Breaking News

ಎನ್ನೆಂಸಿ: ದ.ಕ ಜಿಲ್ಲೆಯ ಲೀಡ್ ಕಾಲೇಜು ಆಗಿ ನೆಹರೂ ಮೆಮೋರಿಯಲ್ ಕಾಲೇಜು ಆಯ್ಕೆ, ಕಾಲೇಜಲ್ಲೊಂದು ಮಾದರಿ ರೆಡ್‌ಕ್ರಾಸ್ ಘಟಕ

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ತನ್ನ ಕಾರ್ಯವೈಖರಿಯಿಂದಾಗಿ ದ.ಕ ಜಿಲ್ಲೆಯ ಲೀಡ್ ಕಾಲೇಜು ಆಗಿ ಆಯ್ಕೆಯಾಗಿದೆ. ರೆಡ್‌ಕ್ರಾಸ್ ಘಟಕಗಳ ಚಟುವಟಿಕೆಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಶಾಖೆಯು ಪ್ರಥಮ ಬಾರಿಗೆ ಈ ಯೋಜನೆಯನ್ನು ಕೈಗೊಂಡಿದೆ. ೨೦೧೮ರಲ್ಲಿ ಕಾಲೇಜಿಗೆ ನ್ಯಾಕ್ ತಂಡ ಆಗಮಿಸಿದ ಸಂದರ್ಭದಲ್ಲಿ ತಯಾರಿಸಿದ ಪವರ್ ಪಾಯಿಂಟ್ ಪ್ರೆಸಂಟೇಷನ್‌ನ್ನು ವೀಕ್ಷಿಸಿದ ರಾಜ್ಯ ಶಾಖೆಯು ನೆಹರೂ ಮೆಮೋರಿಯಲ್ ಕಾಲೇಜನ್ನು ಗುರುತಿಸಿದುದಲ್ಲದೇ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿತ್ತು.
ಕಾಲೇಜಿನಲ್ಲಿ ೨೦೦೪ರಿಂದ ರೆಡ್‌ಕ್ರಾಸ್ ಘಟಕ ಕಾರ್ಯನಿರ್ವಹಿಸುತ್ತಿದ್ದು, ೨೦೧೨ರಿಂದ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರ ನೇತೃತ್ವದಲ್ಲಿ ಬಹಳಷ್ಟು ಕಾರ್ಯಚಟುವಟಿಕೆಗಳೊಂದಿಗೆ ಮುಂದುವರಿಯುತ್ತಿದೆ. ೨೦೧೫ರಿಂದ ಕ್ರೆಡಿಟ್ ಬೇಸ್ಡ್ ಸ್ಕೀಮ್‌ಗೆ ಒಳಪಟ್ಟು ೨೦೧೫ರಿಂದ ೨೦೧೭ರವರೆಗೆ ಘಟಕದಲ್ಲಿ ಆಯೋಜಿಸಿದ ಕಾರ್ಯಕ್ರಮಗಳ ಸಂಖ್ಯೆ ೧೦೬ಕ್ಕೂ ಅಧಿಕ. ಕೇವಲ ಸಂಖ್ಯೆಗೆ ಮಾತ್ರ ಸೀಮಿತವಾಗದೇ ಸಮಾಜಮುಖಿ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲೇ ಮಾದರಿ ರೆಡ್‌ಕ್ರಾಸ್ ಘಟಕವಾಗಿ ಮುಂದುವರಿಯುತ್ತಿದೆ. ರಕ್ತದಾನ ಶಿಬಿರಗಳು, ಅಂತರ್‌ಕಾಲೇಜು ಮಟ್ಟದ ವಿಪತ್ತು ನಿರ್ವಹಣಾ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು, ಬೀದಿನಾಟಕ, ವಿದ್ಯಾರ್ಥಿಗಳಿಗೆ ಪ್ರಮುಖ ದಿನಾಚರಣೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವೈದ್ಯರ ದಿನಾಚರಣೆ, ಯುವ ದಿನಾಚರಣೆ, ಗಾಂಧೀ ಜಯಂತಿ, ಸದ್ಭಾವನ ದಿನ, ಪರಿಸರ ದಿನಾಚರಣೆ, ವಿಶ್ವ ರಕ್ತದಾನಿಗಳ ದಿನ, ವಯಸ್ಕರ ದಿನ, ವಿಶ್ವ ಪ್ರಾಣಿಗಳ ದಿನ, ಅಹಿಂಸಾ ದಿನ, ಏಡ್ಸ್ ದಿನಾಚರಣೆ, ಆಂತಾರಾಷ್ಟ್ರೀಯ ಸ್ವಯಂ ಸೇವಕರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನ, ಹುತಾತ್ಮರ ದಿನ, ಶಿಕ್ಷಕರ ದಿನಾಚರಣೆ, ರೆಡ್‌ಕ್ರಾಸ್ ದಿನಾಚರಣೆ, ಜಿನೇವಾ ಒಪ್ಪಂದ ದಿನಾಚರಣೆ, ಯೋಗ ದಿನಾಚರಣೆ, ಮೊದಲಾದವುಗಳ ಜೊತೆಗೆ ಆಟಿಯ ತಿಂಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನ, ಚೆನ್ನೆಮಣೆ ಸ್ಪರ್ಧೆ, ಆಟಿಕಳೆಂಜ ಪ್ರದರ್ಶನ, ಆಟಿಯ ತಿಂಡಿ ತಿನಿಸನ್ನು ಪರಿಚಯಿಸುವ ಕೆಲಸವನ್ನು ಪ್ರತೀ ವರ್ಷ ಹಮ್ಮಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೃಷಿ ವ್ಯವಸಾಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ನೇಜಿ ನೆಡುವುದರೊಂದಿಗೆ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ನಿಧಿ ಶೋಧ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆ ಸೇರಿ ವನಮಹೋತ್ಸವ ಆಚರಣೆ, ಬೀಜದುಂಡೆ ಬಿತ್ತನೆ ಕಾರ್ಯಕ್ರಮ ಏಕದಿನ ಶಿಬಿರಗಳನ್ನು ಆಯೋಜನೆ ಮಾಡಿದ ಹೆಗ್ಗಳಿಕೆ ಈ ಘಟಕದ್ದು. ಜನರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸಾ ತರಬೇತಿ, ರಸ್ತೆ ಸುರಕ್ಷತಾ ಮಾಹಿತಿ, ವಿದ್ಯುತ್ ಸುರಕ್ಷತಾ ಮಾಹಿತಿ, ಪಲ್ಸ್ ಪೋಲಿಯೋ ಜಾಥಾ, ದಡಾರ ರುಬೆಲ್ಲಾ ಜಾಥಾ, ಅಗ್ನಿ ಶಾಮಕ ದಳದ ಪ್ರಾತ್ಯಕ್ಷಿತೆ, ಹಾವು-ನಾವು ಮತ್ತು ಪರಿಸರ ಕಾರ್ಯಕ್ರಮ, ನೇತ್ರದಾನದ ಮಹತ್ವ, ಆಹಾರ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ, ಸ್ವಚ್ಛ ಮನಸ್ಸು- ಸ್ವಚ್ಛ ಪರಿಸರ ಕಾರ್ಯಕ್ರಮ, ಮಾನವೀಯ ಸಂಬಂಧ, ನಾಯಕತ್ವ ತರಬೇತಿ ಕಾರ್ಯಕ್ರಮಗಳು, ಪಿಕ್‌ನಿಕ್‌ಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ದಿನದಂದು ತಾಲೂಕು ಮಟ್ಟದ ಪಥಸಂಚಲನ ಕಾರ್ಯಕ್ರಮದಲ್ಲಿ ೨೦೧೫ರಿಂದ ನಿರಂತರವಾಗಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.
ರಕ್ತದಾನದ ಮೂಲಕ ಜೀವದಾನ ಜಗತ್ತಿನ ಮಹಾದಾನ. ಆ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವುದರೊಂದಿಗೆ ರಕ್ತದ ಬೇಡಿಕೆಯಿದ್ದ ದಿನಗಳಲ್ಲಿ ಸುಮಾರು ೫೦೦ ಯುನಿಟ್‌ಗಳಿಗೂ ಅಧಿಕ ರಕ್ತದಾನ ಮಾಡಿ ಜೀವದಾನ ಮಾಡಿದ ಹೆಮ್ಮೆ ರೆಡ್‌ಕ್ರಾಸ್ ಘಟಕದ್ದು.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಂತರ್‌ಕಾಲೇಜು ಮಟ್ಟದ ವಿಪತ್ತು ನಿರ್ವಹಣಾ ತರಬೇತಿಯನ್ನು ನಡೆಸುತ್ತಾ ಬಂದಿದ್ದು ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಅಭಿಜಿತ್ ಟಿ ಎಲ್ ಪ್ರಸ್ತುತ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೋಲಿಸ್ ತಂಡದೊಂದಿಗೆ ಸ್ವಯಂ ಸೇವಕನಾಗಿ ಸುಮಾರು ೧೫ ದಿನಗಳ ಕಾಲ ಭಾಗವಹಿಸಿ ಹಲವಾರು ಜನರ ಹಾಗೂ ಪ್ರಾಣಿಗಳ ಜೀವರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ರೆಡ್‌ಕ್ರಾಸ್ ಸೊಸೈಟಿಯ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಮಾತ್ರವಲ್ಲದೇ ಕಾರವಾರದಲ್ಲಿ ನಡೆದ ರಾಜ್ಯ ಮಟ್ಟದ ಶಿಬಿರ, ಮಂಡ್ಯದಲ್ಲಿ ನಡೆದ ಅಂತರ್‌ಕಾಲೇಜು ಮಟ್ಟದ ಶಿಬಿರದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವನದು. ರೆಡ್‌ಕ್ರಾಸ್ ಸದಸ್ಯರಾದ ವಿರಾಟ್ ಕೆ ಆರ್ ಹಾಗೂ ಅಭಿಜಿತ್ ಟಿ ಎಲ್ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ, ದೇವಿಕಾ ಎನ್ ಜಿ ಹಾಗೂ ದೀಪ್ತಿ ಸಿ ವಿ ರಾಜ್ಯ ಮಟ್ಟದ ಶಿಬಿರದಲ್ಲಿ, ಹರ್ಷಿತಾ ಎಂ ಕೆ ಹಾಗೂ ರಶ್ಮಿ ವಿಶ್ವ ವಿದ್ಯಾಲಯ ಮಟ್ಟದ ಶಿಬಿರದಲ್ಲೂ ಭಾಗವಹಿಸಿರುತ್ತಾರೆ.
ತರಬೇತುದಾರರಾಗಿರುವ ಕಾರ್ಯಕ್ರಮಾಧಿಕಾರಿ ಡಾ ಅನುರಾಧಾ ಕುರುಂಜಿಯವರು ದ.ಕ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಉಪಸಮಿತಿಯ ಸದಸ್ಯರಾಗಿ ಆಯ್ಕೆಯಾದುದಲ್ಲದೇ, ಮಂಡ್ಯದಲ್ಲಿ ನಡೆದ ಅಂತರಾಜ್ಯ ಮಟ್ಟದ ಶಿಬಿರಕ್ಕೆ ಮಂಗಳೂರು ವಿ ವಿಯ ವಿದ್ಯಾರ್ಥಿಗಳ ನೇತೃತ್ವವನ್ನು ವಹಿಸಿ, ಪಿಲಿಕುಳದಲ್ಲಿ ನಡೆದ ವಿವಿ ಮಟ್ಟದ ಶಿಬಿರದಲ್ಲಿ ನಿರ್ವಾಹಕರಾಗಿ ಭಾಗವಹಿದ್ದರು. ಸ್ಥಳೀಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ತಾಲೂಕುಗಳ ಕಾಲೇಜುಗಳ ಯುವ ರೆಡ್‌ಕ್ರಾಸ್ ಘಟಕಗಳಿಗೆ ರೆಡ್‌ಕ್ರಾಸ್ ಬಗ್ಗೆ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ, ಖಜಾಂಚಿ ಶೋಭಾ ಚಿದಾನಂದ ಹಾಗೂ ಆಡಳಿತ ಮಂಡಳಿಯವರ ಮಾರ್ಗದರ್ಶನದೊಂದಿಗೆ, ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿಯವರ ಸಂಪೂರ್ಣ ಸಹಕಾರದೊಂದಿಗೆ, ಪ್ರಾಂಶುಪಾಲ ಡಾ. ಕೆ ಗಿರಿಧರ ಗೌಡ ಹಾಗೂ ಅಧ್ಯಾಪಕ ವೃಂದದವರ ನಿರ್ದೇಶನದೊಂದಿಗೆ, ಮುನ್ನಡೆಯುತ್ತಿರುವ ರೆಡ್‌ಕ್ರಾಸ್ ಘಟಕ ಇಂದು ಡಾ. ಅನುರಾಧಾ ಕುರುಂಜಿಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬೆಂಬಲದೊಂದಿಗೆ ದ.ಕ ಜಿಲ್ಲೆಯಲ್ಲೇ ಲೀಡ್ ಕಾಲೇಜು ಆಗಿ ಗುರುತಿಸಲ್ಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.