ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಾ| ರಾಜೇಂದ್ರ ಕುಮಾರ್ ಪುನರಾಯ್ಕೆ

Advt_Headding_Middle
Advt_Headding_Middle

ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ (ಎಸ್‌ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸತತ ೬ನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ.

ವಿನಯ ಕುಮಾರ್ ಸೂರಿಂಜೆಯವರು ಉಪಾಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಎ.೨ರಂದು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಮಂಗಳೂರು ಉಪವಿಭಾಗದ ಆಯುಕ್ತ ರವಿಚಂದ್ರ ನಾಯಕ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಈ ಬ್ಯಾಂಕಿಗೆ ದೊರಕಿಸಿಕೊಟ್ಟ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರು ಬ್ಯಾಂಕಿನ ಅಧ್ಯಕ್ಷರಾಗಿ ೧೯೯೪ರಲ್ಲಿ ಪ್ರಥಮ ಬಾರಿಗೆ ಆಯ್ಕೆಗೊಂಡು ಬಳಿಕ ನಿರಂತರವಾಗಿ ೨೫ ವರ್ಷಗಳ ಕಾಲ ಈ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ತನ್ನ ಪ್ರಕಾರವಾದ ಪ್ರಗತಿಪರ ದೃಷ್ಟಿಕೋನ, ಅಭಿವೃದ್ಧಿಪೂರಕ ಚಿಂತನೆ, ಜನಪರ ಯೋಜನೆಗಳಿಂದ ಈ ಬ್ಯಾಂಕ್‌ನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಎಂ.ಎನ್.ರಾಜೇಂದ್ರ ಕುಮಾರ್ ಅವರದ್ದು. ಸಂಘಟನಾತ್ಮಕ ಸ್ವರೂಪದ ಮೂಲಕ ಸ್ವಸಹಾಯ ಗುಂಪುಗಳ ಸಂಘಟನೆಗೆ ಆರ್ಥಿಕ ಚೈತನ್ಯವನ್ನು ಇವರು ತುಂಬಿದ್ದಾರೆ. ಈ ಮೂಲಕ ಸಹಸ್ರಾರು ಬಡ ಕುಟುಂಬಗಳಿಗೆ ಭದ್ರ ಬದುಕನ್ನು ಕಟ್ಟಿಸಿಕೊಟ್ಟ ಹೆಗ್ಗಳಿಕೆ ಇವರದ್ದು.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡು ಅಂತರ್ಜಾಲ ಸಂಪರ್ಕವನ್ನು ಹೊಂದಿ, ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ಸೇವೆಯನ್ನು ನೀಡುತ್ತಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕಿಂಗ್‌ನ್ನು ಕಾರ್ಯರೂಪಕ್ಕೆ ತಂದ ಹೆಗ್ಗಳಿಕೆ ಇವರದು. ರೈತರಿಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಮೂಲಕ `ರೂಪೇ? ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು ನೀಡುವ ಮೂಲಕ ಚಾರಿತ್ರಿಕ ದಾಖಲೆಯನ್ನು ಇವರು ಗೈದಿದ್ದಾರೆ.

ಎಸ್‌ಸಿಡಿಸಿಸಿ ಬ್ಯಾಂಕಿನ ಉತ್ಕೃಷ್ಟ ಸಾಧನೆಗಾಗಿ ೧೮ ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, ಸ್ವಸಹಾಯ ಸಂಘಗಳ ಕಾರ್ಯನಿರ್ವಹಣೆಗೆಗಾಗಿ ೧೬ ಬಾರಿ ನಬಾರ್ಡ್ ರಾಜ್ಯ ಪ್ರಶಸ್ತಿ, ಅಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್ ತನ್ನದಾಗಿಸಿಕೊಳ್ಳುವಲ್ಲಿ ರಾಜೇಂದ್ರ ಕುಮಾರ್‌ರವರ ಪಾತ್ರ ಹಿರಿದು.

ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿರುವ ಇವರು ಇಪ್ಕೋ ರಾಷ್ಟ್ರೀಯ ಸಂಸ್ಥೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿಯೂ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ೨೦೦೫ರಿಂದ ೨೦೧೦ರವರೆಗೆ ಕಾರ್ಯನಿರ್ವಹಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದರು.

ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ನಿರಂಜನ್, ಟಿ.ಜಿ. ರಾಜರಾಮ ಭಟ್, ಭಾಸ್ಕರ್ ಎಸ್ ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ರಾಜು ಪೂಜಾರಿ, ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ, ಎಸ್.ಬಿ. ಜಯರಾಮ್ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಬಿ.ಅಶೋಕ್ ಕುಮಾರ್ ಶೆಟ್ಟಿ, ಮಹೇಶ್ ಹೆಗ್ಡೆ, ಕೆ.ಹರಿಶ್ಚಂದ್ರ, ಕೆ.ಜೈರಾಜ್ ಬಿ.ರೈ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ಉಪನಿಬಂಧಕ ಸುರೇಶ್ ಗೌಡ, ಬ್ಯಾಂಕ್‌ನ ಸಿಇಒ ರವೀಂದ್ರ ಬಿ., ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್ ಸಿಂಗ್, ಬ್ಯಾಂಕ್‌ನ ಮಹಾಪ್ರಬಂಧಕ ಗೋಪಿನಾಥ್ ಭಟ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಉಪಸ್ಥಿತರಿದ್ದರು.

೭,೫೮೮ ಕೋಟಿ ರೂ. ವ್ಯವಹಾರ: ಡಾ| ಎಂ.ಎನ್. ರಾಜೇಂದ್ರಕುಮಾರ್ ಅಧಿಕಾರ ಅವಧಿಯಲ್ಲಿ ಬ್ಯಾಂಕ್ ಗಣನೀಯ ಪ್ರಗತಿಯನ್ನು ಕಂಡಿದೆ. ೧೯೯೪ರಲ್ಲಿ ಇವರು ಬ್ಯಾಂಕ್‌ನ ಅಧಿಕಾರ ವಹಿಸಿಕೊಂಡಾಗ ಬ್ಯಾಂಕ್‌ನ ಒಟ್ಟು ಠೇವಣಾತಿ ೬೪ ಕೋಟಿ ರೂ., ಹೊರಬಾಕಿ ಸಾಲ ೪೬ ಕೋಟಿ ರೂ., ಲಾಭ ೪೦ ಲಕ್ಷ ರೂ. ಮಾತ್ರವಿತ್ತು. ಆದರೆ ಇಂದು ಬ್ಯಾಂಕ್‌ನ ಠೇವಣಾತಿ ೩,೮೮೬ ಕೋಟಿ ರೂ. ಇದೆ. ಒಟ್ಟು ೩,೭೦೨ ಕೋಟಿ ರೂ. ಸಾಲ ವಿತರಿಸಿದ್ದು, ಬ್ಯಾಂಕ್‌ನ ಒಟ್ಟು ವ್ಯವಹಾರ ೭,೫೮೮ ಕೋಟಿ ರೂ. ಆಗಿದೆ. ಕೇವಲ ೧೮ ಶಾಖೆಗಳಿದ್ದ ಈ ಬ್ಯಾಂಕ್ ಈಗ ೧೦೬ ಶಾಖೆಗಳನ್ನು ಹೊಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.