HomePage_Banner
HomePage_Banner

ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿಕ: ಪುತ್ತಿಲ ಶ್ರೀಧರ ಗೌಡರು

ಈಗಿನ ಕಾಲದಲ್ಲಿ ಒಂದೇ ಕೃಷಿಯನ್ನು ನಂಬಿ ಬದುಕು ಸಾಗಿಸುವುದು ಕಷ್ಟದ ಮಾತು. ಕಾಲಕ್ಕೆ ತಕ್ಕಂತೆ ಕೃಷಿ ಚಟುವಟಿಕೆಯಲ್ಲೂ ಬದಲಾದರೆ ಮಾತ್ರ ರೈತ ಬದುಕಬಹುದು. ಇದನ್ನು ತನ್ನ ಸುಧೀರ್ಘ ಕೃಷಿ ಕಾಯಕದಲ್ಲಿ ತಿಳಿದುಕೊಂಡ ಐವರ್ನಾಡಿನ ಪುತ್ತಿಲ ಶ್ರೀಧರ ಗೌಡರು ಸಮಗ್ರ ಕೃಷಿಯನ್ನು ಅವಲಂಬಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಶ್ರೀಧರ ಗೌಡರು ಕಳೆದ ೨೫ ವರ್ಷಗಳಿಂದ ಹೈನುಗಾರಿಕೆನ್ನು ಮಾಡಿಕೊಂಡು ಬಂದಿದ್ದಾರೆ. ಊರಿನ ತಳಿಯನ್ನೇ ಸಾಕುತ್ತಿರುವ ಇವರು ಪ್ರತಿದಿನ ೪೦ ಲೀಟರ್ ಹಾಲನ್ನು ಡೈರಿಗೆ ಹಾಕುತ್ತಿದ್ದಾರೆ. ಹಾಲು ಕರೆಯಲು ಮತ್ತು ಹಸುಗಳನ್ನು ತೊಳೆಯಲು ಯಂತ್ರಗಳನ್ನು ಬಳಸುತ್ತಾರೆ. ಗೋಬರ್ ಗ್ಯಾಸ್ ಮಾಡಿ ಸ್ಲರಿಯನ್ನು ಅಡಿಕೆ ತೋಟಕ್ಕೆ ಬಳಸುತ್ತಾರೆ. ಹಟ್ಟಿ ತೊಳೆದ ನೀರು ಹಾಗೂ ಗೋಮೂತ್ರವನ್ನು ಪೈಪು ಮೂಲಕ ಅದನ್ನು ಟಾಂಕಿಗೆ ತುಂಬಿಸಿ ಅಲ್ಲಿಂದ ತೋಟಕ್ಕೆ ಉಪಯೋಗಿಸುತ್ತಾರೆ.
೩ ಎಕ್ರೆ ತೋಟದಲ್ಲಿ ಸಾವಯವ ಗೊಬ್ಬರವನ್ನು ಬಳಸಿ ಅಡಿಕೆ, ತೆಂಗು, ಕರಿಮೆಣಸು, ಬಾಳೆ ಕೃಷಿಯನ್ನು ಮಾಡುತ್ತಾರೆ. ಇದರೊಂದಿಗೆ ಇತರ ಬೆಳೆಗಳನ್ನು ಬೆಳೆಯುತ್ತಾರೆ. ಮನೆಗೆ ಬೇಕಾದ ತರಕಾರಿಗಳನ್ನು ತಮ್ಮಲ್ಲೇ ಬೆಳೆಯುತ್ತಾರೆ. ಗೇರು, ಮಾವು, ಹಣ್ಣಿನ ಗಿಡಗಳು,ಹೂವಿನ ಗಿಡಗಳನ್ನು ಬೆಳೆದು ನರ್ಸರಿ ಮಾಡಿಕೊಂಡಿದ್ದಾರೆ.  ಶ್ರೀಧರ ಗೌಡರ ನರ್ಸರಿಯಲ್ಲಿ ಎಲ್ಲಾ ವಿಧದ ಅಡಿಕೆ ಗಿಡಗಳು, ತೆಂಗು, ಹಣ್ಣಿನ ಗಿಡಗಳು, ಔಷಧಿ ಸಸ್ಯಗಳು ಲಭ್ಯವಿದೆ. ತಮ್ಮ ಜಮೀನಿನಲ್ಲಿ ನೀರಿಂಗಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಕೆರೆಯಿಂದ ಹರಿದು ಹೋಗುವ ನೀರನ್ನು ನೇರವಾಗಿ ಬೋರ್ ವೆಲ್ ಗೆ ಹರಿಸಿ ಇಂಗುವಂತೆ ಮಾಡಿರುವುದರಿಂದ ನೀರು ಪೋಲಾಗಿ ಹೋಗದಂತೆ ತಡೆದಿದ್ದಾರೆ.
ತೋಟದ ಅಲ್ಲಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಕೃಷಿಯನ್ನು ಮಾಡುತ್ತಿದ್ದಾರೆ. ವರ್ಷಕ್ಕೆ ೪೦ ಕೆ.ಜಿ. ಯಷ್ಟು ಜೇನು ಮಾರಾಟ ಮಾಡುತ್ತಾರೆ. ಶ್ರೀಧರ ಗೌಡರ ಕೃಷಿ ಸಾಧನೆ ಗಾಗಿ ಉತ್ತಮ ಹೈನುಗಾರಿಕೆ ಪ್ರಶಸ್ತಿ, ಸುಳ್ಯ ಜಾತ್ರೆಯ ಸಂದರ್ಭದಲ್ಲಿ ಸನ್ಮಾನ, ಕಾಮಧೇನು ಜಾನುವಾರು ಮೇಳದಲ್ಲಿ ೨ ಬಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಕೃಷಿ ಕಾರ್ಯಗಳಿಗೆ ಪತ್ನಿ ಚಂದ್ರಾವತಿ, ಮಗ ಅಡ್ಕಾರ್ ಮಿನರಲ್ ವಾಟರ್ ಕಂಪನಿಯ ಉದ್ಯೋಗಿ ಪ್ರವೀಣ್ ಬಿಡುವಿನ ವೇಳೆಯಲ್ಲಿ ಸಹಕರಿಸುತ್ತಿದ್ದಾರೆ. ಸಮಗ್ರ ಕೃಷಿ, ಕೃಷಿ ಗಿಡಗಳ ಮಾಹಿತಿ, ಲಾಭದಾಯಕ ಕೃಷಿ ಪದ್ದತಿ ಬಗ್ಗೆ ಶ್ರೀಧರ ಗೌಡರನ್ನು ಸಂಪರ್ಕಿಸಬಹುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.