Breaking News

ನಾನು ಆಡಿದ ಪ್ರತಿ ಮಾತಿಗೂ ದಾಖಲೆ ಒದಗಿಸಲು ಸಿದ್ಧ : ಸುಬ್ರಹ್ಮಣ್ಯದ ಭಾಷಣಕ್ಕೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ

Advt_Headding_Middle
Advt_Headding_Middle


ಕುಕ್ಕೆ ಸುಬ್ರಹ್ಮಣ್ಯದ ಸಂಪುಠ ನರಸಿಂಹ ಮಠದಲ್ಲಿ ಸೆ. 22 ರಂದು ನಡೆದ ಸುಧರ್ಮ ಸಭೆಯಲ್ಲಿ ಧಾರ್ಮಿಕ ಉಪನ್ಯಾಸಗೈದು, ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದುರಿಸುತ್ತಿರುವ ಚೈತ್ರಾ ಕುಂದಾಪುರರವರು ಇದೀಗ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಕುರಿತಂತೆ ಸ್ಪಷ್ಟನೆ ಹಾಕಿದ್ದು, ಅಂದು ನಾನು ಆಡಿದ ಪ್ರತೀ ಮಾತಿಗೂ ದಾಖಲೆ ಒದಗಿಸುವುದಕ್ಕೆ ನಾನು ಸಿದ್ಧ ಎಂದಿದ್ದಾರೆ. ಚೈತ್ರಾ ಕುಂದಾಪುರರವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಚಾರಗಳ ಪೂರ್ಣ ಪಾಠ ಇಂತಿದೆ.

“ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾನು ಮಾಡಿದ ಭಾಷಣದ ಕುರಿತು ಬಹಳ ಮಂದಿಗೆ ಕೋಪವಿರಬಹುದು.. ಅದಕ್ಕೆ ಸ್ಪಷ್ಟನೆ ಕೊಡಬೇಕಾದ ಯಾವ ಅಗತ್ಯವೂ ನನಗಿಲ್ಲ. ಆದರೆ ಒಂದಷ್ಟು ಮಂದಿ ನನ್ನನ್ನು ಹಿಂದೂ ವಿರೋಧಿಯಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಮ್ಮವರಿಗೆ ನಾನು ಉತ್ತರ ಕೊಡಲೇ ಬೇಕಾಯ್ತು.
ನಾನು ಕಾರ್ಯಕ್ರಮಕ್ಕೆ ಹೋಗುವ ಮುನ್ನ ಬಹಳ ಮಂದಿ ತಡೆದ ಕಾರಣಕ್ಕೆ ಅದರ ಹಿನ್ನೆಲೆ ತಿಳಿದು ಕೊಳ್ಳುವ ಪ್ರಯತ್ನ ಮಾಡಿ ಸತ್ಯದ ಪರವಾಗಿ ಅಷ್ಟೇ ನಿಲ್ಲುವ ನಿರ್ಧಾರ ಮಾಡಿದ್ದೆ. ನಾನು ಹೇಳಿದ ಮಾತಿಗೆ ಒಂದಷ್ಟು ಆಕ್ಷೇಪಣೆಯನ್ನು ಎತ್ತಿದವರಿಗೆ ಒಂದೊಂದಾಗಿ ಉತ್ತರಿಸುತ್ತೇನೇ.
೧) ಮಠ ಮತ್ತು ದೇವಸ್ಥಾನದ ನಡುವಿನ ಸಂಬಂಧದ ಕುರಿತು ನಿಮಗೆಷ್ಟು ಗೊತ್ತು ಅಂತ ಕೇಳಿದ್ದೀರಿ…
ಸರಿ ಮಠಕ್ಕೂ ದೇವಸ್ಥಾನಕ್ಕೂ ಇರುವ ಸಂಬಂಧದ ಬಗ್ಗೆ ನಾನೆಲ್ಲಿಯೂ ಉಲ್ಲೇಖ ಮಾಡಿಲ್ಲ. ದೇವಸ್ಥಾನವನ್ನು ಮಠಕ್ಕೆ ಕೊಡಿ ಅಂತ ನಾನೆಲ್ಲಿಯೂ ಹೇಳಿಲ್ಲ.. ಇದರ ಸತ್ಯಾಸತ್ಯತೆ ನಿರ್ಧಾರ ಮಾಡಬೇಕಾದದ್ದು ನ್ಯಾಯಾಲಯ… ಬೇರೆ ಯಾರೋ ಬಂದು ದೇವಸ್ಥಾನ ಮಠದ ಸುಪರ್ದಿಗೆ ಕೊಡಿ ಅಂದ ತಕ್ಷಣ ಅದನ್ನು ನನ್ನ ತಲೆಗೆ ಕಟ್ಟುವುದು ಯಾವ ನ್ಯಾಯ??
೨) ಸರ್ಪ ಸಂಸ್ಕಾರದ ಬಗ್ಗೆ ನಿಮಗೆಷ್ಟು ಗೊತ್ತು ಅಂತ ಕೇಳಿದ್ದೀರಿ? ಸರ್ಪ ಸಂಸ್ಕಾರ ಒಂದು ಪೂಜೆ ಅದನ್ನು ಸುಬ್ರಹ್ಮಣ್ಯ ದೇವಸ್ಥಾನದಲ್ಲೇ ಮಾಡಬೇಕು ಅಂತ ಒಂದಷ್ಟು ಮಂದಿ ನನ್ನ ಬಳಿ ವಾದ ಮಾಡಿರುವ ಕಾಲ್ ರೆಕಾರ್ಡ್ ಗಳು ಇವೆ.
ನಾನು ಕಾರ್ಯಕ್ರಮಕ್ಕೆ ಹೋಗುವ ಮುನ್ನವೇ ರಾಜ್ಯದ ಪ್ರಮುಖ ಪಂಡಿತರು, ಪ್ರಾಜ್ಞರ ಜೊತೆ ಈ ಕುರಿತು ಚರ್ಚೆ ಮಾಡಿದ್ದೆ. ಸರ್ಪ ಸಂಸ್ಕಾರ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ಪೂಜೆ ಅಥವಾ ಸೇವೆ ಅಲ್ಲಾ.. ಅದೊಂದು ದೋಷ ನಿವಾರಕ ವಿಧಿ… ಅದನ್ನು ಸುಬ್ರಹ್ಮಣ್ಯ ದೇವಸ್ಥಾನದಲ್ಲೇ ಮಾಡಬೇಕೆನ್ನುವ ನಿಯಮಗಳು ಯಾವ ಶಾಸ್ತ್ರದಲ್ಲೂ ಇಲ್ಲ. ಸತ್ತ ಹಾವಿಗೆ ಸಂಸ್ಕಾರ ಮಾಡಿ ದೋಷ ನಿವಾರಿಸಿಕೊಳ್ಳಬೇಕಾದಲ್ಲಿ ಅದನ್ನು ಶಾಸ್ತ್ರ ಬದ್ಧವಾಗಿಯೇ ಮಾಡಬೇಕು. ಇಲ್ಲಿ ಮನುಷ್ಯ ಮತ್ತು ಹಾವಿನ ಸಂಸ್ಕಾರದ ಬಗ್ಗೆ ನಾನು ಉಲ್ಲೇಖ ಮಾಡಿದ್ದೇನೆ. ಅದರ ಅರ್ಥ ನರ ಮಾನವನಾದ ನಮ್ಮ ಸಂಸ್ಕಾರವನ್ನೇ ಒಂದೇ ಚಿತೆಯಲ್ಲಿ ದಹನ ಮಾಡುವುದಿಲ್ಲ. ಹಾಗಿರುವಾಗ ದೇವಸಮಾನ ಸರ್ಪದ ಸಂಸ್ಕಾರ ಮಾಡುವಾಗ ಹಿಟ್ಟಿನ ಪ್ರತಿರೂಪದಲ್ಲಿರುವ ೨೦೦/೩೦೦ ಸರ್ಪಗಳನ್ನು ಒಂದೇ ಹೋಮ ಕುಂಡದಲ್ಲಿ ಹಾಕುವುದು ಶಾಸ್ತ್ರದ ವಿರುದ್ಧ ಅಲ್ಲವೇ??? ಅಶಾಸ್ತ್ರೀಯ ಪದ್ಧತಿಯಲ್ಲಿ ಯಾವುದೇ ಆಚರಣೆ ಮಾಡಿದರೂ ನಾವದನ್ನು ಖಂಡಿಸಲೇ ಬೇಕು. ಇಲ್ಲದೇ ಹೋದಲ್ಲಿ ಮುಂದೆ ಅಶಾಸ್ತ್ರೀಯ ಪದ್ಧತಿಯೇ ರೂಢಿಯಾಗುತ್ತದೆ. ಇನ್ನು ನಾನು ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮಾಡಿಸಬೇಡಿ ಅಂತ ಎಲ್ಲಿಯೂ ಹೇಳಿಲ್ಲ. ನಮ್ಮಲ್ಲಿ ಬ್ರಾಹ್ಮಣರ ಮನೆಯಲ್ಲಿ ಸರ್ಪ ಸಂಸ್ಕಾರ ಮಾಡಿಸುತ್ತೇವೆ. ಕಿರು ಸುಬ್ರಹ್ಮಣ್ಯ, ಉಳ್ಳೂರಿನಲ್ಲೂ ಸರ್ಪ ಸಂಸ್ಕಾರ ಮಾಡಿಸುತ್ತೇವೆ. ಹಾಗಿರುವಾಗ ಮಠದಲ್ಲಿ ಮಾಡಿಸಬಾರದು ದೇವಸ್ಥಾನದಲ್ಲಷ್ಟೇ ಮಾಡಿಸಬೇಕೆನ್ನುವ ವಾದ ಎಷ್ಟು ಸರಿ. ಸುಬ್ರಹ್ಮಣ್ಯಕ್ಕೆ ಬರಲಾಗದ ಅಶಕ್ತ ತನ್ನೂರಿನ ಬ್ರಾಹ್ಮಣರ ಮನೆಯಲ್ಲಿ ಮಾಡಿಸಿಕೊಂಡರೆ ಅದಕ್ಕೂ ಪ್ರತಿಭಟನೆ ಮಾಡುತ್ತೀರಾ??
೩).ಮಠ ಸಂಘಟನೆಗೆ ಏನೂ ಮಾಡಿಲ್ಲ ಊರಿಗೆ ಏನೂ ಮಾಡಿಲ್ಲ ಎನ್ನುವವರು ಯಾವತ್ತಾದರೂ ಸಂಘಟನೆಯ ಹಿರಿಯರು ಮತ್ತು ಮಠಾಧೀಶರನ್ನು ಒಟ್ಟಿಗೆ ಕೂರಿಸಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರಾ??? ಹಾಗೆ ಪ್ರಯತ್ನವನ್ನೇ ಮಾಡದೆ ನಮ್ಮ ಧರ್ಮದೊಳಗಿನ ಸಮಸ್ಯೆಗಳನ್ನು ಬೀದಿಯಲ್ಲಿ ನಿಂತು ರಂಪ ಎಬ್ಬಿಸುವುದು ಯಾವ ನ್ಯಾಯ???
೪) ಮಠದ ಬಗ್ಗೆ ನಿಮಗೇನು ಗೊತ್ತು ಅಂತ ಪ್ರಶ್ನೆ ಮಾಡುತ್ತಿರುವವರಿಗೆ ಇಷ್ಟು ವರ್ಷ ಮಠದ ಕುರಿತು ಚಕಾರವೆತ್ತದೇ ಇರುವುದರ ಹಿಂದಿನ ಗುಟ್ಟೇನು???
ಯಾರನ್ನೋ ಜಾಗದಿಂದ ಎದ್ದೇಳುವಂತೆ ಹೇಳಿದ ನಂತರವಷ್ಟೇ ಮಠದ ವಿರುದ್ಧ ಬೀದಿ ರಂಪಾಟ ಮಾಡುತ್ತಿರುವುದಕ್ಕೆ ಕಾರಣವೇನು???
ನಿಮಗೆ ಮಠದ ಬಗ್ಗೆ ಅಸಮಧಾನವಿದ್ದರೆ ಸಮಾಧಾನದಿಂದ ಮಾತನಾಡಬೇಕೆ ಹೊರತು ನಮ್ಮ ಗುರು ಪರಂಪರೆ, ಸ್ವಾಮೀಜಿಗಳ ಬಗ್ಗೆ ಯಾವನೋ ಒಬ್ಬ ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಬೊಗಳುವಾಗ ಬಾಯಿ ಮುಚ್ಚಿ ಕುಳಿತುಕೊಂಡರೆ ಅದಕ್ಕೆ ನಾವು ಯಾವ ಸೀಮೆಯ ಹಿಂದೂ ಹೋರಾಟಗಾರ ರಾಗುತ್ತೇವೆ. ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಜಗಳವಾದರೆ ಅದನ್ನು ಬೀದಿ ರಂಪ ಮಾಡಬಾರದೆನ್ನುವ ಕನಿಷ್ಟ ಪ್ರಜ್ಞೆ ನಮಗಿಲ್ಲದೇ ಹೋದರೆ ಇನ್ನು ಧರ್ಮ ವಿರೋಧಿಗಳಿಗೆ ಹೇಗೆ ಉತ್ತರ ಕೊಡಲಾದೀತು??
ಮಠದಲ್ಲಿ ನಿಂತು ಭಾರತ ಮಾತೆಗೆ ಜಯಕಾರ ಹಾಕಿಸಿದ್ದು ಪಕ್ಕದಲ್ಲಿದ್ದ ಭಾರತ ಮಾತೆ ಮತ್ತು ವಿವೇಕಾನಂದರ ಫೋಟೋ ಇಟ್ಟಿದ್ದಕ್ಕಾಗಿ. ಮತ್ತು ಮಠ ಮಂದಿರಗಳ ಮೇಲಿನ ದಾಳಿ ದೇಶದ ವಿರುದ್ಧದ ಕುತಂತ್ರ ವೆನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಉಳಿದಂತೆ ನಾನು ಆಡಿದ ಪ್ರತಿ ಮಾತಿಗೂ ದಾಖಲೆ ಒದಗಿಸುವುದಕ್ಕೆ ನಾನು ಸಿದ್ಧಳು..
ಕೋಟ್ಯಂತರ ರೂಪಾಯಿ ಆದಾಯ ಬರುವ ದೇವಸ್ಥಾನದ ಮೇಲ್ಛಾವಣಿಯಲ್ಲಿ ಟರ್ಪಾಲು ಹಾಕುವ ದುರ್ಗತಿ ಯಾಕೆ??? ಕ್ರೈಸ್ತ ಮಿಶನರಿಗಳು ನಡೆಸುವ ಸಂಘಕ್ಕೆ ದೇವಸ್ಥಾನದಿಂದ ಹಣ ಕೊಡುವ ಅಗತ್ಯವೇನಿದೆ??? ಎಲ್ಲವನ್ನೂ ಕುಳಿತು ಮಾತನಾಡುವ ಎನ್ನಬಹುದಿತ್ತಲ್ಲಾ???”

ಇದು ಚೈತ್ರಾ ಕುಂದಾಪುರರವರು ಹಾಕಿರುವ ಪೋಸ್ಟ್. ಆದರೆ ಅವರ ಉತ್ತರದ ಕುರಿತಂತೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.