Breaking News

ಊರ ರಸ್ತೆಗೆ ಊರವರಿಂದಲೇ ಕಾಂಕ್ರಿಟೀಕರಣ : 2 ಲಕ್ಷ ವೆಚ್ಚದಲ್ಲಿ ಬಾಳೆಕಜೆ- ಹರ್ಲಡ್ಕ ರಸ್ತೆ ದುರಸ್ತಿ

Advt_Headding_Middle
Advt_Headding_Middle

ತಮ್ಮ ಮನೆಗೆ ಬರುವ ರಸ್ತೆಯ ದುರಸ್ತಿಗೆ ಸರ್ಕಾರದ ಅನುದಾನವನ್ನು ಕಾಯದೆ ಊರವರೆಲ್ಲಾ ಸೇರಿಕೊಂಡು ಹಣ ಸಂಗ್ರಹಿಸಿ ತಮ್ಮೂರಿನ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿಕೊಂಡಿದ್ದಾರೆ ತೊಡಿಕಾನ ಗ್ರಾಮದ ಬಾಳೆಕಜೆ, ಹರ್ಲಡ್ಕ, ಬಂಗಾರಕೋಡಿಯ ನಾಗರಿಕರು.


ತೊಡಿಕಾನ- ಚಿಟ್ಟನ್ನೂರು-ಬಾಳೆಕಜೆ- ಹರ್ಲಡ್ಕ ರಸ್ತೆ ಮಣ್ಣಿನ ರಸ್ತೆಯಾಗಿದ್ದು ಹೊಂಡ ಗುಂಡಿಗಳಿಂದ ತುಂಬಿ, ಎತ್ತರ ಇಳಿಜಾರು ರಸ್ತೆಯಾಗಿದೆ. ಬೇಸಿಗೆ ಕಾಲದಲ್ಲೇ ಈ ರಸ್ತೆಯಲ್ಲಿ ಸಂಚರಿಸುವುದು ತ್ರಾಸದಾಯಕ . ಇನ್ನು ಮಳೆಗಾಲದಲ್ಲಂತೂ ಸಂಚರಿಸುವುದು ಸಾಹಸವೇ ಆಗಿದೆ. ರಸ್ತೆಯ ಮಧ್ಯದಲ್ಲಿ ಹರಿಯುವ ಹೊಳೆ ಈ ಭಾಗದ ಜನರನ್ನು ಮಳೆಗಾಲದಲ್ಲಿ ಸುತ್ತುವರಿದು ಬರುವಂತೆ ಮಾಡುತ್ತಲಿತ್ತು. ಈ ಹೊಳೆಗೆ ಕಳೆದ ಮಳೆಗಾಲದ ಆರಂಭದಲ್ಲಿ ಮೋರಿ ನಿರ್ಮಿಸಿ ದಾಟಿ ಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಅರಂತೋಡು – ತೊಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹಾಗೂ ಎಪಿಎಂಸಿ ಉಪಾಧ್ಯಕ್ಷ ದೀಪಕ್ ಕುತ್ತಮೊಟ್ಟೆ ಪ್ರಯತ್ನದಿಂದ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿಯವರ ಅನುದಾನದಿಂದ ಮೋರಿ ಕೆಲಸ ಹಾಗೂ ರಸ್ತೆಯ ಸ್ವಲ್ಪ ಭಾಗ ಕಾಂಕ್ರೀಟ್ ಆಗಿತ್ತು. ರಸ್ತೆಯ ಬಹುಭಾಗ ಇನ್ನೂ ಹೊಂಡ ಗುಂಡಿಯಿಂದ ತುಂಬಿ ದಿನನಿತ್ಯದ ಓಡಾಟಕ್ಕೆ ಕಷ್ಟಕರವಾಗಿತ್ತು. ಇದನ್ನು ಮನಗಂಡ ಊರವರು ತಾವೇ ರಸ್ತೆ ದುರಸ್ತಿಗೆ ಮುಂದಾದರು. ಸಂತೋಷ್ ಕುತ್ತಮೊಟ್ಟೆ ಹಾಗೂ ದೀಪಕ್ ಕುತ್ತಮೊಟ್ಟೆ ಯವರ ಮಾರ್ಗದರ್ಶನದಲ್ಲಿ ಊರ ಹಿರಿಯರಾದ ಶೇಷಪ್ಪ ಗೌಡರು ಮುತುವರ್ಜಿ ವಹಿಸಿ ರಸ್ತೆಯ ಬಳಕೆದಾರರೊಂದಿಗೆ ಮಾತುಕತೆ ನಡೆಸಿದರು. ಊರವರೆಲ್ಲ ಆರ್ಥಿಕ ಸಹಕಾರ ನೀಡಲು ಮುಂದಾದರು. ಸ್ವತಃ ಶೇಷಪ್ಪ ಗೌಡರೇ ಮುಂದೆ ನಿಂತು ಹಣ ಸಂಗ್ರಹಿಸಿದರು.
ಊರವರಾದ ಬಾಳೆಕಜೆ ಭಾಗದ ಶೇಷಪ್ಪ ಗೌಡ, ವಾಸುದೇವ ಗೌಡ, ನಾಗಪ್ಪ ಗೌಡ, ದುಗ್ಗಪ್ಪ ಗೌಡ, ಅಪ್ಪಯ್ಯ ಗೌಡ, ಪುರುಷೋತ್ತಮ ಗೌಡ, ಮೋನಪ್ಪ ಗೌಡ, ಬಾಬಣ್ಣ ಗೌಡ, ನವಿನಾಕ್ಷ, ರಮಾನಂದ ಬಾಳೆಕಜೆ, ಹರ್ಲಡ್ಕ ಭಾಗದ ಚಂದ್ರಶೇಖರ ಜಿ.ಜಿ, ರಾಮ ನಾಯ್ಕ, ವೆಂಕಪ್ಪ ನಾಯ್ಕ , ಬಂಗಾರಕೋಡಿ ಭಾಗದ ನೇಮಿರಾಜ ಬಂಗಾರಕೋಡಿ, ಚಂದ್ರಶೇಖರ ಬಂಗಾರಕೋಡಿ , ಲಿಂಗರಾಜ ಬಂಗಾರಕೋಡಿ , ಶೇಷಪ್ಪ ಬಂಗಾರಕೋಡಿ , ಹರೀಶ ಬಂಗಾರಕೋಡಿಯವರು ಹಣ ಸಹಾಯ ಮಾಡಿದರು. ಈ ಮನೆಯವರೇ ಸೇರಿಕೊಂಡು ರಸ್ತೆ ಹೆಚ್ಚು ಹಾಳಾಗಿದ್ದ ಕಡೆ ಕಾಂಕ್ರೀಟ್ ಕೆಲಸವನ್ನು ಮಾಡಿದರು. ಗುತ್ತಿಗೆದಾರ ಮಹೇಶ್ ಕುತ್ತಮೊಟ್ಟೆ ಹಾಗೂ ಶಿವಪ್ರಸಾದ್ ಬಂಗಾರಕೋಡಿಯವರು ತಲಾ ಒಂದು ಪಿಕಪ್ ಲೋಡ್ ಜಲ್ಲಿಯನ್ನು ಉಚಿತವಾಗಿ ನೀಡಿ ಸಹಕರಿಸಿದರು. ಸುಮಾರು 2 ಲಕ್ಷದಷ್ಟು ಹಣ ಸಂಗ್ರಹಿಸಿ 59 ಮೀಟರ್ ಉದ್ದ ರಸ್ತೆಯ ಕಾಂಕ್ರಿಟೀಕರಣ ವನ್ನು ಊರವರೇ ಮಾಡಿದರು.
ಊರವರ ಶ್ರಮವನ್ನು ಕಂಡ ಅರಂತೋಡು ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಈ ರಸ್ತೆಯ ಉಳಿದ ಭಾಗದಲ್ಲಿ ಕಾಂಕ್ರೀಟ್ ಕೆಲಸ ಮಾಡಲು ಉದ್ಯೋಗ ಖಾತರಿ ಯೋಜನೆಯಲ್ಲಿ 2.98 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ , ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಅವರೂ ರಸ್ತೆಗೆ ಅನುದಾನ ಒದಗಿಸುವ ಭರವಸೆ ನೀಡಿದ್ದು , ಸಂತೋಷ್ ಕುತ್ತಮೊಟ್ಟೆ , ದೀಪಕ್ ಕುತ್ತಮೊಟ್ಟೆ ಹಾಗೂ ಅರಣ್ಯ ಇಲಾಖೆಯವರು ನಮ್ಮ ರಸ್ತೆ ಕಾಂಕ್ರಿಟೀಕರಣಕ್ಕೆ ಸಹಕಾರ ನೀಡಿದ್ದಾರೆ ಎಂದು ಶಶಿಕಾಂತ ಬಾಳೆಕಜೆ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.