ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ: ಅನಧಿಕೃತ ಕಟ್ಟಡ, ಒಳಾಂಗಣ ಕ್ರೀಡಾಂಗಣ, ಸಿಬ್ಬಂದಿಗಳ ಕರ್ತವ್ಯಲೋಪದ ಕುರಿತು ಚರ್ಚೆ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ನೂತನ ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯ ಕೆ. ಗೋಕುಲ್‌ದಾಸ್, ಈ ಹಿಂದಿನ ಜಮಾ ಖರ್ಚುಗಳ ವಿವರಗಳನ್ನು ಸಭೆಗೆ ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎನ್.ಎ.ರಾಮಚಂದ್ರ ಮತ್ತು ಶಿವಕುಮಾರ್ ಕಂದಡ್ಕ ಕೂಡಾ ಇದಕ್ಕೆ ದನಿಗೂಡಿಸಿದರು. ಸ್ಥಾಯಿ ಸಮಿತಿ ಸಭೆಯನ್ನು ನಡೆಸದೆ, ಅಧ್ಯಕ್ಷರ ಗಮನಕ್ಕೂ ತಾರದೆ ಬಿಲ್‌ಗಳನ್ನು ಹೇಗೆ ನೀಡುತ್ತೀರಿ ಎಂದು ಕೆ.ಎಸ್.ಉಮ್ಮರ್ ಪ್ರಶ್ನಿಸಿದರು. ಪ್ರತಿ ತಿಂಗಳು ಕೂಡಾ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿ ಸಭೆ ಕಡ್ಡಾಯವಾಗಿ ನಡೆಯಬೇಕೆಂದು ಗೋಪಾಲ ನಡುಬೈಲು ಹೇಳಿದರು.

 

ಸಿಬ್ಬಂದಿಯನ್ನು ಹೊರಕಳುಹಿಸಿದ ಎನ್.ಎ. :

ಸಭೆ ಆರಂಭಗೊಂಡು ಸ್ವಲ್ಪ ಹೊತ್ತಿನಲ್ಲಿ ನ.ಪಂ. ಅಕೌಂಟೆಂಟ್ ರಮೇಶ್ ಸಭಾಭವನದೊಳಗೆ ಬಂದು ಆಸೀನರಾದರು. ಇದನ್ನು ಗಮನಿಸಿದ ಎನ್.ಎ.ರಾಮಚಂದ್ರರವರು, ಅವರು ಸಭೆಯಲ್ಲಿ ಇರಬಾರದು. ಅವರು ಇರುವುದಾದರೆ ನಾನು ಸಭೆಯಿಂದ ಹೋಗುತ್ತೇನೆ ಎಂದು ಎದ್ದು ನಿಂತರು. ಮೊನ್ನೆ ತುಳು ಸಾಹಿತ್ಯ ಸಮ್ಮೇಳನದ ಅನುದಾನದ ಕುರಿತಂತೆ ಗಣ್ಯರೆಲ್ಲಾ ಇರುವ ವೇಳೆ ಅವರೊಂದಿಗೆ ಮಾತನಾಡಲು ನಾನು ಬರಹೇಳಿದ್ದೆ. ಆದರೆ ಅವರು ಬಾರದೆ ಉದ್ಧಟತನ ತೋರಿದ್ದಾರೆ. ಅಷ್ಟು ಯೋಗ್ಯತೆ ಇಲ್ಲದವರು ಸಭೆಯಲ್ಲಿ ಕುಳಿತುಕೊಳ್ಳುವುದು ಏಕೆ ಎಂದು ಎನ್.ಎ.ರವರು ಆಕ್ರೋಶದಿಂದ ಹೇಳಿದರು. ಸಿಬ್ಬಂದಿಯ ಪರವಾಗಿ ನಾನು ವಿಷಾಧಿಸುತ್ತೇನೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಮುಖ್ಯಾಧಿಕಾರಿ ಹೇಳಿದರೂ ಸಮಧಾನಿತರಾಗದ ಎನ್.ಎ.ರವರು ಹೊರನಡೆಯಲೆಂದು ಬಂದು ಪತ್ರಕರ್ತರ ಗ್ಯಾಲರಿಯಲ್ಲಿ ವಿಷಯವನ್ನು ವಿವರಿಸತೊಡಗಿದರು. ಕೆ.ಎಂ.ಮುಸ್ತಫಾ, ಶಿವಕುಮಾರ್ ಕಂದಡ್ಕ, ಇಂಜಿನಿಯರ್ ಶಿವಕುಮಾರ್ ಮೊದಲಾದವರು ಅವರನ್ನು ಸಮಾಧಾನಿಸಿ ಮತ್ತೆ ಕರೆದೊಯ್ಯಲು ಯಶಸ್ವಿಯಾದರು.

ನಗರದಲ್ಲಿ ಖಾಲಿ ಜಾಗ ಇದೆ:

ದುಗಲಡ್ಕದಲ್ಲಿ ಆಶ್ರಯ ಯೋಜನೆ, ಮನೆ ನಿವೇಶನ ಹಂಚಿಕೆ ವಿತರಣೆ ಕುರಿತು ೫ ಎಕ್ರೆ ಕಾದಿರಿಸಲಾಗಿದ್ದು, ಈ ಜಮೀನಿನಲ್ಲಿ ಈಗಾಗಲೇ 3.75 ಎಕ್ರೆ ಜಾಗ ಘನತ್ಯಾಜ್ಯ ವಿಲೇವಾರಿ ಉದ್ಧೇಶಕ್ಕೆ ಕಾದಿರಿಸಲಾಗಿರುವುದರಿಂದ ನಿವೇಶನ ರಹಿತರಿಗೆ ನಿವೇಶನ ನೀಡಲು ತೊಡಕುಂಟಾಗಿರುವ ಕುರಿತು ಪ್ರಸ್ತಾಪವಾದಾಗ ಮಾತನಾಡಿದ ಕೆ.ಎಸ್.ಉಮ್ಮರ್‌ರವರು ಸುಳ್ಯ ನಗರದಲ್ಲೇ ಮೂರು ಕಡೆ ಖಾಲಿ ಜಾಗ ಇದೆ. ಮೂರು ಕಡೆ ಸೇರಿ ಸುಮಾರು 16 ಎಕ್ರೆಯಷ್ಟು ಜಾಗವಿದೆ. ಅದನ್ನು ನೀಡಲಿ ಎಂದು ಹೇಳಿ ಆರ್.ಟಿ.ಸಿ.ಗಳನ್ನು ಅಧ್ಯಕ್ಷರಿಗೆ ನೀಡಿದರು.

ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಯಾವಾಗ?

ಕುರುಂಜಿಗುಡ್ಡೆಯಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನು ತಕ್ಷಣವೇ ಉದ್ಘಾಟಿಸಬೇಕೆಂದು ಹಲವು ಸಭೆಗಳಲ್ಲಿ ಚರ್ಚೆ ನಡೆದರೂ ಇದುವರೆಗೆ ಯಾಕೆ ಉದ್ಘಾಟನೆಗೊಂಡಿಲ್ಲ ಎಂದು ಕೆ.ಎಂ.ಮುಸ್ತಫಾ ಪ್ರಶ್ನಿಸಿದರು. ಅಕ್ಷಯ್‌ರವರು ಊರಲ್ಲಿಲ್ಲ. ಅವರು ಬಂದ ಕೂಡಲೇ ಉದ್ಘಾಟನೆ ವ್ಯವಸ್ಥೆ ಮಾಡುವುದಾಗಿ ಅಧ್ಯಕ್ಷರು ಹೇಳಿದರು. ಕಳೆದ ಡಿಸೆಂಬರ್‌ನಲ್ಲಿಯೇ ಉದ್ಘಾಟನೆಯ ನಿರ್ಧಾರ ಮಾಡಲಾಗಿತ್ತು. ೧೧ ತಿಂಗಳು ಕಳೆದರೂ ಉದ್ಘಾಟನೆಗೊಳ್ಳದಿರುವುದು ಸರಿಯಲ್ಲ ಎಂದು ಕೆ.ಎಸ್.ಉಮ್ಮರ್ ಹೇಳಿದರು. ಇದು ನಿರ್ಮಿತಿ ಕೇಂದ್ರದ ಮೂಲಕ ಆಗಿದೆ. ನಮ್ಮಿಂದ ಹಣ ಪಾವತಿಯಾದರೂ ನಿರ್ಮಿತಿ ಕೇಂದ್ರದವರು ಸಂಬಂಧಪಟ್ಟವರಿಗೆ ಹಣ ಪಾವತಿಸಿಲ್ಲ. ಇದು ನಗರ ಪಂಚಾಯತ್ ಲೋಪವಲ್ಲ. ನಿರ್ಮಿತಿ ಕೇಂದ್ರದವರಿಂದ ಆಗಿರುವ ಲೋಪ ಎಂದು ಗೋಪಾಲ್ ನಡುಬೈಲ್ ಹೇಳಿದರು. ಹಾಗೆ ಹೇಳುವುದು ಸಾಧ್ಯವಿಲ್ಲ. ಅವರಿಗೆ ವಹಿಸಿದ್ದರೂ ಇದರ ಜವಾಬ್ದಾರಿ ನಗರ ಪಂಚಾಯತ್‌ಗೆ ಇದೆ. ಆಡಳಿತ ಇದನ್ನು ಮಾಡಿಸಬೇಕು ಎಂದು ಕೆ.ಎಂ. ಮುಸ್ತಫಾ ಹೇಳಿದರು.

ಸುಳ್ಯ ಬಸ್ ನಿಲ್ದಾಣದಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಯನ್ನು ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇದನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬೇರೆ ಕಡೆ ಸ್ಥಾಪಿಸಬೇಕಾಗಿ ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರಿಕ್ ಅವರು ಬರಕೊಂಡ ಅರ್ಜಿಯ ಕುರಿತಾದ ವಿಷಯ ಪ್ರಸ್ತಾಪವಾದಾಗ, ಇದು ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ವಿಷಯ ಎಂದು ಇಂಜಿನಿಯರ್ ಹೇಳಿದರು. ಈ ಕುರಿತು ಈಗ ಮಾತನಾಡಿ ಪ್ರಯೋಜನವಿಲ್ಲ ಎಂದು ಕೆ.ಎಂ.ಮುಸ್ತಫಾ, ಶಿವಕುಮಾರ್ ಮೊದಲಾದವರು ಹೇಳಿದರೆ, ಪುತ್ಥಳಿ ನಿರ್ಮಾಣದ ಕುರಿತು ನ.ಪಂ. ನಿರ್ಣಯವಾಗಿದೆ. ಅದರಂತೆ ಆಗಲಿ ಎಂದು ಪ್ರಕಾಶ್ ಹೆಗ್ಡೆ ಹಾಗೂ ರಮಾನಂದ ರೈ ಹೇಳಿದರು.

ಸುಳ್ಯ ನ.ಪಂ.ಗೆ ಸಂಬಂಧಿಸಿ ಮಹಾಯೋಜನೆಯ ಎಲ್ಲಾ ನಕಾಶೆ ಮತ್ತು ವರದಿ ಸಿದ್ದಗೊಳಿಸಿದ್ದು ಇದನ್ನು ಕಾರ್ಯಗತಗೊಳಿಸುವ ಕುರಿತು ನ.ಪಂ. ಸಭೆಯ ಅನುಮೋದನೆ ಬೇಕೆಂದು ಸಹಾಯಕ ನಿರ್ದೇಶಕರು ಬರೆದ ಪತ್ರದ ಕುರಿತಂತೆ ಚರ್ಚೆ ನಡೆಯಿತು. ಇದರ ಸಾಧಕ ಬಾಧಕಗಳ ಕುರಿತು ವಿಶೇಷ ಸಭೆ ಕರೆದು ಚರ್ಚಿಸೋಣ ಎಂದು ಕೆ.ಎಂ. ಮುಸ್ತಫಾ ಹೇಳಿದರು. ಈ ಯೋಜನೆ ನಮಗೆ ಮಾರಕ ಎಂದು ಎನ್.ಎ. ರಾಮಚಂದ್ರ ಅಭಿಪ್ರಾಯ ಪಟ್ಟರು. ಇಂಜಿನಿಯರ್ ಯೋಜನೆ ಕುರಿತು ಮಾಹಿತಿ ನೀಡಿದರೂ, ಸರಿಯಾದ ಸಮಗ್ರ ಮಾಹಿತಿಯೊಂದಿಗೆ ಮುಂದೆ ಚರ್ಚಿಸುವುದಾಗಿ ನಿರ್ಧರಿಸಲಾಯಿತು.

ಆರೋಗ್ಯಾಧಿಕಾರಿಯವರು ಸ್ವಚ್ಛತೆಯ ವಿಚಾರದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇನೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
ಪರಿಶಿಷ್ಟ ಜಾತಿಯವರಿಗೆ ನೀಡಲಾದ ಉಚಿತ ನಳ್ಳಿನೀರು ಸಂಪರ್ಕ, ಬೀದಿ ಬದಿ ವ್ಯಾಪಾರಿಗಳ ಸರ್ವೆ, ಅನಧಿಕೃತ ಕಟ್ಟಡಗಳ ಸರ್ವೆ, ಕುಡಿಯುವ ನೀರಿನ ಸಂಪರ್ಕ ಮೊದಲಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.