ಅವರ ಸರಕಾರವಿದೆ, ಉತ್ತರ ಪ್ರದೇಶದಲ್ಲೂ ಇದೆ. ಅವರನ್ನು ಯಾರು ತಡೆಯುತ್ತಾರೆ. ಅದು ಬಿಟ್ಟು ಇಲ್ಲಿ ನಡಿಗೆ ಮಾಡುವುದರಲ್ಲಿ ಯಾವ ಅರ್ಥವಿದೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಡಾ.ರಘು, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿ.ಕೆ.ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಕಾರ್ಯದರ್ಶಿ ಶ್ರೀಮತಿ ಪ್ರವೀಣಾ ರೈ ಮರುವಂಜ, ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ, ತೀರ್ಥರಾಮ ಜಾಲ್ಸೂರು, ಕೆ.ಗೋಕುಲ್‌ದಾಸ್, ನಂದರಾಜ್ ಸಂಕೇಶ, ಭವಾನಿಶಂಕರ ಕಲ್ಮಡ್ಕ, ಅಚ್ಯುತ ಮಲ್ಕಜೆ, ತಿರುಮಲೇಶ್ವರಿ ಅಡ್ಕಾರು ಮೊದಲಾದವರು ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.