ಸಮ್ಮಿಶ್ರ ಕೃಷಿಯಿಂದ ಖುಷಿ ಕಂಡ ಬದುಕು ! ಕಠಿಣ ಕಾಯಕದಿಂದ ಮಾದರಿಯಾದ ಕೊಕುಳಿ ಪುರುಷೋತ್ತಮ ಗೌಡ

Advt_Headding_Middle
Advt_Headding_Middle

ಪ್ರಾಕೃತಿಕ ವಿಕೋಪ, ಬೆಳೆ ಕುಸಿತ, ಬೆಲೆ ಕುಸಿತ… ಹೀಗೆ ನಾನಾ ಕಾರಣಗಳಿಂದ ಕೃಷಿ ಬದುಕು ಕಷ್ಟ ವಾಗುತ್ತಿರುವ ಇಂದಿನ ದಿನಗಳಲ್ಲಿ ಸಮ್ಮಿಶ್ರ ಬೆಳೆಯ ಮೂಲಕ ಖುಷಿ ಕಂಡ ಕೃಷಿ ಸಾಧಕರೊಬ್ಬರು ಮಾದರಿ ಯಾಗಿದ್ದಾರೆ.

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗಲಡ್ಕ ಸಮೀಪದ ಕೊಕುಳಿಯ ಪುರುಷೋತ್ತಮ ಗೌಡ ಈ ಕೃಷಿ ಸಾಧಕ. ನಿರಂತರ ಶ್ರಮ, ಕಠಿಣ ದುಡಿಮೆ, ದೂರದೃಷ್ಟಿಯ ಯೋಚನೆ ಯೊಂದಿಗೆ ಇವರು ತನ್ನ ಕೃಷಿ ಭೂಮಿಯನ್ನು ಹಸಿರು ನಂದನ ವನವನ್ನಾಗಿಸಿದ್ದಾರೆ. ಕೃಷಿಯನ್ನು ತಪಸ್ಸಿನಂತೆ ತಾದಾತ್ಮ್ಯತೆಯಿಂದ ಕಾಣುವ ಈ ಗೌಡರು ಮುಟ್ಟಿದ್ದೆಲ್ಲಾ ಚಿನ್ನವನ್ನಾಗಿಸಿದ್ದಾರೆ.

ಸರಿ ಸುಮಾರು ಒಂಭತ್ತು ಎಕರೆ ವಿಸ್ತೀರ್ಣದ ಜಾಗವಿರುವ ಪುರುಷೋತ್ತಮ ಗೌಡರು ಇಲ್ಲಿ ಹೈನು ಗಾರಿಕೆ ಮತ್ತು ಕೃಷಿ ಪದ್ದತಿಯಲ್ಲಿ ದಾಖಲೆಯನ್ನೇ ನಿರ್ಮಿಸಿದ್ದಾರೆ. ಹೈನುಗಾರಿಕೆ, ಅಡಿಕೆ, ರಬ್ಬರ್, ಕಾಳು ಮೆಣಸು, ತೆಂಗು, ಕೊಕ್ಕೋ, ಕಾಫಿ, ಬಾಳೆ, ಆಡು ಸಾಕಣೆ, ನರ್ಸರಿ, ವೀಳ್ಯದೆಲೆ, ಜೇನು, ಮೀನುಗಾರಿಕೆ, ಕೋಳಿ ಸಾಕಣೆ, ತರಕಾರಿ, ಹಣ್ಣು ಹೀಗೇ ವೈವಿಧ್ಯ ಕೃಷಿ ಹಾಗೂ ಬೆಳೆಗಳ ಸಂಪನ್ನ ಹಾಗೂ ಸಮೃದ್ಧ ಭೂಮಿ ಇವರದು.

ಹೈನುಗಾರಿಕೆ:
ಇವರ ಕೃಷಿ ಭೂಮಿ ಪ್ರವೇಶಿಸು ತ್ತಿದ್ದಂತೆಯೇ ಇವರ ಹೈನುಗಾರಿಕೆಯ ಕ್ರಾಂತಿ ಕಥೆ ಅನಾವರಣಗೊಳ್ಳುತ್ತದೆ. ಇಲ್ಲಿ ಅತ್ಯಾಧುನಿಕ ಹಟ್ಟಿಯಲ್ಲಿ ೨೦ ರಾಸುಗಳಿವೆ.. ಈ ಪೈಕಿ ೧೨ ಹಾಲು ಕರೆಯುವ ದನಗಳಾಗಿದ್ದು, ೮ ಗಡಸುಗಳು. ಹೆಚ್.ಎಫ್., ಎ.ಎಚ್.ಎಫ್., ಜರ್ಸಿ, ನಾಟಿ ತಳಿಯ ಹಸುಗಳು ಇಲ್ಲಿದ್ದು, ೧೨ ದನಗಳಿಂದಲೇ ದಿನವೊಂದಕ್ಕೆ ೧೩೦ ಲೀ. ನಷ್ಟು ಹಾಲು ಕರೆಯುತ್ತಾರೆ. ಇದು ಈ ಭಾಗದ ದಾಖಲೆ ಕೂಡಾ. ಅತ್ಯಂತ ಕಠಿಣ ದಾಯಕ ಕೆಲಸ ಇದಾದರೂ ಅದರಲ್ಲೇ ನೆಮ್ಮದಿ ಕಾಣುತ್ತಾರೆ. ಇಲ್ಲಿ ದಿನಕ್ಕೆ ೬ ಬಾರಿ ಹಟ್ಟಿಯನ್ನು ತೊಳೆಯಬೇಕಾಗುತ್ತದೆ. ೨ ಬಾರಿ ಹಸುಗಳನ್ನು ತೊಳೆಯಬೇಕು. ನಿತ್ಯ ೨ ಬಾರಿ ಪಶು ಆಹಾರದೊಂದಿಗೆ ಅಜೋಲಾ ಮತ್ತು ಹೈಡ್ರೋಫೋನಿಕ್ ನೀಡಬೇಕು. ಇದೆಲ್ಲವನ್ನೂ ಈ ದಂಪತಿ ಖುಷಿಯಿಂದಲೇ ಮಾಡುತ್ತಾರೆ. ದಿನದಲ್ಲಿ ೩ ಬಾರಿ ಸೀಮೆ ಹುಲ್ಲು, ಒಣ ಹುಲ್ಲು ಮತ್ತು ತೋಟದ ಹುಲ್ಲನ್ನೂ ನೀಡುತ್ತಾರೆ. ಹಟ್ಟಿ ತೊಳೆಯಲು ಇಲ್ಲಿ ಯಂತ್ರವಿದೆ. ಒಣಗಿಸಲು ಫ್ಯಾನ್ ಅಳವಡಿಸಲಾಗಿದೆ. ಹಟ್ಟಿಗೆ ಫ್ಯಾನ್ ಮತ್ತು ಬಲ್ಬ್‌ಗಳನ್ನೂ ಅಳ ವಡಿಸಿದ್ದಾರೆ. ಹುಲ್ಲು ಕತ್ತರಿಸಲು ಯಂತ್ರ ಕೂಡಾ ಇಲ್ಲಿದೆ.

ಗೋದಿ ಬೂಸ, ಜೋಳ ಬೂಸ, ಲಕ್ಷ್ಮೀ ಗ್ರೀನ್ ಪೆಲ್ಲೆಟ್, ಮಿನರಲ್ ಮಿಕ್ಸರ್ ಕ್ಯಾಲ್ಸಿಯಂ, ತೋಟದ ಹುಲ್ಲು, ಸೀಮೆ ಹುಲ್ಲು, ಒಣ ಮೇವು, ಹೈಡ್ರೋಫೋನಿಕ್, ಅಜೋಲಾ, ಬಾಳೆದಿಂಡು ಮತ್ತು ಅಡಿಕೆ ಸೋಗೆ ಹಾಳೆಗಳನ್ನು ಪಶು ಆಹಾರವಾಗಿ ತಿನ್ನಿ ಸುವ ಪುರುಷೋತ್ತಮ ಗೌಡರು ಹಾಲನ್ನು ಪಕ್ಕದ ಹಾಲು ಸೊಸೈಟಿಗೆ ನೀಡುತ್ತಿದ್ದಾರೆ.ತಾಲೂಕಿನಲ್ಲಿ ಬೆರಳೆಣಿಕೆ ಯ ಹೈನುಗಾರರಿಗಷ್ಟೇ ಕೆ.ಎಂ.ಎಫ್. ಸಾಗಾಟ ವೆಚ್ಚ ನೀಡುತ್ತಿದ್ದು, ಈ ಅರ್ಹತೆಗೆ ಪುರುಷೋತ್ತಮ ಗೌಡ ಪಾತ್ರರಾಗಿದ್ದಾರೆ .

ಸೀಮೆ ಹುಲ್ಲು:
ಪಶು ಆಹಾರ ಉತ್ಪಾದನೆಗೆಂದೇ ಸೀಮೆ ಹುಲ್ಲಿನ ಕೃಷಿಯನ್ನೂ ನಡೆಸುತ್ತಿ ದ್ದು, ಒಂದೂವರೆ ಎಕ್ರೆಯಲ್ಲಿ ಸಂಪೂ ರ್ಣ ತಳಿಗಳ ಸೀಮೆ ಹುಲ್ಲನ್ನು ಬೆಳೆಸುತ್ತಿ ದ್ದಾರೆ. ಕೆರೆಯಲ್ಲಿ ಅಜೋಲಾ ಕೂಡಾ ಬೆಳೆಯಲಾಗಿದೆ. ಕಡಿಮೆ ಸ್ಥಳದಲ್ಲಿ ಕಡಿಮೆ ನೀರು ಬಳಸಿ ಹೈಡ್ರೋಫೋನಿಕ್ ವಿಧಾನದಿಂದ ಜೋಳದ ಹುಲ್ಲನ್ನು ಬೆಳೆ ಸುತ್ತಿದ್ದು, ಇದು ರಾಸುಗಳಿಗೆ ಅತ್ಯಂತ ಪೌಷ್ಠಿಕಾಂಶಯುಕ್ತ ಮೇವಾಗಿದೆ.

ಪುರುಷೋತ್ತಮ ಗೌಡರು ಕೃಷಿಗೆ ಪೂರಕವಾಗಿಯೇ ಹೈನುಗಾರಿಕೆ ನಡೆಸುತ್ತಿದ್ದಾರೆ. ಸ್ಲರಿ ಟ್ಯಾಂಕ್‌ನಿಂದ ತೋಟದಲ್ಲಿ ಸಾವಯವ ಮಾದರಿಯ ಕೃಷಿ ನಡೆಸುತ್ತಿದ್ದಾರೆ. ಹಟ್ಟಿಯನ್ನು ತೊಳೆದ ನೀರು ನೇರವಾಗಿ ಅಡಿಕೆ ತೋಟಕ್ಕೆ ಹೋಗುವುದರಿಂದ ವ್ಯರ್ಥ ವಾಗಿ ಮಾಲಿನ್ಯವಾಗುವುದಿಲ್ಲ. ಗೋ ಮೂತ್ರವನ್ನು ತರಕಾರಿ ಗಿಡಗಳಿಗೆ ಕ್ರಿಮಿನಾಶಕವಾಗಿ ಸಿಂಪಡಿಸುತ್ತಾರೆ. ಮನೆ ಬಳಕೆಗೆ ಗೋಬರ್ ಅನಿಲವನ್ನೂ ಉತ್ಪಾದಿಸುತ್ತಾರೆ.

ಗೌಡರ ೪ ಎಕ್ರೆ ತೋಟದಲ್ಲಿ ಎಕ್ರೆಗೆ ೧೦ ರಿಂದ ೧೨ ಕ್ವಿಂಟಾಲ್ ಅಡಿಕೆ ಫಸಲು ದೊರೆಯುತ್ತಿದೆ. ತೋಟದಲ್ಲಿ ಮಧ್ಯ ಬೆಳೆಯಾಗಿ ತೆಂಗನ್ನು ಕೂಡಾ ಬೆಳೆಯುತ್ತಿದ್ದು, ಸುಮಾರು ೧೦೦ ತೆಂಗಿನ ಮರಗಳಿವೆ. ಅಡಿಕೆ ಒಣಗಿಸಲು ಡ್ರೈಯರ್ ವ್ಯವಸ್ಥೆ ಮಾಡಲಾಗಿದೆ. ಅಡಿಕೆ ತೋಟದಲ್ಲಿ ಕದಳಿ, ಬೂದಿ, ನೇಂದ್ರ, ರಸಬಾಳೆ, ಕ್ಯಾವೆಂಡೀಸ್ ಮೊದಲಾದ ಬಾಳೆ ಗಿಡಗಳನ್ನು ಕೂಡಾ ಬೆಳೆಸಿ ಇಳುವರಿ ಪಡೆಯುತ್ತಿದ್ದಾರೆ.

ಇಲ್ಲಿ ಎರಡೂವರೆ ಎಕ್ರೆಯಲ್ಲಿ ಸುಮಾರು ೭೦೦ ರಬ್ಬರ್ ಮರಗಳಿವೆ. ವಾರ್ಷಿಕವಾಗಿ ಎಕ್ರೆಗೆ ೪ ಕ್ವಿಂಟಾಲ್ ರಬ್ಬರ್ ಉತ್ಪಾದಿಸಲಾಗುತ್ತದೆ. ರಬ್ಬರ್ ತೋಟದ ಮಧ್ಯೆ ಆಡಿನ ಗೂಡು ನಿರ್ಮಿಸಿ ಹತ್ತರಷ್ಟು ಆಡುಗಳನ್ನು ಸಾಕುತ್ತಿದ್ದಾರೆ. ಊರ ಮತ್ತು ಮಲಬಾರಿ ತಳಿಯ ಆಡುಗಳು ಇಲ್ಲಿದ್ದು, ಅದರ ಗೊಬ್ಬರವನ್ನು ತೋಟಕ್ಕೆ, ತರಕಾರಿ ಗಿಡಗಳಿಗೆ ಬಳಸುತ್ತಾರೆ.

ತೋಟದಲ್ಲಿ ಉಪಬೆಳೆಯಾಗಿ ಕಾಳುಮೆಣಸನ್ನು ಕೂಡಾ ಬೆಳೆ ಯುತ್ತಿದ್ದು, ವಾರ್ಷಿಕ ೧ರಿಂದ ೧.೫ ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ, ತೋಟದ ಮಧ್ಯೆ ಕೊಕ್ಕೋ ಕೂಡಾ ಬೆಳೆ ಯುತ್ತಿದ್ದಾರೆ.
ಜೇನು ಕೃಷಿಯಲ್ಲೂ ಕೂಡಾ ಗೌಡರು ಹಿಂದೆ ಬಿದ್ದಿಲ್ಲ. ಒಟ್ಟು ೧೫ ಒಕ್ಕಲು ಜೇನು ಕುಟುಂಬಗಳನ್ನು ತೋಟ, ರಬ್ಬರ್ ತೋಟ ಹಾಗೂ ಮನೆಯ ಛಾವಣಿಯಲ್ಲಿ ಕೂರಿಸಿದ್ದು, ತೊಡವೆ ಮತ್ತು ಮುಜೆಂಟಿ ಜಾತಿಯ ಜೇನು ಇಲ್ಲಿದೆ. ಮನೆಯ ಪಕ್ಕದಲ್ಲೇ ತೊಟ್ಟಿ ನಿರ್ಮಿಸಿ ಕಾಟ್ಲ ಮೀನುಗಳನ್ನು ಸಾಕುತ್ತಿದ್ದಾರೆ. ಮನೆಯ ಎದುರು ಆಂಥೋರಿಯಮ್ ಬೆಳೆಸುತ್ತಿದ್ದಾರೆ.

ನೆಕ್ಕರೆ, ಪಾಂಡಿ, ನೀಲಂ, ಗಿಳಿ ಜಾತಿಯ ಮಾವುಗಳು, ಊರ ಹಾಗೂ ಪೌಂಡ್ ಜಾತಿಯ ಪೇರಳೆ, ಜೇನೆರಿ, ಆಲ್ಸೀಸನ್, ಬರಿಕೆ, ತುಳುವೆ, ವ್ಯಾಕ್ಸ್ ಲೆಸ್ ಜಾತಿಯ ಹಲಸು, ನಕ್ಷತ್ರ ಹಣ್ಣು, ಜಮ್ಮು ನೇರಳೆ, ಮಿರಾಕಲ್ ಹಣ್ಣು, ಅಂಜೂರ, ಲೆಮೆನ್, ದಾಳಿಂಬೆ, ನೆಲ್ಲಿಕಾಯಿ, ರಂಬೂಟಾನ್, ರಾಮಫಲ ಸೇರಿದಂತೆ ಹಣ್ಣುಗಳ ಸಮೃದ್ಧ ಬೆಳೆ ಯಿದೆ. ಒಂದು ಕಾಲದಲ್ಲಿ ನಾಟಿ ಕೋಳಿ ಸಾಕಣೆಯಲ್ಲೂ ಇವರು ಕ್ರಾಂತಿ ಮಾಡಿದ್ದರೂ ರೋಗದ ಕಾರಣದಿಂದ ಅದನ್ನೂ ಕೈಬಿಟ್ಟಿದ್ದಾರೆ.
ಹೀಗೆ ವೈವಿಧ್ಯ ಕೃಷಿ ಪದ್ಧತಿಯ ಮೂಲಕ ಮಾದರಿಯಾದ ಪುರು ಷೋತ್ತಮ ಗೌಡರ ಕೃಷಿ ಸಾಧನೆಯನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ದೊರೆತಿವೆ. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕೂಡಾ ಇವರನ್ನು ಸನ್ಮಾನಿಸಿದೆ. ರಾಜ್ಯ ಕೃಷಿ ಪಂಡಿತ ಪ್ರಶಸ್ತಿಗೂ ಇವರು ಅರ್ಹರೇ ಆಗಿದ್ದಾರೆ.
ಪುರುಷೋತ್ತಮ ಗೌಡರ ಕೃಷಿ ಕಾಯಕದಲ್ಲಿ ಪತ್ನಿ ಹೇಮಾವತಿ ಸದಾ ಜೊತೆಯಾಗುತ್ತಾರೆ. ಇವರಿಬ್ಬರ ಜಂಟಿ ಶ್ರಮದಿಂದಲೇ ಕೃಷಿ ಕಾಯಕ ಬೆಳೆದು ಬೆಳಗಿದೆ. ಬಿ.ಎಸ್ಸಿ ಪದವಿ ಮುಗಿಸಿದ ಪುತ್ರ ಮಿಥುನ್ ಕೂಡಾ ಕೃಷಿ ಕಾಯಕದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಪ್ರಸ್ತುತ ಬೆಂಗಳೂರಿನ ಮಾರುತಿ ಕಂಪೆನಿಯಲ್ಲಿ ಉದ್ಯೋಗ ನಡೆಸುತ್ತಿದ್ದಾರೆ. ಪುತ್ರಿ ಸಪ್ತಮಿ ಪಿಯುಸಿ ವಿದ್ಯಾರ್ಥಿನಿ.
ಸಮ್ಮಿಶ್ರ ಕೃಷಿಯಿಂದಲೇ ಖುಷಿ ಕಂಡ ಬದುಕು ಇವರದು. ಪ್ರಸ್ತುತ ಸವಾಲಿನ ಕಾಲದಲ್ಲಿ ಇವರ ಕೃಷಿ ಪದ್ಧತಿ ಮಾದರಿ ಕೂಡಾ.

– ನಾಯರ್‌ಕೆರೆ

 

ದಿನವೂ ದುಡಿದರೆ, ದಿನವೂ ಹಣ..
ಸಾಧಾರಣ ಒಂದು ಲಕ್ಷದಷ್ಟು ಆದಾಯ ಬರುವ ೧೦ ಕೃಷಿ ವ್ಯವಸ್ಥೆಗಳು ನಮ್ಮಲ್ಲಿರಬೇಕು. ಹಾಗಾದರೆ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆಯ ಆದಾಯದಿಂದ ಜೀವನ ನಡೆಸಬಹುದು’ ಎನ್ನುವುದು ಪುರುಷೋತ್ತಮ ಗೌಡರ ನಿಲುವು. ಅದರಂತೆ ಬದುಕು ನಡೆಸುವ ಕಾರಣವೇ ಅವರೇ ಗೆಲುವು ಕಂಡಿದ್ದಾರೆ.
ನಮ್ಮ ಕೆಲಸಕ್ಕೆ ರಜೆ ಇಲ್ಲ. ರಜೆ ಇಲ್ಲದೆ ದಿನಾ ದುಡಿದರೆ ದಿನವೂ ಹಣ ಗಳಿಸಬಹುದು’ ಎನ್ನುವ ಗೌಡರ ಪ್ರತಿ ನಿಮಿಷಕ್ಕೂ ಬೆಲೆ ಇದೆ. ಸಭೆ ಸಮಾರಂಭಗಳಲ್ಲಿ ಅವರು ಸಿಗುವುದು ಅಪರೂಪ. ಸಂಜೆ ವೇಳೆಗಷ್ಟೇ ಪೇಟೆಗೆ ಹೋಗುತ್ತಾರೆ. ಇಂತಹ ಶಿಸ್ತಿನ ಜೀವನ ಪದ್ದತಿಯ ಕಾರಣದಿಂದಲೇ ಅವರ ಭೂಮಿಯಲ್ಲಿ ಹಸಿರ ಬೆಳೆ ಇದೆ. ಹಸಿ ಹಸಿಯಾದ ಖುಷಿ ಇದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.