ಕುಕ್ಕೆ ದೇವಳ-ಮಠ ವಿವಾದ : ವೈಯಕ್ತಿಕ ಮಟ್ಟಕ್ಕಿಳಿದ ಫೇಸ್‌ಬುಕ್ ಚರ್ಚೆ

Advt_Headding_Middle
Advt_Headding_Middle

ಪ್ರಶ್ನಿಸಬಂದ ಚೈತ್ರ ಕುಂದಾಪುರ, ಬೆಂಬಲಿಗರಿಂದ ಗುರುಪ್ರಸಾದ್ ಮೇಲೆ ಹಲ್ಲೆ
ಇತ್ತಂಡದ ಮೇಲೆ ಜಾಮೀನುರಹಿತ ಕೇಸು: ಚೈತ್ರ ಸಹಿತ 7 ಮಂದಿಗೆ ಕಸ್ಟಡಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪಸಂಸ್ಕಾರದ ರೀತಿ ಯನ್ನು ಸಂಪುಟ ನರಸಿಂಹ ಮಠದ ಸುಧರ್ಮ ಸಭೆಯಲ್ಲಿ ಟೀಕಿಸಿದ ಹಿಂದೂ ಸಂಘಟನೆಯ ಕು. ಚೈತ್ರ ಕುಂದಾಪುರರವರ ಭಾಷಣವನ್ನು ಫೇಸ್‌ಬುಕ್‌ನಲ್ಲಿ ಟೀಕಿಸಿದ ಗುರುಪ್ರಸಾದ್ ಪಂಜ ಮತ್ತು ಅವರ ಗೆಳೆಯರು ಹಾಗೂ ಚೈತ್ರ ಸಮರ್ಥಕರ ವಾದ ಪ್ರತಿವಾದ ವೈಯಕ್ತಿಕ ಟೀಕೆಯ ಮಟ್ಟಕ್ಕೆ ಇಳಿದ ಪರಿಣಾಮವಾಗಿ, ಚೈತ್ರಾ ಕುಂದಾಪುರರವರು ಬೆಂಬಲಿಗರ ಜತೆ ಸುಬ್ರಹ್ಮಣ್ಯಕ್ಕೆ ಬಂದು ಗುರುಪ್ರಸಾದ್ ಪಂಜ ಮತ್ತು ಆಶಿತ್‌ಕಲ್ಲಾಜೆಯವರನ್ನು ಪ್ರಶ್ನಿಸಿದ ಹಾಗೂ ಈ ಸಂದರ್ಭ ಮಾತಿನ ಚಕಮಕಿ ನಡೆದು ಹೊಡೆದಾಟವಾಗಿ, ಗುರುಪ್ರಸಾದ್ ಪಂಜ ಗಾಯಗೊಂಡು ಆಸ್ಪತ್ರೆ ಸೇರಿರುವ ಮತ್ತು ಇತ್ತಂಡದ ಮೇಲೆ ಕೇಸು ದಾಖಲಾಗಿ, ಚೈತ್ರ ಕುಂದಾಪುರ ಹಾಗೂ ಅವರ ಜತೆಗಿದ್ದ ೬ ಮಂದಿಗೆ ನ್ಯಾಯಾಂಗ ಬಂಧನವಾಗಿರುವ ಘಟನೆ ವರದಿಯಾಗಿದೆ.

ಸಂಪುಟ ನರಸಿಂಹ ಮಠದಲ್ಲಿ ಸ್ವಾಮೀಜಿಯವರ ಚಾತುರ್ಮಾಸದ ಸಂದರ್ಭದಲ್ಲಿ ನಡೆದ ಸುಧರ್ಮ ಸಭೆಯಲ್ಲಿ ಭಾಷಣಗಾರರಾಗಿ ಭಾಗವಹಿಸಿದ್ದ ಹಿಂದೂ ಕಾರ್ಯಕರ್ತೆ ಹಾಗೂ ಪ್ರಖರ ವಾಗ್ಮಿ ಎನಿಸಿರುವ ಕು. ಚೈತ್ರ ಕುಂದಾಪುರ ಮಠದಲ್ಲಿ ನಡೆಸುವ ಪ್ರತ್ಯೇಕ ಸರ್ಪಸಂಸ್ಕಾರವನ್ನು ಬೆಂಬಲಿಸಿ, ದೇವಸ್ಥಾನದಲ್ಲಿ ನಡೆಸುವ ಸಾಮೂಹಿಕ ಸರ್ಪಸಂಸ್ಕಾರವನ್ನು ಅಶಾಸ್ತ್ರೀಯವೆಂದು ಟೀಕಿಸಿ ಮಾತನಾಡಿದ್ದರು.
ಈ ಭಾಷಣದ ಕುರಿತು ಸುಳ್ಯ ಪ್ರಖಂಡ ಹಿಂದೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠ ನಡುವಿನ ವಿವಾದ, ಆ ಬಳಿಕದ ಫೇಸ್‌ಬುಕ್ ಚರ್ಚೆ ಕೊನೆಗೆ ವೈಯಕ್ತಿಕ ಮಟ್ಟಕ್ಕಿಳಿದದ್ದು ಈ ಘಟನೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಠದಲ್ಲಿ ನಡೆದ ಸುಧರ್ಮ ಸಭೆಯಲ್ಲಿ ಚೈತ್ರಾ ಕುಂದಾಪುರ ಹಾಗೂ ಇತರರು ಮಾಡಿದ ಭಾಷಣದ ಬಳಿಕ ಈ ಫೇಸ್‌ಬುಕ್ ಚರ್ಚೆಗಳು ಆರಂಭಗೊಂಡಿತು. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪೂಜಾ ವಿಧಿ ವಿಧಾನವನ್ನು ಚೈತ್ರಾ ಕುಂದಾಪುರ ಟೀಕಿಸಿದ್ದಾರೆಂದು ಆಕೆಯ ವಿರುದ್ಧ ಆಕ್ರೋಶ ಕಂಡು ಬಂತು. ಯಾರನ್ನೋ ಮೆಚ್ಚಿಸಲು ಬಾಯಿಗೆ ಬಂದ ಹಾಗೆ ಸುಬ್ರಹ್ಮಣ್ಯ ದೇವಾಲಯದ ಬಗ್ಗೆ ಮಾತನಾಡಿದ ಚೈತ್ರಾ ಕುಂದಾಪುರಗೆ ಧಿಕ್ಕಾರ ಎಂದು ಸೆ. ೨೯ರಂದು ಗುರುಪ್ರಸಾದ್ ಪಂಜ ಸ್ಟೇಟಸ್ ಹಾಕುವುದರೊಂದಿಗೆ ಈ ವಿಚಾರದ ಫೇಸ್‌ಬುಕ್ ಚರ್ಚೆ ಆರಂಭಗೊಂಡಿತ್ತು. ಆ ಬಳಿಕ ಚೈತ್ರಾ ಕುಂದಾಪುರ ವಿರುದ್ಧ ವ್ಯಾಪಕ ಟೀಕೆಗಳು ಕಾಣಿಸಿಕೊಂಡವು. ಚೈತ್ರಾ ಪರವಾಗಿ ಕೆಲವು ಮಂದಿಯಷ್ಟೆ ಪ್ರತಿಕ್ರಿಯಿಸಿದ್ದರು. ಮೊದಲು ಈ ಚರ್ಚೆಗಳು ಆರೋಗ್ಯಕರವಾಗಿಯೇ ಇತ್ತು. ಚೈತ್ರಾ ಕುಂದಾಪುರ ಅವರಿಗೆ ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಎಷ್ಟು ಗೊತ್ತಿದೆ? ಹೀಗೆ ಮಾತನಾಡುವುದು ಹಿಂದುತ್ವವಾ? ಎಂಬೆಲ್ಲಾ ಪ್ರಶ್ನೆಗಳು ಹರಿದು ಬಂತು. ಪೂಜಾ ಪದ್ಧತಿಗಳ ಬಗ್ಗೆಯೂ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು.

ಚೈತ್ರಾ ಕುಂದಾಪುರ ಸ್ಪಷ್ಟನೆ : ಎರಡು ದಿನಗಳ ಬಳಿಕ ಈ ಕುರಿತು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ವೊಂದನ್ನು ಹಾಕಿ ಚೈತ್ರಾ ಕುಂದಾಪುರ ಸ್ಟಷ್ಟನೆ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾನು ಮಾಡಿದ ಭಾಷಣದ ಕುರಿತು ಬಹಳ ಮಂದಿಗೆ ಕೋಪವಿರಬಹುದು.. ಅದಕ್ಕೆ ಸ್ಪಷ್ಟನೆ ಕೊಡಬೇಕಾದ ಯಾವ ಅಗತ್ಯವೂ ನನಗಿಲ್ಲ. ಆದರೆ ಒಂದಷ್ಟು ಮಂದಿ ನನ್ನನ್ನು ಹಿಂದೂ ವಿರೋಧಿಯಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಮ್ಮವರಿಗೆ ನಾನು ಉತ್ತರ ಕೊಡಲೇ ಬೇಕಾಯ್ತು.

ನಾನು ಕಾರ್ಯಕ್ರಮಕ್ಕೆ ಹೋಗುವ ಮುನ್ನ ಬಹಳ ಮಂದಿ ತಡೆದ ಕಾರಣಕ್ಕೆ ಅದರ ಹಿನ್ನೆಲೆ ತಿಳಿದು ಕೊಳ್ಳುವ ಪ್ರಯತ್ನ ಮಾಡಿ ಸತ್ಯದ ಪರವಾಗಿ ಅಷ್ಟೇ ನಿಲ್ಲುವ ನಿರ್ಧಾರ ಮಾಡಿದ್ದೆ. ನಾನು ಹೇಳಿದ ಮಾತಿಗೆ ಒಂದಷ್ಟು ಆಕ್ಷೇಪಣೆಯನ್ನು ಎತ್ತಿದವರಿಗೆ ಒಂದೊಂದಾಗಿ ಉತ್ತರಿಸುತ್ತೇನೆ. ಎಂಬ ಸುದೀರ್ಘ ಸ್ಪಷ್ಟನೆ ಹಾಕಿದ್ದರು.
ಅವರ ಸ್ಟಷ್ಟನೆಯ ಬಳಿಕವೂ ಫೇಸ್‌ಬುಕ್ ವಾಗ್ವಾದ ಮುಂದುವರಿಯಿತು. ಆರಂಭದಲ್ಲಿ ಬಹುವಚನದಲ್ಲೇ ಸಾಗಿದ ಚರ್ಚೆ ಏಕವಚನಕ್ಕಿಳಿಯಿತು. ಚೋಟುದ್ಧ ಬಾಲೆ, ನಿನಗೆಷ್ಟು ಗೊತ್ತು?, ನೀನೆಂತ ಬೊಗಳುವುದು? ಎಂಬಂತಹ ಕಮೆಂಟ್ಸ್‌ಗಳೂ ಬಂತು. ಇದಕ್ಕೆಲ್ಲಾ ಚೈತ್ರಾ ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ಆಕೆಯ ಕೆಲವು ಬೆಂಬಲಿಗರು ಉತ್ತರಿಸುತ್ತಿದ್ದರು. ಕೆಲವು ದಿನಗಳ ಬಳಿಕ ಪ್ರತ್ಯೇಕವಾಗಿ ಸರ್ಪಸಂಸ್ಕಾರ ಸೇವೆಯನ್ನು ಭಕ್ತಾಧಿಗಳಿಗಾಗಿ ಒದಗಿಸುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂಬ ಸ್ಟೇಟಸ್‌ನ್ನು ಗುರುಪ್ರಸಾದ್ ಪಂಜ ಹಾಕಿದ್ದರು. ಆಡಳಿತ ಮಂಡಳಿ ಚಿಂತನೆಯ ವಿಚಾರ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇದಾದ ಬಳಿಕ ಚೈತ್ರಾ ಕುಂದಾಪುರ ಮತ್ತೊಂದು ಸ್ಟೇಟಸ್ ಹಾಕಿದ್ದರು.

ಸಾಕ್ಷಾತ್ ಸುಬ್ರಹ್ಮಣ್ಯ ನೇ ನನ್ನ ಬಾಯಿಯಲ್ಲಿ ಹಾಗೆ ನುಡಿಸಿರಬೇಕು
ಕುಕ್ಕೆ ಸುಬ್ರಹ್ಮಣ್ಯದ ವಿಷಯವನ್ನು ನಾನು ಅವತ್ತೇ ಸ್ಪಷ್ಟನೆ ಕೊಟ್ಟು ಮುಗಿಸಿದ್ದೆ… ಆದರೆ ಒಂದಷ್ಟು ಮಂದಿ ಅದನ್ನು ಜಗ್ಗಾಡಿಕೊಂಡು ನನ್ನನ್ನು ಹಿಂದೂ ವಿರೋಧಿ ಅಂತ ಬಿಂಬಿಸುವ ಪ್ರಯತ್ನ ಮಾಡಿದರು.. ಒಂದಷ್ಟು ಮಂದಿ ಬಾಡಿಗೆ ಭಾಷಣಕಾರಳು ಅಂದ್ರು.. ಇನ್ನು ಕೆಲವರು ನನ್ನನ್ನು ಅನಂತ ಮೂರ್ತಿ ಗೆ ಹೋಲಿಸಿದರು.. ಎಲ್ಲಕ್ಕಿಂತ ತಮಾಷೆ ವಿಷಯ ಅಂದರೆ ಇನ್ನೊಂದಷ್ಟು ಮಂದಿಯ ತಂಡ ನನ್ನನ್ನು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಪಚಾರ ಮಾಡಿದ್ದಾರೆ ತಪ್ಪು ಕಾಣಿಕೆ ಹಾಕುವ ಪರಿಸ್ಥಿತಿ ಬರುತ್ತದೆ ಅಂತ ಆಡಿಕೊಂಡರು… ಅದನ್ನು ಕೇಳಿದವರಿಗೆಲ್ಲ ನಾನು ಹೇಳಿದ್ದಿಷ್ಟೆ.. ನನ್ನ ಮನೆಯ ಮೂಲ ಬನದ ನಾಗನೂ ಒಂದೆ… ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ನೂ ಒಂದೇ.. ದೇವರೇ ನೋಡಿ ಕೊಳ್ತಾನೆ ಅಂತ. ನಾನು ಹಾಗೆ ಹೇಳಿ ಒಂದು ವಾರ ಆಗಿಲ್ಲ ಅಷ್ಟರಲ್ಲಿ ಸುಬ್ರಹ್ಮಣ್ಯ ರಿಸಲ್ಟ್ ಕೊಟ್ಟಿದ್ದಾನೆ.. ನಾನವತ್ತು ದೇವಸ್ಥಾನದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ ಅಶಾಸ್ತ್ರೀಯ ಅಂತ ಹೇಳಿದ್ದೆ.. ಅದು ಬಿಟ್ಟು ಬೇರೆ ಯಾವ ಪೂಜೆಗಳ ಬಗ್ಗೆಯೂ ಮಾತನಾಡಿರಲಿಲ್ಲ. ಆದರೆ ಸರ್ಪ ಸಂಸ್ಕಾರದ ಬಗ್ಗೆ ಸತ್ಯ ಹೇಳಿದ್ದಕ್ಕೆ ಅವತ್ತು ನನ್ನ ಮೇಲೆ ಮುಗಿಬಿದ್ದಿದ್ದ ಭಕ್ತರು ಅಂತ ಕರೆಸಿಕೊಳ್ಳುವವರು ಇವತ್ತು ತಲೆ ತಗ್ಗಿಸುವಂತೆ ಸುಬ್ರಹ್ಮಣ್ಯನೇ ಮಾಡಿದ್ದಾನೆ ಎಂದು ಸ್ಟೇಟಸ್‌ನಲ್ಲಿ ಬರೆದಿದ್ದರು.

ಚೈತ್ರಾರ ಕೆಲವು ಬೆಂಬಲಿಗರು ಇದನ್ನು ಬೆಂಬಲಿಸಿ ಕಮೆಂಟ್ ಹಾಕುತ್ತಿದ್ದರು. ಇತ್ತ ಗುರುಪ್ರಸಾದ್ ತಂಡದ ಬಹುತೇಕರು ಫೇಸ್‌ಬುಕ್ ಸಮರವನ್ನು ವೈಯಕ್ತಿಕವಾಗಿ ಮುಂದುವರಿಸತೊಡಗಿದರು. ಇದರಲ್ಲಿ ತೀರಾ ಕೆಟ್ಟ ರೀತಿಯ ಕಮೆಂಟ್‌ಗಳು ಹರಿದಾಡತೊಡ ಗಿತು. ಈಕೆ ಒಬ್ಬ ಲಿಪ್‌ಸ್ಟಿಕ್ ಸುಂದರಿ, ಈಕೆ ಸಾಬರ ಜೊತೆ ತಿರುಗಾಡುವವಳು, ಕಾಂಗ್ರೆಸ್ ಬ್ಯಾರಿಗಳಿಗೆ ಬಕೆಟ್ ಹಿಡಿದವಳು, ಆಕೆಗೆ ಮಂಡೆ ಸಮ ಇಲ್ಲ, ನಾಯಿ ಇತ್ತ ಕಡೆ ಇನ್‌ನು ತಲೆ ತಿರುಗಿಸಬೇಡ ಎಂಬಿತ್ಯಾದಿ ಕಮೆಂಟ್‌ಗಳಲ್ಲದೆ ಅನೈತಿಕವಾಗಿ ವರ್ತಿಸುವವಳು ಮೊದಲಾಗಿ ಅತ್ಯಂತ ಕೆಟ್ಟ ರೀತಿಯ ಕಮೆಂಟ್‌ಗಳು ಕಂಡು ಬಂದಿತ್ತು.
ಘಟನೆ ನಡೆಯುವ ದಿನ ಬೆಳಿಗ್ಗೆ ಗುರುಪ್ರಸಾದ್ ಪಂಜ ನಡೆದಾಡುವ ದುರ್ಗೆ ಎಂಬ ಸ್ಟೇಟಸ್ ಹಾಕಿದ್ದರು. ಇದಕ್ಕೆ ಮತ್ತೊಬ್ಬರು ಉಡುಪಿ, ಕುಂದಾಪುರ ಕಡೆಗೆ ಹೋಗುವ ಚಾಲಕರು ಗಮನಿಸಬೇಕು. ನಡೆದಾಡುವ ದುರ್ಗೆ ಇದ್ದಾಳೆ ಎಚ್ಚರಿಕೆ ಎಂಬ ಕಮೆಂಟ್ ಹಾಕಿದ್ದರು.
ಕೊನೆಗೆ ಇದನ್ನು ಪ್ರಶ್ನಿಸಲು ಚೈತ್ರಾ ಕುಂದಾಪುರ ಬರುವುದರೊಂದಿಗೆ ಇಡೀ ಪ್ರಕರಣ ಬೇರೊಂದು ತಿರುವು ಪಡೆಯಿತು.

ಚೈತ್ರ ಕುಂದಾಪುರ ಯಾರು ?


ಕುಂದಾಪುರದ ಮುಖ್ಯ ಪೇಟೆಯ ಸಮೀಪ ಸಂಗಂನಿಂದ ಮುಖ್ಯಪೇಟೆಗೆ ಬರುವ ಚಿಕ್ಕಮ್ಮನ ಸಾಲು (ಚಿಕ್ಕನ್ ಸಾಲ್) ರಸ್ತೆಯಲ್ಲಿರುವ ಮೊಗವೀರ ಸಭಾಭವನದ ಎದುರುಗಡೆಯ ಮನೆಯ ಬಾಲಕೃಷ್ಣ ಶೇರೆಗಾರ್‌ರವರ ಪುತ್ರಿ ಚೈತ್ರ ಈಗ ಹಿಂದುತ್ವದ ಫೈರ್ ಬ್ರಾಂಡ್ ಭಾಷಣಗಾರ್ತಿಯಾಗಿ ಗುರುತಿಸಿಕೊಂಡವರು. ಹೈನುಗಾರರಾದ ಬಾಲಕೃಷ್ಣ ಶೇರೆಗಾರ್‌ರವರ ಎರಡನೇ ಪುತ್ರಿಯಾಗಿರುವ ಇವರು ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ಮಂಗಳೂರಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದರು. ಬಳಿಕ ಮಣಿಪಾಲದಲ್ಲಿ ಉದಯವಾಣಿ ಪತ್ರಿಕಾ ಕಚೇರಿಯಲ್ಲಿ ಸಬ್ ಎಡಿಟರ್ ಆಗಿ ಕೆಲಸ ಮಾಡಿ ಬಳಿಕ ಉಡುಪಿಯಲ್ಲಿದ್ದ ಮುಕ್ತ ಚಾನೆಲ್‌ನಲ್ಲಿ ಆಂಕರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸ್ಪಂದನ ಚಾನೆಲ್‌ಗೆ ಸೇರಿದರು. ಮಂಗಳೂರಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವಾಗ ಎ.ಬಿ.ವಿ.ಪಿ. ಸಂಪರ್ಕಕ್ಕೆ ಬಂದಿದ್ದ ಚೈತ್ರ ಬಳಿಕ ತನ್ನ ಹಿಂದುತ್ವ ಬ್ರಾಂಡನ್ನು ಬೆಳೆಸಿಕೊಂಡೇ ಬಂದಿದ್ದರು. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳು ಇವರನ್ನು ಭಾಷಣಗಾರ್ತಿಯಾಗಿ ಕಾರ್ಯಕ್ರಮಗಳಿಗೆ ಕರೆಯ ತೊಡಗಿದರು. ಮುಸ್ಲಿಂ ವಿರೋಧಿ ಉಗ್ರ ಭಾಷಣಗಳಿಂದ ಬಹುಬೇಗ ಫೈರ್ ಬ್ರಾಂಡ್ ಆಗಿ ಜನಪ್ರಿಯರಾದರು. ೨೬ ವರ್ಷ ಪ್ರಾಯದ ಚೈತ್ರ ಈಗ ಕುಂದಾಪುರದಲ್ಲಿ ಸ್ವದೇಶಿ ಬಟ್ಟೆ ಮಳಿಗೆ ನಡೆಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಗಂಗಾವತಿಯಲ್ಲಿ ಆಗಿನ ಶಾಸಕ ಇಕ್ಬಾಲ್ ಅನ್ಸಾರಿಯವರ ವಿರುದ್ಧ ಸಂಘ ಪರಿವಾರ ಕು| ಚೈತ್ರರನ್ನು ಮುಂದಿರಿಸಿ ಹೋರಾಟ ನಡೆಸಿ ಗೆದ್ದಿತ್ತು. ಈ ಹಿನ್ನಲೆಯಲ್ಲಿ ಉಡುಪಿ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಹೆಸರುಗಳಲ್ಲಿ ಇವರ ಹೆಸರು ಹರಿದಾಡುತ್ತಿದೆ.
ತಿಂಗಳ ಹಿಂದೆ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ನೀಡಿದ ಭಾರತ್ ಬಂದ್ ಕರೆಯ ಸಂದರ್ಭ ಅಂಗಡಿ ಬಂದ್ ಮಾಡಿಸಲು ಬಂದ ಕಾಂಗ್ರೆಸ್ ನವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಚೈತ್ರ ’ಸುದ್ದಿ’ ಯಾಗಿದ್ದರಲ್ಲದೆ, ಇದನ್ನು ಮೆಚ್ಚಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇವರ ಹೆಸರು ಉಲ್ಲೇಖಿಸಿ ಟ್ವಿಟರ್‌ನಲ್ಲಿ ಶ್ಲಾಸಿದ್ದರು.
ಹಿಂದೂ ಸಂಘಟನೆಗಳ ವಲಯದಲ್ಲಿ ಜನಪ್ರಿಯರಾಗಿರುವ ಇವರು ತಮ್ಮ ಜಗಳ ಗಂಟಿ ಸ್ವಭಾವದಿಂದಾಗಿ ತಾನು ಕೆಲಸ ಮಾಡಿದ ಟಿ.ವಿ. ಚಾನೆಲ್‌ಗಳಲ್ಲಿ ಮತ್ತು ಇತರೆಡೆಗಳಲ್ಲಿ ವಿರೋಧಿಗಳನ್ನು ಸೃಷ್ಠಿಸಿಕೊಂಡಿದ್ದಾರೆ.

ಗುರುಪ್ರಸಾದ್ ಪಂಜ ಯಾರು?


ಪಂಜದ ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿಯ ಶಾಂತಿ ಸದನ ನಿವಾಸಿಯಾಗಿರುವ ಗುರು ಪ್ರಸಾದ್ ಪಂಜ, ನಿವೃತ್ತ ಶಿಕ್ಷಕ ಚಿನ್ನಪ್ಪ ಗೌಡ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪದ್ಮಾವತಿಯವರ ಎರಡನೇ ಪುತ್ರ.
ಗುತ್ತಿಗಾರಿನಲ್ಲಿ ಬಾಲಾಜಿ ಆಯಿಲ್ ಮಿಲ್ ಸ್ಥಾಪಿಸಿದ್ದ ಗುರುಪ್ರಸಾದ್ ಬಳಿಕ ಅದನ್ನು ಸುಬ್ರಹ್ಮಣ್ಯದ ಮಹಿಳಾ ಸೊಸೈಟಿ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.
ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಬಡವರ ಮತ್ತು ಅಶಕ್ತರಿಗೆ ನೆರವು ನೀಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಯುವ ತೇಜಸ್ಸು ಟ್ರಸ್ಟ್ ಎಂಬ ವಾಟ್ಸಾಪ್ ರಚಿಸಿಕೊಂಡು, ಆಶಿತ್ ಕಲ್ಲಾಜೆ ಮತ್ತಿತರರ ಜತೆಗೆ ಅದರ ಎಡ್ಮಿನ್ ಆಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಜೋಡುಪಾಲದಲ್ಲಿ ನಡೆದ ಪ್ರಕೃತಿ ದುರಂತದ ವೇಳೆ ಯುವ ತೇಜಸ್ಸು ಸದಸ್ಯರ ಸಮವಸ್ತ್ರದಲ್ಲಿ ಅಲ್ಲಿಗೆ ಹೋಗಿ ಗುರು-ಆಶಿತ್ ನೇತೃತ್ವದಲ್ಲಿ ಪರಿಹಾರ ಕಾರ್ಯ ನಡೆಸಿದ್ದರು.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಗುರುಪ್ರಸಾದ್ ಪಂಜ ತಾ.ಪಂ.ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಸಿಗದಿದ್ದಾಗ ಬಂಡಾಯವೆದ್ದು ಪಕ್ಷೇತರನಾಗಿ ಸ್ಪರ್ಧಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಲು ಕಾರಣರಾಗಿದ್ದರು. ನಮೋ ಬ್ರಿಗೇಡ್ ಪ್ರಮುಖನಾಗಿ ಪಂಜದಲ್ಲಿ ಕಾರ್ಯಕ್ರಮ ಸಂಘಟಿಸಿದ್ದರು. ಪ್ರತಿಭಟನೆಯೊಂದರ ಸಂದರ್ಭ ಸವಣೂರಿನಲ್ಲಿ ಪೋಲೀಸರ ಮೇಲೆ ಕಲ್ಲುತೂರಾಟ ಪ್ರಕರಣದ ಆರೋಪಿಯಾಗಿ ಬಂಧಿತರಾಗಿದ್ದರು. ಇತ್ತೀಚೆಗೆ ಪಂಜದಲ್ಲಿ ದನ ಸಾಗಾಟದ ಕಾರನ್ನು ಅಡ್ಡಗಟ್ಟಿ ಪುಡಿಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಕೇಸುಗಳ ಹಿನ್ನೆಲೆಯಲ್ಲಿ ಅವರ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಕಡತ ತಯಾರಿಸಲಾಗಿದೆ. ಸುದ್ದಿ ಸಂಪಾದಕರು ಮತ್ತು ಸುದ್ದಿ ಸಿಬ್ಬಂದಿಗಳ ಬಗ್ಗೆ ಅವಾಚ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿರುವ ಬಗ್ಗೆಯೂ ಸುದ್ದಿ ವತಿಯಿಂದ ಗುರುಪ್ರಸಾದ್ ಪೋಲೀಸ್ ದೂರಿಗೊಳಗಾಗಿದ್ದಾರೆ.

ಮಾರಣಾಂತಿಕ ಗಾಯ ಅಲ್ಲ,
ಸಿಂಪಲ್ ಇಂಜುರಿ (ಗೀರು ಗಾಯ)
ಚೈತ್ರಾ ಕುಂದಾಪುರ ತಂಡದವರು ಗುರುಪ್ರಸಾದ್ ಪಂಜರವರಿಗೆ ಹೊಡೆದು ತಲೆಗೆ ಮಾರಣಾಂತಿಕ ಗಾಯವಾಗಿರುವುದಾಗಿ ಹೇಳಲಾಗಿತ್ತು. ಹಣೆಗೆ ಬಿದ್ದ ಏಟಿನಿಂದ ರಕ್ತ ಹರಿದು ಅವರ ಅಂಗಿ ತೊಯ್ದಿತ್ತು. ಮಾರಣಾಂತಿಕ ಗಾಯವೆಂಬ ಕಾರಣದಿಂದ ಕೇಸು ಕೂಡಾ ಟೈಟ್ ಆಗಿತ್ತು. ಸುಳ್ಯ ಸರಕಾರಿ ಆಸ್ಪತ್ರೆಯಿಂದ ಕೆ.ವಿ.ಜಿ.ಗೆ ಹೋಗಿ ಸಿ.ಟಿ.ಸ್ಕ್ಯಾನ್ ಮಾಡಿಸಿ ಅಲ್ಲಿಂದ ಗುರುಪ್ರಸಾದ್‌ರನ್ನು
ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ಗಾಯದ ಸ್ವರೂಪ ಮಾರಣಾಂತಿಕವಾದುದು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.
ಇವರ ಗಾಯದ ಸ್ವರೂಪದ ಬಗ್ಗೆ ವರಿಗೆ ಚಿಕಿತ್ಸೆ ನೀಡಿದ ಸರಕಾರಿ ಆಸ್ಪತ್ರೆಯಹೋಗಿ ವೈದ್ಯಾಧಿಕಾರಿಯನ್ನು ವಿಚಾರಿಸಿದಾಗ “ಅದು ಸಿಂಪಲ್ ಇಂಜುರಿ. ಗೀರುಗಾಯವಾಗಿದ್ದು ರಕ್ತ ಹರಿದಿದೆ. ಕಲ್ಲಲ್ಲಿ ಹೊಡೆದ ಗಾಯವಾಗಿರಬಹುದು. ಸಿಂಪಲ್ ಇಂಜುರಿಯಾದುದರಿಂದ ಗಾಯಕ್ಕೆ ಹೊಲಿಗೆ ಹಾಕುವ ಪ್ರಮೇಯ ಬರಲಿಲ್ಲ“ ಎಂದು ವೈದ್ಯಾಧಿಕಾರಿ ತಿಳಿಸಿದರು.
ಕೆ..ವಿ.ಜಿ.ಆಸ್ಪತ್ರೆಯ ಸಿ.ಟಿ.ಸ್ಕ್ಯಾನ್ ವಿಭಾಗದಲ್ಲಿ ವಿಚಾರಿಸಿದಾಗ ಲಘು ಗಾಯವಾದುದರಿಂದ ಆ ಪೇಶೆಂಟ್ ರಿಪೋರ್ಟ್ ತಗೊಂಡು ಹೋಗಿದ್ದಾರೆ? ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.
ಗಾಯದ ಬಗ್ಗೆ ಗುರುಪ್ರಸಾದ್ ಪಂಜರೊಂದಿಗೆ ಸುದ್ದಿ ವಿಚಾರಿಸಿದಾಗ “ನನಗೆ ಅವರು ಕಲ್ಲಲ್ಲಿ ಹೊಡೆದಿದ್ದಾರೆ. ಆದರೆ ಅವರ ಕೈಯಲ್ಲಿ ಮಾರಕಾಸ್ತ್ರ ಇತ್ತು. ಅದು ಗಾಡಿಯಿಂದ ತೆಗೆದ ಆಕ್ಸಿಲ್ ರಾಡ್ ಆಗಿರಬಹುದು” ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.