ಕ್ಷೇತ್ರದಾದ್ಯಂತ ಕಟೀಲ್ ವಿರೋಧಿ ಅಲೆ : ಕಾಂಗ್ರೆಸ್

Advt_Headding_Middle
Advt_Headding_Middle

ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ವಿರೋಧಿ ಅಲೆಯು ಕ್ಷೇತ್ರದಾದ್ಯಂತ ಇದ್ದು, ಇದು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ನಳಿನ್‌ಕುಮಾರ್ ಕಟೀಲ್ ೧೦ ವರ್ಷ ಸಂಸದರಾಗಿದ್ದರೂ ಅವರು ಕೆಲಸ ಮಾಡಿಲ್ಲ ಎಂಬ ಭಾವನೆ ಇದೆ. ನಮ್ಮ ಅಭ್ಯರ್ಥಿ ವಿದ್ಯಾವಂತ ಮತ್ತು ಹೋರಾಟಗಾರ ಎಂಬ ಭಾವನೆಯೂ ಇದೆ. ಇದು ನಮಗೆ ಸಹಕಾರಿಯಾಗಲಿವೆ. ಇದರ ಜೊತೆಗೆ ಕೇಂದ್ರ ಸರಕಾರದ ಕೃಷಿ ವಿರೋಧಿ ನೀತಿಗಳ ಬಗ್ಗೆ ಜನರಿಗೆ ಮನವರಿಕೆಯಾಗಿದೆ. ನಿನ್ನೆಯಷ್ಟೇ ಪುತ್ತೂರಿಗೆ ೫೦ ಟನ್‌ನ ೪ ಕಂಟೈನರ್‌ಗಳಲ್ಲಿ ಅಸ್ಸಾಂನಿಂದ ಅಡಿಕೆ ಬಂದಿದೆ. ಅಲ್ಲಿ ಕಡಿಮೆ ಬೆಲೆಗೆ ಖರೀದಿಸಿ ಇಲ್ಲಿಗೆ ತರುತ್ತಿದ್ದಾರೆ. ಹೀಗಾದರೆ ಇಲ್ಲಿಯ ಅಡಿಕೆ ಬೆಳೆಗಾರರ ಸ್ಥಿತಿ ಏನಾಗಬಹುದು? ಕೇಂದ್ರ ಸರ್ಕಾರದ ಧೋರಣೆಯ ಫಲವಾಗಿ ಇದು ನಡೆಯುತ್ತಿದೆ ಎಂದವರು ಹೇಳಿದರು.
ಬಿಜೆಪಿಯವರ ಚುನಾವಣಾ ಮನವಿ ಪತ್ರದಲ್ಲಿ ಅಭಿವೃದ್ಧಿ ವಿಚಾರಗಳೇ ಇಲ್ಲ. ಕೇವಲ ಭಾವನಾತ್ಮಕ ವಿಚಾರವನ್ನು ಪ್ರಶ್ನಿಸಿ ದಾರಿ ತಪ್ಪಿಸುತ್ತಿದ್ದಾರೆ. ಸಂಸದ ಕಟೀಲ್ ಹೆಸರಲ್ಲಿ ಮತಯಾಚಿಸದೆ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ರಾಜ್ಯದ ಸಮ್ಮಿಶ್ರ ಸರ್ಕಾರದ ಸಾಧನೆಯ ಆಧಾರದಲ್ಲಿ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳ ಆಧಾರದಲ್ಲಿ ಮತಯಾಚನೆ ಮಾಡುತ್ತಿದೆ ಎಂದು ಜಯಪ್ರಕಾಶ್ ರೈ ಹೇಳಿದರು.
ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ. ಲಕ್ಷಗಟ್ಟಲೆ ಹಣ ಪಡೆದು ಅಡ್ಡಮತದಾನ ಮಾಡಿದವರನ್ನೇ ಪತ್ತೆ ಮಾಡಲು ಅವರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಮತ್ತೊಂದೆಡೆ ಬಿಜೆಪಿ ನಾಯಕನನ್ನೇ ಕಾರ್ಯಕರ್ತ ಕೊಲ್ಲಿಸುವ ಸ್ಥಿತಿ ಬಂದಿದೆ. ಇದನ್ನೆಲ್ಲಾ ಜನ ಅರ್ಥಮಾಡಿಕೊಳ್ಳಲಿದ್ದಾರೆ ಎಂದವರು ಹೇಳಿದರು.
ಕಾಂಗ್ರೆಸ್ ನಾಯಕರುಗಳೊಳಗೆ ಹೊಡೆದಾಟ ನಡೆದಿದೆ ಎಂಬ ಪ್ರಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಮಾತಿನ ಚಕಮಕಿ ನಡೆದಿದೆಯಷ್ಟೇ. ಹೊಡೆದಾಟವಾಗಲಿ, ಕಚೇರಿ ಬಂದ್ ಮಾಡಿದ್ದಾಗಲಿ ನಡೆದಿಲ್ಲ. ಚುನಾವಣಾ ಕಾಲದಲ್ಲಿ ಇಂತಹ ಘಟನೆಗಳೆಲ್ಲಾ ಇದ್ದದ್ದೆ. ಆದರೆ ಕೆಲವರು ಇದನ್ನು ಉದ್ಧೇಶಪೂರ್ವಕವಾಗಿ ದೊಡ್ಡದು ಮಾಡಿದ್ದಾರೆ ಎಂದು ಜಯಪ್ರಕಾಶ್ ರೈ ಹೇಳಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್‌ನಿಂದ ಈ ಕ್ಷೇತ್ರದ ಸಂಚಾಲಕರಾಗಿ ನೇಮಕಗೊಂಡಿರುವ ಕೇರಳದ ಟಿ.ಜಿ.ಸುನಿಲ್, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಾಫ, ಕೆ.ಗೋಕುಲ್‌ದಾಸ್, ಸಿದಿಕ್ ಕೊಕ್ಕೋ, ನಂದರಾಜ್ ಸಂಕೇಶ, ಕೆ.ಕೆ.ಹರಿಪ್ರಸಾದ್, ಲಕ್ಷ್ಮಣ ಶೆಣೈ, ಶಾಫಿ ಕುತ್ತಮೊಟ್ಟೆ, ಶರೀಫ್ ಕಂಠಿ, ನಝೀರ್ ಶಾಂತಿನಗರ, ಜೂಲಿಯಾನ ಕ್ರಾಸ್ತಾ, ಮಿಥುನ್ ಕರ್ಲಪ್ಪಾಡಿ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.