HomePage_Banner
HomePage_Banner
HomePage_Banner
HomePage_Banner

ತಾಲೂಕಿನಲ್ಲಿ ಹೆಚ್ಚುತ್ತಿರುವ ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳು: ಸ್ವಚ್ಛತೆಯತ್ತ ಗಮನ ಕೊಡಿ, ಸೊಳ್ಳೆ ಬರದಂತೆ ಎಚ್ಚರ ವಹಿಸಿ

     

    ಒಂದು ಕಡೆಯಲ್ಲಿ ಬಾವಲಿ ಜ್ವರ ಜನರ ನಿದ್ದೆಗೆಡಿಸಿದರೆ ಇನ್ನೊಂದು ಕಡೆಯಲ್ಲಿ ಅದೇ ಹಳೇಯ ಡೆಂಗ್ಯೂ ಜ್ವರ ಮತ್ತೆ ತಾಲೂಕಿನಾದ್ಯಂತ ಸುದ್ದಿ ಮಾಡುತ್ತಿದೆ. ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ಶಂಕಿತ ಡೆಂಗ್ಯೂ ಜ್ವರ ಲಕ್ಷಣಗಳು ಜನರಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಸೊಳ್ಳೆಗಳ ನಿರ್ಮೂಲನಕ್ಕಾಗಿ ಇಲಾಖೆ ಈಗಾಗಲೇ ವಿವಿಧ ರೀತಿಯ ಕ್ರಮ ಕೈಗೊಂಡಿದೆ.ತಾಲೂಕಿನ ವಿವಿಧ ಕಡೆಗಳಲ್ಲಿ ಶಂಕಿತ ಡೆಂಗ್ಯೂ ಜ್ವರ ಲಕ್ಷಣಗಳು ಜನರಲ್ಲಿ ಕಂಡು ಬಂದಿದ್ದು ಆದರೆ ಅಧಿಕೃತವಾಗಿ ಡೆಂಗ್ಯೂ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಡೆಂಗ್ಯೂ ಜ್ವರಕ್ಕೆ ಮುಖ್ಯವಾಗಿ ಸೊಳ್ಳೆಗಳೇ ಕಾರಣವಾಗಿರುವುದರಿಂದ ಸೊಳ್ಳೆಗಳ ನಿಯಂತ್ರಣ ಮಾಡುವುದೇ ಸೂಕ್ತ ಕ್ರಮವಾಗಿದೆ.ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡುವುದು ಅತೀ ಅಗತ್ಯವಾಗಿದೆ.

ಡೆಂಗ್ಯು ಭೀತಿಯಲ್ಲಿ ಜನತೆ..
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳಲ್ಲಿ ಡೆಂಗ್ಯು ಮೊದಲನೇ ಸ್ಥಾನದಲ್ಲಿದೆ. ಮೂಳೆಗಂಟುಗಳಲ್ಲಿ ಅತಿಯಾದ ನೋವು, ತೀವ್ರತರದ ಜ್ವರ, ವಾಂತಿ ಇವು ಇದರ ಲಕ್ಷಣಗಳು. ಏಡಿಸ್ ಈಜಿಪ್ತೆ ಹೆಸರಿನ ಸೊಳ್ಳೆ ಈ ರೋಗವನ್ನು ಹರಡುತ್ತಿದೆ. ಪ್ರತಿ ವರ್ಷ 10 ಕೋಟಿ ಜನರಿಗೆ ಈ ರೋಗ ಹರಡುತ್ತಿದ್ದು, ಇದರಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಮಕ್ಕಳ ಸಂಖ್ಯೆಯೇ ಜಾಸ್ತಿ. ಡೆಂಗ್ಯು ಜ್ವರಕ್ಕೆ ಪರಿಣಾಮಕಾರಿ ಔಷಧಿ ಎಂಬುದೇ ಇಲ್ಲ. ಸೊಳ್ಳೆಗಳನ್ನು ನಾಶಪಡಿಸುವುದೊಂದೆ ಪರಿಣಾಮಕಾರಿ ಔಷಧಿ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಈ ಏಡಿಸ್ ಈಜಿಪ್ತೆ ಸೊಳ್ಳೆ ಸುಲಭದಲ್ಲಿ ಸಾಯುವುದಿಲ್ಲ. ಎಂಥಹ ಕೀಟನಾಶಕ ಸಿಂಪಡಿಸಿದರೂ ಇದರ ದೇಹದೊಳಗೆ ಒಂದು ರೀತಿಯ ಪ್ರತ್ಯೌಷಧ ಉತ್ಪತ್ತಿಯಾಗುತ್ತದೆ. ಈ ಔಷಧದಿಂದ ಸೊಳ್ಳೆ ಬದುಕಿ ಉಳಿಯುತ್ತದೆ.ಆದ್ದರಿಂದ ಸೊಳ್ಳೆಗಳ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳುವುದೇ ಲೇಸು.

ಸ್ವಚ್ಛತೆಯತ್ತ ಗಮನ ಕೊಡಿ, ಸೊಳ್ಳೆಗಳನ್ನು ದೂರವಿರಿಸಿ..
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗ ಬಂದ ಮೇಲೆ ನರಳಿ, ಹಣ ಖರ್ಚು ಮಾಡುವ ಬದಲು ಈ ರೋಗ ಬರದಂತೆ ತಡೆಯುವುದೇ ವಾಸಿ.ಸೊಳ್ಳೆಯನ್ನು ನಿರ್ನಾಮ ಮಾಡಲಾಗದಿದ್ದರೂ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು ತುಂಬಾ ಉತ್ತಮ. ಇದಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಹೂಕುಂಡಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ, ಡಬ್ಬಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಸೊಳ್ಳೆ ಪರದೆಗಳನ್ನು ಬಳಸಿ, ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಹಾಕಿ, ಸಂಜೆ ಮತ್ತು ಬೆಳಗ್ಗಿನ ಜಾವ ಬಾಗಿಲು, ಕಿಟಕಿಗಳನ್ನು ಮುಚ್ಚಿರಿ, ಕುಡಿಯುವ ನೀರು ಶುದ್ಧವಾಗಿರಲಿ, ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ,ಸೊಳ್ಳೆ ಬತ್ತಿ, ಲಿಕ್ವಿಡ್ ಅಥವಾ ಕರ್ಪೂರಗಳನ್ನು ಬಳಸುವುದರ ಮೂಲಕ ಸೊಳ್ಳೆಯನ್ನು ದೂರವಿರಿಸಿ. ಹೊರಗೆ ಕೊಳಚೆ ನೀರು ನಿಂತುಕೊಂಡಿದ್ದರೆ, ಅಥವಾ ಕೊಳಚೆ ತುಂಬಿದ ಜೌಗು ಪ್ರದೇಶ ಇದ್ದರೆ ಆ ನೀರಿನಲ್ಲಿ ಇರುವ ಸೊಳ್ಳೆಗಳ ಲಾರ್ವ ನಾಶಕ್ಕೆ ಗ್ಯಾಂಬೂಸಿಯಾ ಅಥವಾ ಗಪ್ಪಿ ಮೀನುಗಳನ್ನು ಹಾಕಬಹುದು. ಈ ಮೀನುಗಳು ಸೊಳ್ಳೆಗಳ ಲಾರ್ವ ತಿನ್ನುತ್ತವೆ.

ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಹತ್ತಿರದ ವೈದ್ಯರನ್ನು ಸಂಪರ್ಕಿಸಿರಿ:
ಡೆಂಗ್ಯೂ, ಮಲೇರಿಯಾ ಅಂತಲ್ಲ ಯಾವುದೇ ಜ್ವರ ಬಂದರೂ ಅದರ ಬಗ್ಗೆ ನಿರ್ಲಕ್ಷ್ಯ ಭಾವನೆ ಬೇಡ. ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣಗಳೆಂದರೆ ಹೆಚ್ಚಿನ ಜ್ವರ, ವಿಪರೀತ ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿಗಳಲ್ಲಿ ನೋವು, ಕೆಲವೊಮ್ಮೆ ಚರ್ಮಗಳಲ್ಲಿ ಒಂದು ಥರದ ಗುಳ್ಳೆಗಳು ಅಥವಾ ದದ್ದುಗಳು ಬರಬಹುದು.ಡೆಂಗ್ಯೂ ಜ್ವರವು ವೈರಸ್‌ನಿಂದ ಬರುವುದರಿಂದ ಡೆಂಗ್ಯೂ ವೈರಸ್ ವ್ಯಕ್ತಿಯ ದೇಹಕ್ಕೆ ಸೋಂಕು ಆದ ಮೂರು ಅಥವಾ ಹದಿನಾಲ್ಕು ದಿನಗಳ ನಂತರ ಈ ಎಲ್ಲಾ ಲಕ್ಷಣಗಳು ಗೋಚರಿಸಲೂಬಹುದು. ಒಟ್ಟಿನಲ್ಲಿ ಜ್ವರದ ಬಗ್ಗೆ ತಾತ್ಸಾರ ಬೇಡ. ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿದುಕೊಳ್ಳುವುದು ಉತ್ತಮ.

 

ಕಳೆದ ವರ್ಷಕ್ಕಿಂತ ಡೆಂಗ್ಯೂ ಪ್ರಕರಣ ಕಡಿಮೆ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬಂದಿರುವುದು ಕಡಿಮೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಅಧಿಕ ಸಂಖ್ಯೆಯಲ್ಲಿ ಡೆಂಗ್ಯೂ ವೈರಸ್ ಜ್ವರ ಪತ್ತೆಯಾಗಿತ್ತು. ಒಂದೆರಡು ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದರು ಆದರೆ ಈ ವರ್ಷ ಗಣನೀಯ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಇನ್ನಷ್ಟೇ ಪೂರ್ಣ ಪ್ರಮಾಣದ ಮಳೆಗಾಲ ಆರಂಭವಾಗಬೇಕಿದ್ದು ಮಳೆಗಾಲದಲ್ಲಿ ಸೊಳ್ಳೆಗಳ ಬಗ್ಗೆ ಸಾರ್ವಜನಿಕರು ಜಾಗೃತೆಯಿಂದರಬೇಕು, ಸಾಧ್ಯವಾದಷ್ಟು ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಯಾವುದೇ ರೀತಿಯ ಜ್ವರಗಳು ಬರದಂತೆ ನೋಡಿಕೊಳ್ಳಬೇಕಾಗಿದೆ ಎಂದು ಆರೋಗ್ಯ ಇಲಾಖಾ ಸೂಚನೆ ನೀಡಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.