’ಮರಳಿ ಯತ್ನವ ಮಾಡು… ಸಾಧಿಪುದು ಕಾರ್ಯವದು’ ಎಂಬ ನಾಣ್ನುಡಿಯಲ್ಲಿ ನಂಬಿಕೆ ಇರಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ| ರಘುರವರು ಮೂರು ಬಾರಿಯ ಸೋಲನ್ನು ಮರೆತು ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆ ಗಿಳಿದಿದ್ದಾರೆ. ಪಕ್ಷವೂ ಅವರಿಗೆ ಅವಕಾಶ ನೀಡಿದೆ. ಪ್ರತಿ ಬಾರಿಯೂ ಸೋಲಿನ ಅಂತರ ಕಡಿಮೆಯಾಗುತ್ತಾ ಕಳೆದ ಬಾರಿ ಕೇವಲ ೧೩೭೦ ಆಗಿರುವುದರಿಂದ ಜನಾಭಿಪ್ರಾಯದ ನೆಲೆಯಲ್ಲಿ, ತನ್ನ ಕೊನೆಯ ಅವಕಾಶದ ಲ್ಲಿ ಶಾಸಕನಾಗುವ ಅದೃಷ್ಠ ಪಡೆಯುವೆನೆಂಬ ವಿಶ್ವಾಸದಿಂದಿರುವ ೬೩ ರ ಹರೆಯದ ಡಾ| ರಘುರವರು ಬಿಡುವಿಲ್ಲದ ಪ್ರಚಾರದ ನಡುವೆಯೂ ’ಸುದ್ದಿ’ ಕಚೇರಿಗೆ ಬಂದು ಸಂದರ್ಶನಕ್ಕೆ ಕುಳಿತರು.
- 3 ಬಾರಿ ಸೋತವರಿಗೆ ಟಿಕೆಟ್ ಕೊಡುವುದಿಲ್ಲವೆಂಬ ನಿಯಮ ಪಕ್ಷದಲ್ಲಿದ್ದರೂ ನಿಮಗೆ ೪ನೇ ಬಾರಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ಏನನಿಸುತ್ತದೆ? ಈ ಬಾರಿಯಾದರೂ ಗೆಲ್ಲುವ ಸಾಧ್ಯತೆ ಇದೆಯೇ?
–ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ. ೩ ಬಾರಿ ಸೋತವರಿಗೆ ಟಿಕೆಟ್ ಇಲ್ಲ ಎಂಬ ನಿಯಮ ಪಕ್ಷದಲ್ಲಿತ್ತು. ಆದರೆ ನಾನು ಕಳೆದ ೧೫ ವರ್ಷಗಳಿಂದ ಇಲ್ಲಿ ಪಕ್ಷದಲ್ಲಿ ಸಕ್ರಿಯನಾಗಿ ದುಡಿಯುತ್ತಿzನೆ. ಮತ್ತು ಮೂರು ಬಾರಿಯ ಚುನಾವಣೆಯಲ್ಲಿಯೂ ಪ್ರತೀ ಸಲ ಕೂಡಾ ನನ್ನ ಗೆಲುವಿನ ಅಂತರ ಕಡಿಮೆಯಾಗುತ್ತ ಬಂದಿದೆ. ಈ ನಿಟ್ಟಿನಲ್ಲಿ ಪಕ್ಷ ನನಗೆ ಟಿಕೆಟ್ ನೀಡಿದೆ. - ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಸಾಂಕವಾಗಿ ಎಷ್ಟು ಬಲಿಷ್ಠವಾಗಿದೆಯೋ ಅಷ್ಟು ಬಲಿಷ್ಟವಾಗಿ ಕಾಂಗ್ರೆಸ್ ಇಲ್ಲ ಎಂಬುದನ್ನು ನೀವು ಒಪ್ಪುತ್ತೀರಾ? ಪಕ್ಷ ಸಂಘಟನೆಯನ್ನು ಮೀರಿ ಜನ ಈ ಬಾರಿ ನಿಮ್ಮ ಪರವಾಗಿ ಮತ ಚಲಾಯಿಸುತ್ತಾರಾ?
-ಬಿಜೆಪಿ ಬಲಿಷ್ಠವಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ನಾವೂ ಕೂಡಾ ಬೂತ್ ಮಟ್ಟದಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡಿzವೆ. ಮನೆ ಮನೆ ಕಾಂಗ್ರೆಸ್, ವನ್ ಪೇಜ್ ವನ್ ಫ್ಯಾಮಿಲಿ ಎಂಬ ಕಾರ್ಯಕ್ರಮದ ಮೂಲಕ ಸಂಘಟನೆ ಮಾಡಿದ್ದೇವೆ. ಮತ್ತು ನಾನು ಕೆಲಸ ಮಾಡುವ ಅಭ್ಯರ್ಥಿ ಎಂದು ಜನರಿಗೆ ಗೊತ್ತಾಗಿದೆ. ಆದ್ದರಿಂದ ಈ ಬಾರಿ ನಮ್ಮನ್ನು ಗೆಲ್ಲಿಸುತ್ತಾರೆ. - ಯಾವ ಕಾರಣಕ್ಕಾಗಿ ಜನ ಈ ಬಾರಿ ನಿಮ್ಮನ್ನು ಶಾಸಕರಾಗಿ ಆರಿಸುತ್ತಾರೆ ? ಮತ್ತು ನಿಮ್ಮನ್ನೇ ಯಾಕೆ ಆರಿಸಬೇಕು?
-ಮೂರು ಚುನಾವಣೆಯಲ್ಲಿಯೂ ನನ್ನ ಗೆಲುವಿನ ಅಂತರ ಕಡಿಮೆಯಾಗಿದೆ. ಅದಲ್ಲದೆ ಕ್ಷೇತ್ರದ ಸಂಪರ್ಕ ನಿರಂತರ ಇಟ್ಟುಕೊಂಡಿನೆ. ಗ್ರಾ.ಪಂ ನಿಂದ ಹಿಡಿದು ನಡೆದ ಎಲ್ಲಾ ಚುನಾವಣೆಗಳಲ್ಲೂ ತೊಡಗಿಸಿಕೊಂಡಿದ್ದೇನೆ. ನನ್ನ ಮೇಲೆ ಜನರಿಗೆ ನಂಬಿಕೆ ಇದೆ. ನಾನು ಭಾಷಣಗಾರನಲ್ಲ. ಆದರೆ ಕೆಲಸ ಗಾರ ಎಂಬ ನಂಬಿಕೆ ಜನರಿಗೆ ಬಂದಿರುವುದರಿಂದ ನನ್ನನ್ನೇ ಆರಿಸುತ್ತಾರೆ. ಶಾಸಕರಲ್ಲದೆಯೂ ಹಲವಾರು ಕೋಟಿ ರೂ.ಗಳ ವಿಶೇಷ ಅನುದಾನ ಇಲ್ಲಿಗೆ ತರಿಸಿದ್ದೇನೆ. - ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಕಳೆದ ೧೫ ವರ್ಷಗಳಿಂದ ನೀವು ಸುತ್ತುತ್ತಿದ್ದೀರಿ. ನೀವು ಗುರುತಿಸಿದಂತೆ ಈ ಕ್ಷೇತ್ರದ ಅತ್ಯಂತ ಅವಶ್ಯಕವಾದ ಮೇಜರ್ ಬೇಡಿಕೆಗಳು ಯಾವುದು?
–ವಿದ್ಯುತ್ ಮತ್ತು ನೀರಿನ ಅಭಾವ ಈ ಕ್ಷೇತ್ರದಲ್ಲಿ ತುಂಬಾ ಇದೆ. ೧೧೦ ಕೆ.ವಿ. ಸಬ್ಸ್ಟೇಶನ್ ಇಲ್ಲಿ ಆಗದಿರುವುದರಿಂದ ಸಮಸ್ಯೆ ಇದೆ. ಮತ್ತು ಸುಳ್ಯದಲ್ಲಿ ನೀರಿನ ಸಮಸ್ಯೆ. ಕಳೆದ ಬೇಸಿಗೆಯಲ್ಲಿ ನದಿ ಬತ್ತಿ ಹೋಗಿರುವುದನ್ನು ನಾವು ಕಂಡಿzವೆ. ಇದೆಲ್ಲ ಮುಖ್ಯವಾದ ಸಮಸ್ಯೆಗಳು. ಮತ್ತು ಗ್ರಾಮೀಣ ಭಾಗದಲ್ಲಿ ಶೇ.೭೫ ರಷ್ಟು ರಸ್ತೆಗಳಿಗೆ ಇನ್ನೂ ಡಾಂಬರು ಆಗಿಲ್ಲ. ಅದು ಮುಖ್ಯ ಸಮಸ್ಯೆಯಲ್ಲೊಂದು. ನದಿಗಳಿಗೆ ವೆಂಟೆಡ್ ಡ್ಯಾಂ ನಿರ್ಮಿಸಿದರೆ ಕುಡಿಯುವ ನೀರು ಸಿಗುತ್ತದೆ.ಅಂತರ್ಜಲವೂ ವೃದ್ಧಿಯಾಗುತ್ತದೆ. ಅದನ್ನು ಮಾಡಿಸಬೇಕು. - ಶಾಸಕ ಅಂಗಾರರು ಹಲವಾರು ಕೆಲಸಗಳನ್ನು ಮಾಡಿದ್ದರೂ ಕೂಡಾ ನೀವು ರಾಜಕೀಯ ಕಾರಣಕ್ಕಾಗಿ ಅದನ್ನೆಲ್ಲ ಇಲ್ಲ ಎನ್ನುತ್ತಿರುವಿರಾ?
-ಶಾಸಕ ಅಂಗಾರರು ಕೆಲಸ ಮಾಡಿಲ್ಲ ಎಂದು ಹೇಳುವುದಿಲ್ಲ. ಆದರೆ ೨೪ ವರ್ಷ ಶಾಸಕರಾಗಿದ್ದವರು ಬೇರೆಯವರಿಗೆ ಹೋಲಿಸಿದರೆ ಕೆಲಸ ಮಾಡಿರುವುದು ಸಾಲದು ಎನ್ನುವುದು ನನ್ನ ಅಭಿಪ್ರಾಯ. - ನಿಮ್ಮ ಕ್ಷೇತ್ರದಲ್ಲಿ ಏನು ಕೆಲಸ ಮಾಡಿಸುತ್ತೀರಿ ಎಂಬ ಕ್ಷೇತ್ರ ಪ್ರಣಾಳಿಕೆ ತಯಾರಿಸಿದ್ದೀರಾ? ಯಾವುದರ ಆಧಾರದಲ್ಲಿ ಜನರ ಬಳಿಗೆ ಹೋಗುತ್ತೀರಿ?
–ಪ್ರತ್ಯೇಕ ಪ್ರಣಾಳಿಕೆಯೇನೂ ಮಾಡಿಲ್ಲ. ಆದರೆ ಮೇಲೆ ಹೇಳಿದಂತೆ ವಿದ್ಯುತ್ ಮತ್ತು ನೀರು, ರಸ್ತೆ, ವೆಂಟೆಡ್ ಡ್ಯಾಂ ಮೊದಲಾದ ವಿಚಾರಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಜತೆಗೆ ನಮ್ಮ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯದಿಂದ ಹಿಡಿದು ಕೃಷಿ ಸಾಲಮನ್ನಾ, ವಿದ್ಯಾ ಸಿರಿ ಹೀಗೆ ಎಲ್ಲಾ ಯೋಜನಗಳು ಜನ ಪರವಾಗಿದ್ದು ಇದೆಲ್ಲವನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗುತ್ತಿದೆ. - ಎಂ.ಬಿ.ಬಿ.ಎಸ್. ಕಲಿತು, ಸುಮಾರು ೨೫ ವರ್ಷ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ಶಾಸಕರಾಗಬೇಕೆಂಬ ಆಕಾಂಕ್ಷೆಯಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿರಿ. ೩ ಬಾರಿಯೂ ಸೋತಾಗ ನಿಮಗೆ ’ನಾನು ಆಯ್ಕೆ ಮಾಡಿಕೊಂಡ ಪಕ್ಷ ತಪ್ಪಾಯಿತು’ ಎಂದಾಗಲೀ, ’ಬಿಜೆಪಿಯಲ್ಲಿ ವೋಟಿಗೆ ನಿಲ್ಲುತ್ತಿದ್ದರೆ ನಾನು ಶಾಸಕನಾಗಿರುತ್ತಿದ್ದೆ’ ಎಂದಾಗಲೀ ಅನಿಸಿದ್ದಿದೆಯೇ?
-ಖಂಡಿತವಾಗಿಯೂ ಇಲ್ಲ. ಕಾಂಗ್ರೆಸ್ ಪಕ್ಷದ ಆದರ್ಶ ತತ್ವಗಳನ್ನು ಮೆಚ್ಚಿ ನಾನು ಪಕ್ಷಕ್ಕೆ ಬಂದೆ. ಅದಕ್ಕಾಗಿ ನಾನು ನನ್ನ ವೈದ್ಯ ವೃತ್ತಿಗೆ ಸ್ವಯಂ ನಿವೃತ್ತಿ ನೀಡಿದ್ದೇನೆ. - ಈ ಬಾರಿ ನಿಮಗೆ ಕೊನೆಯ ಅವಕಾಶ. ಈ ಬಾರಿ ಗೆಲ್ಲಲು ಜನರ ಮನ ಪರಿವರ್ತನೆಗೆ ಯಾವ ಕಾರ್ಯತಂತ್ರ ಅನುಸರಿಸುತ್ತೀರಿ?
– ಈ ಬಗ್ಗೆ ಎಲ್ಲಾ ಸಿದ್ಧತೆಗಳೂ ಪಕ್ಷದ ವತಿಯಿಂದ ಮಾಡಿಕೊಂಡಿzವೆ. ೨೩೦ ಬೂತ್ಗಳಲ್ಲಿಯೂ ಕಾರ್ಯಕರ್ತರು ಮನೆ ಮನೆ ಬೇಟಿ ಮಾಡುತ್ತಿದ್ದಾರೆ. ನಂಬರ್ ವನ್ ಆಗಿ ಸರಕಾರದ ಸಾಧನೆಯನ್ನೇ ಮುಂದಿಡುತ್ತೇವೆ. ಮತ್ತೊಂದು ಇಲ್ಲಿ ಆಗಬೇಕಾಗಿರುವ ಮತ್ತು ಆಗದೇ ಉಳಿದಿರುವ ಕೆಲಸ ಕುರಿತು ಜನರಿಗೆ ತಿಳಿಸುತ್ತೇವೆ. - ’ಅಂಗಾರರೇ ಪಾಪ – ನೀವು ಅವರಿಗಿಂತ ಪಾಪ’ ಎಂದು ಜನ ಹೇಳುತ್ತಿದ್ದಾರೆ. ಶಾಸಕರಾದರೆ ಅಧಿಕಾರಿಗಳಿಂದ ಕೆಲಸ ಮಾಡಿಸಲು ನಿಮ್ಮಿಂದ ಸಾಧ್ಯವೇ?
– ಆ ಮಾತನ್ನು ನಾನು ಒಪ್ಪುವುದಿಲ್ಲ. ನಾನೂ ಕೂಡಾ ೨೮ ವರ್ಷ ಸರಕಾರಿ ಸೇವೆಯಲ್ಲಿದ್ದವನು. ನಾನು ಸರ್ವಿಸ್ ನಲ್ಲಿರುವಾಗ ಬೀಡಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿ ಅಲ್ಲಿ ಕೆಲಸ ಮಾಡಿದ ಅನುಭವ ಇದೆ. ಆಗ ವೀರಪ್ಪ ಮೊಯಿಲಿಯವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭ. ಬೀಡಿ ಕಾರ್ಮಿಕರಿಗೆ ಮನೆ ಕೊಡುವ ಯೋಜನೆಯಿತ್ತು. ಸುಮಾರು ೧ ಸಾವಿರ ಮನೆಗಳನ್ನು ಕೊಡಿಸುವ ಕೆಲಸವನ್ನು ನಾನು ಮಾಡಿದ್ದೇನೆ. ಇಲ್ಲಿ ಪಾಪದ ಪ್ರಶ್ನೆ ಬರುವುದಿಲ್ಲ. ಕೆಲಸದಲ್ಲಿ ಯಶಸ್ಸು ಆದರೆ ಸಾಕು. ನಮಗೆ ಕೆಲಸ ಮಾಡಿಸಲು ಗೊತ್ತಿದೆ. ಅದರಲ್ಲಿ ಯಶಸ್ವಿಯಾಗುತ್ತೇವೆ. - ಶೋಷಿತ ವರ್ಗದವರ ಪರವಾಗಿ, ಬಡ ಕೂಲಿ ಕಾರ್ಮಿಕರ ಬೀಡಿ ಕಟ್ಟುವವರ ಪರವಾಗಿ ನಿಮ್ಮ ನಿಲುವುಗಳೇನು ?
–ನಾನು ಸುಳ್ಯದಲ್ಲಿ ಸರಕಾರಿ ಸೇವೆಗೆ ಬರುವಾಗ ಇಲ್ಲಿ ಬಿಡಿ ಕಾರ್ಮಿಕರಿಗೆ ಚಿಕಿತ್ಸೆ ಕೊಡಿಸುವ ಕೇಂದ್ರ ಆಗಬೇಕೆಂದು ಸರಕಾರಕ್ಕೆ ಬರೆದಿದ್ದೆ. ಬಳಿಕ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಅದು ಅಲ್ಲಿಗೆ ಬಿದ್ದು ಹೋಯಿತು. ಈಗ ನೋಡಿದರೆ ಬೀಡಿ ಕಟ್ಟುವವರ ಸಂಖ್ಯೆಯೇ ಕಡಿಮೆಯಾದಂತಿದೆ. ಮುಚ್ಚುವ ಹಂತದಲ್ಲಿದೆ. ಆದ್ದರಿಂದ ಅವರಿಗೆ ಪರ್ಯಾಯ ಕೆಲಸದ ವ್ಯವಸ್ಥೆ ಆಗಬೇಕು. ಜತೆಗೆ ಬೀಡಿ ಕಾರ್ಮಿಕರಿಗೆ ಯಾವ ಸೌಲಭ್ಯ ಸಿಗಬೇಕೋ ಅದೆಲ್ಲವನ್ನು ಕೊಡಿಸಲು ನಾನು ಜತೆಗಿರುತ್ತೇನೆ. ಶೋಷಣೆಗೊಳಗಾದವರ ಪರ ಈ ಹಿಂದೆಯೂ ನಾವು ಇದ್ದೆವು. ಮುಂದೆಯೂ ಇರುತ್ತೇವೆ.
11.ಮೀಸಲು ಕ್ಷೇತ್ರದಿಂದ ಆಯ್ಕೆಯಾಗುವವರು ಇಡೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟರ ಯೋಗ ಕ್ಷೇಮಕ್ಕಾಗಿ ದುಡಿಯಬೇಕಲ್ಲವೇ?
ನಾನು ಸುಳ್ಯದ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುವುದರಿಂದ ಸುಳ್ಯಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಉಳಿದಂತೆ ಇತರ ಕಡೆಯೂ ದಲಿತರಿಗೆ ಅನ್ಯಾಯವಾದಾಗ ಅವರ ಪರ ಧ್ವನಿ ಎತ್ತಲು ಯಾವತ್ತೂ ಇರುತ್ತೇನೆ.