ಅನಂತಕುಮಾರ್ ಹೆಗಡೆ ವಿರುದ್ಧ ಅಂಬೇಡ್ಕರ್ ಸೇವಾ ಸಮಿತಿ ಕಿಡಿ: ಸುಳ್ಯದಲ್ಲಿ ನಡೆಯಿತು ಪ್ರತಿಭಟನೆ

Advt_Headding_Middle
Advt_Headding_Middle

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿದಂತೆ ಬಿಜೆಪಿ ನಾಯಕರು ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಆಶ್ರಯದಲ್ಲಿ ಸುಳ್ಯದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಿತು.
ಸುಳ್ಯದ ಶಾಸ್ತ್ರೀ ವೃತ್ತದ ಬಳಿಯಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಪ್ರತಿಭಟನಾಕಾರರು ಏನೆಂದರು?
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಲ್ಲತ್ತಡ್ಕರವರು, ಅಂಬೇಡ್ಕರ್ ಋಣ ತೀರಿಸುವ ಯೋಗ್ಯತೆಯಿಲ್ಲದವರು ಇಂದು ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುವ ಸಂಸದರು, ಶಾಸಕರು ಅಂಬೇಡ್ಕರ್ ಅವರಿಂದಾಗಿಯೇ ಅಧಿಕಾರ ಪಡೆದಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದರು.
ದಲಿತರ ಮತ್ತು ದಮನಿತರ ಸ್ವಾಭಿಮಾನಿ ವೇದಿಕೆಯ ಸಂಚಾಲಕ ರಘುವೀರ್ ಸೂಟರ್‌ಪೇಟೆ ಮಾತನಾಡಿ, ಮೇಲ್ವರ್ಗದವರ ವಿಚಾರದಲ್ಲಿ ಒಂದು ಸಣ್ಣ ಘಟನೆಗೂ ದೇಶಕ್ಕೆ ಬೆಂಕಿ ಇಡುವವರು ದಲಿತರ ವಿಚಾರದಲ್ಲಿ ಸುಮ್ಮನಿರುವುದು ಯಾಕೆ? ಅನಂತ್‌ಕುಮಾರ್ ಹೆಗಡೆಯಂತಹ ಸಂಸದರನ್ನು ಸಂಸತ್ತಿಗೆ ಕಳುಹಿಸಲು ಕೂಡ ದಲಿತರ ಮತಗಳು ಬೇಕು ಎನ್ನುವುದನ್ನು ಅವರು ಮರೆಯಬಾರದು. ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪದಾಧಿಕಾರಿ ಎಂ.ಬಿ.ಸದಾಶಿವ ಮಾತನಾಡಿ, ಅಧಿಕಾರದ ಮದದಲ್ಲಿ ಜನಶಕ್ತಿಯ ಹೆಸರಲ್ಲಿ ತುಳಿತಕ್ಕೊಳಗಾದವರನ್ನು ಮತ್ತಷ್ಟು ತುಳಿಯುತ್ತಿರುವ ನಿರ್ಲಜ್ಜ ಸಮೂಹ ಇಂದು ರಾರಾಜಿಸುತ್ತಿದೆ. ದಲಿತರ ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಇಂದು ಆಯಕಟ್ಟಿನ ಜಾಗಗಳಲ್ಲಿ ಕುಳಿತಿದ್ದಾರೆ. ಇದಕ್ಕೆ ಸೂಕ್ತ ಉತ್ತರ ನೀಡಬೇಕಾದ ಕಾಲ ಬಂದಿದೆ ಎಂದು ಹೇಳಿದರು.
ಎಸ್‌ಡಿಪಿಐ ಜಿಲ್ಲಾ ಮುಖಂಡ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಅನಂತ್‌ಕುಮಾರ್ ಹೆಗಡೆಯವರು ಸಂಸತ್ತ್ ಪ್ರವೇಶಿಸಿದ್ದು ಅವರ ಮನುವಾದದಿಂದಲ್ಲ. ಅಂಬೇಡ್ಕರ್ ಅವರ ಸಂವಿಧಾನದಿಂದ. ಸಂವಿಧಾನ ಉಳಿಸಲು ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರು ಬಹಳಷ್ಟು ತ್ಯಾಗ ಮಾಡಿದ್ದಾರೆ. ರಕ್ತ ಹರಿಸಿಯಾದರೂ ಸಂವಿಧಾನ ಉಳಿಸಲು ನಾವು ತಯಾರಿದ್ದೇವೆ ಎಂದರು.


ಕಾಸರಗೋಡು ಜಿಲ್ಲಾ ದಲಿತ ಸೇವಾ ಸಮಿತಿಯ ಮುಖಂಡ ಸಂತೋಷ್ ಕುಂಟಾರು, ಆಮ್ ಆದ್ಮಿ ಮುಖಂಡರಾದ ಅಶೋಕ್ ಎಡಮಲೆ, ರಶೀದ್ ಜಟ್ಟಿಪಳ್ಳ, ನ.ಪಂ. ಸದಸ್ಯ ಕೆ.ಎಸ್.ಉಮ್ಮರ್, ಯುವ ಜೆಡಿಎಸ್ ಮುಖಂಡ ಪ್ರವೀಣ್ ಮುಂಡೋಡಿ, ಅಂಬೇಡ್ಕರ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಸತೀಶ್ ಬೂಡುಮಕ್ಕಿ, ಎನ್.ಬಿ.ಚೋಮ, ಬಾಲಕೃಷ್ಣ ದೊಡ್ಡೇರಿ, ಚಂದ್ರಶೇಖರ ಏನೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.