ಸುಳ್ಯ: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮಕಲಶೋತ್ಸವದ ಖರ್ಚು ವೆಚ್ಚಗಳ ಮಾಹಿತಿಯನ್ನು ಸಮಿತಿಯವರು ಇದುವರೆಗೆ ನೀಡದೆ ಇದ್ದು ಈ ಹಿನ್ನಲೆಯಲ್ಲಿ ತಾನು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಗೆ ಮೇಲ್ಮನವಿ ಸಲ್ಲಿಸಿರುವುದಾಗಿ ದೊಡ್ಡತೋಟದ ಗೋವಿಂದ ಭಟ್ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಡ್ಕಾರು ದೇವಸ್ಥಾನದ ಬ್ರಹ್ಮಕಲಶೋತ್ಸವು ೨೦೧೭ ಫೆಬವರಿಯಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಆರ್ಥಿಕ ಸಹಾಯಧನ, ಫಲವಸ್ತು, ಶ್ರಮದಾನದಿಂದ ಸಹಕರಿಸಿದ್ದಾರೆ. ೯ ದಿನಗಳ ಕಾಲ ನಡೆದ ಈ ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಲೆಕ್ಕಾಚಾರಗಳನ್ನು ಜೀರ್ಣೊದ್ದಾರ ಸಮಿತಿಯವರಾಗಲೀ, ವ್ಯವಸ್ಥಾಪನಾ ಸಮಿತಿಯವರಾಗಲೀ ಮಂಡನೆ ಮಾಡಿಲ್ಲ. ದೇವಸ್ಥಾನದ ಭಕ್ತರು ಈ ಕುರಿತು ಕೋರಿಕೆ ಸಲ್ಲಿದಾಗ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದರಿಂದ ಭಕ್ತರಿಗೆ ಮಾನಸಿಕವಾಗಿ ನೋವು ಉಂಟಾಗಿದೆ ಎಂದರು.
ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಮಾಹಿತಿಯನ್ನು ದಾಖಲೆ ಸಹಿತವಾಗಿ ನೀಡುವಂತೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ೧೨.೦೭. ೨೦೧೭ರಂದು ಅರ್ಜಿ ಬರೆದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿದ್ದೆ. ನಿರ್ದಿಷ್ಟ ಅವಧಿಯವರೆಗೆ ಮಾಹಿತಿ ನೀಡದಿದ್ದಾಗ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಸಹಾಯಕ ಅಯುಕ್ತರಿಗೆ ಮೇಲ್ಮನವಿ ಸಲ್ಲಿಸಿದೆ. ಮೇಲ್ಮನವಿ ವಿಚಾರಣೆಯ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಜರಾಗಿಲ್ಲ. ಮಾಹಿತಿ ನೀಡಲು ನಿರಾಕರಿಸುವ ಉದ್ದೇಶದಿಂದಲೇ ಹೀಗೆ ಗೈರುಹಾಜರಾಗಿದ್ದಾರೆ. ಮೇಲ್ಮನವಿ ಅಧಿಕಾರಿಯವರು ನನ್ನ ಅರ್ಜಿಯನ್ನು ಪುರಸ್ಕರಿಸಿದ್ದು, ನಾನು ಕೋರಿದ ಎಲ್ಲಾ ಮಾಹಿತಿಗಳನ್ನು ಸಂಪೂರ್ಣ ದಾಖಲೆಗಳೊಂದಿಗೆ ಒದಗಿಸುವಂತೆ ಆದೇಶ ನೀಡಿದ್ದಾರೆ ಎಂದು ಹೇಳಿ ಈ ಕುರಿತು ದಾಖಲೆಯನ್ನು ಅವರು ಪತ್ರಕರ್ತರಿಗೆ ನೀಡಿದರು.
ಬ್ರಹ್ಮ ಕಲಶೋತ್ಸವದಲ್ಲಿ ನಾನು ಅಲ್ಲಿ ಹಗಲು ರಾತ್ರಿಯೆನ್ನದೆ ಅಡುಗೆ ಕೆಲಸ ಮಾಢಿದ್ದೆ. ಆದರೆ ಅಲ್ಲಿ ಕಷ್ಟಪಟ್ಟು ಕೆಲಸ ಮಾಡಿದವರಿಗೆ ಪ್ರತಿಫಲ ಸಿಗಲಿಲ್ಲ. ಮಾಡದವರಿಗೆ ಸಿಕ್ಕಿದೆ. ಇದರಿಂದ ನಾನು ಸೇರಿದಂತೆ ಭಕ್ತರಿಗೆ ನೋವಾಗಿದೆ. ಸರಿಯಾದ ಖರ್ಚು ವೆಚ್ಚಗಳ ದಾಖಲೆ ನೀಡುವವರಿಗೆ ನಾನು ಬಿಡುವುದಿಲ್ಲ ಎಂದು ಗೋವಿಂದ ಭಟ್ ಹೇಳಿದರು.