HomePage_Banner
HomePage_Banner
HomePage_Banner
HomePage_Banner

ಕದ್ರಿ ಫಲಪುಷ್ಪ ಪ್ರದರ್ಶನ ಸಮಾರೋಪ – ಕೃಷಿ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಅಗತ್ಯ -ಪಿ.ಬಿ.ಪ್ರಭಾಕರ ರೈ

ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಹಾಗೂ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಕೃಷಿಕ ಸೋಲುತ್ತಾನೆ. ಕೃಷಿ ಸೋಲುತ್ತದೆ ಎಂದು ಪ್ರಗತಿಪರ ಕೃಷಿಕ ಸುಳ್ಯ ಅರಂತೋಡಿನ ಪಿ.ಬಿ.ಪ್ರಭಾಕರ ರೈ ಹೇಳಿದರು.
ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತ ಮತ್ತು ಸಿರಿ ತೋಟಗಾರಿಕೆ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಿದ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ‘ ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಕೃಷಿ ಬೆಳೆ ವಿಸ್ತೀರ್ಣ, ಉತ್ಪನ್ನ ಹಾಗೂ ದರ ನಿಗದಿಗೆ ಸಂಬಂಧಿಸಿ ಅಲ್ಲಿನ ಸರಕಾರ ಸಮರ್ಪಕ ನೀತಿ ರೂಪಿಸಿದೆ. ಆದರೆ ನಮ್ಮಲ್ಲಿ ಕೃಷಿಕ ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವ ಖಾತರಿ ಇಲ್ಲ ಎಂದರು.
ಕಷ್ಟಪಟ್ಟು ಬೆಳೆದ ಭತ್ತಕ್ಕೆ ತಗಲುವ ಖರ್ಚು ಹಾಗೂ ಲಾಭದ ಲೆಕ್ಕಾಚಾರ ನೋಡಿದರೆ ಆಘಾತವಾಗುತ್ತದೆ. ಬೆಳೆದ ಭತ್ತವನ್ನು ಮಾರಾಟ ಮಾಡಲು ಮನಸು ಬರುವುದಿಲ್ಲ. ಮಾರುಕಟ್ಟೆಯಲ್ಲಿ ೨೦- ೩೦ ರೂ. ಕೊಟ್ಟು ನೀರಿನ ಬಾಟಲು ಖರೀದಿಸಲು ದುಂಬಾಲು ಬೀಳುವ ಜನರು ೩೦ ರೂ. ನೀಡಿ ಸೀಯಾಳ ಖರೀದಿಸಲು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಗತಿಪರ ರೈತರಾದ ಪಿ.ಬಿ. ಪ್ರಭಾಕರ ರೈ, ಸುಳ್ಯದ ಉಬರಡ್ಕ ಮಿತ್ತೂರು ವಸಂತಿ ಎನ್.ಜೆ., ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಉದನೇಶ್ವರ, ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಮೋಂಟ ನಾಯ್ಕ ಮತ್ತು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೂಸಪ್ಪ ನಾಯ್ಕ ಅವರಿಗೆ ಫಲಪುಷ್ಪ ಪ್ರದರ್ಶನ ೨೦೧೮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯೆ ರೂಪಾ ಡಿ.ಬಂಗೇರ ಹಾಗೂ ಆಯುಕ್ತ ಮಹಮ್ಮದ್ ನಝೀರ್ ಬಹುಮಾನ ವಿತರಿಸಿದರು. ತೋಟಗಾರಿಕೆ ಇಲಾಖೆ (ಮಂಗಳೂರು) ಉಪ ನಿರ್ದೇಶಕ ಎಚ್.ಆರ್.ನಾಯಕ್ ಪ್ರಸ್ತಾವನೆಗೈದರು. ಜಿ.ಪಂ.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿಸೋಜ ವಂದಿಸಿದರು. ಕೆ.ಪ್ರವೀಣ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.