Breaking News

ಲೋಕಸಭಾ ಚುನಾವಣೆ : ಪಕ್ಕದ ಕಾಸರಗೋಡು ಕ್ಷೇತ್ರದ ಇತಿಹಾಸ ಗೊತ್ತೇ? – ಈ ಕ್ಷೇತ್ರ ಎಡಕ್ಕೆ ವಾಲಿದ್ದೇ ಜಾಸ್ತಿ!

Advt_Headding_Middle
Advt_Headding_Middle

ರವೀಶ ತಂತ್ರಿ

ಕೆ.ಪಿ.ಸತೀಶ್ಚಂದ್ರನ್

ರಾಜ್‌ಮೋಹನ್ ಉಣ್ಣಿತ್ತಾನ್

( ವರದಿ: ದುರ್ಗಾಕುಮಾರ್ ನಾಯರ್‌ಕೆರೆ)

ಸುಳ್ಯವನ್ನು ವಾಣಿಜ್ಯ ವ್ಯವಹಾರಗಳಿಗಾಗಿ ಅವಲಂಬಿಸಿರುವ ಕಲ್ಲಪಳ್ಳಿ, ಬಂದಡ್ಕ, ಅಡೂರು, ದೇಲಂಪಾಡಿ, ಪಂಜಿಕಲ್ಲು ಮೊದಲಾದ ಪ್ರದೇಶಗಳು ಕಾಸರಗೋಡು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ದಕ್ಷಿಣ ಕನ್ನಡ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಿಗೆ ಅಂಟಿಕೊಂಡು ಸಮಾಂತರವಾಗಿ ಸಾಗುವುದು ಕೇರಳದ ಈ ಲೋಕಸಭಾ ಕ್ಷೇತ್ರ. ಈ ಭಾಗದ ಗಡಿನಾಡಿನ ಮಂದಿ ಬದುಕಿನ ಅವಶ್ಯಕತೆಗಳಿಗಾಗಿ ಕರ್ನಾಟಕವನ್ನು ಕೂಡಾ ಅವಲಂಬಿಸಿರುವುದರಿಂದ ಇಲ್ಲಿ ನಡೆಯುವ ಚುನಾವಣೆ ಈ ಉಭಯ ಲೋಕಸಭಾ ಕ್ಷೇತ್ರಗಳಿಗೂ ಕುತೂಹಲಕರ ಸಂಗತಿ.

ಕಾಸರಗೋಡು ಲೋಕಸಭಾ ಕ್ಷೇತ್ರವು ಹಲವು ವೈವಿಧ್ಯ ಮತ್ತು ವೈರುಧ್ಯಗಳನ್ನು ಒಡಲಲ್ಲಿರಿಸಿಕೊಂಡ ಕ್ಷೇತ್ರ. 1957 ರ ನಂತರ 15 ಲೋಕಸಭಾ ಚುನಾವಣೆಗಳನ್ನು ಈ ಕ್ಷೇತ್ರ ಕಂಡಿದೆ. ಈ ಪೈಕಿ 12 ಬಾರಿ ಎಲ್‌ಡಿಎಫ್ ( ಎಡರಂಗ ಒಕ್ಕೂಟ) ಇಲ್ಲಿ ಗೆಲುವು ಸಾಧಿಸಿದ್ದರೆ ಕೇವಲ ೩ ಬಾರಿ ಮಾತ್ರ ಯುಡಿಎಫ್ ( ಸಂಯುಕ್ತ ರಂಗ ಒಕ್ಕೂಟ) ಅಭ್ಯರ್ಥಿಗಳು ಗೆಲವು ಕಂಡಿದ್ದರು. ಇನ್ನೂ ವಿಶೇಷವೆಂದರೆ ಇಲ್ಲಿ ಈ ವರೆಗೆ ಸಂಸದರಾಗಿರುವುದು ಕೇವಲ 6 ಮಂದಿ ಮಾತ್ರ. ಅಂದರೆ ಇಲ್ಲಿ ಸಂಸದರಾದವರೆಲ್ಲ ಒಂದಕ್ಕಿಂತ ಜಾಸ್ತಿ ಬಾರಿ ಈ ಅಧಿಕರ ಅನುಭವಿಸಿದ್ದಾರೆ.
1957 ರಲ್ಲಿ ಇಲ್ಲಿ ಸಿಪಿಎಂನ ಅಗ್ರ ಗಣ್ಯ ನಾಯಕ ಎ.ಕೆ.ಗೋಪಾಲನ್ ಸಂಸದರಾಗಿದ್ದರು. ಕೇರಳ ರಾಜಕೀಯದಲ್ಲಿ ಎ.ಕೆ.ಜಿ. ಎಂದೇ ಖ್ಯಾತರಾದ ಅವರು 1962 ಮತ್ತು 1967 ರ ಚುನಾವಣೆಗಳಲ್ಲಿ ಪುನರಾಯ್ಕೆಗೊಂಡರು. 1971 ಮತ್ತು 77 ರಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ಗೆ ಒಲಿಯಿತು. ರಾಮಚಂದ್ರನ್ ಕಡನ್ನಪಳ್ಳಿ ಸಂಸದರಾದರು. ಆದರೆ ಈಗ ಇವರು ಸಿಪಿಎಂನಲ್ಲಿದ್ದು, ಪ್ರಸ್ತುತ ಸಚಿವರೂ ಆಗಿದ್ದಾರೆ.
1980 ರಲ್ಲಿ ಸಿಪಿಎಂನ ರಾಮಣ್ಣ ರೈ ಸಂಸದರಾದರು. 1984ರಲ್ಲಿ ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂತು. ಐ.ರಾಮ ರೈ ಲೋಕಸಭಾ ಸದಸ್ಯರಾದರು. ಅಲ್ಲಿಗೆ ಕಾಂಗ್ರೆಸ್ ಕೋಟಾ ಫಿನಿಶ್. ಆ ಬಳಿಕದ ಎಲ್ಲಾ ಚುನಾವಣೆಗಳಲ್ಲಿ ಎಡರಂಗವೇ ಇಲ್ಲಿ ದಿಗ್ವಿಜಯ ಸಾಧಿಸಿದೆ. 1989 ಮತ್ತು 91 ರಲ್ಲಿ ರಾಮಣ್ಣ ರೈ ಮತ್ತೆ ಸಂಸದರಾದರು. 1996 ರ ಚುನಾವಣೆಯಲ್ಲಿ ಸಿಪಿಎಂನ ಟಿ.ಗೋವಿಂದನ್ ಗೆಲುವು ಸಾಧಿಸಿದ್ದು, 1998  ಮತ್ತು 1999ರಲ್ಲಿ ಅವರೇ ಪುನರಾಯ್ಕೆಗೊಂಡರು.
2004 ರಲ್ಲಿ ಪಿ.ಕರುಣಾಕರನ್ ಗೆದ್ದು ಬಂದರು. ಬಳಿಕ ನಡೆದ 2009  ಮತ್ತು 2004 ರ ಚುನಾವಣೆಗಳಲ್ಲೂ ಅವರೇ ಗೆಲುವು ಗೆಲುವು ಸಾಧಿಸಿ ಸಂಸದರಾದರು.

ಏಳು ವಿಧಾನಸಭಾ ಕ್ಷೇತ್ರಗಳು:
ಕಾಸರಗೋಡು ಲೋಕಸಭಾ ಕ್ಷೇತ್ರವು 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಪೈಕಿ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಯುಡಿಎಫ್ ಶಾಸಕರಿದ್ದಾರೆ. ಉದುಮ, ಕಾಂಞಂಗಾಡ್, ತ್ರಿಕ್ಕರಿಪುರ, ಪಯ್ಯನ್ನೂರು, ಕಲ್ಯಾಶೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಶಾಸಕರಿದ್ದಾರೆ. ಸಹಜವಾಗಿಯೇ ಇಲ್ಲಿ ಎಡರಂಗ ಪ್ರಾಬಲ್ಯ ಹೊಂದಿದೆ.

ಆದರೆ ಪ್ರತಿ ಚುನಾವಣೆಗಳಲ್ಲೂ ಯುಡಿಎಫ್ ಪ್ರಬಲ ಪೈಪೋಟಿಯನ್ನೇ ನೀಡಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಸಿಪಿಎಂನ ಪಿ.ಕರುಣಾಕರನ್ 3 84 964  ಮತ ಪಡೆದಿದ್ದರೆ, ಯುಡಿಎಫ್ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ನ ಟಿ.ಸಿದ್ದಿಕ್  378043  ಮತ ಪಡೆದಿದ್ದರು. ಬಿಜೆಪಿಯ ಕೆ.ಸುರೇಂದ್ರನ್ 1, 72, 072  ಮತ ಪಡೆದಿದ್ದಾರೆ.
ಹೊಸ ಮುಖಗಳ ಸ್ಪರ್ಧೆ:
ಈ ಬಾರಿ ಪ್ರಮುಖ ೩ ಪಕ್ಷಗಳೂ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದ ಸಿಪಿಎಂನ ಪ್ರಭಾವಿ ನಾಯಕ ಕೆ.ಪಿ.ಸತೀಶ್ಚಂದ್ರನ್ ಈ ಬಾರಿ ಎಲ್‌ಡಿಎಫ್ ಅಭ್ಯರ್ಥಿಯಾಗಿದ್ದಾರೆ.
ರಾಜ್ಯ ಕಾಂಗ್ರೆಸ್‌ನ ವಕ್ತಾರರಾಗಿರುವ ಕೊಲ್ಲಂ ಜಿಲ್ಲೆಯ ರಾಜ್‌ಮೋಹನ್ ಉಣ್ಣಿತ್ತಾನ್ ಈ ಬಾರಿಯ ಯುಡಿಎಫ್ ಅಭ್ಯರ್ಥಿ. ಇತ್ತೀಚಿನ ಹಲವು ಲೋಕಸಭಾ ಚುನಾವಣೆಗಳಲ್ಲಿ ಯುಡಿಎಫ್ ಇಲ್ಲಿ ಕ್ಷೇತ್ರದ ಹೊರಗಿನ ನಾಯಕರನ್ನೇ ಕಣಕ್ಕಿಳಿಸುವುದು ಸ್ಥಳೀಯ ಕಾಂಗ್ರೆಸ್ ಘಟಕದಲ್ಲಿ ಅಸಮಾಧಾನ ಸೃಷ್ಟಿ ಮಾಡುತ್ತಿದೆಯಾದರೂ ಹೈಕಮಾಂಡ್ ಪ್ರತಿ ಬಾರಿ ಸಮಾಧಾನದ ಪ್ರಯತ್ನ ಮಾಡುತ್ತಿದೆ.
ಈ ಬಾರಿ ಬಿಜೆಪಿಯಿಂದ, ಕೇರಳದ ಹಿಂದೂ ಐಕ್ಯವೇದಿ ಮುಖಂಡ ಹಾಗೂ ದ.ಕ.ಜಿಲ್ಲೆಯ ಹಲವು ದೇಗುಲಗಳ ತಂತ್ರಿಗಳೂ ಆಗಿರುವ ರವೀಶ ತಂತ್ರಿಗಳು ಸ್ಪರ್ಧಿಸುತ್ತಿದ್ದಾರೆ. ತಂತ್ರಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ದ್ವಿತೀಯ ಸ್ಥಾನಿಯಾಗಲು ಯಶಸ್ವಿಯಾಗಿದ್ದರು.

ಶಬರಿಮಲೆ ಚುನಾವಣಾ ವಿಷಯ:
ಸಿಪಿಎಂ ಕೇಂದ್ರ ಸರಕಾರದ ವೈಫಲ್ಯವನ್ನು ಮುಂದಿಟ್ಟು ಈ ಚುನಾವಣೆ ಎದುರಿಸುತ್ತಿದ್ದರೆ, ಬಿಜೆಪಿ ಶಬರಿಮಲೆ ವಿಷಯವನ್ನು ಮತ್ತು ರಾಜ್ಯ ಸರಕಾರದ ವೈಫಲ್ಯವನ್ನು ಚುನಾವಣಾ ವಿಷಯವನ್ನಾಗಿಸಿದೆ. ಇತ್ತೀಚೆಗೆ ಪೆರಿಯ ಕಲ್ಯೋಟ್‌ನಲ್ಲಿ ನಡೆದ ಇಬ್ಬರು ಕಾಂಗ್ರೆಸ್ ಯುವ ಕಾರ್ಯಕರ್ತರ ಹತ್ಯೆಯ ವಿಷಯವನ್ನು ಕಾಂಗ್ರೆಸ್ ಮುಂಚೂಣಿಗೆ ತಂದಿದ್ದಲ್ಲದೆ ಇಲ್ಲಿಗೆ ರಾಹುಲ್ ಗಾಂಧಿಯನ್ನು ಕರೆತರಲು ಕೂಡಾ ಯಶಸ್ವಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.